ಬೆಂಬಲಿಗರು

ಬುಧವಾರ, ಡಿಸೆಂಬರ್ 23, 2020

ನೋವು ವರವೋ ಶಾಪವೊ ?

        ನೋವು ವರವೋ ಶಾಪವೋ ?

ಅಂತರ ರಾಷ್ಟೀಯ ನೋವು ಅಧ್ಯಯನ ತಜ್ಞರ ವ್ಯಾಖ್ಯೆ ಯ ಪ್ರಕಾರ "ನೋವು ಎಂದರೆ ಜೀವಕೋಶಗಳಿಗೆ ನೈಜ ,ಪ್ರಚ್ಚನ್ನ ಹಾನಿ ಅಥವಾ ಕಲ್ಪಿತ ಹಾನಿಯಿಂದ ಉಂಟಾಗುವ    ಅಹಿತಕರ ಸಂವೇದನಾ  ಮತ್ತು ಭಾವನಾತ್ಮಕ ಅನುಭವ ,"

ಈ ವ್ಯಾಖ್ಯೆ ಓದಿ ತಲೆ ನೋವು ಬಂದಿತೋ ?

ನಮ್ಮ ಶರೀರದಾತ್ಯಂತ ನೋವಿನ  ಸೆನ್ಸಾರ್ ಗಳು ಇವೆ .ಇವು ನೋವು ಉಂಟು ಮಾಡುವ ಕ್ರಿಯೆಯನ್ನು ಗ್ರಹಿಸಿ ನರಗಳ ಮೂಲಕ (ಅವಯವಗಳಿಂದ ಬೆನ್ನು ಹುರಿಯ ಮೂಲಕ ,ಮುಖದಿಂದ ನೇರವಾಗಿ )ಮೆದುಳಿಗೆ ರವಾನಿಸುತ್ತವೆ .ಅಲ್ಲಿ ಬಂದ ಸಂದೇಶದ ವಿಶ್ಲೇಷಣೆ ಆಗಿ ನೋವಿನ ಅರಿವಾಗಿ ,ರಕ್ಷಣಾ ಕಾರ್ಯಕ್ಕೆ ಆದೇಶ ಹೋಗುವುದು . 

ನೋವಿನಲ್ಲಿ ಸ್ಥೂಲ ವಾಗಿ ನಾಲ್ಕು ಪ್ರಬೇಧಗಳು . 

೧.  ಗಾಯದಿಂದ ಆದ  ನೋವು 

೨  ಗಾಯ ,ಏಟು ,ಸೋಂಕು ,ಸ್ವಯಮ್ ನಿರೋಧಕ (autoimmune )ಪ್ರತಿಯಾಗಿಅಂಗಗಳಲ್ಲಿ ಆಗುವ ಉರಿಯೂತದ (inflammation )ನೋವು .ಉದಾ ಅಪ್ಪೆಂಡಿಸೈಟಿಸ್ ,ರುಮಟಾಯ್ಡ್ ಆರ್ಥ್ರೈಟಿಸ್ ,ಕೈಕಾಲಿನ ಗಾಯ  ಸೋಂಕು (ಇನ್ಫೆಕ್ಷನ್)

೩.  ಸ್ಪರ್ಶ ವಾಹಕ ನರಗಳಿಗೇ  ಕಾಯಿಲೆ ಉದಾ ಡಯಾಬಿಟಿಕ್ ನ್ಯೂರೋಪತಿ ,ನರ ಕೋಟಲೆ (ಸರ್ಪಸುತ್ತು ). 

೪ ವಿನಾ(ಕಾರಣ  ಕಂಡು ಹಿಡಿಯಲಾಗದ )ಕಾರಣ ನೋವು . ಉದಾ ಮನಸಿನ ಉದ್ವೇಗ

ನೋವು ನಮಗೆ ವರ .ಉದಾಹಣೆಗೆ ಸಕ್ಕರೆ ಕಾಯಿಲೆ ಇರುವ ಕೆಲವರಲ್ಲಿ ನೋವು ವಾಹಕಗಳು ನಿಷ್ಕ್ರಿಯ ವಾಗಿರುತ್ತವೆ .ಅವರು ಕಾಲಿಗೆ ಗಾಯ ವಾದರೆ ನೋವು ಇರದ ಕಾರಣ ನಿರ್ಲಕ್ಷ್ಯ ಮಾಡಿ ಕೂಡಲೇ ಚಿಕಿತ್ಸೆ ಮಾಡಲುಹೋಗರು .ಇದರಿಂದ ಸೋಂಕು ಅವರ ಅರಿವಿಲ್ಲದೇ  ಉಲ್ಬಣಿಸಿ ಕಾಲಿಗೆ ಮತ್ತು ಕೆಲವೊಮ್ಮೆ ಜೀವಕ್ಕೆ ಸಂಚಕಾರ ಬರ ಬಹುದು .ಇದೇ  ರೀತಿ ಹೃದಯಾಘಾತ ಆದಾಗ ಇಂತಹವರಿಗೆ ಎದೆ ನೋವು ಇರದು ..ಕಾರಣ  ಗಂಭೀರತೆ ಗಮನಕ್ಕೆ ಬಾರದೆ ತೊಂದರೆ ಆಗುವುದು . 

ಇನ್ನು ಹೆರಿಗೆ ನೋವನ್ನೇ ತೆಗೆದು ಕೊಳ್ಳೋಣ .ಒಂದು ವೇಳೆ ಈ ನೋವು ಇಲ್ಲದಿದ್ದರೆ 

ಹೆರಿಗೆ ಯ ಮುನ್ಸೂಚನೆ ಇರುತ್ತಿರಲಿಲ್ಲ .ನೋವು ಆರಂಭ ಆದೊಡನೆ ಸುರಕ್ಷಿತ ತಾಣ ,ಬೇಕಾದ ಪರಿಕರಗಳ ಜೋಡಣೆ ಮಾಡುವುದರಿಂದ ತಾಯಿ ಮಗು ಆರೋಗ್ಯವಾಗಿ ಇರುವರು .ಕೆಲವೊಮ್ಮೆ ನೋವಿಲ್ಲದೇ  ಕ್ಷಣ ಮಾತ್ರದಲ್ಲಿ ಬಾತ್ರೂಮ್ ನಲ್ಲೋ ದಾರಿಯಲ್ಲೋ ಹೆರಿಗೆ ಆದ  ವಾರ್ತೆ ನೀವು ಓದಿರಬೇಕು . 

ಒಳ ಅಂಗಗಳಿಗೆ ಸೋಂಕು ಆದಾಗ ನೋವು ಬಂದರೆ ಮಾತ್ರ ನಮಗೆ ತಿಳಿಯುವುದು .ಉದಾ ಅಪ್ಪೆಂಡಿಸಿಟಿಸ್ ,ಪಿತ್ತ ಕೋಶದ ಸೋಂಕು ಇತ್ಯಾದಿ . 

ಮೂತ್ರ ಪಿಂಡದ ಕಲ್ಲು ಕೆಳಗೆ ಜಾರಿ ಹೊರ ಹೋಗುವಾಗ ನೋವು ಬರುವುದು (ಹೆರಿಗೆ ನೋವಿನಂತೆ ).ಕೆಲವು ಕಲ್ಲುಗಳು ಮೂತ್ರ ಪಿಂಡದ ಒಳಗೇ ವೇದನಾ ರಹಿತ ವಾಗಿ ಬೆಳೆದು ಈ ಅಂಗಕ್ಕೇ  ಸರಿಪಡಿಸಲಾಗದ ಹಾನಿ  ಮಾಡುವವು . 

ನೋವು ಉಂಟು ಮಾಡದೇ ಬೆಳೆವ ಗಡ್ಡೆಗಳು  ಉಂಟುಮಾಡುವ ಗಡ್ಡೆಗಳಿಗಿಂತ ಹೆಚ್ಚು ಅಪಾಯಕಾರಿ ಅದೇ ರೀತ ವೇದನಾರಹಿತ ಗಾಯ,ಹುಣ್ಣುಗಳೂ.

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ