ಬೆಂಬಲಿಗರು

ಶನಿವಾರ, ಮೇ 29, 2021

ಸೋಂಕು ರೋಗ ಶಾಸ್ತ್ರ

 

                ಸೋಂಕು ರೋಗ ಶಾಸ್ತ್ರ

 ಕೋವಿಡ್  ಸಾಂಕ್ರಾಮಿಕದಿಂದ ಒಂದು ವಿಷಯ ನಾವು ಕಲಿಯ ಬೇಕು . ಸೋಂಕು ರೋಗ ಶಾಸ್ತ್ರಕ್ಕೆ ನಮ್ಮ ವೈದ್ಯಕೀಯ ಶಿಕ್ಷಣ ಮತ್ತು ರಂಗದಲ್ಲಿ  ಸಿಗ ಬೇಕಾದ ಆದ್ಯತೆ ನಾವು ಕೊಟ್ಟಿಲ್ಲ . ವೈದ್ಯಕೀಯ ಕಾಲೇಜ್ ಗಳಲ್ಲಿ  ಇದಕ್ಕೆ ಪ್ರತ್ಯೇಕ ವಿಭಾಗವೇ ಇಲ್ಲ .ಸೂಕ್ಷ್ಮಾಣು ಜೀವಿ ಶಾಸ್ತ್ರ ಮತ್ತು ವೈದ್ಯಕೀಯ ವಿಭಾಗಗಳಲ್ಲಿ ಸರಿಯಾದ ಸಂವಹನ ದ ಕೊರತೆ ಇದೆ . ಸಕ್ಕರೆ ಕಾಯಿಲೆ ಹೃದ್ರೋಗ ಇತ್ಯಾದಿಗಳು ಎಲ್ಲರ ಡಾರ್ಲಿಂಗ್ ಆಗಿವೆ . ಇವುಗಳ ಚಿಕಿತ್ಸೆಯಲ್ಲಿ ತುಂಬಾ ಹಣ ಹೂಡಿಕೆ ಆಗುತ್ತದೆ .ವೈದ್ಯರು ಉನ್ನತ ಶಿಕ್ಷಣ ವನ್ನು ಇಂತಹ ವಿಷಯಗಳಲ್ಲಿ ಮತ್ತು ರೇಡಿಯಾಲಜಿ ಯಂತಹ ವಿಭಾಗ ದಲ್ಲಿ ನಡೆಸಲು ಹೆಚ್ಚು ಆಸಕ್ತಿ ತೋರಿಸುವರು . ನಮ್ಮ ದೇಶದಲ್ಲಿ ಬ್ರಿಟಿಷರ ಆಳ್ವಿಕೆ ಸಮಯದಲ್ಲಿ ಸಾರ್ವಜನಿಕ ಆರೋಗ್ಯ (ಪಬ್ಲಿಕ್ ಹೆಲ್ತ್ ) ವಿಭಾಗ ಬಹಳ ಕ್ರಿಯಾಶೀಲ ಆಗಿತ್ತು . ಮಲೇರಿಯಾ ಸೊಳ್ಳೆ ಮೂಲಕ ಹರಡುವುದನ್ನು   ಮತ್ತು ಕಾಲಾ ಆಜಾರ್  ದಂತಹ ಕಾಯಿಲೆಗಳ ರೋಗಾಣುಗಳನ್ನು ಭಾರತದಲ್ಲಿಯೇ  ಕಂಡು ಹಿಡಿಯಲ್ಪಟ್ಟವು ಎಂದರೆ ನಮಗೆ ಆಶ್ಚರ್ಯ ಆಗುವುದು . 

ಆದ ಕಾರಣ  ಇಂತಹ ಹೊಸ ಸಾಂಕ್ರಾಮಿಕ ಬಂದಾಗ ಎಲ್ಲರೂ ತಮ್ಮ ತಮ್ಮ ಅರಿವಿಗೆ ತಕ್ಕಂತೆ ಅದನ್ನು ವಿಶ್ಲೇಷಿಸಲು ತೊಡಗುತ್ತಾರೆ . ಇದರಲ್ಲಿ ಹಲವರು ಕುರುಡರು ಆನೆಯನ್ನು ಮುಟ್ಟಿ ವರ್ಣಿಸಿದ ಪರಿಯನ್ನು ನೆನಪಿಸುವರು . ಜನಸಾಮಾನ್ಯರು ಇದನ್ನು ಕೇಳಿ ಗೊಂದಲಕ್ಕೆ ಒಳಗಾಗುವರು  .ಸರಕಾರದ ಸೋಂಕು ರೋಗ ಸಲಹಾ ಸಮಿತಿಗೆ ಲೌಕಿಕವಾಗಿ ಯಶಸ್ವಿ ಎಣಿಸಿದ ವೈದ್ಯರನ್ನು ನೇಮಿಸುವರು .ಏನಾದರೂ ಹೆಚ್ಚು ಕಡಿಮೆ ಆದರೆ ಅವರ ನಾಮದ ಬಾಲ ಇರಲಿ ಎಂಬ ಉದ್ದೇಶ ಇರಬಹುದು . ಆದರೆ ಸೋಂಕು ರೋಗ ಗಳ  ನಿರ್ವಹಣೆಯ ಅನುಭವ ಇರುವ ಮತ್ತು ವಸ್ತು ನಿಷ್ಠ  ವೈಜ್ನಾನಿಕ  ಶಿಫಾರಸು ಮಾಡುವವರು ಅದರಲ್ಲಿ ಇದ್ದರೆ ಉತ್ತಮ .

ನಮ್ಮ ಸಾಮಾನ್ಯ ಸೋಂಕು ರೋಗ ಚಿಕಿತ್ಸೆಗೂ ಒಂದು ಗೊತ್ತು ಗುರಿ ಇದ್ದಂತಿಲ್ಲ . ಉದಾಹರಣೆಗೆ ಸಣ್ಣ ಶೀತ ಜ್ವರಕ್ಕೂ ಆಂಟಿಬಯೋಟಿಕ್ ಕೊಡುತ್ತೇವೆ ,ಕೊಡದಿದ್ದರೆ ರೋಗಿಗಳು ಮತ್ತು ಹೆತ್ತವರು ಕೇಳಿ ಪಡೆಯುತ್ತಾರೆ . ನಮ್ಮಲ್ಲಿ ಮಕ್ಕಳಲ್ಲಿ ಮತ್ತು ದೊಡ್ಡವರಲ್ಲಿ ಭೇದಿ ಹೆಚ್ಚಾಗಿ ವೈರಸ್ ನಿಂದ ಬರುವುದು .ಆದರೂ ಒಂದು ಭೇದಿ ಆದ ಒಡನೆ ಅಮೀಬಿಯಾಸಿಸ್ ಮತ್ತು ಬ್ಯಾಸಿಲ್ಲರಿ (ಬ್ಯಾಕ್ಟಿರಿಯಾ ದಿಂದ ಉಂಟಾಗುವ )ಗೆ ಇರುವ ಔಷಧಿ ಸೇವಿಸುತ್ತೇವೆ . ಇಲ್ಲಿ ಕೇವಲ ಜಲ ಮತ್ತು ಲವಣ ಪೂರಣ ಸಾಕು ಎಂದು ಗೊತ್ತಿದ್ದರೂ . ಒಂದು ದಿನದ ಜ್ವರಕ್ಕೆ ವೈ ಡಾಲ್  ಎಂಬ ಟೆಸ್ಟ್ ಮಾಡಿ  ಟೈಪೋಯ್ಡ್  ಗೆ ಎಂದು ಎರಡೆರಡು ಆಂಟಿಬಯೋಟಿಕ್ ತಿನ್ನುತ್ತೇವೆ . ಈ ಟೆಸ್ಟ್ ಬೇರೆ ಸಾಧಾರಣ ಕಾಯಿಲೆಗಳಲ್ಲಿಯೂ ಪಾಸಿಟಿವ್ ಇರುತ್ತದೆ ಮತ್ತು ಟೈಫಾಯಿಡ್ ನಿರ್ಧಾರಕ ಅಲ್ಲ .ನಾನು ಪುತ್ತೂರಿಗೆ ಬಂದು ಹತ್ತು ವರ್ಷದಲ್ಲಿ ಒಂದು ಟೈಫಾಯಿಡ್ ಕೇಸ್ ಮಾತ್ರ ನೋಡಿದ್ದು ಅದೂ ಕ್ಯಾಂಬೋಡಿಯಾ ಪ್ರವಾಸ ಮಾಡಿ ಬಂದ ವ್ಯಕ್ತಿಯಲ್ಲಿ . ಅನಾವಶ್ಯಕ ಔಷಧಿಗಳ ಸೇವನೆಯೂ ಅವಕಾಶ ವಾದಿ ಸೋಂಕಿಗೆ(ಉದಾ ಫಂಗಸ್ ) ಮತ್ತು ಆಂಟಿಬಯೊಟಿಕ್ ಗಳು ತಮ್ಮ  ಕ್ಷಮತೆ ಕಳೆದು ಕೊಳ್ಳಲು ಕಾರಣ ಆಗುತ್ತವೆ .

    ಸೋಂಕು ರೋಗಗಳನ್ನು ಪತ್ತೆ ಹಚ್ಚುವಲ್ಲಿ  ನಿರ್ಧಾರಕ (Definitive ) ಟೆಸ್ಟ್ ಗಳು ಎಂದು ಇವೆ .ಉದಾಹರಣೆಗೆ ಟೈಫಾಯಿಡ್ ನಲ್ಲಿ ಬ್ಲಡ್ ಕಲ್ಚರ್ ,ಕ್ಷಯ ರೋಗ ದಲ್ಲಿ ಕಫ ಪರೀಕ್ಷೆ ಮತ್ತು ಇತ್ತೀಚಿಗೆ ಪಿ ಸಿ ಆರ್ ಟೆಸ್ಟ್ ಗಳು .ಇಲ್ಲಿ  ಟೆಸ್ಟ್ ಸ್ಯಾಂಪಲ್ ಸಂಗ್ರಹ ,ಮಾಡುವ ವಿಧಾನ ಮತ್ತು ತಂತ್ರಜ್ಞರ ಪರಿಣತಿ ಮೇಲೆ ವರದಿ ಅವಲಂಬಿತ ವಾಗಿರುತ್ತದೆ .,ಇನ್ನು ಕೆಲವು ಟೆಸ್ಟ್ ಗಳು ಇವೆ ಅವು ರೋಗದ ಅಂದಾಜು ಟೆಸ್ಟ್ ಗಳು . ಉದಾ ಮೇಲೆ ಹೇಳಿದ ವೈಡಾಲ್ ,ವಿ ಡಿ ಆರ್ ಎಲ್ , ವೀಲ್ ಫೆಲಿಕ್ಸ್ ಇತ್ಯಾದಿ .ಇವು ರೋಗಾಣುಗಳ ವಿರುದ್ಧ ಶರೀರದಲ್ಲಿ ಉತ್ಪತ್ತಿ ಯಾಗುವ  ಪ್ರತಿ ವಿಷ (antibody )ಗಳನ್ನು ಗುರುತಿಸುವವು . ಉದಾಹರಣೆಗೆ ವಿ ಡಿ ಆರ್ ಎಲ್ ಎಂಬ ಟೆಸ್ಟ್ ಸಿಫಿಲಿಸ್ ಎಂಬ ಲೈಂಗಿಕ ರೋಗವನ್ನು ಪತ್ತೆ ಹಚ್ಚಲು ಮಾಡುವರು .ಆದರೆ ಅಪರೂಪಕ್ಕೆ ಇದು ಮಲೇರಿಯ ,ಕ್ಷಯ ದಂತಹ ರೋಗಗಳಲ್ಲಿಯೂ ಪಾಸಿಟಿವ್ ಇರ ಬಹುದು . ಇದಲ್ಲದೆ  ಈಗ ಕೆಲವು ಧಿಡೀರ್ ಪತ್ತೆ ಹಚ್ಚುವ ಕಾರ್ಡ್ ಟೆಸ್ಟ್ ಗಳು ಬಂದಿವೆ ,ಇವು ಕೆಲವೊಮ್ಮೆ ಇದ್ದ ಕಾಯಿಲೆಯನ್ನು ತೋರಿಸುವುದರಲ್ಲಿ ವಿಫಲ ಆಗ ಬಹುದು ,ಅಥವಾ ಇಲ್ಲದ ಕಾಯಿಲೆ ಇದೆ ಎಂದು ತೋರಿಸಲೂ ಬಹುದು . ಆಂಟಿಬಾಡಿ ಟೆಸ್ಟ್ ಮಾಡುವ ಟೆಸ್ಟ್ ಗಳು ಕಾಯಿಲೆ ವಾಸಿ ಆದ ಮೇಲೂ ಬಹು ಕಾಲ ಪಾಸಿಟಿವ್ ಆಗಿ ಉಳಿಯುತ್ತವೆ . ಆದ ಕಾರಣ ಇವುಗಳನ್ನು ಮಾತ್ರ ಅವಲಂಬಿಸಲು ಆಗದು .ನಮ್ಮ ಅನುಭವ ,ರೋಗ ಲಕ್ಷಣ ಮತ್ತು ಪರೀಕ್ಷೆ ಆದ ಮೇಲೆ ಪ್ರಯೋಗಾಲಯದ ಟೆಸ್ಟ್ ಗಳನ್ನು ಗಣನೆಗೆ ತೆಗೆದುಕೊಳ್ಳಬೇಕು . 

ಜನ ಸಾಮಾನ್ಯರು ಒಂದು ವಿಚಾರ ಗಮನಿಸ ಬೇಕು . ವೈದ್ಯರ ಜ್ಞಾನ ದ  ಹರವು ಹೆಚ್ಚಾದಂತೆ  ಅವರ ವಿನೀತ ಭಾವ ಹೆಚ್ಚುವುದು . ಮತ್ತು ಯಾವುದೇ ರೋಗವನ್ನು ರಿಪೋರ್ಟ್ ನೋಡಿ ಧಿಡೀರ್ ಡಯ ಗ್ನೋಸಿಸ್ ಮಾಡರು .ಮತ್ತು ಔಷಧಿ ಬರೆಯುವಾಗ ಹಲವು ಭಾರಿ ಯೋಚನೆ ಮಾಡುವರು .(ರೋಗಿ ಗರ್ಭಿಣಿಯೋ ,ಮಗುವಿಗೆ ಹಾಲು ಕುಡಿಸುವಳೋ ,ಸಕ್ಕರೆ ಕಾಯಿಲೆ ಇದೆಯೋ ,ಕಿಡ್ನಿ ,ಲಿವರ್ ಸಮಸ್ಯೆ ಇದೆಯೋ .ಇವರು ಈಗ ತೆಗೆದು ಕೊಳ್ಳುತ್ತಿರುವ ಔಷಧಿ ಗೂ ತಾನು ಬರೆಯುವ ಮದ್ದಿಗೂ ತಾಕಲಾಟ ಇದೆಯೋ ಇತ್ಯಾದಿ ).ಇವುಗಳ ಅರಿವು ಇಲ್ಲದವರು ಅತೀ ಆತ್ಮ ವಿಶ್ವಾಸ ದಿಂದ ಓಷಧಿ ಬರೆಯುವರು ,ಕಾಯಿಲೆಯೂ ಹೆಚ್ಚಾಗಿ ಟಂ  ಎಂದು ಗುಣವಾಗ ಬಹುದು . ಆದರೆ ನಿಮಗರಿವಿಲ್ಲದಂತೆ ನಿಮಗೆ ಅದರಿಂದ ಹಾನಿ ಆಗ ಬಹುದು . 

ಸೋಂಕು ರೋಗಗಳ ಅಧ್ಯಯನಕ್ಕೆ  ಪ್ರಾಮುಖ್ಯತೆ ಕೊಟ್ಟ ಹೆಮ್ಮೆಯ ಸಂಸ್ಥೆ ವೆಲ್ಲೋರ್ ನ  ಕ್ರಿಶ್ಚಿಯನ್ ಮೆಡಿಕಲ್ ಕಾಲೇಜು ಎನ್ನಬಹುದು .ಈಗ ಮಣಿಪಾಲದ ಕೆ ಎಂ ಸಿ ಯಲ್ಲಿಯೂ ಸೋಂಕು ರೋಗಗಳ ವಿಭಾಗ ತೆರೆದಿದ್ದಾರೆ .ಪುತ್ತೂರಿನ ವಿಕ್ಟರ್ಸ್  ಶಾಲೆಯ ಹಳೆ ವಿದ್ಯಾರ್ಥಿನಿ  ಪ್ರತಿಭಾವಂತೆ ವೈದ್ಯೆ ಡಾ ಕವಿತಾ ಸರವು ಅದರ  ಸ್ಥಾಪಕ ಪ್ರಧ್ಯಾಪಕಿ ಮತ್ತು ಮುಖ್ಯಸ್ಥೆ ಆಗಿದ್ದು ದೇಶ ವಿದೇಶ ಗಳಲ್ಲಿ ಹೆಸರು ಗಳಿಸಿರುವರು . 

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ