ಬೆಂಬಲಿಗರು

ಭಾನುವಾರ, ಅಕ್ಟೋಬರ್ 24, 2021

ಬಾಲ್ಯದ ಶಿಕ್ಷೆಗಳು

 ಸಾಫ್ಟ್ವೇರ್ ಕಂಪನಿಯವರು ಕ್ಯಾಂಪಸ್ ನಲ್ಲಿ ಆಯ್ಕೆ ಮಾಡಿ ಇನ್ನೂ ಕೆಲಸಕ್ಕೆ ತೆಗೆದುಕೊಂಡು ಇರದಿದ್ದರೆ ಬೆಂಚ್ ನಲ್ಲಿ ಇದ್ದಾನೆ ಎನ್ನುತ್ತಿದ್ದರು .ಈಗಲೂ ಇದೆಯೇ ಎಂದು ಗೊತ್ತಿಲ್ಲ .ನಾವು ಪ್ರಾಥಮಿಕ ಶಾಲೆಯಲ್ಲಿ ಇದ್ದಾಗ ಏನಾದರೂ ಮಂಗ ಚೇಷ್ಟೆ ಮಾಡಿದರೆ ,ಮನೆ ಕೆಲಸ ಮಾಡದಿದ್ದರೆ ಮತ್ತು ಸರಿಯಾದ ಉತ್ತರ ಕೊಡದಿದ್ದರೆ ಬೆಂಚ್ ಮೇಲೆ ನಿಲ್ಲಿಸುತ್ತಿದ್ದರು .ನಾನೂ ಈ ಗೌರವಕ್ಕೆ ಹಲವು ಭಾರಿ  ಭಾಜನ ನಾಗಿದ್ದೇನೆ . ತರಗತಿಯಲ್ಲಿ ಎಲ್ಲರೂ ಕುಳಿತುವಾಗ ನಾವು ಮಾತ್ರ ಬೆರ್ಚಪ್ಪ ಗಳಂತೆ ಬೆಂಚಿನ ಮೇಲೆ ನಿಲ್ಲಲು ಸ್ವಲ್ಪ ಅವಮಾನ ಆಗುತ್ತಿತ್ತು . ಒಂದೇ ಮನೆಯವರು ಹಲವರು ಶಾಲೆಯಲ್ಲಿ ಇರುವಾಗ ನಮಗೆ ಆದ ಶಿಕ್ಷೆ ಮನೆಯವರಿಂದ ಮುಚ್ಚಿ ಇಡುವುದು ಸಾಧ್ಯವಿರಲಿಲ್ಲ .ಅಮ್ಮನಿಗೆ ತಿಳಿದರೆ ಇನ್ನೂ ಎರಡು ಬಿಗಿಯ ಬೇಕಿತ್ತು ನಿನಗೆ ಬುದ್ದಿ ಬರಲು ಎನ್ನುತ್ತಿದ್ದರು . 

ನಮ್ಮಲ್ಲಿ ಕೆಲವು ಮಕ್ಕಳು ಬೆಂಚಿನ ಮೇಲೆ ನಿಲ್ಲಿಸಿದರೂ ಏನೂ ಆಗದವರಂತೆ ಸ್ಥಿತ ಪ್ರಜ್ಞರಾಗಿ ಮುಗುಳ್ನಗುತ್ತಾ ನಿಂತು ಅಧ್ಯಾಪಕರ ಕೋಪಕ್ಕೆ ತುಪ್ಪ ಸುರಿಯುತ್ತಿದ್ದರು . ಅವರಿಗೆ ಅದು ವಿಕ್ಟರಿ ಸ್ಟಾಂಡ್ ನಂತೆ ತೋರುತ್ತಿರ ಬೇಕು . 

ನಾವು ಹೈ ಸ್ಕೂಲಿಗೆ ಬಂದಾಗ ಈ ಶಿಕ್ಷೆ ಇರಲಿಲ್ಲ .ನಮ್ಮಂತಹ ಟೊಣಪರ ಭಾರ ಬಡಕಲು ಬೆಂಚ್ ಗಳು ಹೊರಲಾರವು ಎಂದು ಇರ ಬೇಕು .

ಇತರ ಜನ (ಶಿಕ್ಷಕ )ಪ್ರಿಯ ಶಿಕ್ಷೆಗಳು ಬಸ್ಕಿ ಹೊಡೆಸುವುದು ,ಕಿವಿ ಹಿಂಡುವುದು ಮತ್ತು ಬೆತ್ತದಲ್ಲಿ ಹೊಡೆಯುವುದು . 

ಈ ತರಹ ದೈಹಿಕ ಶಿಕ್ಷೆ ಕೊಡುತ್ತಿರುವವರು  ತಮ್ಮ ಶಿಷ್ಯ ಉದ್ದಾರ ವಾಗುವುದಿಲ್ಲವಲ್ಲಾ ಎಂಬ ಹತಾಶೆ ಯಿಂದ  ಇದ್ದವರೇ ಹೆಚ್ಚು ವಿನಃ ಪರ ಹಿಂಸಾ ಸಂತೋಷಿಗಳು ಕಡಿಮೆ .An indulgent teacher is better than indifferent one. ಏನು ಬೇಕಾದರೂ ಮಾಡಿ ಸಾಯಲಿ ,ನನಗೆ ಹೇಗೂ ಸಂಬಳ ಬರುತ್ತದೆ ಎಂದು ಅಹಿಂಸಾ ತತ್ವ ಅಳವಡಿಸಿ ಕೊಳ್ಳುವವರು ಶಿಕ್ಷಿಸಲು ಹೋಗರು.

ಎಸ್ ವಿ ಪರಮೇಶ್ವರ ಭಟ್ ಅವರು ಹೇಳುತ್ತಿದ್ದ ಜೋಕ್: ತರಲೆ ವಿದ್ಯಾರ್ಥಿಗೆ ಅಧ್ಯಾಪಕ "ಕತ್ತೆ,ನೀನು  ನನ್ನೆದುರು ನಿಲ್ಲಲು ಅಯೋಗ್ಯ ,ನಡಿ ಹೆಡ್ ಮಾಸ್ಟೆರ್ ಅವರ ಬಳಿಗೆ "

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ