ಬೆಂಬಲಿಗರು

ಗುರುವಾರ, ಡಿಸೆಂಬರ್ 16, 2021

ಮದುರೈ ಮಣಿ ಅಯ್ಯರ್

                              img.discogs.com/nHu7mPbDdB3f6cqSVcu2expB4kg=/fi...

 

ಒಂದು ದಿನ ರಾತ್ರಿ ಆಸ್ಪತ್ರೆ ಕರ್ತವ್ಯ ಮುಗಿಸಿ ದಣಿವಾರಿಸಲು ಪವಡಿಸಿದ್ದೆ ; ಏನೋ ಸಂಗೀತ ಕೇಳುವಾ ಎಂದು ಒಂದು ಸಿ ಡಿ ಹಾಕಿದೆ . ನನಗೆ ಮಂಪರು ,ಅರೆ ನಿದ್ರೆ . ಕಲ್ಯಾಣಿ ರಾಗದ ಕೃತಿ ,ಮದುರೈ ಮಣಿ ಅಯ್ಯರ್ ಧ್ವನಿಯಲ್ಲಿ (ರಾಗಂ ತಾನಂ ಪಲ್ಲವಿ ಇರ ಬೇಕು ).ಕೇಳುತ್ತಾ ಸ್ವರ್ಗದಲ್ಲಿ ವಿಹರಿಸಿದ ಭಾವನೆ ,ವಯಲಿನ್ ನಲ್ಲಿ ಕೂಡಾ ಯಾರೋ ಘಟಾನುಘಟಿ ಇದ್ದರು . ಸುಮಾರು ಒಂದು ವರೆ  ಘಂಟೆ ಒಂದೇ ರಾಗ ,ಒಂದೇ ಕೃತಿ . ಮುಗಿಯುವಾಗ ರಸ ಭಂಗ ಆಗಿ ಎಚ್ಚರ ಆಯಿತು .ಇದು ವರೆಗೆ ನನಗೆ ಅಂತಹ ಅನುಭವ ಆಗಿರಲಿಲ್ಲ ,ಮುಂದೆಯೂ ಆಗಿಲ್ಲ .ಅದು ಮಣಿ ಅಯ್ಯರ್ ಅವರ ಜಾದು . 

ನಾನು ಮಣಿ ಅಯ್ಯರ್ ಅವರನ್ನು ಕಂಡಿಲ್ಲ ,ಕೇಳಿದ್ದು ಮಾತ್ರ . ಅವರು ಒಬ್ಬ ಸಂಗೀತ ಯುಗ ಪುರುಷ . ಜಿ ಏನ್ ಬಾಲಸುಬ್ರಹ್ಮಣ್ಯಮ್ ,ಶೆಮ್ಮಂಗುಡಿ ಶ್ರೀನಿವಾಸ ಅಯ್ಯರ್ ಮತ್ತು ಮಣಿ ಅಯ್ಯರ್ ಅವರನ್ನು ಸಂಗೀತ ಗಾಯಕ ತ್ರಿಮೂರ್ತಿಗಳು ಎಂದು ಕರೆಯುತ್ತಿದ್ದರು . ಹೆತ್ತವರು ಇಟ್ಟ ಹೆಸರು ಸುಬ್ರಮಣಿಯನ್ .ಪ್ರಸಿದ್ದಿ ಆದುದು ಮಣಿ ಅಯ್ಯರ್ ಎಂದು . ಖ್ಯಾತ ಗಾಯಕ ಟಿ ವಿ ಶಂಕರ ನಾರಾಯಣನ್ ಇವರ ಸೋದರ ಅಳಿಯ ಮತ್ತು ಶಿಷ್ಯ . ಶಂಕರ ನಾರಾಯಣನ್ ಅವರ ತಂದೆ ವೆಂಬು ಅಯ್ಯರ್ ಇವರ ಪಟ್ಟದ ಶಿಷ್ಯ ಮತ್ತು ಕಚೇರಿ  ಸಂಗಾತಿ . 

ಇವರ ಬಗ್ಗೆ ಅನೇಕ ಕತೆಗಳು ಇವೆ . ಎಲ್ಲವುಗಳ ಮೂಲ ಸಂದೇಶ  ಇವರು ಜನ ಸಾಮಾನ್ಯರ  ಭಾವನೆಗಳಿಗೆ ಗೌರವ ಕೊಡುತ್ತಿದ್ದರು ಎಂದು . ಎಷ್ಟೋ ಬಾರಿ ಕಚೇರಿ ಮುಗಿಸಲು ಆಗುವಾಗ ಸಭೆಯಿಂದ ಕೋರಿಕೆ ಬಂದರೆ ಅದನ್ನು ಈಡೇರಿಸಿಯೇ ಮಂಗಳ ಹಾಡುತ್ತಿದ್ದರು .ಒಂದು ಭಾರಿ ರೈಲ್ವೆ ಸ್ಟೇಷನ್ ನಲ್ಲಿ ರೈಲಿಗೆ ಕಾಯುತ್ತಿರುವಾಗ ಪೋರ್ಟರ್ ಗಳ  ಅಪೇಕ್ಷೆಯಂತೆ  ಸನಿಹದ ಗುಡಿಯಲ್ಲಿ ರೈಲು ಬರುವ ತನಕ ಹಾಡಿದರಂತೆ  . ಇವರ ಕಲ್ಯಾಣಿ  ರಾಗ ನಿರ್ವಹಣೆ ಕೇಳಲು ರೈಲಿನಲ್ಲಿ ಬಂದ ರಸಿಕರು ತಡವಾದುದರಿಂದ ಅದನ್ನು ಕೇಳಲು ಆಗಲಿಲ್ಲ ಎಂದು ತಿಳಿದು ಅದೇ ಕಚೇರಿಯಲ್ಲಿ ಕಲ್ಯಾಣಿಯನ್ನು ಪುನಃ ಪ್ರಸ್ತುತ ಪಡಿಸಿದರಂತೆ . ಒಂದು ಕಚೇರಿಯಲ್ಲಿ ಪ್ರೇಕ್ಷಕರ ಅಪೇಕ್ಷೆಯಂತೆ ಕ್ಷೀರ ಸಾಗರ ಕೃತಿ ಹಾಡಿ ಮುಗಿಸಿದಾಗ ಸಭೆಯಿಂದ 'ಎಪ್ಪೋ  ವರುವಾರ್ "ಎಂದು ಕೇಳಲು ಇದೋ ಇಪ್ಪೋ ವರುವಾರ್(ಇದೋ ಈಗ ಬರುತ್ತಾರೆ ) ಎಂದು ಗೋಪಾಲಕೃಷ್ಣ ಭಾರತಿಯವರ ಜನಪ್ರಿಯ ಕೃತಿ ಹಾಡಿ    ರಂಜಿಸಿದರಂತೆ . ರಿಕ್ಷಾ ಚಾಲಕರು "  ಸ್ವಲ್ಪ ತಾಳಿ ಮಣಿ ಕಚೇರಿ ಮುಗಿದ ಮೇಲೆ ನಿಮ್ಮನ್ನು ಎಲ್ಲಿ ಬೇಕಾದರೂ ಒಯ್ಯುತ್ತೇವೆ " ಎಂದು ಗಿರಾಕಿಗಳ ಬಳಿ ಹೇಳುತ್ತಿದ್ದರಂತೆ.

ತಿರುವಯ್ಯಾವೂರ್ ತ್ಯಾಗರಾಜ ಉತ್ಸವದಲ್ಲಿ ಎಂ ಎಸ ಸುಬ್ಬಲಕ್ಷ್ಮಿ ಯವರ ನಂತರ ಹಾಡಲು ಅರಿಯಾಕುಡಿ  ರಾಮಾನುಜ ಅಯ್ಯಂಗಾರ್ ಅವರನ್ನು ಕೇಳಲು ಅವರು ಮಣಿಯವನ್ನೇ ಹಾಡಲು ಸೂಚಿಸಿದರಂತೆ ..ಮಹಾತ್ಮಾ ಗಾಂಧಿಯವರ ಅನುಯಾಯಿ ಆಗಿದ್ದ  ಅವರು ಗಾಂಧಿ ಹತ್ಯೆಯ ನಂತರ ಒಂದು ತಿಂಗಳು ಎಲ್ಲಾ ಕಚೇರಿಗಳನ್ನು ರದ್ದು ಪಡಿಸಿದ್ದರು . 

ಖ್ಯಾತ ವೇಣು ವಾದಕ ಟಿ ಆರ್ ಮಹಾಲಿಂಗಂ ಮಣಿ ಅಯ್ಯರ್ ಪಂಡಿತರು ಮತ್ತು ಪಾಮರರು ಇಬ್ಬರನ್ನೂ ಸಮಾನ ತಲುಪಿದ ಕಲಾವಿದ ಎಂದು ಕರೆದಿದ್ದಾರೆ . 

ಇವರ ಇಂಗ್ಲಿಷ್ ನೋಟ್ ಜನಪ್ರಿಯ ಆವಿಷ್ಕಾರ ಆಗಿದ್ದು ಮುಂದೆಯೂ ಹಲವು ಕಲಾವಿದರು ಅದನ್ನು ನುಡಿಸುವದು ಕೇಳಿದ್ದೇನೆ . 

 https://youtu.be/qZDHwkUYbqs

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ