ಬೆಂಬಲಿಗರು

ಸೋಮವಾರ, ನವೆಂಬರ್ 16, 2020

ಅಂಗ್ರಿ ದಿನಗಳು 3 ನನ್ನ ತಂದೆ

                                


ಮೇಲಿನ ಚಿತ್ರದಲ್ಲಿ ಕಾಣುವುದು ನನ್ನ ತಂದೆ ಅಂಗ್ರಿ ಸುಬ್ಬಣ್ಣ ಭಟ್ ,ತಾಯಿ ವೆಂಕಟ ಲಕ್ಷ್ಮಿ ಕಿರಿಯ ತಮ್ಮ ಶ್ರೀನಿವಾಸ .

                   ನಾನು ಜನಿಸಿದ ಮನೆ ಕೆಳಗೆ ಇರುವುದು

ತಂದೆಯವರು ಶ್ರಮ ಜೀವಿ .ಪಶು ಪಾಲನೆ ಅವರ ಮೊದಲ ಪ್ರೀತಿ .ಕೃಷಿ ಎರಡನೇ .ಬೆಳಗ್ಗೆ ಎದ್ದವರು ಮುಖ ಮಾರ್ಜನೆ ಆಗಿ ನೇರ ದನ ಕಾರು ಗಳ ವಾಸ ಸ್ಥಾನ ಕೆದೆ ಅಥವಾ ಹಟ್ಟಿಗೆ ಹೋಗಿ ಹುಲ್ಲು ಹಾಕುವರು .ಬಳಿಕ ಬಂದು ಮನೆಯಯಿಂದ ಮಡ್ಡಿ ಯ  ದೊಡ್ಡ ಪಾತ್ರೆಯನ್ನು ಭುಜದ ಮೇಲೆ ಹೊತ್ತುಕೊಂಡು ದನಕರುಗಳಿಗೆ ಬ್ರೇಕ್ ಫಾಸ್ಟ್ .ಹಾಲು ಕರೆಯುವುದು ಮನೆಯ ಹೆಂಗಸರು ಮಾಡುತ್ತಿದ್ದರೂ ಕೆಲವೊಮ್ಮೆ ತಂದೆಯೇ ಆ ಕೆಲಸ ಮಾಡುವರು .  ಇಷ್ಟೆಲ್ಲಾ ಆದ ಮೇಲೆಯೇ ಬೆಳಗಿನ ಕಾಪಿ ಉಪಾಹಾರ .

                ಆಮೇಲೆ ರಾಸುಗಳನ್ನು ಮೇಯಲು ಬಿಡುವರು .ಹಸು ಕರುಗಳು ಶಾಲೆ ಬಿಟ್ಟ ಮಕ್ಕಳಂತೆ ಸಂತೋಷದಿಂದ ಗುಡ್ಡಕ್ಕೆ ಗುಂಪಾಗಿ ಮೇಯಲು ತೆರಳುವುದು ನೋಡಲು ಚಂದ.

ಅಪ್ಪನ  ಉಡುಗೆ ಸೊಂಟಕ್ಕೆ ಒಂದು ಬೈರಾಸು ,ತಲೆಗೆ ಒಂದು ಬೈರಾಸಿನ ಮುಂಡಾಸು .ಇದರಲ್ಲಿ ತೋಟಕ್ಕೆ ಹೋಗುವರು .ಅಡಿಕೆ ಹೆಕ್ಕುವುದು ,ಕೆಲಸದವರಿಗೆ ಮಾರ್ಗ ಸೂಚಿ ಕೊಡುವುದು ,ಮತ್ತು ರಾಸುಗಳಿಗೆ ಹಸಿ ಹುಲ್ಲು ಸಂಗ್ರಹಣೆ ಮಾಡುವುದು  ಮುಂಜಾನೆಯ ದಿನಚರಿ .ಮಧ್ಯಾಹ್ನ ಸ್ನಾನ ಮಾಡಿ ಪೂಜೆ .ನಂತರ ಊಟ . ಸಣ್ಣ ನಿದ್ದೆ ತೆಗೆದು ಪುನಃ ತೋಟಕ್ಕೆ .ಸಂಜೆಯಾಗುತ್ತಲೇ ದನಕರುಗಳು ಗೇಟ್ ನ ಬಳಿ ಅಂಬಾ ಎಂದು ಕರೆಯುವವು .ಅವುಗಳನ್ನು ಹಟ್ಟಿಗೆ ಸೇರಿಸಿ ,ಹಾಲು ಕರೆಯುವುದಿದ್ದರೆ ಅದನ್ನು ತೀರಿಸಿ ಮುಸ್ಸಂಜೆ ಮನೆಗೆ ಬರುವರು .ಕೆಲಸದವರ ದಿನ ಲೆಕ್ಕ ,ಸೊಪ್ಪು ಹುಲ್ಲು ತಂದು ಹಾಕುವವರ ಲೆಕ್ಕ ತಂದೆ ಇಡುತ್ತಿದ್ದರು .ಹಣದ ಬಟವಾಡೆ ಚಿಕ್ಕಪ್ಪ ಮಾಡುವರು .(ಇದು ಆಸ್ತಿ ಪಾಲು ಆಗುವವರೆಗೆ ).,ಆಮೇಲೆ ನವಭಾರತ (ನಂತರ ಉದಯವಾಣಿ )ಪತ್ರಿಕೆ ಅಡಿಕೆ ಧಾರಣೆ ನೋಡುವರು .ರಾತ್ರಿ ಸ್ನಾನಕ್ಕೆ ಮೊದಲು ಹಟ್ಟಿಗೆ ಭೇಟಿ .ಸ್ನಾನ ,ಊಟ ,ರಾತ್ರಿ ರೇಡಿಯೋ ದಲ್ಲಿ ತಾಳ  ಮದ್ದಳೆ ಇದ್ದರೆ  ತಪ್ಪದೆ ಕೇಳುವರು . 

ಮನೆ ಸಮೀಪ ಯಕ್ಷಗಾನ ಇದ್ದರೆ ನಮ್ಮನ್ನು ಕರೆದು ಕೊಂಡು ಹೋಗುವರು ,ಅದೇ ರೀತಿ ಊರ ಜಾತ್ರೆಗೆ ಮತ್ತು ಭೂತ ಕೋಲಕ್ಕೆ 

ಅಪ್ಪನಿಗೆ ಸಿಟ್ಟು ಬರುತ್ತಿದ್ದುದೇ ಅಪರೂಪ .ನಮಗೆ ಹೊಡೆದುದೇ ಇಲ್ಲ .ಅಮ್ಮ ಪೆಟ್ಟು ಕೊಡಲು ಬಂದಾಗ  ನಾವು ಮಕ್ಕಳು ಅವರ ಆಶ್ರಯ ಅರಸಿ ಹೋಗುತ್ತಿದ್ದೆವು ..ಅಲ್ಲದೆ ಅವರು ನಿಜ ಸ್ಥಿತ ಪ್ರಜ್ಞರಾಗಿದ್ದರು .ಯಾವುದೇ ಸಂದರ್ಭದಲ್ಲಿ ಅತಿ ಸಂತೋಷ ,ದುಃಖ ,ಕೋಪ ಕಂಡುದಿಲ್ಲ .ನಮ್ಮ ದೊಡ್ಡಪ್ಪ ತೀರಿ  ಕೊಂಡಾಗ ಅವರಿಗೆ ಬೇಸರ ಆಗಿತ್ತು ಆದರೆ ಮುಖದಲ್ಲಿ ಅದರ ಗೋಚರ ಇರಲಿಲ್ಲ .ನಮ್ಮ ಶಾಲಾ ಸಾಧನೆ ಗಳ ವಿಚಾರದಲ್ಲಿ ಕೂಡಾ .ನಾವು ಪ್ರೋಗ್ರೆಸ್ ರಿಪೋರ್ಟ್ ಸಹಿ ಹಾಕಲು ಕೊಟ್ಟಾಗ ಯಾಕೆ ಕಡಿಮೆ ಅಂಕ ಎಂದು ಕೇಳಿದ್ದಿಲ್ಲ . 

ನಮ್ಮ ಕೂಡು  ಕುಟುಂಬ ಇರುವ ವರೆಗೆ ಎಲ್ಲಾ ಮೇಲ್ನೋಟಕ್ಕೆ ಸರಿಯಾಗಿ ನಡೆಯುತ್ತಿತ್ತು .ಆಸ್ತಿ ಪಾಲು ಆದ ಸಮಯ ಅಡಿಕೆ ದರ  ಪಾತಾಳಕ್ಕೆ ಬಂದಿತ್ತ್ತು .ನಾವು ಹತ್ತು ಮಕ್ಕಳು ,ಎಲ್ಲಾ ವಿದ್ಯಾಭ್ಯಾಸದ ಬೇರೆ ಹಂತದಲ್ಲಿ ಇದ್ದೆವು .ಹಣದ ತಾಪತ್ರಯ ವಿಪರೀತ .ಬ್ಯಾಂಕ್ ನಲ್ಲಿ ಸಾಲ  ಕೂಡಾ ಸರಿಯಾಗಿ ಸಿಗುತ್ತಿರಲಿಲ್ಲ .ನನ್ನ ಎಮ್ ಬಿ ಬಿ ಎಸ ಸೇರ್ಪಡೆ ಫೀಸ್ ಗಾಗಿ ತಾಯಿಯವರ ಚೈನ್ ಬ್ಯಾಂಕ್ ನಲ್ಲಿ ಅಡವು  ಇಟ್ಟು ಹಣ ಸಾಲ ಮಾಡ ಬೇಕಾಯಿತು .ಅಡಿಕೆಗೆ ಬೆಲೆಯಿಲ್ಲ ಎಂದು ಕೊಕ್ಕೋ ನೆಟ್ಟರು .ಅದರ ಫಸಲು ಬರುವಾಗ ಅದಕ್ಕೂ ಬೇಡಿಕೆ ಇಲ್ಲದಾಯಿತು .ಈ ಕಾಲದಲ್ಲಿಯೇ ವಾರಾಣಸಿ ಸುಬ್ರಾಯ ಭಟ್ಟರು ಕ್ಯಾಮ್ಕೋ ಸ್ಥಾಪಿಸಿದ್ದು . 

 ಪೇಟೆಗೆ ಹೋದಾಗ ಲಾಟರಿ ಟಿಕೆಟ್ ಕೊಳ್ಳುವುದು ,ಪತ್ರಿಕೆಯಲ್ಲಿ ಅದರ ಫಲಿತಾಂಶ ನೋಡುವುದು ಹವ್ಯಾಸ .ಬೈರಿಕಟ್ಟೆ ರಾಯರ ಹೋಟೆಲ್ ನ ಬನ್ಸ್ ಟೀ ಅವರಿಗೆ ಇಷ್ಟ . ಮಂಗಳೂರು ಪೇಟೆಯ ಹೊಟೇಲ್ ನಲ್ಲಿ  ತಿಂಡಿಯೊಡನೆ ತನಗೆ ಎರಡು ಗ್ಲಾಸ್ ಚಹಾ ಬೇಕು ಎಂದು ಆರ್ಡರ್ ಮಾಡುವರು .ಅವರ್ ಕಪ್ ಗಂಟಳೊಳಗೆ ಇಳಿಯುವಷ್ಟರಲ್ಲಿ ಮುಗಿಯುವುದು ಎಂದು .ಅಡಿಕೆಗೆ ದರ ಕಮ್ಮಿ ಇದ್ದಾಗ ಅದು ಮೇಲೆ ಬಂದರೆ ಕಟೀಲು ಮೇಳದ  ಹರಕೆ ಆಟ ಆಡಿಸುತ್ತೇನೆ ಎಂದು ಮನದಲ್ಲೇ ಹೇಳಿ ಕೊಂಡಿದ್ದರು .ಅವರಿಗೆ ತುಂಬಾ ವಯಸ್ಸು ಆದಾಗ ಅದನ್ನು ನನ್ನ ತಮ್ಮನಲ್ಲಿ ಹೇಳಿದ್ದರು .ಅಡಿಕೆ ಧಾರಣೆ ಏರಿದರೆ ಸಮಸ್ತ ಬೆಳೆಗಾರರಿಗೂ ಲಾಭ ಆದ ಹಾಗೆ ,ನಮಗೆ ಮಾತ್ರ ವರವಾಗುವ ಹರಿಕೆ ಹಾಕಬಹುದಿತ್ತು ಎಂದು ಆತ ತಮಾಷೆಗೆ ಹೇಳಿದರೂ ಅಪ್ಪನ ಮೇಲೆ ಬಹಳ ಪ್ರೀತಿ ಮತ್ತು ಗೌರವ ಹೊಂದಿದ್ದ ಅವನು ಅಣ್ಣ ಸೇರಿ ಹರಕೆ ಆಟ ಆಡಿಸಿದರು . 

      ನಾವು ಬೇರೆ ಬೇರೆ ಉದ್ಯೋಗದಲ್ಲಿ ಇದ್ದುದರಿಂದ ವೃದ್ದಾಪ್ಯದಲ್ಲಿ ಅಪ್ಪನಿಗೆ ನೋಡಿ ಕೊಳ್ಳಲು ಆಗುವುದಿಲ್ಲ ಎಂದು ಅಸ್ತಿ ಮಾರಾಟ ಮಾಡಿ ,ಅವರು ಮಕ್ಕಳ ಮನೆಯಲ್ಲಿ ಇರುವ ವ್ಯವಸ್ಥೆ ಮಾಡಿದೆವು .ಅದಾದ ಕೆಲ ತಿಂಗಳಲ್ಲಿ ನಮ್ಮ ಅಕ್ಕನ ಮನೆಯಲ್ಲಿ ಇದ್ದಾಗ ಮೆದುಳಿನ ರಕ್ತ ಸ್ರಾವದಿಂದ ತೀರಿ ಕೊಂಡರು .ನಾನು ಆಗ ಮದ್ರಾಸಿಗೆ ಬಂದ  ತರುಣ . 

ಹತ್ತು ಮಕ್ಕಳನ್ನು ಎಲ್ಲಾ ಕಷ್ಟಗಳನ್ನು ಎದುರಿಸಿ ಒಂದು ನೆಲೆಗೆ ತಂದು ನಿಲ್ಲಿಸಿ ,ಅದರಲ್ಲಿ ತನ್ನ ಪಾಲು ಏನೂ ಇಲ್ಲ ಎಂದು ನಿಲಿಪ್ತರಾಗಿ ಬಾಳಿ ತೆರಳಿದ ನಮ್ಮ ಅಪ್ಪ ನಿಗೆ ನಾವು ಎಷ್ಟು ಋಣಿ ಗಳು ಎಂದು ಹೇಳಲಾಗದು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ