ಬೆಂಬಲಿಗರು

ಶುಕ್ರವಾರ, ನವೆಂಬರ್ 20, 2020

ರಕ್ತದಲ್ಲಿ ಒಬ್ಬ ಆರುಣಿ(ಉದ್ದಾಲಕ)

                               ರಕ್ತದಲ್ಲಿ ಒಬ್ಬ ಉದ್ದಾಲಕ

ನೀವು ಆರುಣಿ (ಉದ್ದಾಲಕ )ನ ಕತೆ ಕೇಳಿರ ಬಹುದು .ದೌಮ ಮುನಿಯ ಶಿಷ್ಯ .ಒಮ್ಮೆ ಬಯಲಿಗೆ ಕಟ್ಟಿಗೆ ತರಲು ಹೋಗಿದ್ದಾಗ ಹೊಲದ ಕಾಲುವೆ ದಡ  ಬಿರಿದು ನೀರು ಪೋಲಾಗುತ್ತಿತ್ತು .ಪಾಪ ಅವನ ಬಳಿ ಹಾರೆ ಪಿಕ್ಕಾಸು ಇರಲಿಲ್ಲ ,ಇದ್ದರೂ ಅವನು ಸಣ್ಣವನು .ಕೂಡಲೇ ಬಿರುಕು ಬಿಟ್ಟ ಕಡೆ ತಾನೇ ಮಲಗಿದ . ಇತ್ತ ಬಹಳ ಹೊತ್ತು ಶಿಷ್ಯನನ್ನು ಕಾಣದೆ ಹುಡುಕಿ ಬರುವಾಗ ನೀರಲ್ಲಿ ಮಲಗಿದ್ದ ಇವನನ್ನು ಎಬ್ಬಿಸಿ ಇತರ ಶಿಷ್ಯರು  ಸಲಕರಣೆ ಗಳೊಡನೆ ಬಂದು ಬದುವನ್ನು ಸರಿ ಮಾಡಿದ  ಕತೆ . 

 ನಮ್ಮ ರಕ್ತದಲ್ಲಿ  ಪ್ಲಾಟಿಲೆಟ್ ಎಂಬ ಕಣ  ಇದೆ .ನಮಗೆ ಗಾಯವಾಗಿ ರಕ್ತನಾಳ ಭೇದಿಸಿದರೆ  ಕೂಡಲೇ ಅಲ್ಲಿ ತನ್ನ ಸಂಗಡಿಗರೊಂದಿಗೆ ತೆರಳಿ ಅಡ್ಡ ಮಲಗಿ ರಕ್ತ ಸ್ರಾವ ಕಡಿಮೆ ಮಾಡುವ ಪ್ರಯತ್ನ ಮಾಡುವುದು . ಸ್ವಲ್ಪ ಹೊತ್ತಿನಲ್ಲಿ ಅವುಗಳ ಸಂದೇಶ ಹೋಗಿ  ರಕ್ತ ಹೆಪ್ಪು ಗಟ್ಟಿಸುವ ಸಾಮಗ್ರಿಗಳು (clotting  factors )ಸ್ಥಳಕ್ಕೆ ಧಾವಿಸಿ ಮುಂದಿನ ಕ್ರಮ ಕೈಗೊಳ್ಳುವವು . 

                           



       ಈ ಕಣಗಳು  ಬಹಳ ಕಡಿಮೆ ಆದರೆ ರಕ್ತ ಸ್ರಾವ ಆಗ ಬಹುದು .ನಿಮಗೆ ತಿಳಿದಂತೆ  ಡೆಂಗು  ಜ್ವರದಲ್ಲಿ ಇವುಗಳ ಸಂಖ್ಯೆ ಕಡಿಮೆ ಆಗುವುದು .ಪ್ಲಾಟಿಲೆಟ್ ಗಳನ್ನು  ಜನಪ್ರಿಯ ಗೊಳಿಸಿದ ಶ್ರೇಯ ಡೆಂಗೂ  ಜ್ವರಕ್ಕೆ ಸಲ್ಲ ಬೇಕು .ಈ ಕಣಗಳು ಮೊದಲೇ ನಮ್ಮ ಶರೀರದಲ್ಲಿ ಸದ್ದು  ಗದ್ದಲ ಇಲ್ಲದೆ ಕೆಲಸ ಮಾಡುತ್ತಿದ್ದವು ,ಯಾರೂ ಗಮನಿಸಲಿಲ್ಲ .ಡೆಂಗು  ಜ್ವರದ ರೋಗಿಯ ಸಾಮಾನ್ಯ ರಕ್ತ ಪರೀಕ್ಷೆಯಲ್ಲಿ ಇವುಗಳ ಸಂಖ್ಯೆ ಕಡಿಮೆ ಆಗುವುದು ಕಂಡು ಸುದ್ದಿ ಆಯಿತು .ನಮ್ಮಲ್ಲಿಯೂ ಹಾಗೆ ಗಂಡನೊಡನೆ ಜಗಳ ಮಾಡುವಾಗ ಹೆಂಡತಿ 'ನಾನು ನಾಲ್ಕು ದಿನ ಎಲ್ಲಾದರೂ ಹೋಗಿ ಇರುತ್ತೇನೆ ,ಆಗ ನಿಮಗೆ ನನ್ನ ಪ್ರಾಮುಖ್ಯತೆ ಗೊತ್ತಾಗುವುದು .ಸುಮ್ಮನೇ  ಮನೆಯಲ್ಲಿ ಬಿಟ್ಟಿ  ದುಡಿಯುವಾಗ ನಿಮಗೆ ನಾನು ನನ್ನ ಕೆಲಸ ಲೆಕ್ಕವೇ ಇಲ್ಲ "ಎನ್ನುತ್ತಾರಲ್ಲ ಹಾಗೆ .ಅಂದ ಹಾಗೆ ಡೆಂಗು  ಜ್ವರದಲ್ಲಿ ಜನರು ತಿಳಿದುಕೊಂಡಂತೆ  ಈ ಕಾರಣದಿಂದ ಅಪಾಯ ಕಡಿಮೆ .ಡೆಂಗೂ ಶಾಕ್ ಎಂಬುದು ಒಂದು ಇದೆ .ಅದು ಅಪಾಯ ತರುವುದು .ಪ್ಲಾಟೆಲೆಟ್  ಹೆಚ್ಚಿಸಲು ಕಿವಿ  ಹಣ್ಣು ,ಪಪ್ಪಾಯಿ ಹಣ್ಣು ಮತ್ತು ಎಲೆ ತಿನ್ನ ಬೇಕಿಲ್ಲ .ಡೆಂಗೂ  ಕಾಯಿಲೆಯಲ್ಲಿ ತನ್ನಿಂದ ತಾನೇ ಅದು ಸರಿ ಆಗುವುದು . 

  ಪ್ಲಾಟೆಲೆಟ್  ಕಡಿಮೆ ಆಗಲು ಇತರ ಸಾಮಾನ್ಯ ವೈರಲ್ ಜ್ವರ , ಮಲೇರಿಯ ಮದ್ಯಪಾನ ,ವಿಟಮಿನ್ ಬಿ ೧೨ ಕೊರತೆ , ಕಾರಣ ಇರಬಹುದು .ಇವು ಎಲ್ಲಾ ಸುಲಭ ಚಿಕಿತ್ಸೆ ಯುಳ್ಳ ಕಾಯಿಲೆಗಳು .ಇನ್ನು ಅಪರೂಪಕ್ಕೆ ಐಟಿಪಿ ಎಂಬ ಕಾಯಿಲೆ ,ಕ್ಯಾನ್ಸರ್ ಮತ್ತು ಅದರ ಚಿಕಿತ್ಸೆಯಿಂದಲೂ ಪ್ಲಾಟೆಲೆಟ್  ಕಡಿಮೆ ಆಗ ಬಹುದು 

                ಆದರೆ ಯಾವಾಗಲೂ ಇವು ಒಳ್ಳೆಯದನ್ನೇ ಮಾಡುತ್ತವೆ ಎಂದು ಇಲ್ಲ .ಅಧಿಕ ಪ್ರಸಂಗ ಮಾಡುವುದೂ ಇದೆ .ಹೃದಯ ಮೆದುಳಿನ ರಕ್ತ ನಾಳದಲ್ಲಿ ಕೊಬ್ಬಿನ ಅಣುಗಳು ಶೇಖರಣೆ ಆದಾಗ ಸುಮ್ಮನೇ  ತನ್ನ ಸಂಗಾತಿಗಳನ್ನು  ಅಲ್ಲಿ ಆಟವಾಡಲು ಕರೆಯುತ್ತವೆ .ಅವುಗಳ ಗಲಾಟೆ ಕೇಳಿ ರಕ್ತ ಹೆಪ್ಪು ಕಣಗಳು ಸ್ಥ ಳಕ್ಕೆ ಧಾವಿಸಿ  ನಾಳದ ಒಳಗೇ ರಕ್ತ ಹೆಪ್ಪು ಗಟ್ಟಿಸಿ ಹೃದಯಾಘಾತ ಅಥವಾ ಮೆದುಳಿನಲ್ಲಿ ಮೆದುಳಿನ ಆಘಾತ (ಸ್ಟ್ರೋಕ್ )ಉಂಟು ಮಾಡುತ್ತವೆ .ಇಂತಹ ಸಂದರ್ಭದಲ್ಲಿ ಆಸ್ಪಿರಿನ್ ನಂತಹ ಪ್ಲಾಟೆಲೆಟ್  ನಿರೋಧಕ ಔಷಧಿಗಳನ್ನು ವೈದ್ಯರು ಕೊಡುವರು 

                          

 Stemi  ಎಂದರೆ ಹೃದಯಾಘಾತ ,thrombus  ಎಂದರೆ ಹೆಪ್ಪು ಗಟ್ಟಿದ ರಕ್ತ
             

1 ಕಾಮೆಂಟ್‌:

  1. Platelet ನ ಬಗ್ಗೆ ತಾವು ಬರೆದ ವಿವರಗಳನ್ನು ಓದಿದೆ.. ಈ ಪ್ಲೇಟ್ಲೆಟ್ಸ್ ಜಾಸ್ತಿ ಇರಲು ಕಾರಣವೇನು?ಅನೀಮಿಯಾ ಇದ್ದಾಗ ಇವುಗಳ ಸಂಖ್ಯೆ ಹೆಚ್ಚುವುದೂ, ಕೆಂಪು ರಕ್ತ ಕಣಗಳ ಸಂಖ್ಯೆ normal ಗೆ ಬಂದಾಗ ಇವುಗಳೂ ತಮ್ಮ ಮಿತಿಯ ಹತ್ತಿರ ಬರುವುದೂ ಆಗುತ್ತಿರುವುದು ಸಾಮಾನ್ಯವೇ?Normal range 450000 ಅಂತ ಇದ್ದರೆ950000 ಇದ್ದರೆ ಏನು ಮಾಡುವುದು? ಇದು ಯಾವುದರ ಲಕ್ಷಣವೆನ್ನಬಹುದು?

    ಪ್ರತ್ಯುತ್ತರಅಳಿಸಿ