ಬೆಂಬಲಿಗರು

ಬುಧವಾರ, ಡಿಸೆಂಬರ್ 9, 2020

ಮರ್ಯಾದಾ ಪುರುಷೋತ್ತಮರು

ನಮ್ಮಲ್ಲಿ ಜನರಲ್ಲಿ ಒಂದು ಮನಃ ಸ್ಥಿತಿ ಬೆಳೆದು ಬಂದಿದೆ .ಕೆಲವು ವಿಚಾರಗಳು ನಮ್ಮ ಮರ್ಯಾದೆಗೆ ಅಂತಸ್ತಿಗೆ ಕಮ್ಮಿ .ಕೆಲವನ್ನು ವಿಶ್ಲೇಷಿಸೋಣ . 

ಒಂದನೆಯದು ಮತ್ತು ಆರೋಗ್ಯದ ದೃಷ್ಟಿಯಿಂದ ಬಲು ಮುಖ್ಯವಾದದ್ದು .ನಡೆಯುವುದು ನಮ್ಮ ಮರ್ಯಾದೆಗೆ ಕಮ್ಮಿ .ಎಷ್ಟು ಸಮೀಪ ಹೋಗುವುದಿದ್ದರೂ ವಾಹನ ಅದೂ ದೊಡ್ಡ ವಾಹನದಲ್ಲಿಯೇ ಹೋಗಬೇಕು .ಸ್ಥಿತಿವಂತರು  ಮಕ್ಕಳಲ್ಲೇ ಈ ಭಾವನೆ ಬಿತ್ತಿ ಬಿಡುತ್ತಾರೆ .ಸಣ್ಣ ಮಕ್ಕಳು ಮನೆಯ ಮೆಟ್ಟಲಿನಿಂದ ಶಾಲೆ ಬಾಗಿಲ ವರೆಗೆ ವಾಹನದಲ್ಲಿಯೇ ಹೋಗಬೇಕು .ನಡೆದಾಡಲು ಒಳ್ಳೆಯ ದಾರಿ ಇದ್ದರೂ .ಇದರಿಂದ ಒಂದು ಉತ್ತಮ  ಶಾರೀರಿಕ ವ್ಯಾಯಾಮ ತಪ್ಪುವುದು ಅಲ್ಲದೆ ಮಕ್ಕಳು ಒಟ್ಟಾಗಿ ತಮಾಷೆ ಮಾಡಿಕೊಂಡು ,ಪ್ರಕೃತಿಯನ್ನು ಆಸ್ವಾದಿಸಿಕೊಂಡು ನಡೆವಾಗ  ಎಳೆ ಮನಸುಗಳ ಅರೋಗ್ಯ ಅರಳುವಿಕೆ  ಇಲ್ಲದಾಗುವುದು  .ಹಳ್ಳಿಯ ಮಕ್ಕಳು ಹೊಲ ಗುಡ್ಡ ಬೆಟ್ಟಗಳಲ್ಲಿ ನಡೆದು ಹೋಗುವಾಗ ನಿಸರ್ಗವೇ ಒಂದು ಪಾಠ ಶಾಲೆಯಾಗಿ ತಮ್ಮ ಅರಿವಿಲ್ಲದೆಯೇ ಮಕ್ಕಳು ಹಲ ವಿಷಯಗಳನ್ನು ಕಲಿಯುವರು .ಶಾಲೆಯಿಂದ ಮನೆಗೆ ಬರುವಾಗ ಕಲಿಕಾ ಸಮಯದಲ್ಲಿ ಉಂಟಾದ ಉದ್ವೇಗ ಶಮನ ಆಗುವುದು .ಅಪ್ಪನಿಗೆ ಮಗನು  (ಅಥವಾ ಅಮ್ಮನಿಗೆ )ಎಲ್ಲರಂತೆ ಗೆಳೆಯರೊಡನೆ ನಡೆದೇ ಹೋಗಲಿ ಎಂದು ಇದ್ದರೂ ಅಮ್ಮ ಯಾರ್ಯಾರ (?)ಮಕ್ಕಳು ಕಾರಿನಲ್ಲಿ ಬರುತ್ತಾರೆ ಡಾಕ್ಟ್ರ ಮಗನಾಗಿ ನಮ್ಮ ಕಂದ  ಯಾಕೆ ನಡೆಯಬೇಕು ಎಂದು ಅಮ್ಮ (ಅಪ್ಪ) ಪಾಯಿಂಟ್ ತೆಗೆಯುವಳು . 

ನಾನೇ  ಪೇಟೆಯಲ್ಲಿ ಏನಾದರೂ ಕೆಲಸ ಇದ್ದರೆ  ನಡೆದು ಕೊಂಡು ಹೋಗುವಾಗ ಬಹಳಷ್ಟು ನನ್ನ ಹಿತೈಷಿಗಳು ಡಾಕ್ಟ್ರೆ  ಕಾರು ಏನಾಯಿತು ?ಎಂದು ಕೇಳೇ ಕೇಳುವರು  ಮತ್ತು ಇವರಲ್ಲಿ ಬಹಳ ಮಂದಿ "ಪಾಪ ಪ್ರಾಕ್ಟೀಸ್ ಕಮ್ಮಿ ಇರಬೇಕು ಎಂದು ಮನದೊಳಗೇ  ಕನಿಕರ ಪಡುವರು ..ಸ್ಥಿತಿವಂತರು ನಡೆದು ಕೊಂಡು ಹೋಗ ಬಾರದು .ಕೈಯಲ್ಲಿ ಕೈಚೀಲ ಕೊಂಡು ಹೋಗುವುದೂ ಮರ್ಯಾದೆಗೆ ಕಮ್ಮಿ ..ಒಂದು ವೇಳೆ ಅವರು ನಡೆಯುವುದು ಕಂಡರೆ ಕಂಜೂಸ್ ಆಸಾಮಿ ಎಂದು ಗೊಣಗುವರು . 

ಎರಡನೆಯದು ಸಭೆ ಸಮಾರಂಭಗಳಿಗೆ  ಸಮಯಕ್ಕೆ ಸರಿಯಾಗಿ ಹೋಗುವುದು .ನೀವೇ ನೋಡಿ ಮದುವೆ  ಇತ್ಯಾದಿ ಸಮಾರಂಭಗಳಿಗೆ ಊಟಕ್ಕೆ ಸರಿಯಾಗಿ ಶೇಕಡಾ ೮೦ ಅತಿಥಿ ಗಳೂ ಬರುವರು .ಘನ  ವ್ಯಕ್ತಿಗಳು ಮೊದಲೇ ಬರಲಾರರು .ಒಮ್ಮೆ ನಾನು ಬಂಧುಗಳ ಮನೆಯ ಮದುವೆ  ಎಂದು ಬೇಗನೆ ಹೋದರೆ ಎಲ್ಲರೂ ಡಾಕ್ಟ್ರೇ ಆಸ್ಪತ್ರೆಯಲ್ಲಿ ರೋಗಿಗಳು ಕಮ್ಮಿ ಎಂದು ತೋರುತ್ತದೆ ಎಂದು ಕನಿಕರ ತೋರಿಸ ತೊಡಗಿದರು .ಸಭೆಗಳೂ ಇದಕ್ಕೆ ಹೊರತಲ್ಲ .ಯಾಕೆಂದರೆ ನಾವೇ ಸೃಷ್ಟಿಸಿದ ಮರ್ಯಾದೆಯ ಅಳತೆ ಗೋಲು ಇದೆಯಲ್ಲ 

ಇನ್ನೊಂದು ಮರ್ಯಾದೆಯ ಕೊರತೆ ಬರುವುದು ಶ್ರಮ ಜೀವಕ್ಕೆ .ಮನೆ ಕೆಲಸ ಉದಾ  ಗುಡಿಸುವುದು ,ಅಂಗಳದ ಕೆಲಸ ,ಮನೆಗೆ ಸಾಮಾನು ಹೊರುವುದು ಇತ್ಯಾದಿ ನಾವೇ ಮಾಡುವುದು ಮರ್ಯಾದಸ್ತರಿಗೆ  ಹೇಳಿದ್ದಲ್ಲ .ಇದನ್ನೂ  ಎಳವೆಯಲ್ಲೇ ನಾವು ಮನಸಿಗೆ ಹೊಗ್ಗಿಸಿ ಬಿಡುತ್ತೇವೆ . 

ಮಾತೃಭಾಷೆಯಲ್ಲಿ ಮಾತನಾಡುವುದು ಅಂತಸ್ತಿಗೆ ಕಡಿಮೆ ಎಂಬ ಭಾವನೆ ವ್ಯಾಪಕವಾಗಿದೆ .ಆಸ್ಪತ್ರೆಯಲ್ಲಿ ಈಗಿನ ಯುವ ಜನಾಂಗ ದ ಬಳಿ ನಾನು ತುಳು ಅಥವಾ ಕನ್ನಡದಲ್ಲಿ ಮಾತನಾಡಿದರೆ ಉತ್ತರ ಬರುವುದು ಆಂಗ್ಲ ಭಾಷೆಯಲ್ಲಿ

ಇಂತಹ ಮರ್ಯಾದೆಗೆ ಕಮ್ಮಿ ಇರುವ ಎಷ್ಟೋ ವಿಚಾರ ನಿಮ್ಮ ಗಮನಕ್ಕೆ ಬಂದಿರ ಬಹುದು .ಉದಾ ಬಸ್ಸಿನಲ್ಲಿ ಹೋಗುವುದು ,ಹೋಟೆಲ್ ನಲ್ಲಿ ಎ ಸಿ ಕೋಣೆಯ  ಹೊರಗೆ ಕುಳಿತು ತಿನ್ನುವುದು ಇತ್ಯಾದಿ 

ಬಾಲಂಗೋಚಿ : ಮಂಗಳೂರಿನಲ್ಲಿ ಒಬ್ಬರು ಪ್ರಸಿದ್ಧ ರೇಡಿಯೊಲೊಜಿಸ್ಟ್ ವೈದ್ಯರು ಇದ್ದಾರೆ .ಸಾಕಷ್ಟು ಸ್ಥಿತಿವಂತರು .ದಾನ ಧರ್ಮ  ಮಾಡುವವವರು .ಅವರು ಬೇಕಾದರೆ ತಮ್ಮ ಮಗನಿಗೆ ಬೆಂಜ್ ಕಾರು ಕೊಡಿಸ ಬಲ್ಲರು .ಆದರೂ ಎಂ ಬಿ ಬಿ ಎಸ ಆಗುವಲ್ಲಿ ವರೆಗೆ ಅವನನ್ನು ಮನೆಯಿಂದ ಸಾಮಾನ್ಯ ಮಕ್ಕಳಂತೆ ನಡೆಸಿ ,ಕಾಲೇಜು ಬಸ್ ನಲ್ಲಿ ಕಳುಹಿಸುತ್ತಿದ್ದರು .ಆ  ಹುಡುಗ ಕೂಡ ಸರಳತೆ ಮೈಗೂಡಿಸಿ ಕೊಂಡು ಸ್ಪೆಷಲಿಸ್ಟ್ ವೈದ್ಯ ಆಗಿರುವನು .(ನನ್ನ ಶಿಷ್ಯ )

1 ಕಾಮೆಂಟ್‌:

  1. The problem is of appreciation of values across time; is it also possible that we don't look from their point of view? But ultimately with limited natural sources it is definite that we will shortly reach a stage of exhaustion of such resources!

    ಪ್ರತ್ಯುತ್ತರಅಳಿಸಿ