ಬೆಂಬಲಿಗರು

ಭಾನುವಾರ, ಅಕ್ಟೋಬರ್ 2, 2022

ಎರಡು ಮಡಿಗಳು (ಇಮ್ಮಡಿ )

ನಮ್ಮ ಆಪರೇಷನ್ ಥೇಟರ್ ಗಳಲ್ಲಿ ಮಡಿವಂತಿಕೆ ಕಟ್ಟು ನಿಟ್ಟು . ಕೈಯನ್ನು ತೋಳಿನ ವರೆಗೆ ಹಲವು ಬಾರಿ ಸೋಪ್ ಹಾಕಿ ತೊಳೆದು ಪ್ರೆಷರ್ ಕುಕ್ಕರ್ ನಂತಹ ಆಟೋಕ್ಲೇವ್ ನಲ್ಲಿ ಶುದ್ದೀಕರಿಸಿದ  ಓ ಟಿ ಡ್ರೆಸ್  ಗೌನ್ ಹಾಕಿ ,ಕೈಗೆ ಗ್ಲೋವ್ ಹಾಕಿದ ಮೇಲೆ ಆಕಡೆ ಈ ಕಡೆ ಮುಟ್ಟುವಂತೆ ಇಲ್ಲ . ಬೆನ್ನು ತುರಿಸಲು ಅಥವಾ ಹಣೆ ಬೆವರು ಒರೆಸಲು ಸಹಾಯಕರ ಸಹಾಯ ಬೇಕು . ವಿದ್ಯಾರ್ಥಿ ಜೀವನದಲ್ಲಿ ಮೊದಲ ಬಾರಿ ನಿರೀಕ್ಷಕರಾಗಿ ಓ ಟಿ ಗೆ ಹೋದಾಗ ಸರ್ಜನ್ ನ ಕೈ ತಪ್ಪಿ ಕೆಳಗೆ ಬಿದ್ದ  ಉಪಕರಣ ಹೆಕ್ಕಿ ಕೊಡಲು ಹೋಗಿ ಬೈಗಳು ತಿಂದದ್ದು ಇದೆ . ಓ ಟಿ ಸಿಸ್ಟೆರ್ ಉಪಯೋಗಿಸಿದ ಉಪಕರಣ ಮತ್ತು  ಗಾಸ್ ಪೀಸ್ ಎಂದು ಕರೆಯಲ್ಪಡುವ ಬಟ್ಟೆಯ ತುಂಡುಗಳ ಲೆಕ್ಕ ಶಸ್ತ್ರ ಚಿಕಿತ್ಸೆಯ ಮೊದಲು ಮತ್ತು ನಂತರ ಮಾಡುವುದು ಕಡ್ಡಾಯ . ರೋಗಿಯ ಒಳಗೆ ಉಳಿದು ಹೋಗ ಬಾರದು ಎಂಬ ಉದ್ದೇಶ . 

ಮೇಲೆ ಹೇಳಿದ್ದು ಒಂದು ರೀತಿಯ ವೈಜ್ಞಾನಿಕ ಮಡಿ .ಹಿಂದೆ ನಮ್ಮ ಮನೆಯಲ್ಲಿ ಮಡಿ ಆಚರಣೆ ಕಟ್ಟು ನಿಟ್ಟು . ಅನ್ನ ಮುಟ್ಟಿ ಸಾಂಬಾರು ಪಾತ್ರೆ ಮುಟ್ಟುವ ಮೊದಲು ನೀರಿನಲ್ಲಿ ಸ್ಯಾನಿಟೈಸ್ ಮಾಡಿ ಕೊಳ್ಳ ಬೇಕು . ಎಮ್ಮೆ ಹಾಲು ಮುಟ್ಟಿ ದನದ ಹಾಲು ಮುಟ್ಟಲು ಕೈ ನಾಂದ ಬೇಕಿತ್ತು .ಬೇಯಿಸಿದ ಅಕ್ಕಿ ಕೊಳೆಯಾದರೆ ಗೋದಿ ಸಜ್ಜಿಗೆ ಅಲ್ಲ . ಊಟ ಮಾಡಿದ ನೆಲ ಸೆಗಣಿ ಸಾಂಕೇತಿಕವಾಗಿ ಆದರೂ ಸಾರಿಸಿ ಸ್ವಚ್ಛ ಮಾಡಿದ ಮೇಲೆಯೇ ಇನ್ನೊಂದು ಪಂಕ್ತಿ ಹಾಕ ಬಹುದಿತ್ತು .  ಮುಟ್ಟಾದ ಸ್ತ್ರೀಯರನ್ನು ಯಾರೂ ಮುಟ್ಟುವಂತಿಲ್ಲ ,ಅವರು ಮನೆಯ ಒಳಗಿನ ಕೆಲಸಗಳಲ್ಲಿ ಸೇರುವಂತಿಲ್ಲ . ಹಿಡಿ ಸೂಡಿ ಮಾಡುವುದು ,ಅಡಿಕೆ ಕೆಲಸ ಇತ್ಯಾದಿ ಮಾಡಿ ಅವರು ಮೂರು ದಿನ ಕಾಲ ಯಾಪನೆ ಮಾಡುತ್ತಿದ್ದರು . 

ಕಾಲ ಕ್ರಮೇಣ ಇವು ಮಾಯವಾಗಿವೆ .ಕೆಲವರು ವಾದಿಸುವುದಕ್ಕೋಸ್ಕರ ಇವುಗಳನ್ನು ಸಮರ್ಥಿಸಿ ಕೊಳ್ಳುತ್ತಾರೆ .ಇನ್ನು ಕೆಲವರು ಹಿಂದಿನಿಂದ ಬಂದ ನಂಬಿಕೆ ,ಇದಕ್ಕೆ ಶಾಸ್ತ್ರ ಅಥವಾ ವಿಜ್ಞಾನ ದ  ಸಮರ್ಥನೆ ಇಲ್ಲ ಎಂದು ಹೇಳುತ್ತಾರೆ . 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ