ಬೆಂಬಲಿಗರು

ಶನಿವಾರ, ನವೆಂಬರ್ 21, 2020

ವಾಯುವಿನ ತೊಂದರೆಗೆ ಅಗ್ನಿಗೆ ಚಿಕಿತ್ಸೆಯೇ?

 ವಾಯುವಿನ  ತೊಂದರೆಗೆ ಅಗ್ನಿಗೆ ಚಿಕಿತ್ಸೆಯೇ ?

          ಜಠರ  ಹೊರಗಿಂದ                                                                    ಜಠರ  ಒಳ ಬದಿ 

 

 ನಾವು ತಿಂದ ಆಹಾರ ಬಾಯಿ ಅನ್ನ ನಾಳ ದಾಟಿ ಜಠರ ಸೇರುವುದು .ನೀವು ಗಮನಿಸ ಬೇಕು ಬಾಯಲ್ಲಿ ನುಂಗಿದ ಆಹಾರ ಮುಂದೆ ಹೋಗುವಾಗ ಎರಡು ಮಾರ್ಗ ಎದುರಾಗುತ್ತದೆ .ಒಂದು ಶ್ವಾಶ ನಾಳ ಎದುರಿನಲ್ಲಿ ಅದರ ಹಿಂದೆ ಅನ್ನ ನಾಳ .ಆಹಾರ ಶ್ವಾಶ ನಾಳಕ್ಕೆ ಹೋಗದಂತೆ ಕಾಯುವುದು ಎಪಿಗ್ಲೋಟ್ಟಿಸ್ .ಇದು ಗೇಟ್ ಮ್ಯಾನ್ .ಆಹಾರ ನೀರು ಬಂದಾಗ ಶ್ವಾಸ ನಾಳ ಮುಚ್ಚುವುದು ..ಒಂದು ವೇಳೆ ಗೇಟ್ ಹಾಕುವುದಕ್ಕೆ ಮೊದಲೇ ಅಣ್ಣ ನೀರು ಬಂದರೆ ಶ್ವಾಸ ನಾಳಕ್ಕೆ ಸ್ವಲ್ಪ ಹೋಗಿ ಇನ್ನಿಲ್ಲದ ಕೆಮ್ಮ್ಮ ಬರುವುದು .ಆಗ ಅಮ್ಮ ನಿಮ್ಮ ತಲೆಗೆ ತಟ್ಟಿ  ಮೆಲ್ಲಗೆ ಮಗಾ ಎನ್ನುವಳು .ಇದೇ ಅವಸ್ಥೆ ಪ್ರಜ್ಞೆ ಇಲ್ಲದವರಿಗೆ ನೀವು ನೀರು ಕುಡಿಸಿದರೆ ಆಗುವುದು .ಆಗ ಶರೀರ ಸಂರಕ್ಷಣಾ ಕ್ರಿಯೆಯಾದ ಕೆಮ್ಮು ಬರದು ,ಬದಲಿಗೆ ಉಸಿರಾಡುವಾಗ ಗರ ಗರ ಶಬ್ದ ಆಗುವುದು .ಉಸಿರು ಕಟ್ಟುವುದು ,ಹಾಗೇ ಮುಂದುವರಿದು ನ್ಯುಮೋನಿಯಾ ಆಗಬಹುದು .ಪ್ರಜ್ಞಾ ಹೀನರಿಗೆ ನೀರು ಕುಡಿಸಲು ಪ್ರಯತ್ನಿಸ ಬೇಡಿ ..ಅಂತಹ ಸಂದರ್ಭ  ನಾವು ನಾಸೋದರ ನಾಳ ಹಾಕಿ ಆಹಾರ ಕೊಡುವೆವು . 

      ಆಯಿತು .ಇನ್ನು ಹೊಟ್ಟೆಗೆ ಬರೋಣ .ಹೊಟ್ಟೆಯಲ್ಲಿ ಜೀರ್ಣ ಕ್ರಿಯೆಗೆ ಬೇಕಾದ ರಸ ವಿಶೇಷ (enzyme ) ಪೆಪ್ಸಿನ್ ನೊಂದಿಗೆ ಹೈಡ್ರೋಕ್ಲೋರಿಕ್ ಆಮ್ಲ ಉತ್ಪತ್ತಿ ಆಗುತ್ತದೆ .ಈ ಆಮ್ಲವೇ ಜಠರಾಗ್ನಿ .ಅಥವಾ ಹೊಟ್ಟೆ ಕಿಚ್ಚು .ಜಠರ ಎಂದರೆ ಶಂಕರಾಚಾರ್ಯರ  ಪುನರಪಿ ಶಯನ ಮಾಡುವ ಜನನಿಯ ಜಠರ ಅಲ್ಲ ,ಅದು ಉದರ .ಇದು ಇಂಗ್ಲಿಷ್ ಭಾಷೆಯಲ್ಲಿ ಸ್ಟೊಮಕ್ ಎಂದು ಕರೆಯಲ್ಪಡುವ ಅಂಗ .ತಾನು ಉತ್ಪತ್ತಿ ಮಾಡಿದ  ಆಮ್ಲ ತನ್ನನ್ನೇ ದಹಿಸಿದರೆ ಎಂದು ಜಠರ ತನ್ನ ಒಳ ಪೊರೆ ರಕ್ಷಣೆಗೆ ಲೋಳೆ ಯಂತಹ ವಸ್ತು ವನ್ನು ಉತ್ಪಾದಿಸಿಸಿ ಕೋಟಿಂಗ್ ಮಾಡಿರುತ್ತದೆ .ಆಮ್ಲ ಮತ್ತು ಈ ಲೋಳೆ ಕದನ ವಿರಾಮ ಘೋಷಿಸಿರುವುದರಿಂದ  ಯಾವುದೇ ಆಕ್ರಮಣ ನಡೆಯುವುದಿಲ್ಲ .ಕೆಲವೊಮ್ಮೆ ನೋವಿನ ಮಾತ್ರೆ ಸೇವನೆಯಿಂದ ,ಮದ್ಯಪಾನ ,ಉದ್ವೇಗ ಇತ್ಯಾದಿ ಕಾರಣಗಳಿಂದ ಆಮ್ಲದ ಕೈ ಮೇಲಾಗಿ ಜಠರ ಒಳ ಮೈಯಲ್ಲಿ ಮೊದಲು ಗಾಯ ಮತ್ತೆ ಹುಣ್ಣು ಆಗ ಬಹುದು .ಆಗ ಹೊಟ್ಟೆ ಉರಿ ,ನೋವು ,ಮುಂದುವರಿದರೆ ರಕ್ತ ವಾಂತಿ ,ಜಠರ ವೇ  ತೂತು ಬಿದ್ದು ಜೀವಾಪಾಯ ಬರ ಬಹುದು .ನೋವು ನಮಗೆ ವರ  ,ಇಲ್ಲವಾದಲ್ಲಿ ಅರಿವಿಲ್ಲದೇ  ಮಹಾ ಅಪಾಯ ಬರುವುದು ..ಉರಿ ಸ್ವಲ್ಪ ನೋವು ಬಂದಾಗ ನಾವು ಚಿಕಿತ್ಸೆ ಪಡೆಯುವೆವು .ಇದು ವರೆಗೆ ವಿವರಿದ್ದು ನಿಜವಾದ ಗ್ಯಾಸ್ಟ್ರಿಕ್ . ಅದಕ್ಕೆ ನಾವು ಆಮ್ಲ ನಿರೋಧಕ ಔಷಧಿ ತೆಗೆದು ಕೊಳ್ಳ ಬೇಕು .ವೈದ್ಯರೂ ನೀವು ಗ್ಯಾಸ್ಟ್ರಿಕ್ ಎಂದರೆ ಅವನ್ನು ಬರೆದು ಕೊಡುವರು. 

          ಅಗ್ನಿ ಆಯಿತು ಇನ್ನು ವಾಯುವಿಗೆ ಬರೋಣ .ಈ ಮಾರುತಿ ಪಿತ  ಜಠರದಲ್ಲಿ ಉತ್ಪತ್ತಿ ಆಗುವುದು ಕಮ್ಮಿ .ಜಠರಕ್ಕೆ ವಾಯು ನಮ್ಮ ಬಾಯಿ ಮೂಗಿನಿಂದಲೇ ಬರುವುದು .ನಾವು  ತಿನ್ನುವಾಗ ಕುಡಿಯುವಾಗ ಮತ್ತು ಯಾವುದಾದರು ಆಲೋಚನೆಯಲ್ಲಿ ಇರುವಾಗ ಅರಿವಿಲ್ಲದೆ ಉದರಕ್ಕೆ ವಾಯು ಸೇವನೆ ಮಾಡುತ್ತೇವೆ .ಅನ್ನ  ನಾಳಕ್ಕೆ ಗೇಟ್ ಮ್ಯಾನ್ ಇಲ್ಲ .ಆ ಗಾಳಿ  ನಾವು ನೀರು ಕುಡಿದಾಗ ,ಉಂಡಾಗ ತೇಗಿನ ರೂಪದಲ್ಲಿ ಜಾಗ ಮಾಡಿಕೊಡಲು ಹೊರ ಬರುತ್ತದೆ .ಉಳಿದ ಸಮಯ ಅನ್ನ ನಾಳ ಮತ್ತು ಜಠರದ ನಡುವಿನ ಸಣ್ಣ ಕವಾಟ (sphincter)ಗಾಳಿಯನ್ನು ಮೇಲೆ ಹೋಗ ಬಿಡದಿದ್ದರೆ ಅದು ಕೆಳಗೆ ಕರುಳಿನ ಕಡೆಗೆ ಹೋಗ ಬೇಕು .ಅಲ್ಲಿಯೂ ಒಂದು ಸಣ್ಣ ತಡೆ ಇದೆ .ಇದೆರಡರ ನಡುವೆ ಅದು ಜಠರದಲ್ಲಿಯೇ ಗುಡು ಗುಡು ಮಾಡುವುದು .ಹೊಟ್ಟೆ ಉಬ್ಬರಿಸಿದಂತೆ ಆಗುವುದು .ಇನ್ನು ಕೆಲವರಿಗೆ ಅಸ್ತಮಾ ದಮ್ಮು ಕಾಯಿಲೆ ಇರುತ್ತದೆ .ಆಗ ಶ್ವಾಸ ನಾಳಗಳು  ಸಪೂರ ಗೊಂಡು ಗಾಳಿ ಶ್ವಾಸ ಕೋಶಕ್ಕೆ ಹೋಗಲು ಕಷ್ಟ ಇರುದರಿಂದ ಇನ್ನೊಂದು ಸುಲಭ ಮಾರ್ಗ ಅನ್ನ ನಾಳದ ಮೂಲಕ ಜಠರ ಪ್ರವೇಶ ಮಾಡುವುದು .ಇದೂ ವಾಯು ಉಪದ್ರ ,ಅಗ್ನಿಯದು ಅಲ್ಲ .ಆದರೆ ವಾಡಿಕೆಯಲ್ಲಿ  ಎಲ್ಲವನ್ನೂ ಗ್ಯಾಸ್ರ್ರೀಕ್ ಎಂದು ಹೇಳುವುದರಿಂದ ಈ ತೊಂದರೆಗೂ ಆಮ್ಲ (ಅಗ್ನಿ )ನಿರೋಧಕ ಔಷಧಿ ಸೇವನೆ ಮಾಡಿ ಪ್ರಯೋಜನ ಇಲ್ಲ .ಹಾನಿ ಇದೆ .ಯಾಕೆಂದರೆ ಸಾಮಾನ್ಯ ಜೀರ್ಣ ಕ್ರಿಯೆಗೆ ,ಮತ್ತು ರಕ್ತ ಉಂಟುಮಾಡಲು ಬೇಕಾದ ಕಬ್ಬಿಣದ ರಕ್ತ ಸೇರುವಿಕೆಗೆ ಆಮ್ಲೀಯ  ಪರಿಸರ ಬೇಕು .ಅಲ್ಲದೆ ಆಮ್ಲ ಹೊಟ್ಟೆ  ಸೇರಿದ ರೋಗಾಣುಗಳನ್ನು ಕೊಲ್ಲು ವುದು . 

ಇನ್ನು ಬಟಾಟೆ ಯಂತಹ ಪದಾರ್ಥ ತಿಂದಾಗ ವಾಯು ಉತ್ಪತ್ತಿ ಆಗುವುದು ದೊಡ್ಡ ಕರುಳಿನಲ್ಲಿ .ಅಲ್ಲಿ ಪಿಷ್ಟ ಭೇದಿ ಸುವ ಅಪಾಯ ರಹಿತ ಬ್ಯಾಕ್ಟೀರಿಯಾ ಗಳು ತಮ್ಮ ಕ್ರಿಯೆಯಲ್ಲಿ ಕಾರ್ಬನ್ ಡೈ ಆಕ್ಸೈಡ್ ,ಮೀಥೇನ್ ,ಹೈಡ್ರೋಜನ್ ಇತ್ಯಾದಿ ಅನಿಲ ಉತ್ಪಾದನೆ ಮಾಡುವವು ,ಅವು ಅಪಾನ ವಾಯು ರೂಪದಲ್ಲಿ ಹೊರ ಹೋಗುವವು .ಮೀಥೇನ್ ಮತ್ತು ಹೈಡ್ರೋಜನ್ ಸಲ್ಪಾಯಿಡ್ ಜಾಸ್ತಿ ಇದ್ದರೆ ದುರ್ವಾಸನೆ ಇರುವುದು .ಇದೂ ಗ್ಯಾಸ್ಟ್ರಿಕ್ ಅಲ್ಲ . ಇಲ್ಲಿ ಒಂದು ವಿಷಯ .ನಮ್ಮ ಅಡಿಗೆ ಎಲ್ ಪಿ ಜಿ ಗ್ಯಾಸ್ ಗೆ ಯಾವುದೇ ವಾಸನೆ ಇಲ್ಲ .ಅದು ಸೋರಿದರೆ ಕೂಡಲೇ ತಿಳಿಯಲಿ ಎಂದು ಈಥೈಲ್ ಮರ್ಕ್ಯಾಪ್ಟನ್ ಅನಿಲ ಸೇರಿಸುವರು 

 ಗ್ಯಾಸ್ಟ್ರಿಕ್ ಎಂದರೆ ಜಠರಕ್ಕೆ ಸಂಬಂದಿಸಿದ ಎಂದು ಅರ್ಥ .ಜಠರ ಅಗ್ನಿ ಜಾಸ್ತಿ ಆದರೆ ಮಾತ್ರ ಸಾಮಾನ್ಯವಾಗಿ ನಾವು ಸಾಮಾನ್ಯವಾಗಿ ಗ್ಯಾಸ್ಟ್ರಿಕ್ ಔಷಧಿ ಎಂದು ಕರೆಯುವ ಆಮ್ಲ ನಿರೋಧಕ ತಿನ್ನ ಬೇಕು .ಉಳಿದ ಎಲ್ಲಾ ವಾಯು ಪ್ರಕೋಪಕ್ಕೆ ಅದು ಸಲ್ಲ . 

 ಅದಕ್ಕೆ ಅದರದೇ ಕಾರಣ ಹುಡುಕಿ ಚಿಕಿತ್ಸೆ ಮಾಡಬೇಕು .ಉದಾಹರಣೆಗೆ ದಮ್ಮು ಕಾಯಿಲೆ ಇದ್ದರೆ ಅದಕ್ಕೆ ಸರಿಯಾದ ಚಿಕಿತ್ಸೆ ,ಮನೋ ಉದ್ವೇಗ ಇದ್ದರೆ ಅದರ ಉಪಶಮನ ಇತ್ಯಾದಿ 


ನಮ್ಮ ರೋಗಿಗಳು ಸಾಮಾನ್ಯ ತಲೆ ನೋವಿನಿಂದ ಹಿಡಿದು ಮೂತ್ರದ ಕಲ್ಲಿನ ನೋವಿನ ವರೆಗೆ ಎಲ್ಲದಕ್ಕೂ ಗ್ಯಾಸ್ತ್ರಿಕ್ ಎಂದು ಹೇಳಿಕೊಳ್ಳುವರು .ಕೆಲವು ಗ್ಯಾಸ್ತ್ರಿಕ್ ಎಂದು ಬಂದ ವರು ಗರ್ಭಿಣಿ ಯಾಗಿ ಇದ್ದವರೂ.ಇದು ಬಹಳ ಮುಖ್ಯ ಯಾಕೆಂದರೆ ಗರ್ಭಿಣಿಯರಿಗೆ ಸುಮ್ಮನೇ ಗ್ಯಾಸ್ತ್ರಿಕ್ ಮಾತ್ರೆ ಕೊಟ್ಟರೆ ಹಾನಿಕರಕ .ನಿಮಗೆ ಏನು ಆಗುವುದು ಎಂದು ವೈದ್ಯರಿಗೆ ಹೇಳಿ ಗ್ಯಾಸ್ತ್ರಿಕ್ ಹೌದಾ ಅಲ್ಲವಾ ಎಂದು ಅವರೇ ನಿರ್ಧರಿಸಲಿ .ಇನ್ನೂ ಅನುಭವ ಆಗ ಬೇಕಾದ ವೈದ್ಯರು ನೀವು ಗ್ಯಾಸ್ತ್ರಿಕ್ ಎಂದ ಒಡನೆ ರಾಣಿತಿದಿನ್,ಒಮೆಪ್ರಜೋಲ್ ,ಪಾಂಟಪ್ರಜೋಲ್ ಅಂತಹ ಔಷಧಿ ಬರೆದು ಬಿಡುವ ಸಾಧ್ಯತೆ ಇದೆ

                     

1 ಕಾಮೆಂಟ್‌: