ಬೆಂಬಲಿಗರು

ಶನಿವಾರ, ಅಕ್ಟೋಬರ್ 2, 2021

ನಮ್ಮ ನಳ ಮಹಾರಾಜರು

 

 ನಮ್ಮ  ನಳ ಮಹಾರಾಜರು 

ಹಿಂದೆ ನಮ್ಮಲ್ಲಿ ಯಾವುದೇ ಮಂಗಳ ಕಾರ್ಯ ,ಧಾರ್ಮಿಕ ಕಾರ್ಯಕ್ರಮ ಇದ್ದರೂ ಇಬ್ಬರು ಮುಖ್ಯ .ಒಂದು ಪೂಜೆ ಭಟ್ಟರು ಅಥವಾ ಪುರೋಹಿತರು ,ಇನ್ನೊಂದು ಅಡುಗೆ ಭಟ್ಟರು . ಅದರಲ್ಲಿ ಎರಡೆನೇ ವರ್ಗಕ್ಕೆ ಅದಕ್ಕೆ ಸಿಗ ಬೇಕಾದ ಮನ್ನಣೆ ದೊರೆತಿಲ್ಲ ಎಂಬುದು ನನ್ನ ಭಾವನೆ . 

ನಮ್ಮ ಮನೆಗೆ ವಿಟ್ಲ ದಿಂದ ಸುಬ್ರಾಯ ನಾವಡ (ಸುಬ್ರಾಯಣ್ಣ )ಮತ್ತು ಅವರ ಮಗ ವಾಸುದೇವ ನಾವಡ (ವಾಸು ಅಣ್ಣ )ಪಾಜಕ ಕ್ಕೆ  ಬರುತ್ತಿದ್ದವರು . ಕಾಶೀಮಠ ದಲ್ಲಿ ಅವರ ಮನೆ ,ಅಲ್ಲಿಗೆ ಹೋಗಿ ಆಮಂತ್ರಣ ನೀಡುವುದು .ಸಾಮನ್ಯವಾಗಿ ಸ್ವೀಟ್ ಏನು ಎಂಬುದನ್ನು ಮೊದಲೇ ಕೇಳಿ ತಿಳಿದು ಕೊಳ್ಳುವರು . 

ಕಾರ್ಯಕ್ರಮದ ಮುನ್ನಾ ದಿನ ಸಂಜೆ ಅವರು ಮತ್ತು ಅವರ ತಂಡ ಹಾಜರು .ಅವರ ಹೆಗಲ ಜೋಳಿಗೆಯಲ್ಲಿ ಹೋಳಿಗೆ ಕೋಲು ಅಥವಾ ಲಡ್ಡು ಮಾಡಲು ಕಡಲೇ ಬೇಳೆ ಬೂಂದಿ ಜಾಲರಿ ತಲೆ ಹೊರ ಹಾಕಿರುವುದು . ವಾಸು ,ಸುಬ್ರಾಯಣ್ಣ ಅವರ ಮನೆ ಮಾತು ಕೋಟ ಆದರೂ ಅಸ್ಖಲಿತ ಹವ್ಯಕ ಭಾಷೆ ಮಾತನಾಡುವರು .ಅವರ ಜತೆ ಅವರ ತಂಡವೂ ಬೇರೆ ಬೇರೆ ಕಡೆಯಿಂದ ಬಂದು ಸೇರಿ ಕೊಳ್ಳುವುದು ..ದೂರ ವಾಣಿ ಇಲ್ಲದ ಈ ಕಾಲದಲ್ಲಿ ಹೇಗೆ ಇವರನ್ನು ಒಗ್ಗೂಡಿಸುತ್ತಿದ್ದರು ಎಂಬ ಸೋಜಿಗ ಇದೆ . 

            ಮನೆಗೆ ಬಂದವರೇ ಉಭಯ ಕುಶಲೋಪರಿ ಆದ ಮೇಲೆ ವಿಶೇಷ ಅಡಿಗೆ ಕೊಟ್ಟಿಗೆ ಯ ಚಾರ್ಜ್ ತೆಗೆದುಕೊಳ್ಳುವರು . ಪೆಟ್ರೋಮ್ಯಾಕ್ಸ್ ಬೆಳಕು ,ಹೊಗೆ ಉಗುಳುವ ಕಟ್ಟಿಗೆ ಒಲೆ .ಬಾವಿಯಿಂದ ನೀರು ಸೇದಿ ತರುವದು .ಅರೆಯುವ ಕಾರ್ಯ ಕಲ್ಲಿನಲ್ಲಿ .ಇದನ್ನೆಲ್ಲಾ ನೆನಪಿಸಲು ಕಾರಣ ಈಗಿನ ಅಡುಗೆ ಮನೆಯೊಡನೆ ಹೋಲಿಸಲು .. ಊರ ಸುದ್ದಿ ಮಾತನಾಡುತ್ತಾ ಅಡುಗೆ ಕಾರ್ಯ ಮಾಡುವರು .ಚಿನ್ನದ ಬಣ್ಣದ ಹೋಳಿಗೆ ಹೂರಣ ಮೈದಾ ಹಿಟ್ಟಿನ ಒಳಗೆ ಸೇರಿಸಿ ,ಲಟ್ಟಿಸಿ ,ಬೇಯುಸುತ್ತಿದ್ದುದನ್ನು ನಾವು ಬೆರಗು ಮತ್ತು ಆಸೆಯಿಂದ ನೋಡುತ್ತಿದ್ದೆವು . ಹೋಳಿಗೆಗಳು ಮಾಂತ್ರಿಕ ಕೈಗಳಿಂದ ಕೆರಶಿ (ತಡ್ಪೆ)ಯಲ್ಲಿ ಪವಡಿಸಲ್ಪಡುತ್ತಿದ್ದವು . ಕಾರ್ಯಕ್ರಮ ಆಗುವ ವರೆಗೆ ತಿನ್ನುವಂತಿಲ್ಲ . 

ಮುಂಜಾನೆ ತಿಂಡಿ ಅವಲಕ್ಕಿ ಸಜ್ಜಿಗೆ .ಈಗಿನ ಹಾಗೆ ಇಡ್ಲಿ ದೋಸೆ ಇತ್ಯಾದಿ ಮಾಡುವ ಕ್ರಮ ಇರಲಿಲ್ಲ . ಅಡುಗೆಯವರು ಮಾಡುವ ಅವಲಕ್ಕಿ ಸಜ್ಜಿಗೆಗೆ ವಿಶೇಷ ರುಚಿ . 

ಅಡುಗೆ ಮನೆಯ ದೃಶ್ಯ ;ಮುಖ್ಯ ಅಡುಗೆಯವರು ಆರ್ಕೆಸ್ಟ್ರ ದ ಬ್ಯಾಂಡ್ ಮಾಸ್ಟೆರ್ . ಮಿಕ್ಕವರು ಮುಖ್ಯ ಮತ್ತು ಪಕ್ಕ ವಾದ್ಯದವರು ,ಒಂದು ಕಡೆ ಅರೆತ ,ಇನ್ನೊಂದು ಕಡೆ ಕೊರೆತ  ,ಮತ್ತೊಂದು ಕಡೆ ಕಾಯಿ ಕೆರೆತ ,ಪಾತ್ರೆ  ಕೊಪ್ಪರಿಗೆಯಲ್ಲಿ ನೀರು ಕೊತ ಕೊತ . ಮದುವೆಯಂತ ದೊಡ್ಡ ಸಮಾರಂಭ ದಲ್ಲಿ ಅವರ ಕಣ್ಣು ಸೇರುತ್ತಿರುವ ಜನ ಸಂಖ್ಯೆಯ ಮೇಲೆ ಒಂದೆಡೆ ಯಾದರೆ ,ಕಾರ್ಯಕ್ರಮ ಯಾವ ಘಟ್ಟಕ್ಕೆ ಬಂದಿದೆ ಎಂಬುದು ಇನ್ನೊಂದು ಕಡೆ ,. ನಿರೀಕ್ಷೆಗಿಂತ ಹೆಚ್ಚು ಅತಿಥಿಗಳು ಬಂದರೆ ಸುಧಾರಿಸುವರು ,ಮನೆಯವನ ಮರ್ಯಾದೆ ಉಳಿಸುವರು ,ಡೈನಮಿಕ್ ಮ್ಯಾನೇಜ್ಮೆಂಟ್ .ಹಲವು ಓಲೆಗಳ ಮೇಲೆ ತರತರ ವ್ಯಂಜನ ಗಳು ಬೇರೆ ಬೇರೆ ಹಂತಗಳಲ್ಲಿ ಇರುವುದನ್ನು ಮಾನಿಟರ್ ಮಾಡುವುದು ನಮ್ಮ ಐ ಸಿ ಯು ಮಾನಿಟರ್ ಗಿಂತ ಕಷ್ಟ . ಒಂದಕ್ಕೆ ಉಪ್ಪು ,ಇನ್ನೊಂದಕ್ಕೆ ಬೆಲ್ಲ ,ಮತ್ತೊಂದಕ್ಕೆ ಹುಳಿ  ಅಯಾಚಿತವಾಗಿ ಕೈ ಹಾಕಿ ನೆನಪಿಡುವುದು .

ಊಟದ ವೇಳೆ ಬಡಿಸುವವರಿಗೆ ಬೇರೆ ಬೇರೆ ಪಾತ್ರೆಗಳಲ್ಲಿ ಹಾಕಿ ಕೊಡುವುದು ,ತಾವು ಮಾತ್ರ ಕೊನೇ ಪಂಕ್ತಿಯಲ್ಲಿ ಒಂಡು ,ತಮ್ಮ ಸಂಬಾವನೆ ,ಎರಡು ತೆಂಗಿನ ಕಾಯಿ ಸ್ವೀಕರಿಸಿ ಮುಂದಿನ ಮನೆಗೆ ಬದುಕು ಜಟಕಾ ಬಂಡಿ ಎಂದು ತೆರಳುವ ಬಾಣಸಿಗ ಬಂಧುಗಳ  ,ಆ ದಿನಗಳಲ್ಲಿ ಸೌಕರ್ಯಗಳ  ಕೊರತೆಯಲ್ಲಿಯೂ ಅವರು ಸುಧಾರಿಸುತ್ತಿದ್ದುದು ನೆನಪು ಬರುವುದು .

ಬಾಲಂಗೋಚಿ . ಕಾಂತಡ್ಕದಲ್ಲಿಯೂ ಶ್ರೀ ನರಸಿಂಹ ಭಟ್ (ಹೆಸರು ಬೇರೆ ಇರ ಬಹುದು )ಎಂಬ ಬಾಣಸಿಗರು ಇದ್ದು ಅವರ ಹೋಳಿಗೆ ರುಚಿಗೆ ಪ್ರಸಿದ್ದವಾಗಿತ್ತು ಎಂದು ನೆನಪು .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ