ಬೆಂಬಲಿಗರು

ಮಂಗಳವಾರ, ನವೆಂಬರ್ 24, 2020

ನೆನಪು ಸಹ ನೆನಪು ಸರ ಮಾಲೆ

ನೀವು ಅಮಜೋನ್ ನಲ್ಲೋ ಫ್ಲಿಪ್ ಕಾರ್ಟ್ ನಲ್ಲೋ ಒಂದು ವಸ್ತು ಖರೀದಿಸ ಹೋಗುತ್ತೀರಿ .ಆಗ ಕಂಪ್ಯೂಟರ್ ಇನ್ನೂ ಕೆಲವು ವಸ್ತು ತೋರಿಸಿ ನೀವು ಇದನ್ನೂ ಇಷ್ಟ ಪದಬಹುದು ಅಥವಾ ಇದನ್ನು ಖರೀದಿಸಿದವರು ಇಂತಹದೇ ಇನ್ನೂ ಕೆಲವು ವಸ್ತು ಇಷ್ಟ ಪಟ್ಟಿರುವರು ಎಂದು ಸೂಚಿಸುವುದು .ನೀವು ಒಂದು ಕಾರ್ಯಕ್ರಮ ಯು ಟ್ಯೂಬು ನಲ್ಲಿ ನೋಡಿದರೆ ಅಂತಹದೇ ಇನ್ನೂ ಅನೇಕ ವೀಡಿಯೋ ಗಳ ಸೂಚನೆ ಕೊಡುವುದು .ಇದು ಪ್ರೋಗ್ರಾಮ್ ನ ಮೆಮೋರಿ ಅಥವಾ ಜ್ನಾಪಕ ಶಕ್ತಿಯಿಂದ ಬರುವುದು .

ನಮ್ಮ ಮೆದುಳು ಅಗಣಿತ ಮೆಮೋರಿ ಶಕ್ತಿಯ ಒಂದು ಕಂಪ್ಯೂಟರ್,ಇದರಲ್ಲಿ ನೆನಪು ರೆಕಾರ್ಡ್ ಮಾಡಲು ಮತ್ತು ಸಂಗ್ರಹಿಸಲು ಕೆಲವು ವಿಶೇಷ ಕೋಶಗಳಿವೆ .ಕೆಳಗೆ ತೋರಿಸಿದ ಚಿತ್ರದಲ್ಲಿ ಇದನ್ನು ಕಾಣ  ಬಹುದು 

                    

ಉದಾಹಣೆಗೆ ಮೊದಲ ಮಳೆ ಬಿದ್ದಾಗ ,ಮಣ್ಣಿನ ವಾಸನೆ ಬರುವುದು ,ಅದರೊಂದಿಗೆ ನಿಮಗೆ ಗತ ಮಳೆಗಾಲಗಳ ನೆನಪಿನ ಸರಮಾಲೆ . 

ಮನೆಯಲ್ಲಿ  ಹಲಸಿನ ಹಣ್ಣಿನ ಕಡುಬು ಬೇಯಿಸುವಾಗ ಪರಿಮಳ ಮೂಗಿಗೆ ಬಂದಾಗ ಬಾಯಲ್ಲಿ ನೀರು ಮಾತ್ರ ಅಲ್ಲ ನೀವು ಚಿಕ್ಕಂದಿನಲ್ಲಿ ಅಜ್ಜ ಅಜ್ಜಿಯರೊಡನೆ ಬಾಳೆ  ಎಳೆಯಲ್ಲಿ ಕಡುಬು ಮಡಿಸಿದ್ದು ,ನೀರಿನಲ್ಲಿ ಹಾಕಿದ ಮಾವಿನ ಕಾಯಿ ಚಟ್ನಿ ಅದರ ರುಚಿ ಎಲ್ಲಾ ಜ್ಞಾಪಕಕ್ಕೆ ಬರುವುದು . 

 ನಾನು ಹುಬ್ಬಳ್ಳಿ ಕೆ ಎಂ ಸಿ ಯಲ್ಲಿ ಮೆಡಿಕಲ್ ಓದಿದ್ದು .ಅಲ್ಲಿ ರೊಟ್ಟಿ ಚಟ್ನಿ ಇತ್ಯಾದಿ ತಿಂದು ಅಭ್ಯಾಸ ..ಹಾಗೆ ನಾನು ನನ್ನ ಡೈನಿಂಗ್ ಟೇಬಲ್ ನಲ್ಲಿ ಶೇಂಗಾ ಚಟ್ನಿ ,ಗುರೆಳ್ಳು  ಹಿಂಡಿ  ಇಟ್ಟಿರುತ್ತೇನೆ .ಅದನ್ನು ನೋಡುವಾಗ ಮತ್ತು ತಿನ್ನುವಾಗ ನನಗೆ ಆನಂದ ಹಾಸ್ಟೆಲ್ ನ ಮೆಸ್ಸ್ ,ಅಲ್ಲಿ ಟೇಬಲ್ ನಲ್ಲಿ ಇಟ್ಟಿದ್ದ ರಂಜಕ (ಮೆಣಸಿನ ಚಟ್ನಿ ),ಮಲ್ಲಿಕಾರ್ಜುನ ಮೆಸ್ಸ್ ,ಅಲ್ಲಿಯ ರೊಟ್ಟಿ ತಟ್ಟುವ ಲಯ ಬದ್ದ ಶಬ್ದ ಎಲ್ಲಾ  ಸರ ಮಾಲೆಯಂತೆ ನೆನಪು ಆಗುವುದು . 

ಇನ್ನು ಹಾಡುಗಳೂ .ವಿರಹಾ ನೂರು ನೂರು ತರಹಾ ಹಾಡು ಈಗ ಕೇಳಿದಾಗ ನಮ್ಮ ಎಳವೆಯ ಕನಸು ಕಂಡ ಪ್ರಣಯ ,ಕಲ್ಪಿತ ವಿರಹ ಜ್ಞಾಪಕ ಬರುವುದು .ನಗು  ನಗುತಾ ನೀ ನಲಿವೆ ಹಾಡು ಕೇಳಿದಾಗ ಕಾಲೇಜು ಕ್ಯಾಂಪಸ್ ,ಈ ಹಾಡು ಅರ್ಕೆಷ್ಟಾ ದಲ್ಲಿ ಹಾಡಿದ ಸಹಪಾಠಿ ಕಣ್ಣ ಮುಂದೆ ಬರುವುದು .ಪಾಂಡಿಯನಾ ಕೊಕ್ಕ ಕೊಕ್ಕ ಕೇಳಿದಾಗ ಪೆರಂಬೂರ್ ರೈಲ್ವೆ ಕಾಲೋನಿ ,ಅಲ್ಲಿಯ ಹಾಲಿನ ಅಜ್ಜಿಯರು ಕಣ್ಣ ಮುಂದೆ 

     ಕೆಲವೊಮ್ಮೆ ಪುಸ್ತಕ ಓದುವಾಗ ಕೆಲವು ಘಟನೆಗಳು ನಮ್ಮ ಜೀವನದ ಸಹ ನೆನಪುಗಳನ್ನು ಮೆಲುಕು ಹಾಕುವವು .ಉದಾಹರಣೆಗೆ ಮಾಸ್ತಿ ಯವರ ಜೀವನ ಚರಿತ್ರೆ 'ಭಾವ'ದಲ್ಲಿ  ಅವರು ತನ್ನ ತಾತನ ಜತೆ ಎಲ್ಲೋ ಹೋಗುವಾಗ ದಾರಿಯಲ್ಲಿ ಆಲೆಮನೆ ಯವನು ಮಗುವಿಗೆ ಆಯಿತು ಎಂದು ಚೂರು ಬೆಲ್ಲ ಕೊಟ್ಟಿರುತ್ತಾನೆ .ಮುಂದೆ ಒಂದು ಕಡೆ ತಾತ  ಕೈಕಾಲು ತೊಳೆಯಲು ಎಂದು ನೀರಿನ ಬಳಿ ಹೋಗುವಾಗ ಮಗು ಮಾಸ್ತಿಯವರ ಬಳಿ ಬೆಲ್ಲದ ಚೂರು ಕೊಟ್ಟು ಈಗ ಬರುವೆನು ಎಂದು ಹೋಗುವರು .ಹುಡುಗ ಮಾಸ್ತಿ ಅಸೆ ತಡೆಯಲಾರದೆ ಬೆಲ್ಲ ಚೂರು ಎಲ್ಲಾ ತಿಂದು ಬಿಡುತ್ತಾರೆ .ಮರಳಿ ಬಂದ  ಅಜ್ಜ ಎಲ್ಲಾ ತಿಂದು ಬಿಟ್ಟಿಯೇನೋ  ಎಂದು ಬೇಸರದಿಂದ ಕೇಳುತ್ತಾರೆ .ಮಾಸ್ತಿ ಜೀವನ ಚರಿತ್ರೆ ಬರೆಯುವಾಗ ಈ ಘಟನೆ ನೆನಪಿಸಿ ಕೊಂಡು' ಛೇ ತಾನು ಇಂತಹ ಪ್ರಮಾದ ಮಾಡಿ ಬಿಟ್ಟೆ ,ತಾತನಿಗೆ ಮೊಮ್ಮಗನಿಗೆ ಕೊಟ್ಟ ಚೂರು ಬೆಲ್ಲದ ರುಚಿ ತಾನೂ ನೋಡುವ ಅಸೆ ಇದ್ದಿರಬಹುದು .ಮುಂದೆ ತಾನೂ ಎಷ್ಟೋ ದೊಡ್ಡ ಹುದ್ದೆ ಅಲಂಕರಿಸಿ  ಕೈತುಂಬಾ ಸಂಬಳ ಬರುವಾಗ ಬೆಲ್ಲ ಕೊಡುವಾ ಎಂದರೆ ತಾತ  ಸಿಗುತ್ತಾರೆಯೇ ಎಂದು ವ್ಯಾಕುಲಿತ  ಗುವರು .ಇದನ್ನು ಓದಿದಾಗ ನಮ್ಮ ನಿಮ್ಮ ಜೀವನದಲ್ಲಿ ಆದ ಇಂತಹ ಘಟನೆ ಒಂದೊಂದೇ ಬರುವುದು .ಹಿರಿಯರ ನಂಬಿಕೆಗೆ ಎರವಾದೆನೇ  ಎಂಬ ಅಪರಾಧ ಪ್ರಜ್ಞೆ ಕೂಡ .ನನಗೆ ನನ್ನ ಫಿಸಿಯೋಲಾಜಿ ಫೈನಲ್ ಪರೀಕ್ಷೆಯಲ್ಲಿ ಮೆಚ್ಚಿನ ಪ್ರೊಫೆಸ್ಸರ್ ಡಾ ನಾರಾಯಣ ಶೆಟ್ಟಿ ಅವರು ವೈವಾ ದಲ್ಲಿ ನಾನು ಕುಳಿತಾಗ ಎಕ್ಸ್ಟರ್ನಲ್ ಪರೀಕ್ಷಕರೊಡನೆ ಏನು ಬೇಕಾದರೂ ಕೇಳಿ (ಇವನು ಜಾಣ ಉತ್ತರಿರುತ್ತಾನೆ ಎಂಬ ನಂಬಿಕೆ )ಎಂದರು .ಅವರು ನನಗೆ ಒಂದು ಸರಳ ಪ್ರಶ್ನೆ ಕೇಳಿದರು ,ಆದರೆ ದುರದೃಷ್ಟವಶಾತ್  ಅದಕ್ಕೆ ತಪ್ಪು ಉತ್ತರ ಹೇಳಿದೆನು .ಉಳಿದ ಪ್ರಶ್ನೆಗಳಿಗೆ ಸರಿ ಉತ್ತರ ಕೊಟ್ಟು ಒಳ್ಳೆಯ ಅಂಕ ಬಂದರೂ ನನಗೆ ನನ್ನ ಅಧ್ಯಾಪಕರ ನಂಬಿಕೆ ಹುಸಿ ಮಾಡಿದೆನಲ್ಲಾ ಎಂಬ ಬೇಸರ ಇವತ್ತಿಗೂ ಇದೆ .ಪ್ರೊಫೆಸ್ಸರ್ ಇದನ್ನು ಗಂಭೀರ ತೆಗೆದು ಕೊಂಡು ಇರುವಿದಿಲ್ಲ ,ಆಗಲೇ ಮರೆತಿರುತ್ತಾರೆ .ನಾನು ಮುಂದೆ ವೈದ್ಯಕೀಯ ಕಾಲೇಜು ಅಧ್ಯಾಪಕ ನಾಗಿ ಎಷ್ಟೂ ಪರೀಕ್ಷೆ ಮಾಡಿದ್ದೇನೆ ,ಒಂದೂ ನನಗೆ ನೆನಪಿಲ್ಲ .ಆದರೂ ಹಿರಿಯರು ಇಟ್ಟ  ನಂಬಿಕೆಗೆ ಆ ಕ್ಷಣ ಮಾಸ್ತಿಯವರಂತೆ ನನಗೂ ಈ ಘಟನೆ ನೆನಪಿಗೆ ಬರುವುದು . 

ಮಳೆಗಾಲದಲ್ಲಿ ಮಳೆಯ ಶಬ್ದ ,ಚಳಿಗಾಲದ ಮಂಜು ,ನೀರ ಹನಿ ,ಬೇಸಿಗೆಯಲ್ಲಿ ಮಾವು ಹಲಸು ಇವುಗಳ ಪರಿಮಳ ಮತ್ತು ರುಚಿಯೊಡನೆ ಹಲವು ಜ್ಞಾಪಕಗಳು ಬರುತ್ತವೆ ಅಲ್ಲವೇ .ಮೊನ್ನೆ ಒಬ್ಬರು ನನ್ನ ಬಾಲ್ಯದಲ್ಲಿ ಖಾಸಗಿ ಬಸ್ ನ ಟಿಕೆಟ್ ಪರಿವೇಕ್ಷಕರಾಗಿ ಇದ್ದವರು ವೈದ್ಯಕೀಯ ಸಲಹೆ ಗೆ ಬಂದಿದ್ದರು ,ಅವರನ್ನು ಕಂಡಾಗ ಹಳೆಯ ಶಂಕರ ವಿಠ್ಠಲ್ ಬಸ್ ,ಅದರ ಡ್ರೈವರ್ ಪೀರ್ ಸಾಹೇಬರು ,ಅವರು ಉಪ್ಪಳದಿಂದ ತಂದು ಕೊಟ್ಟ ನಾಯಿ ಮರಿಗಳು ,ಬಸ್ಸಿನ ಹಾರ್ನ್ ,ಬಸ್ ಸ್ಟಾಂಡ್ ಗಳು ಎಲ್ಲಾ ಕಣ್ಣ ಮುಂದೆ ಬಂದವು .ಎಲ್ಲಿಯಾದರೂ ಮಲ್ಲಿಗೆ ಹೂವು ಮತ್ತು ಬೆವರು ವಾಸನೆಯ ಮಿಶ್ರಣ ಮೂಗಿಗೆ ಬಿದ್ದಾಗ ರೇಷ್ಮೆ ಸೀರೆ ,ಮದುವೆ ,ಮುಂಜಿಗಳು ಜ್ಞಾಪಕಕ್ಕೆ ಬರುವವು .

ಹಾಗಾದರೆ ಮೆದುಳಿನ ಮೆಮೊರಿ ಎಷ್ಟು ರಾಮ್ ?

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ