ಬೆಂಬಲಿಗರು

ಭಾನುವಾರ, ಮೇ 30, 2021

ಕರುಳ ಜಂತು ಪುರಾಣ

 ಹೆತ್ತ ಕರುಳು ಎಂದು ವಾಡಿಕೆಯಲ್ಲಿ ತಾಯಂದಿರಿಗೆ ಅನ್ವಯಿಸಿ ಹೇಳಿದರೂ ಗರ್ಭ ಧರಿಸಿ ಹೆರುವ ಪ್ರಕ್ರಿಯೆಗೂ ಕರುಳಿಗೂ ನೇರ ಸಂಬಂಧ ಇಲ್ಲ .ಆದರೆ ನಮ್ಮ ಕರುಳಿನಲ್ಲಿ ಪರೋಪಜೀವಿ ಜಂತುಗಳ ವಾಸ ,ಲೈಂಗಿಕ ಕ್ರಿಯೆ ಮತ್ತು ಸಂತಾನೋತ್ಪತ್ತಿ ಆಗುತ್ತಲಿರುತ್ತದೆ .ಆದುದರಿಂದ ಗಂಡಸರು ಮತ್ತು ಹೆಂಗಸರು ಎಂಬ ಭೇಧ ಇಲ್ಲದೆ ಎಲ್ಲವರೂ ಹೆತ್ತ ಕರುಳುಗಳೇ . 

ಇಂದು ಒಬ್ಬ ರೋಗಿ ಬಂದಿದ್ದರು . ತನ್ನ ಉದರದಲ್ಲಿ ಹುಳದ ಉಪದ್ರ ,ದಿನವಿಡೀ ಗೊಳ ಗೊಳ ಎಂದು ಶಬ್ದ ಮಾಡುತ್ತ ಇರುತ್ತವೆ ಎಂಬುದು ಅವರ ಆರೋಪ . ಹೊಟ್ಟೆಯಲ್ಲಿ ವಾಸಿಸುವ ಜಂತುಗಳು ಶಬ್ದ ಮಾಡುವುದಿಲ್ಲ ,ಅವು ಮೌನ ಸಾಧಕರು . ಹೊಟ್ಟೆಯಲ್ಲಿ ಕೇಳಿ ಬರುವ ಶಬ್ದ ನಮ್ಮ ತನ್ನೊಳಗಿನ   ಒಳಗಿನ ದ್ರವ ಮತ್ತು ಗಾಳಿ  ಕರುಳಿನ ಚಲನೆಯೊಡನೆ  ಓಡುವಾಗ  ಮಾಡುವ ಶಬ್ದ . 

ಇನ್ನು ಪರೋಪಜೀವಿ ಜಂತುಗಳು ಮನುಜನಿಗೆ ಮಿತ್ರರು ಎಂಬ ವಾದ ವಿಜ್ಞಾನಿಗಳಲ್ಲಿ ಇದೆ .  ಇದರ ಪ್ರಕಾರ ನಮ್ಮ ಹೊಟ್ಟೆಯ ಒಳಗೆ ಈ ಹುಳಗಳು  ಶರೀರದ ರೋಗ ಪ್ರತಿರೋಧ ವ್ಯವಸ್ಥೆಯನ್ನು ಪ್ರಚೋದಿಸುತ್ತವೆ . ಇದರಿಂದ  ಅದು ಸದಾ ಸಜ್ಜಾಗಿ ಇರುವುದಲ್ಲದು ಒಂದು ಅನುಕೂಲ ಆದರೆ ,ಇನ್ನೊಂದು  ಈ ಜಂತುಗಳು  ಕೆಲವು ರಾಸಾಯನಿಕ ಸಂದೇಶಗಳನ್ನು ಕಳುಹಿಸಿ    ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯಾ. ಇವ ನಮ್ಮವ, ಇವ ನಮ್ಮವ, ಇವ ನಮ್ಮವನೆಂದೆನಿಸಯ್ಯಾ ಎಂದು ಪರ ವಸ್ತುಗಳ ಸಹನೆಯನ್ನು ನಮ್ಮ ಶರೀರದ ರೋಗ ಪ್ರತಿರೋಧ ವ್ಯವಸ್ಥೆಗೆ ಮೇಲಿಂದ ಮೇಲೆ ಕಳುಹಿಸುತ್ತದೆ . 

   ನಮ್ಮ ಶರೀರ ಕೆಲವೊಮ್ಮೆ ಹೊರಗಿನ ಮತ್ತು ಒಳಗಿನ ವಸ್ತುಗಳನ್ನು ವೈರಿ ಎಂದು ಪರಿಗಣಿಸಿ ಉತ್ಪ್ರೇಕ್ಷಿತ  ರೋಗ ನಿರೋಧಕ ಪ್ರಕ್ರಿಯೆ ಆರಂಬಿಸುತ್ತದೆ .ಇದರಿಂದಲೇ  ಆಸ್ತಮಾ ,ಕ್ರೋನ್ಸ್ ಕಾಯಿಲೆ(ಕರುಳ ಊತ)ಮಲ್ಟಿಪಲ್ ಸ್ಲೇರೋಸಿಸ್ ಎಂಬ ನರಾಂಗ ಶಿಥಿಲತೆ ಇತ್ಯಾದಿ ಉಂಟಾಗುವವು . ಈ ಕಾಯಿಲೆಗೆ ಚಿಕಿತ್ಸಾ ರೂಪವಾಗಿ ಪರೋಪಜೀವಿಗಳನ್ನು ಶರೀರಕ್ಕೆ  ಸೇರಿಸುವ ಪ್ರಯೋಗಗಳು ನಡೆದಿವೆ . 

 ನೈರ್ಮಲ್ಯ ರೋಗ ವಾದ ( Hygiene Hypothesis )ಎಂದು ಇದೆ .ಅತಿ ನೈರ್ಮಲ್ಯ ಇರುವ ಮುಂದುವರಿದ ದೇಶದ ಜನರಲ್ಲಿ ಸ್ವಯಂ ನಿರೋಧಕ (Autoimmune )ಕಾಯಿಲೆಗಳು ಜಾಸ್ತಿ ,ಸಣ್ಣ ಸೊಳ್ಳೆ ಕಡಿತವೂ ಅತೀವ ಅಲರ್ಜಿ ಉಂಟು ಮಾಡುವುದು . ನಮ್ಮಲ್ಲಿ ಈ ತರಹದ ಕಾಯಿಲೆಗಳು ಕೆಲವು ವರ್ಷಗಳ ಹಿಂದೆ ಬಹಳ ಕಡಿಮೆ  ಇದ್ದವು . 

                    ನಮ್ಮ ಬಾಲ್ಯದಲ್ಲಿ ಹೊಟ್ಟೆ ಹುಳಕ್ಕೆ ವರ್ಷಕ್ಕೆ ಒಮ್ಮೆ ಹರಳೆಣ್ಣೆ ಕುಡಿಸಿ ಭೇದಿ ಮಾಡಿಸುತ್ತಿದ್ದರು .ಈಗ  ಬೇರೆ ಬೇರೆ ಪರೋಪಜೀವಿಗಳಿಗೆ ಬೇರೆ ಬೇರೆ ಔಷಧಿ ಇದೆ .ಇದರಲ್ಲಿ ಕೆಲವು ಪುನಃ ಪುನಃ ಕಾಡುವವು .ಇದಕ್ಕೆ ಕಾರಣ ಮನೆಯಲ್ಲಿ ಇರುವ ಯಾರಾದರೂ ಒಬ್ಬರು ಮೂಲವಾಗಿ ಇರುವರು .ಆದುದರಿಂದ ಮನೆಯಲ್ಲಿ ಎಲ್ಲರೂ ಜತೆಗೆ ಔಷಧಿ ತೆಗೆದು ಕೊಂಡರೆ ಉತ್ತಮ

 

 

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ