ಬೆಂಬಲಿಗರು

ಮಂಗಳವಾರ, ಅಕ್ಟೋಬರ್ 26, 2021

ಆತಿಥ್ಯದ ಕೆಲ ನೆನಪುಗಳು

                            ಅತಿಥಿ ದೇವೋ ಭವ

ನಾನು ಮಂಗಳೂರಿನಲ್ಲಿ ವಾಸವಿದ್ದ ಸಮಯ .ಕೆ ಎಸ ಹೆಗ್ಡೆ  ಮೆಡಿಕಲ್ ಕಾಲೇಜು ನಲ್ಲಿ ಅಧ್ಯಾಪನ ಮಾಡುತ್ತಿದ್ದೆ . ನಮ್ಮ ವಿದ್ಯಾರ್ಥಿಗಳು ಮದುವೆಗೆ ಅಹ್ವಾನ ನೀಡಿದಾಗ ಸಂತೋಷದಿಂದ ಹೋಗುತ್ತಿದ್ದೆವು . ಸಾಮಾನ್ಯವಾಗಿ ನಾನು ಮತ್ತು ಡಾ ಪ್ರಕಾಶ್ (ಈಗ  ಕ್ಷೇಮಾ ದ  ಡೀನ್ )ಜತೆಗೆ  ಅವರ ಸ್ಕೂಟರ್ ನಲ್ಲಿ ಹೋಗುವುದು ;ಊರ ಹೊರಗೆ ಇದ್ದರೆ  ನನ್ನ ಕಾರ್ ನಲ್ಲಿ . ಒಮ್ಮೆ ನಮ್ಮ ಶಿಷ್ಯ ನಾಗರಾಜ ತನ್ನ ಸಹೋದರಿ ಯ ಮದುವೆ ಗೆ ಅಹ್ವಾನ ನೀಡಿದ್ದು .ಅದು ಒಂದು ಭಾನುವಾರ ಕುದ್ರೋಳಿ ಗೋಕರ್ಣನಾಥ ದೇವಸ್ಥಾನ ದಲ್ಲಿ ಇದ್ದಿತು . ಸರಿ ಭಾನುವಾರ ಹೇಗೂ ರಜೆ ,ನಾವಿಬ್ಬರೂ ಯಥಾಪ್ರಕಾರ ಕುದ್ರೋಳಿ ದೇವಳದ ಒಳಗೆ ಇರುವ ಕಲ್ಯಾಣ ಮಂಟಪಕ್ಕೆ ಹಾಜರ್ . ಅಲ್ಲಿ ನೋಡಿದರೆ ಪರಿಚಯದವರು ಯಾರೂ ಇಲ್ಲ .ನಾವು ಮೆಲ್ಲಗೆ ಹೊರ ಬಂದು  ದೇವಳದ ಕಚೇರಿಗೆ  ಬಂದು ಇಂತಹ ಮದುವೆ ಎಲ್ಲಿ ಎಂದಾಗ 'ಸರ್ ಅದು ಮುಂದಿನ ಭಾನುವಾರ ,ಇವತ್ತು ಬೇರೇ ಪಾರ್ಟಿ ಯದ್ದು 'ಎಂದಾಗ ಸರೀ ಕಾಗದ ನೋಡದೆ ಬಂದುದಕ್ಕೆ ನಮ್ಮನ್ನೇ ಹಳಿದುಕೊಂಡು ವಾಪಸು ಹೋಗುವಾ ಎನ್ನುತ್ತಿರಲು ಕಚೇರಿಯ ವ್ಯಕ್ತಿ "ಸರ್ ಇಲ್ಲಿ ಬಂದ ಮೇಲೆ ನಿಮ್ಮನ್ನು ಊಟ ಮಾಡದೇ ಹೋಗಲು ಬಿಡುವುದಿಲ್ಲ .ಇಲ್ಲಿಯೇ ದೇವಸ್ಥಾನದ ಊಟ ಇದೆ ,ಸ್ವಯಂ ಸೇವೆ .ಆದರೂ ನೀವು ಹಿರಿಯರು ಕುಳಿತುಕೊಳ್ಳಿ ನಾನೇ ತಂದು ಕೊಡುತ್ತೇನೆ "ಎಂದು ಉಪಚರಿಸಿ ಊಟ ಮಾಡಿಸಿಯೇ ಕಳುಹಿಸಿದ . ದೇವರು ಎಂದು ನಾವು ಹೇಳಿಕೊಳ್ಳುವುದು ಇಂತಹ ಸಂಸ್ಕಾರ ಯುಕ್ತ ಮನಸುಗಳ ಒಳಗೆ ಇರುವನು . 

          ಇನ್ನೊಂದು ಭಾರಿ ನಾನು ಸಕುಟುಂಬ ಕಾಸರಗೋಡಿನ ಒಂದು ಪ್ರಸಿದ್ಧ ದೇವಳದ ಹಾಲಿನಲ್ಲಿ ನಡೆದ ಸಂಗೀತೋತ್ಸವ ಕ್ಕೆ ಹೋಗಿದ್ದೆ. ಬೆಳಗಿನಿಂದ ಸಂಜೆ ತನಕ .ನಾವು ಮಂಗಳೂರಿನಿಂದ  ಬೇಗನೇ ನಾಷ್ಟಾ ಮಾಡಿ ಹೋಗಿದ್ದೆವು .ಕಚೇರಿಯ ಆರಂಭದಿಂದ ಊಟದ ವಿರಾಮದ ವೇಳೆ ತನಕ ಒಮ್ಮೆಯೂ ಏಳದೆ ಕುಳಿತು ಕೇಳಿ ಆನಂದಿಸಿದೆವು .ಆಯೋಜಕರು ,ಭಾಗವಹಿಸಿದವರು ಎಲ್ಲಾ ಪರಿಚಿತರೇ . ಊಟದ ವಿರಾಮ ಆಗುವಾಗ ಎಲ್ಲರೂ ದಡಬಡನೆ ಎಲ್ಲೋ ಧಾವಿಸಿದರು .ನಮ್ಮೊಡನೆ ಸೌಜನ್ಯಕ್ಕೆ ಕೂಡಾ ಬರುವಂತೆ ಹೇಳಲಿಲ್ಲ .ಅಲ್ಲಿಯೇ ಮೂಲೆಯಲ್ಲಿ ಕುಳಿದಿದ್ದ ಒಬ್ಬರು ಮಲಯಾಳಿ ನಮ್ಮ ಬಳಿಗೆ ಬಂದು ಮಲಯಾಳ ಮಿಶ್ರಿತ ಕನ್ನಡದಲ್ಲಿ "ಸಾರ್ ನಿಮ್ಮ ಊಟೆ ?'ಎಂದು ವಿಚಾರಿಸಿದರು .ನಾವು ಹೊರಗೆ ಹೋಟೆಲ್ ಒಂದಕ್ಕೆ ಹೋಗಿ ಹೊಟ್ಟೆ ತುಂಬಿಸಿ ಕೊಂಡೆವು . ಇಂತಹದೇ ಅನುಭವ ನಿಟ್ಟೆಯಲ್ಲಿ ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನ ದಲ್ಲಿ ಆಗಿತ್ತು .ನಾ ಮೊಗಸಾಲೆ ಅಧ್ಯಕ್ಷರು .ಮಂಗಳೂರಿನಿಂದ ಬಸ್ಸಿನಲ್ಲಿ ಹೋಗಿದ್ದೆ .ಹಲವು ಪರಿಚಯದವರು ಸಭೆಯಲ್ಲಿ ಇದ್ದರು .ಊಟದ ವೇಳೆ ಆಹ್ವಾನಿತರು ಎಲ್ಲಾ ಊಟದ ಚಪ್ಪರಕ್ಕೆ  ಕೂಡಾ  ಹೋದರು. ...ಅದು ವರೆಗೆ ನನ್ನಲ್ಲಿ ಮಾತನಾಡಿಕೊಂಡು ಇದ್ದವರೂ ಕೂಡಾ ಸೌಜನ್ಯಕ್ಕಾಗಿಯಾದರೂ "ಬನ್ನಿ".  ಎನ್ನಲಿಲ್ಲ . ಪುಣ್ಯಕ್ಕೆ ಅಲ್ಲಿ ವಿದ್ಯಾರ್ಥಿಗಳಿಗಾಗಿ ನಡೆಸುವ ಒಂದು ಕ್ಯಾಂಟೀನ್ ಇದ್ದು ,ನನ್ನ ವಿದ್ಯಾರ್ಥಿಗಳು ಇಂಟರ್ನ್ ಆಗಿ ಇದ್ದವರು ಸಿಕ್ಕಿ ಅವರೊಡನೆ ಊಟ ಮಾಡಿದೆನು . 

ಸಂಗೀತ ,ಸಾಮೂಲಕ ಹಿತ್ಯ ಕೂಟಗಳಲ್ಲಿ ಉಚಿತ ಊಟ ತಿಂಡಿ  ನೀಡುವುದಕ್ಕೆ ಆದ್ಯತೆ ನೀಡುವುದು ,ಅದಕ್ಕೆ ಹಣ ಖರ್ಚುಮಾಡುವುದಕ್ಕೆ  ನನ್ನ ಸಹಮತ ಇಲ್ಲ . ಇನ್ನು ಈಗಿನ ಸಾಹಿತ್ಯ ಮೇಳಗಳಲ್ಲಿ ಕ್ರಾಸ್ ಸಬ್ಸಿಡಿ ಮೂಲಕ ಸಭೆಯನ್ನು ಚಂದಗಾಣಿಸಲು ಹಲವರನ್ನು ಕರೆಯುವರು .ಅವರ ಖರ್ಚು ವೆಚ್ಚ ಸಾಮಾನ್ಯ ಪ್ರತಿನಿಧಿಗಳು ಭರಿಸ ಬೇಕು . ಅವರ ಭಾಷಣ ಇತ್ಯಾದಿ ಇರದು ,ಆದರೆ ಭಾಷಣ ನಂತರದ ಚರ್ಚೆ ಇತ್ಯಾದಿಯಲ್ಲಿ ಅವರ ಅವಶ್ಯ ಇದೆ ಎಂಬ ಆಶಯ ಇರ ಬೇಕು .ಸಾಮಾನ್ಯ ಎಲ್ಲಾ ಕಡೆಯೂ ವಿಶೇಷ ಆಹ್ವಾನಿತ  ಖಾಯಂ ಪ್ರತಿನಿಧಿಗಳನ್ನು (ವಿಶ್ವ ಸಂಸ್ಥೆಯ ಖಾಯಂ ಸದಸ್ಯರಂತೆ )ನಾನು ಕಂಡಿದ್ದೇನೆ . 

ಆದರೂ ಒಟ್ಟಿಗೇ ಕುಳಿತು ಮಾತನಾಡುತ್ತಿದ್ದು ಊಟಕ್ಕೆ ಆಗುವಾಗ ಕಂಡೇ ಇಲ್ಲ ಎಂದು ಓಡುವವರನ್ನು ಕಂಡಾಗ ಸ್ವಲ್ಪ ಬೇಸರ ಆಗುವುದು

 ಬಾಲಂಗೋಚಿ : ಕೆಲವು ಬಂಧು ಮಿತ್ರರು ಸಮಾರಂಭಗಳಲ್ಲಿ ವ್ಹಾಟ್ಸಪ್ಪ್ ನಲ್ಲಿ ಸಿಕ್ಕಾಗ ನೀವು ನಮ್ಮ ಮನೆಗೆ ಬರುವುದೇ ಇಲ್ಲಾ ಎಂದು ಗೋಗೆರೆಯುವರು . ನೀವು ಅವರ ಊರಿಗೆ ಹೋಗಿದ್ದು  ಇಲ್ಲೇ ಇದ್ದೇನೆ ಎಂದು ವ್ಹಾಟ್ಶಪ್ಪ್ ಫೇಸ್ಬುಕ್ ನಲ್ಲಿ ಹಾಕಿದರೆ ಜಾಣ ಮೌನ ವಹಿಸುವರು .

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ