ಬೆಂಬಲಿಗರು

ಶುಕ್ರವಾರ, ಜನವರಿ 27, 2023

ಚಿಲ್ಲರೆ ಮನಸು

ಮೊನ್ನೆ ಮಂಗಳೂರಿನಲ್ಲಿ ಮಂಗಳಾದೇವಿಯಿಂದ ಬಿಜೈ ಗೆ ಹೋಗಲು ಹದಿನೈದು ನಂಬರ್ ಬಸ್ ಹತ್ತಿದೆ . ಇಪ್ಪತ್ತು ರೂಪಾಯಿ ನೋಟ್ ಕೊಡಲು ಕಂಡಕ್ಟರ್ ಐದು ರೂಪಾಯಿ ಇದ್ದರೆ ಕೊಡಿರಿ ಎಂದ ;ಚಾರ್ಜ್ ಇಪ್ಪತ್ತೈದು ಇರಬೇಕು ಎಂದು ತಡಕಾಡಿ ಐದು ರೂಪಾಯಿ ನಾಣ್ಯ ಅವನ ಕೈಯ್ಯಲ್ಲಿ ಇಡಲು ನಿಮಗೆ ಹತ್ತು ರೂಪಾಯಿ ಕೊಡ ಬೇಕು ಆಮೇಲೆ ಕೊಡುವೆನು ಎಂದ . ಅಲ್ಲಿಗೆ ಸುರು ಆಯಿತು ನನ್ನ ಮನಸಿನಲ್ಲಿ  ಹೊಯ್ದಾಟ . ಇಳಿಯುವ ರಶಿನಲ್ಲಿ ಅವನನ್ನು ಕೇಳುವುದು ಹೇಗೆ ? ಕಂಕನಾಡಿ ಯಲ್ಲಿ ಆತ ಪಕ್ಕಕ್ಕೆ ಬಂದಾಗ ಕೇಳಿದರೆ 'ಕೊಡುತ್ತೇನೆ ಏನು ಅವಸರ 'ಎಂದು  ಹೇಳಿಯಾನು .ಅಲ್ಲದೆ ಹತ್ತು ರೂಪಾಯಿ ದೊಡ್ಡ ಮೊತ್ತ ಅಲ್ಲ .ಹೀಗೆಲ್ಲಾ ಯೋಚನೆಯಲ್ಲಿ ಬಿಜೈ ಬಂತು ,ಬಾಕಿಯೂ ಸಿಕ್ಕಿತು .ಹಿಂದೆ ಕೆ ಎಸ ಆರ್ ಸಿ ಕಂಡಕ್ಟರ್ ಚಿಲ್ಲರೆ ಇಲ್ಲದಿದ್ದರೆ (ಕೆಲವೊಮ್ಮೆ ಇದ್ದರೂ )ಟಿಕೆಟ್ ಹಿಂದೆ ಬರೆದು ಕೊಡುತ್ತಿದ್ದರು . ಅದು ನಮಗೆ ಮರೆತು ಹೋಗ ಬರದಲ್ಲಾ ಎಂದು ಪ್ರಯಾಣದ ಉದ್ದಕ್ಕ್ಕೂ ಅದರದ್ದೇ ಚಿಂತೆ ಇರುತ್ತಿತ್ತು . ಪ್ರಯಾಣದ ಆನಂದ ಎಲ್ಲಾ ಮಾಯವಾಗುತ್ತಿತ್ತು . ಹೊಸ ಚಪ್ಪಲಿ ಹಾಕಿಕೊಂಡು ದೇವಸ್ಥಾನ ಕ್ಕೆ ಹೋದಾಗ ಹೊರಗಿಟ್ಟ 'ಚಪ್ಪಲೀ ಚಿತ್ತ 'ರಾಗಿ  ಪ್ರಾರ್ಥನೆ ಮಾಡಿದಂತೆ . 

ಹೀಗೆ ಐದು ಹತ್ತು ರುಪಾಯಿಗೆ ಚಿಂತೆ ಮಾಡುವ ನಾವು ಸರಕಾರಿ ಕಚೇರಿಗಳಲ್ಲಿ ಮಾಮೂಲು ಕೊಡುವಾಗ ಹಿಂದೆ ಮುಂದೆ ನೋಡುವುದಿಲ್ಲ . ಕೊಡದೆ ಅಲ್ಲಿ ಕೆಲಸ ಆಗುವುದಿಲ್ಲ . ಕೊಟ್ಟೇ ಕೆಲಸಕ್ಕೆ ಸೇರಿದವರಿಗೆ ಅದನ್ನು ಕೂಡುವ ಚಿಂತೆ ,ಕಾತುರ ಇರುತ್ತದೆ . ನಮ್ಮ ಕೈಯಿಂದ ಮಾಮೂಲು ತೆಗೆದು ಕೊಳ್ಳುವ ಬಹುತೇಕ ಮಂದಿ "ಇದು ನನಗೆ ಎಂದು ತಿಳಿದು ಕೊಂಡಿದ್ದೀರಾ .ಮೇಲಿನವರಿಗೂ ಪಾಲು ಹೋಗ ಬೇಕು "ಎಂದು ತಮ್ಮ ಸುಭಗತೆ ಯನ್ನು ತಿಳಿಯ ಪಡಿಸಲು ಯತ್ನಿಸುವರು . ಅತ್ಯಂತ ಮೇಲಿನವರು ಇವರಿಗೆ ಕೆಲಸ ಕೊಡಿಸುವಾಗ ಸಕ್ರಿಯ ಪಾತ್ರ ವಹಿಸಿದವರು ,ತಾವು ಪರಸ್ಪರ' ಅವನು ಭ್ರಷ್ಟ ಇವನು ಭ್ರಷ್ಟ' ಎಂದು ಹೇಳಿಕೆ ಕೊಡುತ್ತಿರುವವರು .ಅದನ್ನು ಓದಿ ಉದ್ವೇಗದಿಂದ ಪಕ್ಷ ಹಿಡಿದು ನಾವು ಪುನೀತ ರಾಗುವೆವು . ಈ ರೀತಿ ಜನರಿಗೆ ಹೆಚ್ಚು ಹೆಚ್ಚು ತೊಂದರೆ ಕೊಡುವ ಶಕ್ತಿಯುಳ್ಳ ಡಿಪಾರ್ಟ್ಮೆಂಟ್ ನ ಅಧಿಕಾರಿಗಳನ್ನು  ಹೆಚ್ಚಾಗಿ ಧಾರ್ಮಿಕ ಮತ್ತು ಶೈಕ್ಷಣಿಕ  ಸಮಾರಂಭಗಳಿಗೆ  ಕರೆದು ಪ್ರವಚನ ಮಾಡಿಸುವೆವು ,ಅವರೂ ದೇಶ ಭಕ್ತಿ ,ಪ್ರಾಮಾಣಿಕತೆ ಮತ್ತು ಸತ್ಯ ಸಂದತೆ ಬಗ್ಗೆ ಕೊರೆಯುವರು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ