ಬೆಂಬಲಿಗರು

ಭಾನುವಾರ, ಮೇ 23, 2021

ರೋಗಕಾರಕ ಫಂಗಸ್ ಗಳು

 ರೋಗಕಾರಕ ಫಂಗಸ್(ಶಿಲೀಂದ್ರ) ಗಳು 

ಫಂಗಸ್ ಸೋಂಕು ಸಾಮಾನ್ಯ ,ವಿಶೇಷ ಏನೂ ಅಲ್ಲ . ನಾವೂ ಅವುಗಳು ಪರಸ್ಪರ ಸಹಯೋಗದಲ್ಲಿ ಬದುಕುತ್ತಿದ್ದೇವೆ .  ಚರ್ಮ ರೋಗಗಳಾದ ಸಿಬ್ಬ(Tenia versicolor) ಮತ್ತು ಉಗುರಿನ ಕೆಲ್ಲು(Onychomycosis) ಮತ್ತು ಮಳೆಗಾಲದಲ್ಲಿ ಕಾಲಿನ ಬೆರಳುಗಳ ನಡುವೆ ಬರುವ ನೀರು ಕಜ್ಜಿ ಎಲ್ಲವೂ ಫಂಗಸ್ ಗಳಿಂದ . ಹೆಚ್ಚಾಗಿ ಇವುಗಳ ಬಗ್ಗೆ ತಲೆ ಕೆಡಿಸಿ ಕೊಳ್ಳುವುದಿಲ್ಲ ಮತ್ತು ಚಿಕಿತ್ಸೆ ಮಾಡಿಸಲೂ ಹೋಗುವುದಿಲ್ಲ .                      
Onychomycosis - Dermatologic Disorders - MSD Manual Professional Edition

.

ಇತ್ತೀಚೆಗೆ ಕೋವಿಡ್ ಪರ್ವದಲ್ಲಿ ಕಪ್ಪು ಮತ್ತು ಬಿಳಿ ಫಂಗಸ್ ಎಂಬ ಹೆಸರು ಕೇಳಿ ಬರುತ್ತಿವೆ .ಯತಾರ್ಥದಲ್ಲಿ ಫಂಗಸ್ ಗಳಲ್ಲಿ ಈ ತರಹದ ವರ್ಣ ಭೇದ ಇಲ್ಲ .ಒಂದೊಂದು ವರ್ಗದ ಶಿಲೀಂದ್ರ ಉಂಟು ಮಾಡುವ ರೋಗದ ಪರಿಣಾಮ ಅಂಗಗಳಿಗೆ ಸ್ವಲ್ಪ  ಕಪ್ಪು ಅಥವಾ ಬಿಳಿ ಬಣ್ಣ ಬರ ಬಹುದು . ಅದರಿಂದ ವಾಡಿಕೆ ಯಲ್ಲಿ  ಬಂದ ಹೆಸರುಗಳು .

ಉದಾಹರಣೆಗೆ  ಕ್ಯಾಂಡಿಡಾ ಎಂಬ ಫಂಗಸ್ ಸೋಂಕಿನಿಂದ ಬಾಯಿ ಗಂಟಲು ಒಳಗೆ ಬಿಳಿ ಪೊರೆ ಉಂಟು ಮಾಡಬಲ್ಲುದು .ಅದೇ ರೀತಿ ಮ್ಯೂಕೋರ್ ಮೈಸಿಟೀಸ್ ಎಂಬ ಶೀಲಿಂದ್ರ  ಮೂಗು ಕಣ್ಣು ಬಾಯಿಗಳಲ್ಲಿ  ಸೋಂಕಿನಿಂದ ಚರ್ಮ ಕಂದು ಅಥವಾ ಕಪ್ಪು ಬಣ್ಣಕ್ಕೆ ತಿರುಗುವಂತೆ ಮಾಡ ಬಹುದು . 

 ಅವಕಾಶವಾದಿ ರೋಗಾಣುಗಳು ಎಂಬ ಪ್ರಭೇಧ  ಇದೆ  .(Opportunistic Pathogens ). ಈ ಫಂಗಸ್ ಗಳೂ ಅದೇ ಜಾತಿಗೆ ಸೇರಿದವು .ನಮ್ಮ ಮನುಷ್ಯರಲ್ಲಿಯೂ  ಬಹಳ ಮಂದಿ ಇದೇ ವರ್ಗಕ್ಕೆ ಸೇರಿದವರು ಇದ್ದೇವೆ .ನೀವು ಕೋವಿಡ್ ಸಾಂಕ್ರಾಮಿಕ ಕಾಲದಲ್ಲಿ ತಮ್ಮ ಬೇಳೆ ಬೇಯಿಸಿ ಕೊಳ್ಳುವ ಅನೇಕರನ್ನು ನೋಡಿದ್ದೀರಿ . ಮೇಲ್ನೋಟಕ್ಕೆ ಸುಭಗ ಸಂಭಾವಿತರಾದ ಇವರು ಸಮಯ ಸಿಕ್ಕಾಗ ಅರಿವಿಲ್ಲದಂತೆಯೇ ಧಾಳಿ ಮಾಡುವರು . ಅವಕಾಶ ನೋಡಿ ವೈರಿಯ ಮೇಲೆ ಆಕ್ರಮಣ ಮಾಡುವದು ಮಹಾಭಾರತ ಯುದ್ಧದಲ್ಲಿಯೂ ಕಂಡಿದ್ದೇವೆ . ಉದಾ ಕರ್ಣನ ರಥ ಮುರಿದು ಬಿದ್ದಾಗ .

ನಮ್ಮ ಅರೋಗ್ಯ ಸರಾಸರಿ ಒಳ್ಳೆಯ ಮಟ್ಟದಲ್ಲಿ ಇದ್ದರೆ ಅವಕಾಶವಾದಿ ಸೋಂಕುಗಳಿಗೆ ಶರೀರ ಅವಕಾಶ ಕೊಡುವುದಿಲ್ಲ .ಕೊಟ್ಟರೂ ತೀವ್ರತರ ಇರಲಾರದು . ಆದರೆ ಹತೋಟಿ ತಪ್ಪಿದ ಸಕ್ಕರೆ ಕಾಯಿಲೆ ,ಕ್ಯಾನ್ಸರ್ ರೋಗ ಮತ್ತು ಅದರ ಚಿಕಿತ್ಸೆ ಮತ್ತು ಈಗ ಕೋವಿಡ್ ನಂತಹ ಸೋಂಕಿನಿಂದ ರೋಗ ನಿರೋಧಕ ಶಕ್ತಿ ಕುಂದಿರುವಾಗ ಇವು ತಮ್ಮ ರೋಗ ಕಾರಕ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆ ನಿರ್ಮಾಣವಾಗುತ್ತದೆ . ಹಲವರಲ್ಲಿ  ಸಕ್ಕರೆ ಕಾಯಿಲೆಯ ಆರಂಭವೇ ಜನನಾಂಗಗಳ  ಕ್ಯಾಂಡಿಡಾ (ಬಿಳಿ ಫಂಗಸ್ )ಸೋಂಕಿನಿಂದ ಕಂಡು ಹಿಡಿಯಲ್ಪಡುತ್ತದೆ .

 Thrush | medicine | Britannica

Black fungus (COVID-19 condition) - Wikipedia


Mucormycosis - EyeWiki

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ