ಬೆಂಬಲಿಗರು

ಸೋಮವಾರ, ಜನವರಿ 16, 2023

 ರಾ ರಾ ರಾಜೀವ ಲೋಚನ 

ಮೊನ್ನೆ ಕದ್ರಿ ಪಾರ್ಕ್ ನಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಹೋದ ವಿಷಯ ಬರೆದಿದ್ದೆ . ಅಲ್ಲಿಂದ ಹೊರ ಬಂದು  ಆಕಾಶವಾಣಿ /ಕದ್ರಿ ಪಾರ್ಕ್ ಬಸ್ ಸ್ಟಾಂಡ್ ಗೆ ಬಂದು ೧೫ ನಂಬರ್ ಬಸ್ಸಿನಲ್ಲಿ ಹದಿನೈದು ರೂಪಾಯಿ ತೆತ್ತು ಮಂಗಳಾ ದೇವಿ ಗೆ ಬಂದೆ . ಅಲ್ಲಿ ಸ್ವರಲಯ ಸಾಧನಾ ಸಂಸ್ಥೆಯವರು ರಾಮಕೃಷ್ಣ ಮಿಷನ್ ನವರ ಸಹಯೋಗದಲ್ಲಿ ಪ್ರಸಿದ್ಧ ವಯೊಲಿನ್ ವಾದಕ ಸಹೋದರರಾದ ಗಣೇಶ್ ಮತ್ತು ಕುಮರೇಶ್ ಅವರ ದ್ವಂದ್ವ ಪಿಟೀಲು ವಾದನ ಕಚೇರಿ ಸಂಕ್ರಾಂತಿ ಹಬ್ಬದ ನಿಮಿತ್ತ ಏರ್ಪಡಿಸಿದ್ದರು . ರಾಮಕೃಷ್ಣ ಆಶ್ರಮದ ಪ್ರಶಾಂತ ವಾತಾವರಣದಲ್ಲಿ ಮರಗಳ ಹಸಿರಿನ ನಡುವೆ ವಿವೇಕಾನಂದ ಆಡಿಟೋರಿಯಂ ಇದೆ ;ಅಲ್ಲಿ ಕಾರ್ಯಕ್ರಮ . ನಮ್ಮ ಬೆಂಡರವಾದಿ ಸುಬ್ರಹ್ಮಣ್ಯ ಶರ್ಮರ ಮಗ ರಾಘವ ಶರ್ಮ ಈ ಕಾರ್ಯಕ್ರಮದ ಬಗ್ಗೆ ವಾರದ ಹಿಂದೆ ತಿಳಿಸಿದ್ದರು . ದೇವಳದ ಪಕ್ಕದಲ್ಲಿ  ಇರುವ ಶ್ರೀದೇವಿ ರೆಸ್ಟೋರೆಂಟ್ ನಲ್ಲಿ ರುಚಿಯಾದ ಒಂದು ಸ್ಟ್ರಾಂಗ್ ಚಹಾ ಸೇವನೆ ;ಹೋಟೆಲ್ ಧಣಿ ನಗುಮುಖ ದವರು ,ಗ್ರಾಹಕ ಸ್ನೇಹಿ . 

ಕಚೇರಿ ಗೆ ಇನ್ನೂ ಸಮಯ ಇದ್ದುದರಿಂದ ರಾಮಕೃಷ್ಣ ಮಠದ  ಆವರಣದಲ್ಲಿ  ಇರುವ ಬುಕ್ ಸ್ಟಾಲ್ ಗೆ ಹೋಗಿ ಅಲ್ಲಿ ಮಾರಾಟಕ್ಕೆ ಇಟ್ಟಿರುವ ಮಠದ ಪ್ರಕಣೆಗಳ ಮೇಲೆ ಕಣ್ಣಾಡಿಸಿದೆ . ಒಳ್ಳೆಯ ಕೃತಿಗಳು ,ಆಕರ್ಷಕ ಮುದ್ರಣ ,ಕೈಗೆಟುವ ದರ . ಸ್ವಾಮಿ ರಂಗನಾಥನಾನಂದ ಅವರ ಆತ್ಮ ಚರಿತ್ರೆ 'ಮೈ ವರ್ಕ್ಈಸ್ ಮೈ ಲೈಫ್ "ಮತ್ತು ಕುವೆಂಪು ಅವರು ರಾಮಕೃಷ್ಣ ಪರಮಹಂಸ ಮತ್ತು ಸ್ವಾಮಿ ವಿವೇಕಾನಂದ ಅವರ ಬಗ್ಗೆ ಬರೆದ "ಯುಗದರ್ಶನ ' ಕೊಂಡು ಕೊಂಡೆನು

                    ಸಭಾ ಭವನಕ್ಕೆ ಬರುವಾಗ ಉದ್ದೇಶಿತ ಕಾರ್ಯಕ್ರಮ ಅನಿವಾರ್ಯ ಕಾರಣಗಳಿಂದ ರದ್ದು ಆಗಿ ,ಬದಲು ಶ್ರೀ ವಿಠ್ಠಲ ರಾಮಮೂರ್ತಿ ಮತ್ತು  ಶ್ರೀಮತಿ ಪದ್ಮಾ ಶಂಕರ್ ಅವರ ಯುಗಳ ಪಿಟೀಲು ಕಚೇರಿ ಇದೆ ಎಂದು ತಿಳಿಯಿತು . ಇಬ್ಬರೂ ಲಾಲ್ಗುಡಿ ಜಯರಾಮನ್ ಅವರ  ಶಿಷ್ಯರು,ಪ್ರಸಿದ್ದರು  . ಸಭಾ ಭವನ ತುಂಬಿ ತುಳುಕುತ್ತಿತ್ತು . ಕಚೇರಿ ಒಂದು ಗಂಟೆ ತಡವಾಗಿ ಆರಂಭ ಆಯಿತು . 

ಗರುಡ ಧ್ವನಿ ರಾಗದ ವರ್ಣದೊಂದಿಗೆ ಆರಂಭ ,ನಂತರ  ನಿತ್ಯ ಹಸಿರು ಹಂಸ ಧ್ವನಿ ಕೃತಿ 'ವಾತಾಪಿ ಗಣಪತಿ ;,ಜಯಂತ ಶ್ರೀ ಯಲ್ಲಿ ಮರುಗೇಲರಾ ,ಬಿಲಹರಿ ,ವಾಗೀಶ್ವರಿ ರಾಗದ ಕೃತಿಗಳು ,ಮುಂದೆ ಮೋಹನದಲ್ಲಿ ವಿಸ್ತಾರವಾಗಿ  ಜನಪ್ರಿಯ ರಾ ರಾ ರಾಜೀವ ಲೋಚನ ,ತನಿ ಆವರ್ತನ ,ಜಗದೋದ್ಧಾರನಾ ,ಮಾನಸ ಸಂಚರರೇ ,ವಂದೇ ಮಾತರಂ (ದೇಶ್ ರಾಗದಲ್ಲಿ ),ತಿಲ್ಲಾನ ಮತ್ತು ಮಂಗಳ ಭಾಗ್ಯದ ಲಕ್ಷ್ಮಿ ಯೊಂದಿಗೆ . ಆಸಕ್ತ ಕೇಳುಗರಿಂದ ತುಂಬಿದ ಸಭಾಭವನ ಕಲಾವಿದರ ಉತ್ಸಾಹ ಇಮ್ಮಡಿ ಗೊಳಿಸಿದ್ದು ಎದ್ದು ತೋರುತ್ತಿತ್ತು . ಕಾರ್ಯಕ್ರಮ ಮುಗಿಯುವಾಗ ರಾತ್ರಿ ಎಂಟು ಗಂಟೆ . 

ರಾ ರಾ  ರಾಜೀವ ಲೋಚನ ಕೇಳಲು ಹಿತ .  ರಾ ರಾ (ಬಾ ಬಾ )ಎಂದು "ಆಪ್ತ ಮಿತ್ರ "ಚಿತ್ರದಲ್ಲಿ ರೋಷಯುಕ್ತ ಪ್ರೀತಿಯಿಂದ ಕರೆಯುವ ಹಾಡಿನ ತರಹ ಅಲ್ಲ .ಪೂರ್ಣ ಸೌಮ್ಯತೆ ಮತ್ತು ಭಕ್ತಿ ಭಾವ ಮಾತ್ರ ಮತ್ತು ರಾ ಶಬ್ದದ ರಾಗಯುಕ್ತ ಸ್ವಾಗತ . ಪುರಂದರ ದಾಸ ರ ಕೃತಿ ರಾಗೀ ತಂದಿರಾ ದಲ್ಲಿ ಕೂಡಾ ರಾ ಮತ್ತು ರಾಗಿಯನ್ನು ಬುದ್ದಿವಂತಿಕೆಯಿಂದ ಬಳಸಿರುವದು ಗಮನಿಸಿರ ಬಹುದು .ತಮಿಳಿನಲ್ಲಿಯೂ ಕಾ ವಾ ವಾ ಕಂದ ವಾ ಎನ್ನೈ ಕಾವಾ ವೇಲವಾ ಎಂದು ಮುರುಗನನ್ನು ಕರೆಯುವ ಚಂದದ ಪದ್ಯ ಇದ್ದು ,ಇಲ್ಲಿ ವಾ (ಬಾ )ಶಬ್ದ ಹಿತವಾಗಿ ,ಅರ್ಥಪೂರ್ಣವಾಗಿ ಪುನರಾವೃತ್ತಿ ಆಗುವುದು ಕಾಣಬಹುದು




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ