ಬೆಂಬಲಿಗರು

ಗುರುವಾರ, ಡಿಸೆಂಬರ್ 23, 2021

ಸವ್ಯ ಸಾಚಿ ಶಿರಂಕಲ್ಲು ಈಶ್ವರ ಭಟ್

 

                                                               5.9.1922----28.1.2008

 

ಕನ್ಯಾನದಿಂದ ದಕ್ಷಿಣಕ್ಕೆ ಪಿಲಿಂಗುಳಿ ಗುಡ್ಡ ದಾಟಿ ಎರಡು ಮೈಲಿ ದೂರದಲ್ಲಿ ಶಿರಂಕಲ್ಲು ;ಹಿಂದೆ ಕಾಲು ದಾರಿ ಮಾತ್ರವಿದ್ದು ಈಗ ರಸ್ತೆ ಸೌಕರ್ಯ ಇದೆ . 

ಶಿರಂಕಲ್ಲು ಎಂದೊಡನೆ ಥಟ್ಟ್ ಎಂದು ನೆನಪಿಗೆ ಬರುವುದು ಶಿರಂಕಲ್ಲು ಈಶ್ವರ ಭಟ್ . ಇವರು ಪ್ರಗತಿಪರ  ಕೃಷಿಕ ,ಶಿಕ್ಷಣ ಪೋಷಕ , ವಾಗ್ಮಿ ,ಲೇಖಕ ,ಜ್ಯೋತಿಷಿ ,ಯಕ್ಷಗಾನ ಅರ್ಥದಾರಿ ಮತ್ತು ಎಣೆಯಿಲ್ಲದ ದಣಿವಿಲ್ಲದ ಪ್ರವಾಸಿ .  ೧೯೫೨ ರಿಂದ ೨೦೦೦ ಇಸವಿ ವರೆಗೆ ಹಲವು ಬಾರಿ ನೇಪಾಳ ಸೇರಿ ಹಿಮಾಲಯ ದರ್ಶನ ,ಚತುರ್ಧಾಮ ಪ್ರವಾಸ .ಅಮರನಾಥ ,ಮುಕ್ತಿನಾಥ ಯಾತ್ರೆ ಸೇರಿ . ಮೊದಮೊದಲ ಯಾತ್ರೆಗಳ ಸಮಯ ಸರಿಯಾದ ರಸ್ತೆಗಳು ,ಸೌಕರ್ಯ ಇತ್ಯಾದಿ ಇರಲಿಲ್ಲ ,ಈಗಿನಂತೆ ಫೋನ್ ಸೌಕರ್ಯ ಹೇಗೂ ಇಲ್ಲ . ತಮ್ಮ ಹಿಂದಿ ಭಾಷಾ ಜ್ಞಾನ ಮತ್ತು ದೃಢ ಸಂಕಲ್ಪ ಇವರಿಗೆ ಜತೆ . 

ಈ ಪ್ರವಾಸಗಳ ನಂತರ ಶಾಲೆಗಳಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದು ಅವರ ಭಾಷಣ ಕೇಳಲು ಸುತ್ತ ಮುತ್ತಲಿನ ಆಸಕ್ತರು ಬರುತ್ತಿದ್ದರು .ಇವು ಕೆಲವು ಅಳಿಕೆಯಿಂದ ಬರುತ್ತಿದ್ದ ಸೇವಾಮೃತದಲ್ಲಿ ಧಾರವಾಹಿ ಯಾಗಿ ಬಂದು ಪುಸ್ತಕ ರೂಪ ತಾಳಿದವು .ಮುಕ್ತಿನಾಥನ ಪಥದಲ್ಲಿ ,ಅಮರನಾಥ ದರ್ಶನ ,ಹಿಮಾಲಯದ ಚತುರ್ಧಾಮ ದರ್ಶನ ,ಭಾರತದ ಚತುರ್ಧಾಮ ಯಾತ್ರೆ ,ಅವಂತಿಕಾ ಪ್ರವಾಸ ಇವರ ಜನಪ್ರಿಯ ಪ್ರವಾಸ ಕಥನಗಳು .. 

ಇದಲ್ಲದೆ  ಶಂಕರ ಭಗವತ್ಪಾದರು ,ವಿಶ್ವ ಮಾನವಧರ್ಮ ಇತ್ಯಾದಿ  ಮೌಲಿಕ ಕೃತಿಗಳನ್ನೂ ಬರೆದು ಪ್ರಕಟಿಸಿರುವರು . 

ಇವರು ಮತ್ತು ತಮ್ಮ ನಾರಾಯಣ ಭಟ್  ಜ್ಯೋತಿಷ್ಯ ಶಾಸ್ತ್ರ  ಪಾರಂಗತರು .  ಹಲವು ವರ್ಷ ಕಾಲ ವೈಜಯಂತಿ  ಪಂಚಾಂಗದ  ಸಹ ಕರ್ತೃ ಆಗಿದ್ದು ಹೊಸ ಪಂಚಾಂಗ  ಬಂದೊಡನೆ ನಮ್ಮೂರಿನವರಾದ ಅವರ ಹೆಸರು ಓದಿ ಸಂತೋಷ ಪಡುತ್ತಿದ್ದೆವು . ಇವರ ಮನೆಯವರು ಯಾರೂ ಧನಾರ್ಜನೆಗಾಗಿ ಈ ವೃತ್ತಿಯನ್ನು  ಕೈಕೊಂಡ ಹಾಗೆ ಇಲ್ಲ . 

ಕುಗ್ರಾಮ ಶಿರಂಕಲ್ಲು ವಿನಲ್ಲಿ  ಪ್ರಾಥಮಿಕ ಶಾಲೆ ಇವರ ಪ್ರಯತ್ನ ದಿಂದಲೇ ಆರಂಭವಾಗಿ ಸುತ್ತು ಮುತ್ತಲಿನ ಮಕ್ಕಳಿಗೆ ವಿದ್ಯಾರ್ಜನೆಗೆ  ಬಹಳ ಅನುಕೂಲ ಆಯಿತು . 

ಈಶ್ವರ ಭಟ್ ಶ್ರಮ ಜೀವಿ ,ಸರಳ ಶ್ವೇತ ವಸನಧಾರಿ ,ಶ್ಯಾಮ ವರ್ಣ ,ಮುಖದಲ್ಲಿ ಮಂದಹಾಸ ,ಮೃದು ಮತ್ತು ಮಿತ ಭಾಷಿ . ಸಭೆಯಲ್ಲಿ ಮಂತ್ರ ಮುಗ್ದ ಮಾಡುವ ವಾಗ್ಮಿ .ಸಂಸ್ಕೃತ ,ಕನ್ನಡ ಮತ್ತು ಹಿಂದಿ ಭಾಷೆ ಗಳಲ್ಲಿ ಪಾಂಡಿತ್ಯ . ಅವರ  ಪ್ರವಾಸ ಅನುಭವ ಭಾಷಣ ಮತ್ತು ಶಾಲಾ ವಾರ್ಷಿಕೋತ್ಸವಗಳಲ್ಲಿ ಅತಿಥಿಯಾಗಿ ಮಾತು  ಕನ್ಯಾನ ಶಾಲೆಯಲ್ಲಿ ಕೇಳಿ ಪ್ರಭಾವಿತನಾಗಿದ್ದೆ .ನಮ್ಮ  ಕುಟುಂಬದ ಹಿತೈಷಿ ಮತ್ತು ಮಾರ್ಗದರ್ಶಿ ಯಾಗಿದ್ದ ಅವರು ನಮ್ಮ ತಂದೆಯವರ ಬಗ್ಗೆ ಅವರ ವೈಕುಂಠ ಸಮಾರಾಧನೆ ದಿನ ಆಡಿದ ಮಾತು ನಮ್ಮೆಲ್ಲರ ನೆನಪಿನಲ್ಲಿ ಇನ್ನೂ ಇದೆ . 

            ಈಶ್ವರ ಭಟ್ ಸಂಸಾರಿ ಯಾಗಿದ್ದೂ ಋಷಿಯಂತೆ ಬಾಳಿದವರು . ನಮ್ಮ ಊರಿಗೆ ಒಳ್ಳೆಯ ಹೆಸರು ತಂದವರು .ಮಡದಿ ದೇವಕಿ ಅಮ್ಮ ಅವರ ಚಟುವಟಿಕೆಗಳಿಗೆ ಬೆನ್ನೆಲುಬಾಗಿ ನಿಂತವರು . ಮಕ್ಕಳು ಹೈ ಸ್ಕೂಲ್ ಗೆ ಕನ್ಯಾನ ಕ್ಕೆ ಬರುತ್ತಿದ್ದು ನಮ್ಮ ಮಿತ್ರರು . ಶಿವರಾಮ ಭಟ್ ನನ್ನ ಸಹಪಾಠಿ . 

ಇವರ ಬಗ್ಗೆ ಶಿರಂಕಲ್ಲು ಗಣಪತಿ ಭಟ್ ಅವರು ಕಾಂತಾವರ ಕನ್ನಡ ಸಂಘದ ನಾಡಿಗೆ ನಮಸ್ಕಾರ ಮಾಲಿಕೆಯಲ್ಲಿ "ಹಿಮಾಲಯ ಸದೃಶ ಕರ್ಮಯೋಗಿ ಶಿರಂಕಲ್ಲು ಈಶ್ವರ ಭಟ್ಟ"ಎಂಬ ಪುಸ್ತಕ ಬರೆದಿದ್ದಾರೆ .

                         



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ