ಬೆಂಬಲಿಗರು

ಭಾನುವಾರ, ನವೆಂಬರ್ 22, 2020

ಹಲಗೆ ಬಳಪ

 ಮುಂಜಾನೆ ವಾಕಿಂಗ್ ಹೋಗುವಾಗ ಸ್ಲೇಟು ನ ಒಂದು ತುಂಡು ಸಿಕ್ಕಿತು.ಒಡನೆ ನೆನಪಿಗೆ ಬಂದುದು ಕುಮಾರ ವ್ಯಾಸನ ಪದ್ಯ

  ಹಲಗೆ ಬಳಪವ ಪಿಡಿಯದೊಂದ

ಗ್ಗಳಿಕೆ ಪದವಿಟ್ಟಳುಪದೊಂದ

ಗ್ಗಳಿಕೆ ಪರರೊಡ್ಡವದ ರೀತಿಯ ಕೊಳ್ಳದಗ್ಗಳಿಕೆ ||
ಬಳಸಿ ಬರೆಯಲು ಕಂಠಪತ್ರದ
ವುಲುಹುಗೆಡದಗ್ಗಳಿಕೆಯೆಂಬೀ
ಬಲುಹು ಗದುಗಿನ ವೀರನಾರಾಯಣನ ಕಿಂಕರಗೆ || ೧೫ ||
 ಹಲಗೆಮತ್ತು ಬಳಪಗಳನ್ನು ಬಳಸಿಕೊಂಡು ಬರೆದು ಪುನಃ ಪುನಃ ತಿದ್ದಿ ಬರೆಯದೆ ಒಂದೇ ಸಾರಿಗೆ ಬರೆದ ಹಿರಿಮೆ!  ಒಂದು ಪದವನ್ನು ಬರೆದು ಅದನ್ನು ಅಳಿಸಿ ಮತ್ತೆ ಬರೆಯದ ಹಿರಿಮೆ! ಬೇರೆಯವರ ಕಾವ್ಯರಚನೆಯನ್ನು ಬಳಸಿಕೊಳ್ಳದೆ ಇರುವ ಹಿರಿಮೆ; ತಾಳೆಗರಿಯ ಓಲೆಯ ಮೇಲೆ ಕಂಠವೆಂಬ ಲೆಕ್ಕಣಿಕೆಕೆಯಿಂದ ಬರೆಯುವಾಗ, ಆಗುವ ಸದ್ದು ನಿಲ್ಲದಂತೆ ಓತಪ್ರೋತವಾಗಿ ಬರೆದ  ಹಿರಿಮೆಯೆಂಬ ಈ ಸಾಮರ್ಥ್ಯ- ಗದುಗಿನ ವೀರನಾರಾಯಣನ ಕಿಂಕರಗೆ= ವೀರನಾರಯಣನ ಸೇವಕನಾದ ತನಗೆ ಇದೆ, ಎಂದು ನಾರಣಪ್ಪ ಹೇಳಿಕೊಂಡಿದ್ದಾನೆ. (ಈ ಸಾಮರ್ಥ್ಯ ವ್ಯಾಸರ ನಂತರ ಇವನದೇ - ಹಾಗಾಗಿ ಅನ್ವರ್ಥವಾಗಿ ಕುಮಾರವ್ಯಾಸ))

 

.ಸ್ಲೇಟು ಕಡ್ಡಿ ,ಪುಸ್ತಕ ಇಲ್ಲದೆ  ಮಹಾ ಕಾವ್ಯ ರಚಿಸಿದ  ಆತನನ್ನು ಮೆಚ್ಚಿದೆ.ಅವನ ಹೆಮ್ಮೆ  ಸಕಾರಣ

ವಾದುದು. ನಾವು ಚಿಕ್ಕಂದಿನಲ್ಲಿ ಒಯ್ಯುತ್ತಿದ್ದ ಸ್ಲೇಟು ನೆನಪಿಗೆ ಬಂತು. ಮೊದಲ ಎರಡು ತರಗತಿಗಳಲ್ಲಿ ಅದುವೇ ನಮ್ಮ ಬರಹದ

ಅಂಗಣ.ವರ್ಷದ ಕೊನೆಯಲ್ಲಿ ಬಳಪದ ಚೌಕಟ್ಟು ಹೋಗಿ ರೊಟ್ಟಿಯಾಕಾರ ತಳೆಯುತ್ತಿತ್ತು.

ಸ್ಲೇಟು ಇದ್ದಾರೆ ಆಯಿತೆ? ಅದನ್ನು ಒರಸಲು ಬಟ್ಟೆ ನೀರು ಬೇಕು. ಶ್ರೀನಿವಾಸ ಮೂರ್ತಿಯವರ ರಂಗಣ್ಣನ ಕನಸಿನ ದಿನಗಳ ಬೋರ್ಡ್

ಒರಸುವ ಬಟ್ಟೆ ನೆನಪಿಗೆ ಬಂತು. ನಾವು ಹಳೆ ಬಟ್ಟೆಯ ತುಂಡನ್ನು ಬಳಪ ಒರಸಲು ಒಯ್ಯುತ್ತಿದ್ದೆವು.ಹಲವೊಮ್ಮೆ ಅಂಗಿ ಚಡ್ಡಿಗೆ

ಒರಸುತ್ತಿದ್ದೆವು .ಹುಡುಗಿಯರು ಲಂಗದ ಬಟ್ಟೆಗೆ .

                                          

ಬಟ್ಟೆ ಒದ್ದೆ ಮಾಡಲು ನೀರು ಬೇಕಲ್ಲ. ತಮ್ಮ ತಮ್ಮ ಲಾಲಾರಸವೆ ದ್ರವ.ಮಳೆಗಾಲದಲ್ಲಿ ಚಾವಣಿಯಿಂದ ಬೀಳುತ್ತಿದ್ದ ನೀರು.ಶಾಲೆಗೆ

ಹೋಗುವ ದಾರಿಯಲ್ಲಿ ನೀರು ಕಡ್ಡಿ ಎಂಬ ಸಣ್ಣ ಸಣ್ಣ ಸಸಿಗಳು ಸಿಗುತ್ತಿದ್ದವು. ಇವುಗಳ ಕಾಂಡದಿಂದ ಶುಧ್ಧವಾದ ನೀರು ಒಸರುತ್ತಿತ್ತು.

ಇವುಗಳನ್ನು ಕಟ್ಟು ಮಾಡಿ  ಒಯ್ಯುತ್ತಿದ್ದೆವು. ಉಕ್ತ ಲೇಖನ ,ಕಾಪಿ   ತಪ್ಪು ಬರೆದಾಗ ಅಧ್ಯಾಪಕರ  ಬೆತ್ತದಿಂದ  ಎರಡು ಬಿದ್ದಾಗ

ಬಂದ   ಕಣ್ಣೀರೇ   ಬಳಪವನ್ನು ಒದ್ದೆ ಮಾಡಿ ಕೊಡುತ್ತಿತ್ತು.

ಬಳಪ ದ ಕಡ್ಡಿ  ,ಅಂದರ ತುಂಡುಗಳು ,ಕೆಲವೊಮ್ಮೆ ಕೊಳ್ಳುತ್ತಿದ್ದ ಬಣ್ಣದ ಕಡ್ಡಿಗಳೂ ನೆನಪಾದವು .ಬಳಪ ಚೀಲ ಗಳನ್ನ ಹೆಗಲಿಗೆ

ಹಾಕಿ  ಅಕ್ಕನ ಕೈ ಹಿಡಿದು ನಡೆಯುತ್ತಿದ್ದ  ದಿನಗಳು.

ಈಗ  ಕಾಲ  ಒಂದು  ಪೂರ್ಣ ಸುತ್ತು ಹಾಕಿದೆ.ಈಗಿನ ಮಕ್ಕಳಿಗೂ ಹಲಗೆ ಬಳಪವ ಹಿಡಿಯದೆ ಕಲಿಯುವ ಅಗ್ಗಳಿಕೆ.

ಹಲಗೆ ಬಳಪ ತಾಳೆ  ಓಲೆ ಹೋಗಿ ಪುಸ್ತಕ ಪೆನ್ಸಿಲ್ ಪೆನ್ ಬಂದು ಹೋಗಿದೆ .ಈಗ  ಪೇಪರ್ ಲೆಸ್ ಆಫೀಸ್ ಇದ್ದ ಹಾಗೆ ಪೇಪರ್ ಲೆಸ್  ಶಾಲೆ .ಕಂಪ್ಯೂಟರ್ ,ಮೊಬೈಲ್ ಟಚ್ ಸ್ಕ್ರೀನ್ ನಲ್ಲಿ  ಮಕ್ಕಳು ಬರೆಯುವರು ,ಕವಿಗಳು ಕವನ ರಚನೆ ಮಾಡುವರು ..ಪದಗಳನ್ನು  ಗೂಗಲ್ ತಿದ್ದುವುದು . ಈಗ ಕೋವಿಡ್ ಬಂದ ಮೇಲೆ ನೇರ ಅಧ್ಯಾಪನ ವೂ ಇಲ್ಲ ,ವರ್ಚುಯಲ್ ಟೀಚಿಂಗ್ ,ವರ್ಚುಯಲ್ ಹೋಂ ವರ್ಕ್ ..ಪೆಟ್ಟು ಬೀಳುವ ಭಯ ಇಲ್ಲ .(ಈಗ ಮಕ್ಕಳನ್ನು ಶಿಕ್ಷಿಸುವುದು ಅಪರಾಧ ಅನ್ನಿ ).ಈಗ ಎಲ್ಲರೂ ಕುಮಾರ ವ್ಯಾಸರೇ .ಕಡಿಮೆ ಪಕ್ಷ ಕುಮಾರ ತ್ರಿಜ್ಯರು

ಇಷ್ಟೆಲ್ಲಾ ಯೋಚನಾ ಲಹರಿ ಮನೆಯಲ್ಲಿ  ಹಾಲು ತರಲಿಲ್ಲವೇ ಎಂದು ಮಡದಿ ಕೇಳಿದಾಗ ತುಂಡಾಯಿತು

5 ಕಾಮೆಂಟ್‌ಗಳು: