ಬೆಂಬಲಿಗರು

ಶನಿವಾರ, ಅಕ್ಟೋಬರ್ 16, 2021

ಒಂದು ಜಿಜ್ನಾಸೆ

              ಒಂದು ಜಿಜ್ನಾಸೆ 

ದಿನಗಳ ಹಿಂದೆ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದ ವಿಡಿಯೋ ತುಣುಕು ಮೆಚ್ಚಿ ನಿಮ್ಮೊಡನೆ ಹಂಚಿ ಕೊಂಡಿದ್ದೆ . ಅದರಲ್ಲಿ ಸ್ಪರ್ಧಿ ಒಬ್ಬರು" ತಾವು ಆರ್ಥಿಕ ಬಡತನದಲ್ಲಿ ಇದ್ದರೂ ಸಂತೋಷವಾಗಿ ಇದ್ದೆವು ;ತನ್ನ ಅಣ್ಣ ಸಿಗುತ್ತಿದ್ದ ಅಲ್ಪ ಸಂಬಳದಲ್ಲಿ ನನ್ನ ಪ್ರಾಥಮಿಕೋತ್ತರ  ಅಧ್ಯಯನ ಸಾಂಗವಾಗಿ ನಡೆಯುವಂತೆ ನೋಡಿಕೊಂಡನು "ಎನ್ನುತ್ತಾರೆ .ಅಮಿತಾಭ್ ಬಚ್ಚನ್  ಪ್ರೇಕ್ಷಕರ ನಡುವೆ ಇದ್ದ ಅಣ್ಣನ ಕಡೆಗೆ ನೋಡಿ ಹೌದೇ ಎಂದು ಸಂತೋಷದಿಂದ ಕೇಳುತ್ತಾರೆ .ಅದಕ್ಕೆ ಅಣ್ಣ 'ಹೌದು ಸಾರ್ ಬಡತನ ನಮ್ಮನ್ನು ಏನಾದರೂ ಒಳ್ಳೆಯದನ್ನು ಮಾಡುವಂತೆ ಪ್ರೇರೇಪಿಸುತ್ತದೆ ಎನ್ನುತ್ತಾರೆ . 

         ನಾನು ಹಿಂದೆ ತಿಳಿಸಿದಂತೆ ನಮ್ಮ ಹೆತ್ತವರಿಗೆ ನಾವು ಹತ್ತು ಮಕ್ಕಳು . ಎಲ್ಲರೂ ವಿದ್ಯಾಭ್ಯಾಸದ ಒಂದೊಂದು ಹಂತದಲ್ಲಿ ಇದ್ದೆವು . ಕಷ್ಟ ಕಾಲ ಬಂತು  . ನನ್ನ ದೊಡ್ಡ ಅಣ್ಣ ಪ್ರತಿಷ್ಠಿತ ಸಂಸ್ಥೆಯಲ್ಲಿ ಪಿ ಎಚ್ ಡಿ ಮಾಡುತ್ತಿದ್ದವನು ಅದನ್ನು ಮೊಟಕು ಗೊಳಿಸಿ ಸಾಮಾನ್ಯ ಸಂಬಳದ ಕೆಲಸಕ್ಕೆ ಸೇರಿದನು .ಎರಡನೇ ಅಣ್ಣ ನಮ್ಮ ಪೈಕಿ ಬಹಳ ಪ್ರತಿಭಾಶಾಲಿ ಯನ್ ಐ ಟಿ ಕೆ ಯಲ್ಲಿ   ರಾಂಕ್ ಸಹಿತ ಬಿ ಈ ಮಾಡಿ ಮದ್ರಾಸ್ ಐ ಐ ಟಿ ಯಲ್ಲಿ ಎಂ ಟೆಕ್ ಮಾಡುತ್ತಿದ್ದವನು ಒಂದೇ ವರ್ಷದಲ್ಲಿ ಮೊಟಕು ಗೊಳಿಸಿ ಆಗ ತಾನೇ ಆರಂಭವಾದ  ಎಂ ಸಿ ಎಫ್ ಗೆ ಸೇರಿ ಕೊಂಡ .ನನ್ನ ಪಿ ಯುಸಿ ಮತ್ತು ಮುಂದೆ ಮೊನ್ನೆ ಮೊನ್ನೆಯ ವರೆಗೆ ನನಗೆ ಆರ್ಥಿಕ ಸಹಾಯ ಮಾಡುತ್ತಿದ್ದ .ನನಗೆ ಎಂ ಬಿ ಬಿ ಎಸ ಅಡ್ಮಿಶನ್ ಸಿಕ್ಕಾಗ ದೊಡ್ಡಣ್ಣ ತಾನು ಸ್ವಯಂ  ಅನುಕೂಲದಲ್ಲಿ ಇಲ್ಲದಿದ್ದರೂ ಆಗಿನ ಕಾಲಕ್ಕೆ ದೊಡ್ಡದಾದ ಅಡ್ಮಿಶನ್ ಫೀಸ್ ರೂಪಾಯಿ ೩೩೦  ಕೂಡಿಸಿ ಕೊಟ್ಟ . ತಮ್ಮ  ಉಶಾರಿ ಎಂಬ ಅಭಿಮಾನ .  ತಾಯಿಯಂತೆ ಇರುವ ನಮ್ಮ ಅತ್ತಿಗೆಯವರು ನಮಗೇ  ತತ್ವಾರ ಇರುವಾಗ ಈ ಉಸಾಬರಿ ಏಕೆ ಎಂದು ಕೇಳದೆ ಸಂತೋಷ ಪಟ್ಟು ಕೊಡುವಂತೆ ಹೇಳಿದರು . ನಮ್ಮ ಸಮೀಪದ ಹಣವಂತ ಬಂಧುಗಳು ಸಹಾಯಕ್ಕೆ ಬರಲಿಲ್ಲ . ಮುಂದೆ ನಾನು ಡಾಕ್ಟರ್ ಆಗಿ ಹಣ ಸಂಪಾದನೆ ಮಾಡದಿದ್ದರೂ ಕಷ್ಟದಲ್ಲಿ ಇರುವ ಕೆಲವರಿಗೆ ಸಹಾಯ ಮಾಡಿದ ತೃಪ್ತಿ ಇದೆ . 

ನಿನ್ನೆ ಒಂದು ಅಜ್ಜಿ ತಪಾಸಣೆಗೆ ಬಂದಿದ್ದರು . ಸುಂದರಿ ಎಂದು ಹೆಸರು . ತುಂಬಾ ಸ್ಥಿತಿ ವಂತರು ಅಲ್ಲ .ಆದರೆ ಅಜ್ಜಿಯನ್ನು  ಮಗ ಮತ್ತು ಮೊಮ್ಮಗ  ಪ್ರೀತಿಯಿಂದ ಕರೆದು ಕೊಂಡು ಬಂದಿದ್ದರು .ಅಜ್ಜಿ ಅಜ್ಜರನ್ನು ಗೌರವ ಮತ್ತು ಪ್ರೀತಿಯಿಂದ ನೋಡಿಕೊಳ್ಳುವ  ಸ್ಥಿತಿವಂತರು ಮತ್ತು ವಿದ್ಯಾವಂತರು (?)ಈಗ  ಬಹಳ ಕಡಿಮೆ ಆಗಿದ್ದಾರೆ ಎಂದು ಆಸ್ಪತ್ರೆಯ ನನ್ನ ಅನುಭವದಿಂದ ಕಂಡು ಕೊಂಡಿದ್ದೇನೆ . ಈ ಸುಂದರಿ ಅಜ್ಜಿ ನಿಜವಾಗಿಯೂ ಪುಣ್ಯವಂತೆ ಮತ್ತು ಶ್ರೀಮಂತೆ  ಎಂದು ಕೊಂಡೆನು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ