ಬೆಂಬಲಿಗರು

ಗುರುವಾರ, ಡಿಸೆಂಬರ್ 16, 2021

ನಮ್ಮ ಪ್ರೀತಿಯ ರಾಮ ರಾವು ಮಾಷ್ಟರು

                                                                    


ನನ್ನ ಪ್ರಾಥಮಿಕ ಶಾಲೆಯ ಅಧ್ಯಾಪಕರಾದ ಶ್ರೀ ರಾಮ ರಾಯರು ಇಂದು ಬಂದಿದ್ದರು. ಹಿರಿಯರಿಗೆ ಸೇವೆ ಮಾಡುವ ಅವಕಾಶ ಸಿಕ್ಕಿದಾಗ ಸಂತೋಷ ಆಗುವುದು . ರಾಮ ರಾಯರದು ಪಾದರಸದಂತಹ ವ್ಯಕ್ತಿತ್ವ .ಈಗಲೂ ಹಾಗೆಯೇ ಇದ್ದಾರೆ . ಸಣ್ಣ ಪುಟ್ಟ ಸಮಸ್ಯೆಗಳು ಬಿಟ್ಟರೆ ಚೆನ್ನಾಗಿದ್ದಾರೆ ;ಇರಲಿ .

ರಾಮರಾಯರು ನಮ್ಮ ಪಿ ಟಿ ಟೀಚರ್ ಆಗಿ ನಾನು ಮೂರನೆಯೊ ನಾಲ್ಕನೆಯಲ್ಲಿಯೋ ಇರುವಾಗ ಬಂದರು . ಅವರು ಬಂದು ಒಂದು ಕ್ರಾಂತಿಯೇ ನಡೆಯಿತು .ಅದು ವರೆಗೆ ನಮ್ಮ ಕೊನೆಯ ಆಟದ ಪೀರಿಯಡ್ ಒಂದು ಶಾಸ್ತ್ರಕ್ಕೆ ಮಾತ್ರ ಇದ್ದು ,ನಾವು ಕೊತ್ತಣಿಕೆ ಕ್ರಿಕೆಟ್ ,ಕಬ್ಬಡಿ ,ಹುಡುಗಿಯರು ಜಿಬಿಲಿ ಆಡಿ ಸಂತೋಷ ಪಡುತ್ತಿದ್ದೆವು .ಪಾಠವೇ ಮುಖ್ಯ ಆಟ ಅಲ್ಪ ಎಂಬ ಮನೋಭಾವ ವ್ಯಾಪಕ ಆಗಿತ್ತು .ರಾಮ ರಾಯರು ಬಂದದ್ದೇ ,ಕ್ರೀಡಾ ಚಟುವಟಿಕೆಗಳು ಗರಿ ಗೆದರಿ  ಶಾಸ್ಟ್ರೀಯ ಕಬ್ಬಡಿ,ಖೋ ಖೋ ,ಕ್ರಿಕೆಟ್ ಮತ್ತು ವಾಲಿ ಬಾಲ್ ,ಟೆನ್ನಿ ಕೋಯಿಟ್ ಇತ್ಯಾದಿಗಳ ಪರಿಚಯ ಆಯಿತು .ಶಾಲೆಯಲ್ಲಿ ಅಂತರ್ಶಾಲಾ ಕ್ರೀಡಾ ಕೂಟಗಳ ಆಯೋಜನೆ ಆಯಿತು . ಪಾಠ ಪ್ರವಚನ ಗಳಷ್ಟೇ  ಕ್ರೀಡಾ ಚಟುವಟಿಕೆ ಗಳಿಗೆ ಪ್ರಾಶಸ್ತ್ಯ ಬಂತು .

ಜತೆಗೆ ನಮ್ಮ ಶಾಲೆಯಲ್ಲಿಯೂ ಭಾರತ ಸೇವಾ ದಳದ ಶಾಖೆ ಆರಂಭವಾಗಿ ಸಮವಸ್ತ್ರ ,ಡ್ರಿಲ್ ಇತ್ಯಾದಿ ಅಭ್ಯಾಸ ಆಯಿತು .,ನಾನೂ ಸೇವಾ ದಳದಲ್ಲಿ ಇದ್ದು ದಲ್ಲದೆ  ಮೈಸೂರು ನಗರದಲ್ಲಿ ನಡೆದ ರಾಜ್ಯ ಮಟ್ಟದ ಶಿಬಿರದಲ್ಲಿ ಭಾಗವಹಿಸಿದ್ದು ಜಿಲ್ಲೆ ಬಿಟ್ಟು ಹೊರ ಹೋಗಿದ್ದು ಅದೇ ಮೊದಲು .(ಕಾಸರಗೋಡು ತಾಲೂಕು ಬಿಟ್ಟರೆ ). 

 ರಾಮರಾಯರು ಶಿಸ್ತಿಗೆ ಹೆಸರುವಾಸಿ . ತರಲೆ ಮಾಡಿದವರಿಗೆ ಶಾಸ್ತಿ ತಪ್ಪಿದ್ದಲ್ಲ . ಅವರು ಕರೆದಾಗ ಎಲ್ಲ ಮಕ್ಕಳೂ ಭಯ ಭಕ್ತಿಯಿಂದ ಹೋಗುತ್ತಿದ್ದರು . ಈಗಲೂ ಅವರನ್ನು ಕಾಣುವಾಗ ನಾನು ಅಟೆನ್ಷನ್ ಗೆ ಬರುತ್ತೇನೆ .

ಅವರ ಇಳಿ ವಯಸ್ಸಿನ ಜೀವನ  ಮನಶಾಂತಿಯಿಂದ ತುಂಬಿರಲಿ .

ಮುಂದೆ ನಾನು ಕೆ ಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನಲ್ಲಿ ಇದ್ದ ಸಮಯ ನನ್ನ ಪ್ರಾಥಮಿಕ ಶಾಲೆಗೆ ಒಂದಿಷ್ಟು ಆಟದ ಸಾಮಗ್ರಿಗಳನ್ನು ಕೊಡುಗೆಯಾಗಿ ನೀಡಿದೆ . ಅದನ್ನು ಸ್ವೀಕರಿಸಿದ  ಮುಖ್ಯೋಪಾಧ್ಯಾಯರು ಈಗ ಶಾಲೆಗೆ ಆಟೋಪಕರಣಗಳನ್ನು ಕೊಳ್ಳಲು ಸಾಕಷ್ಟು ಅನುದಾನ ಬರುತ್ತಿದೆ ಎಂದು ತಿಳಿಸಿದಾಗ ಸಂತೋಷ ಆಯಿತು . ಒಂದು ಸಾರಿ ಶಾಲಾ ವಾರ್ಷಿಕೋತ್ಸವಕ್ಕೆ ನನ್ನನ್ನು ಮುಖ್ಯ ಅತಿಥಿಯಾಗಿ ಕರೆದಿದ್ದರು .ವೇದಿಕೆಯಿಂದ ನಾನು ಪುಟಾಣಿಗಳಿಗೆ ಒಂದು ಪ್ರಶ್ನೆ ಕೇಳಿದೆ "ಹೆದರದೇ ಹೇಳಿ ನಿಮಗೆ ಆಟ ಹೆಚ್ಚು ಇಷ್ಟವೋ ಪಾಠವೋ ?"ಬಹುಮತ ಆಟಕ್ಕೆ ಬಂತು . ಅದು ಮಕ್ಕಳು . ಅದಕ್ಕೇ ಈಗ ನಲಿ ಕಲಿ ಇತ್ಯಾದಿ ಅಳವಡಿಸಿ ಕೊಂಡಿದ್ದಾರೆ .ಮಕ್ಕಳು ಆಟವಾಡುತ್ತಲೇ ಕಲಿಯಬೇಕು . 

ಒಂದೇ ಬೇಸರ ಹಿಂದೆ ಶಾಲೆಗಳ ಸ್ಕೂಲ್ ಡೇ ಅಹೋರಾತ್ರಿ ನಡೆಯುತ್ತಿದ್ದು ಸುತ್ತು ಮುತ್ತಲಿನ ಗ್ರಾಮದ ಜನರು ಬಂದು ಆನಂದಿಸುತ್ತಿದ್ದರು .ನಾಟಕ ,ಯಕ್ಷಗಾನ ರಾತ್ರಿಯೇ ರೈಸುವುದು .ಈಗ ಸಮಾಜ ವಿರೋಧಿ ಶಕ್ತಿಗಳಿಗೆ ಹೆದರಿ ಹಗಲೇ ನಡೆಸುತ್ತಿದ್ದಾರೆ . ಅದಕ್ಕೆ ಒಂದು ಚಂದ ಇಲ್ಲ ಎಂದು ನನ್ನ ಅನಿಸಿಕೆ .ರಾಮ ರಾವ್ ಮಾಸ್ಟ್ರಂತಹವರು ಇದ್ದರೆ ಇಂತಹ ಪೋಲಿ ಶಕ್ತಿಗಳು ತಲೆ ಎತ್ತಲು ಬಿಡುತ್ತಿರಲಿಲ್ಲ

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ