ಬೆಂಬಲಿಗರು

ಮಂಗಳವಾರ, ನವೆಂಬರ್ 3, 2020

ಅಂಗ್ರಿ ನೆನಪುಗಳು 1

 ನನ್ನ ಬ್ಲಾಗ್ ನ ಹೆಸರು ಅಂಗ್ರಿ .ಅಂಗ್ರಿ ನಾನು ಹುಟ್ಟಿ ದ  ಊರು .ಹುಟ್ಟೂರ ಗುಣ ,ಋಣ ಮತ್ತು  ವ್ಯಾಮೋಹ  ಘಟ್ಟ ಹತ್ತಿದರೂ ಬಿಡದು .ದಕ್ಷಿಣ ಕನ್ನಡ ಜಿಲ್ಲೆ ಬಂಟವಾಳ ತಾಲೂಕಿನ  ಕನ್ಯಾನ ಗ್ರಾಮ .ಗ್ರಾಮದ ಗಡಿಗೆ ತಾಗಿ  ಪಕ್ಕದ ಅಳಿಕೆ ಗ್ರಾಮಕ್ಕೆ ತಾಗಿ ಇರುವ  ಬಯಲು .ಪಶ್ಚಿಮ ದಲ್ಲಿ ದೇಲಂತಬೆಟ್ಟು  ,ಇಲ್ಲಿ ಊರ ದೇವಸ್ಥಾನ ಇದೆ. ಬಯಲು ಪ್ರದೇಶ ಪೂರ್ವಕ್ಕೆ ಹೋದಂತೆ ಗುಡ್ಡಗಳ ನಡುವಿನ ಕಣಿವೆ ರೂಪದಲ್ಲಿ ಇದೆ . ಅರ್ಧ ಮೈಲು ಪೂರ್ವಕ್ಕೆ ಅಳಿಕೆ.ಇಲ್ಲಿ ಯ ವಿದ್ಯಾ ಸಂಸ್ಥೆಗಳು ಪ್ರಸಿದ್ಧ.ದಕ್ಷಿಣಕ್ಕೆ ಒಂದು ಗುಡ್ಡದ ಶ್ರೇಣಿ ,ಅದು ದಾಟಿದರೆ ಕೇಕ ನಾಜೆ. ನೈರುತ್ಯ ದಲ್ಲಿ ಮುಳಿಯ ,ಪೆರುವಾಯಿ.ಉತ್ತರಕ್ಕೆ ಅಂಗ್ರೀ ಬಯಲು ದಾಟಿದರೆ ಮುಡ್ಕುಂಜ , ಕಿರಿಂಚಿಮೂಲೆ.ವಿಟ್ಲ ಕನ್ಯಾನ ಮಾರ್ಗಕ್ಕೆ ಇಲ್ಲಿಗೆ ಬರಬೇಕು.ಮುಂದೆ ಕಳಂಜಿ ಮೇಲೆ ಪರ್ವತ ಶ್ರೇಣಿ ಮತ್ತು ರಕ್ಷಿತಾರಣ್ಯ. ಕಿರಿಂಚಿ ಮೂಲೆಯಿಂದ ಅರ್ಧ ಮೈಲು ಪಶ್ಚಿಮಕ್ಕೆ ಸಾಗಿದರೆ ಕನ್ಯಾನ ಪೇಟೆ.

                             ನಮ್ಮ ಮನೆಯ ಮುಂದೆ ಹೊಲ ,ಮುಂದೆ ಇಲ್ಲಿ ಅಡಿಕೆ ತೋಟ ಆಯಿತು ,ಅದನ್ನು ದಾಟಿದರೆ ಒಂದು ಮಳೆ ನೀರ ಝರಿ ,ಮುಂದಕ್ಕೆ  ಎಡದ ಬದಿ ಗದ್ದೆ ,ಇದನ್ನು ಆಚ ಕರೆ ಎಂದು ಕರೆಯುತ್ತಿದ್ದರು .ಬಲದ ಬದಿಯಿಂದ ಎತ್ತರ ದ  ಗುಡ್ಡ .ಮನೆಯ ಹಿಂದೆ  ಚಿಕ್ಕ ಗುಡ್ಡ ಬಲಕ್ಕೆ ಅದರ ಸೆರಗು ..ಮನೆಯ ಮುಂದಿನ ಬಯಲಿಗೆ ಬಲದ  ಬದಿಯಲ್ಲಿ  ಬಳ್ಳಿ ಗದ್ದೆ ,ಮಜ್ಜಜೆ ಎಂಬ ಹೆಸರೂ ಎಡದ ಬದಿ ನಡುವಿನ ತೋಟಕ್ಕೆ  ಮದ್ಲಾ ಡಿ  (ಮಧ್ಯದ ಹಾಡಿ ),ಅದಕ್ಕೆ ತಾಗಿ ದಕ್ಷಿಣಕ್ಕೆ ಪಾರೆ (ಕಲ್ಲು ಬಂಡೆ )ತೋಟ .ನೈರುತ್ಯದ  ವಿಶಾಲ ಗದ್ದೆ ಪ್ರದೇಶ ಕ್ಕೆ ನೆರಳಕೋಡಿ ಎಂಬ ಹೆಸರಿತ್ತು .ಕೆಲವು ಹೆಸರುಗಳು ಮರೆತು ಹೋಗಿವೆ . 

ಮೇಲೆ ಉಪಯೋಗಿಸಿದ ಆಚಕರೆ ನಮ್ಮಲ್ಲಿ  ಸಾಮಾನ್ಯ ಬಳಕೆಯಲ್ಲಿ ಇರುವ ಪದ .  ಆಚಕರೆ ಮಾವ ,ಆಚಕರೆ ಚಿಕ್ಕಪ್ಪ ಇತ್ಯಾದಿ ಅಕ್ಕ ಪಕ್ಕದ ಮನೆಯವರನ್ನು ಕರೆಯುತ್ತಿದ್ದುದು ಸಾಮಾನ್ಯ . 

ನಮ್ಮದು ಕೂಡು ಕುಟುಂಬ .ನನಗೆ ಅರಿವು ಬಂದಾಗ ನಮ್ಮ ಮನೆಯಲ್ಲಿ ಅಜ್ಜ ಅಜ್ಜಿ .ಅಪ್ಪ ,ಅಮ್ಮ ,ಚಿಕ್ಕಪ್ಪ ,ಚಿಕ್ಕಮ್ಮ ,ಮಕ್ಕಳು ಇದ್ದರು .ದೊಡ್ಡಪ್ಪ ಮತ್ತು ಕುಟುಂಬ ಮದರಾಸಿನಲ್ಲಿ ಇತ್ತು .ನನ್ನ ಅಜ್ಜನ ಹೆಸರು ಮಹಾಬಲ ಭಟ್ಟ ,ಅಜ್ಜಿ  ಪರಮೇಶ್ವರಿ .. 

ಅಜ್ಜನ  ತಂದೆ ಗಣಪತಿ ಭಟ್  .ಅವರು ಆ ಕಾಲದಲ್ಲಿ ಹೆಸರಾಂತ ಅಶು ಕವಿ ಆಗಿದ್ದರು .ತುಳು ಮತ್ತು ಕನ್ನಡದಲ್ಲಿ  ಇನ್ಸ್ಟಂಟ್  ಆಗಿ ಕವಿತೆ ರಚನೆಗೆ ಹೆಸರಾಗಿದ್ದರು .ಕವಿ ಗಣಪ್ಪಜ್ಜ ಎಂದು ಅವರನ್ನು ಕರೆಯುತ್ತಿದ್ದರು .ಅವರ ಹಲವು ಕವಿತೆಗಳನ್ನು ನನ್ನ ಅಜ್ಜ ನಮಗೆ  ಹೇಳಿ ಕೊಟ್ಟಿದ್ದರೂ  ಅದ್ಯಾವುದನ್ನೂ ದಾಖಲಿಸದೆ ಇದ್ದುದರಿಂದ ಇಲ್ಲಿ ಉಲ್ಲೇಖಿಸುವುದಕ್ಕೆ  ಆಗದಿರುವುದಕ್ಕೆ  ವಿಷಾದಿಸುತ್ತೇನೆ .ಆದರೂ ಅಜ್ಜ ಹೇಳಿದ ಒಂದು ಘಟನೆ ನೆನೆಪಿನಲ್ಲಿ ಇದೆ .ಸ್ವಾಮಿಗಳು (ಧರ್ಮಗುರು )ಒಮ್ಮೆ  ನಮ್ಮ ಸೀಮೆಯ ಆಡ್ಯರ ಮನೆಯಲ್ಲಿ ಮೊಕ್ಕಾಮ್ ಹಾಕಿದ್ದ ವೇಳೆ ಎಲ್ಲರಂತೆ ನಮ್ಮ ಮುತ್ತಜ್ಜ ಅಲ್ಲಿಗೆ  ಹೋಗಿದ್ದರು .ಅಲ್ಲಿ ಸ್ವಾಮಿಗಳು  ತಮಗೆ ನಮಸ್ಕರಿಸಿ ಕಾಣಿಕೆ ಕೊಟ್ಟವರಿಗೆ ಫಲ ಮಂತ್ರಾಕ್ಷತೆ  ಕೊಡುತ್ತಿದ್ದರು ..ತಮಗೆ ಹಾಗೂ ಕಡಿಮೆ ಸ್ಥಿತಿವಂತರಿಗೆ  ಕೊಟ್ಟುದರಲ್ಲಿ  ಕೇವಲ ಮಂತ್ರಾಕ್ಷತೆ (ಅಕ್ಕಿ ಕಾಳು )ಇದ್ದುದನ್ನು ಕಂಡು ಉದ್ಧರಿಸಿದರಂತೆ "ಇದರಲ್ಲಿ ಫಲವಿಲ್ಲ ". 

 ಮುತ್ತಜ್ಜ ಗಣಪತಿ ಭಟ್ಟರಿಗೆ ಮೂವರು ಗಂಡು ಮಕ್ಕಳು .ಅಣ್ಣಯ್ಯ (ಇದು ನಿಜ ಹೆಸರೋ ಅಡ್ಡ ಹೆಸರೋ ಗೊತ್ತಿಲ್ಲ ) ,ನರಸಿಂಹ ಮತ್ತು ನನ್ನ ಅಜ್ಜ ಮಹಾಬಲ . 

                       

ಮೇಲಿನ  ಚಿತ್ರದಲ್ಲಿ ಮುತ್ತಜ್ಜ ,ಮುತ್ತಜ್ಜಿ .ನರಸಿಂಹ ಅಜ್ಜ ಅಜ್ಜಿ ಮತ್ತು ಮಹಾಬಲ ಅಜ್ಜ ಅಜ್ಜಿ ಇದ್ದಾರೆ .

ಅಣ್ಣಯ್ಯ ಅವರು ಯಕ್ಷಗಾನ ಭಾಗವತರಾಗಿ ಹೆಸರು ಪಡೆದಿದ್ದರು .ಅವರು ಸುತ್ತಾಟ ದಿಂದ  ಎಳವೆಯಲ್ಲಿಯೇ ಅನಾರೋಗ್ಯಕ್ಕೆ ತುತ್ತಾದರು .'ನನ್ನ ಮಗ ಮೊದಲು ಗಂಟೆ ಹಿಡಿದ ,ಆಮೇಲೆ ದಂಟೆ(ಊರು ಗೋಲು )ಹಿಡಿದ "ಎಂದು ಮುತ್ತಜ್ಜ ಹೇಳುತ್ತಿದ್ದರಂತೆ .ಇವರಿಗೆ ಒಬ್ಬಳು ಮಗಳು ಎಂದು ಕಾಣುತ್ತದೆ .ಕೊಡಗು ಜಿಲ್ಲೆಯ ನಾಪೋಕ್ಲು ಸಮೀಪ ಇವರ ಮುಂದುವರಿದ ಕುಟುಂಬ ಕವಲು ಇದೆ ಎಂದು ಕೇಳಿದ್ದೇನೆ .. 

             
                                   

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ