ಬೆಂಬಲಿಗರು

ಶುಕ್ರವಾರ, ಡಿಸೆಂಬರ್ 11, 2020

ಮೈಸೂರು ದಿನಗಳು

                                        ಮೈಸೂರು ದಿನಗಳು 

 

                             
Railway Hospital launches vaccination campaign - Star of Mysore

ರೈಲ್ವೇ ಆರೋಗ್ಯ ಸೇವೆಯಲ್ಲಿ ಅಸಿಸ್ಟೆಂಟ್ ಡಿವಿಷನಲ್ ಮೆಡಿಕಲ್ ಆಫೀಸರ್  ಆಗಿ ನಾನು 1.9.1984 ರಂದು ಚೆನ್ನೈ ದಕ್ಷಿಣ ರೈಲ್ವೇ ಮುಖ್ಯ ಕಚೇರಿಯಲ್ಲಿ ರಿಪೋರ್ಟ್ ಮಾಡಿದೆನು .ಚೆನ್ನೈ ಸೆಂಟ್ರಲ್ ರೈಲ್ವೇ ಸ್ಟೇಷನ್ ನ ಪೂರ್ವಕ್ಕೆ ಒತ್ತಿ ಕೊಂಡು ಇರುವ ರಾಜ ಗಾಂಭೀರ್ಯದ ಕಟ್ಟಡ .ಉದ್ಯಾನಗಳ ಸುಳಿವು ಇಲ್ಲದಿದ್ದರೂ ಪಾರ್ಕ್ ಟೌನ್ ಎಂಬ ಸ್ಥಳ ನಾಮ .ಎದುರು ಗಡೆ ಮದ್ರಾಸ್ ಮೆಡಿಕಲ್ ಕಾಲೇಜ್ ನ ಬೃಹತ್ ಕ್ಯಾಂಪಸ್ .ಪರ್ಸನಲ್ ಆಫೀಸರ್ ಎದುರು ಸತ್ಯ ಮತ್ತು ಗೋಪ್ಯತೆಯ ಪ್ರಮಾಣ ವಚನ ಮಾಡಿಸಿದರು .ಆ ಕಚೇರಿಯಲ್ಲಿ ಸಕ್ಕೂ ಬಾಯಿ ಎಂಬವರು ವೈದ್ಯಕೀಯ ವಿಭಾಗ ನೋಡಿಕೊಳ್ಳುತ್ತಿದ್ದು ನಗು ಮುಖ ಮತ್ತು ಮೃದು ಭಾಷಿ .ಸಹಾಯಕ್ಕೆ ಯಾವಾಗಲೂ ಸಿದ್ದ ಹಸ್ತ .ಅವರು ನನ್ನನ್ನು ಮುಖ್ಯ ವೈದ್ಯಾಧಿಕಾರಿ ಡಾ ಸರ್ಕಾರ್ ಅವರ ಕಚೇರಿಗೆ ಕೊಂಡೊಯ್ದು ಅವರ ಸಲಹೆಯಂತೆ ನನ್ನನ್ನು ಮೈಸೂರು ವಿಭಾಗದ ರೈಲ್ವೇ ಆಸ್ಪತ್ರೆಗೆ ನೇಮಕಾತಿ ಮಾಡಿದ ಆದೇಶ ಮತ್ತು ಮೈಸೂರಿಗೆ ಹೋಗಲು ಫಸ್ಟ್ ಕ್ಲಾಸ್ ರೈಲ್ವೇ ಪಾಸ್ ಕೊಡಿಸಿದರು .ಕರ್ನಾಟಕ ದಲ್ಲಿ ಅದೂ ಮೈಸೂರು ದೊರಕಿದ್ದಕ್ಕೆ ಸಂತೋಷ ಆಯಿತು .ಮೈಸೂರಿಗೆ ರೈಲ್ವೇ ಟಿಕೆಟ್ ಬುಕ್ ಮಾಡಲು ಬಂದರೆ ಎಲ್ಲಾ ಫುಲ್ ಆಗಿತ್ತು .ಪಾಸ್ ಇದ್ದವರೂ ಟಿಕೆಟ್ ಕೊಳ್ಳ ಬೇಕು ,ಹಣ ಕೊಡಲು ಇಲ್ಲ .ಎಮರ್ಜೆನ್ಸೀ ಕೋಟಾ ಬಗ್ಗೆ ನನಗೆ ಅರಿವು ಇರಲಿಲ್ಲ .ಆದ ಕಾರಣ ಮೈಸೂರಿಗೆ ಬಸ್ ನಲ್ಲಿಯೇ ಪ್ರಯಾಣ ಮಾಡಿ ಒಂದು ಸಣ್ಣ ಹೊಟೇಲ್ ನಲ್ಲಿ ರೂಂ ಮಾಡಿದೆನು .

ಮೈಸೂರಿನಲ್ಲಿ ಒಂಟಿಕೊಪ್ಪಲು ಎಂಬ ಸುಂದರ ಪ್ರಶಾಂತ ತಾಣದ ವಿಶಾಲ ಅಂಗಣದಲ್ಲಿ  ರೈಲ್ವೇ ಆಸ್ಪತ್ರೆ ಇದೆ .ಪಕ್ಕದಲ್ಲಿ ಮೈಸೂರು ಆಕಾಶವಾಣಿ ಕೇಂದ್ರ .ಹಿಂದುಗಡೆ ಜಾವಾ ಮೋಟಾರ್ ಸೈಕಲ್ ಕಾರಖಾನೆ .ರೈಲ್ವೇ ಅಧಿಕಾರಿಗಳ ವಸತಿ ಗೃಹಗಳು ಸುತ್ತ ಮುತ್ತ .ಈ ವಸತಿ ಗೃಹಗಳು ವಿಶಾಲವಾದ ಕಾಂಪೌಂಡ್ ಹೊಂದಿದ್ದು , ಹಳೇ ಕಾಲದ ದೊಡ್ಡ ಮನೆಗಳು .ಸ್ವಲ್ಪ ಹಿಂದುಗಡೆ ಹೋದರೆ ದಾಸ್ ಪ್ರಕಾಶ್ ಪ್ಯಾರಡೈಸ್ ಹೋಟೆಲ್ ,ಅದರ ಎದುರು ಗಡೆ  ಲೇಖಕ ಆರ್ ಕೆ ನಾರಾಯಣನ್ ಮನೆ 

ಆಸ್ಪತ್ರೆಯಲ್ಲಿ ಮೈಸೂರು ವಿಭಾಗದ ವೈದ್ಯಕೀಯ ಸೇವೆಯ ಮುಖ್ಯಾಧಿಕಾರಿ ಡಾ ಸೆಲಿನ್ ಲೋಬೊ ಮತ್ತು ಆಸ್ಪತ್ರೆಯ ಮುಖ್ಯಸ್ಥ ರಾಗಿ ಡಾ ಗೋಪಾಲ ಕೃಷ್ಣ ಎಂಬವರು ಇದ್ದರು.ಮೈಸೂರು ವಿಭಾಗದಲ್ಲಿ ಒಂಟಿ ಕೊಪ್ಪಲು ಆಸ್ಪತ್ರೆ ,ಮೈಸೂರು ಅಶೋಕನಗರ  ಆಸ್ಪತ್ರೆ ,ಪುತ್ತೂಆರು(ಕಬಕ ಪುತ್ತೂರ್ ),ಸಕಲೆಶಪುರ ,ಅರಸೀಕೆರೆ ಮತ್ತು  ಹರಿಹರ ಆರೋಗ್ಯ ಕೇಂದ್ರಗಳು ಇದ್ದವು .ಡಾ ಗೋಪಾಲಕೃಷ್ಣ ಹಳೆಯ ಎಲ್ ಎಂ ಪಿ ಪದವೀದರರು ,ಸಜ್ಜನರು .ನನಗೆ ಕೆಲಸ ಪರಿಚಯ ಮಾಡಿ ಕೊಡುವ ಮೊದಲೇ ನಾನು ಹೊಟೇಲ್ ನಲ್ಲಿ ತಂಗಿರುವ ವಿಚಾರ ತಿಳಿದು ಕೂಡಲೇ ಮೈಸೂರು ರೈಲ್ವೇ ನಿಲ್ದಾಣ ಮುಖ್ಯಸ್ತರಿಗೆ ಫೋನ್ ಮಾಡಿ (ರೈಲ್ವೇ ಗೆ ತನ್ನದೇ ಆದ ಫೋನ್ ನೆಟ್ವರ್ಕ್ ಇದೆ )ಅಧಿಕಾರಿಗಳ ವಿಶ್ರಾಂತಿ ಕೊನೆಯಲ್ಲಿ ತತ್ಕಾಲ ಇರುವ ವ್ಯವಷ್ಟೆ ಮಾಡಿದರು .ಮತ್ತು ಊಟಕ್ಕೆ ಮಧ್ಯಾಹ್ನ ಸಿ ಎಫ್ ಟಿ ಆರ್ ಐ ಕಾಂಟೀನ್ (ಆಸ್ಪತ್ರೆಯಿಂದ ಅನತಿ ದೂರದಲ್ಲಿ ಇದೆ )ಮತ್ತು ರಾತ್ರಿ ಮೈಸೂರು ಮೆಡಿಕಲ್ ಕಾಲೇಜ್ ಕಾಂಟೀನ್ ಅಥವಾ ಮರಿ ಮಲ್ಲಪ್ಪ ಶಾಲೆಯ ಕಾಂಟೀನ್ ಗೆ ಹೋಗುವಂತೆ ತಾಕೀತು ಮಾಡಿದರು .ಪಾಪ ಹುಡುಗ ಸ್ವಲ್ಪ ಹಣ ಉಳಿಯಲಿ ಮತ್ತು ಒಳ್ಳೆಯ ಆಹಾರ ಸಿಗಲಿ ಎಂಬ ಕಾಳಜಿ .ಈಗ ಇಂಥವರು ಸಿಗಲಾರರು .

ರೈಲ್ವೆ ಲಕ್ಷಾಂತರ ಜನರಿಗೆ ಉದ್ಯೋಗ ಒದಗಿಸುವ ಕೇಂದ್ರ ಸರಕಾರದ ದೊಡ್ಡ ಇಲಾಖೆ .ಇದರಲ್ಲಿ ಸಾವಿರಾರು ಹುದ್ದೆಗಳು ..ಮೈಸೂರು ವಿಭಾಗ ದಕ್ಷಿಣ ರೈಲ್ವೆ ಜೋನ್ ನಲ್ಲಿ ಇತ್ತು .ಮೈಸೂರು ವಿಭಾಗಕ್ಕೆ ಡಿವಿಶನಲ್ ರೈಲ್ವೆ ಮ್ಯಾನೇಜರ್ (DRM )ಮುಖ್ಯಸ್ಥರು .ಟ್ರಾಫಿಕ್ ,ಆಪರೇಷನ್ ,ಮೆಕ್ಯಾನಿಕಲ್ ,ಎಲೆಕ್ರ್ಟಿಕಲ್ ,ಕಮರ್ಷಿಯಲ್ ,ಪರ್ಸನಲ್ ,ಸಿಗ್ನಲ್ ಅಂಡ್ ಕಮ್ಯುನಿಕೇಷನ್ ,ಅಕೌಂಟ್ಸ್ ,ಸ್ಟೋರ್ಸ್,ಪ್ರೊಟೆಕ್ಷನ್ ಫೋರ್ಸ್ ಮತ್ತು ಕೊನೆಗೆ ವೈದ್ಯಕೀಯ ವಿಭಾಗ .ಅದಕ್ಕೆಲ್ಲಾ ತುಂಡರಸು  ಮುಖ್ಯಸ್ಥರು ..ಡಿ ಆರ್  ಎಂ ಗೆ ಅತೀವ ಅಧಿಕಾರಗಳು ಇದ್ದವು .ಅತ್ಯಂತ ದೊಡ್ಡ ವಸತಿ ಗೃಹ ,ನೌಕರರು ,ಅವರಿಗೆ ರೈಲ್ವೆ ಯಲ್ಲಿ ಸಂಚರಿಸಲು ಪ್ರತ್ಯೇಕ ಸರ್ವ ಸೌಕರ್ಯ ಇರುವ ಕೋಚ್ ಸೌಕರ್ಯ .ಅವರು ಇನ್ಸ್ಪೆಕ್ಷನ್ ಗೆ ಹೋಗುವಾಗ ಹಿಂದೆ ಮುಂದೆ ಅಧಿಕಾರಿಗಳು ,ರಕ್ಷಣಾ ಸಿಬ್ಬಂದಿ .ಎಲ್ಲಾ ಸರಕಾರಿ ಇಲಾಖೆಗಳಂತೆ ಇನ್ಸ್ಪೆಕ್ಷನ್ ಪ್ರಹಸನ ಇಲ್ಲಿಯೂ ನಡೆಯುವುದು .ದೊಡ್ಡವರು ಬರುವ ದಿನ ಎಲ್ಲವೂ ಅಚ್ಚು ಕಟ್ಟು ,ಸ್ವಚ್ಛ .ಅಧೀನ ಅಧಿಕಾರಿಗಳು ಎಲ್ಲಾ ಸರಿ ಇವೆ ಎಂದು ಹೇಳಬೇಕು ..ಆದರೂ ರಾಜ್ಯ ಸರಕಾರದ ಇಲಾಖೆಗಳಿಗಿಂತ ಸ್ವಲ್ಪ ಉತ್ತಮ .ನಾನು ಸೇರಿದಾಗ ಕೋಯಿಲ್ ಪಿಳ್ಳೈ ಎಂಬ ಹಿರಿಯರು ಡಿ ಆರ್ ಎಂ ಆಗಿದ್ದರು . 

ರೈಲ್ವೆ ಅರೋಗ್ಯ ಸೇವೆ ರೈಲ್ವೆ ಸೇವೆಯಲ್ಲಿರುವ ಮತ್ತು ಸೇವಾ ನಿವೃತ್ತ ನೌಕರರು ಮತ್ತು ಅವರ ಕುಟುಂಬದವರ ಅರೋಗ್ಯ ಪಾಲನೆಗೆ ಇರುವ ಬ್ರಾಂಚ್ .ಅದಲ್ಲದೆ ಕಾಲ ಕಾಲಕ್ಕೆ ರೈಲ್ವೆ ಡ್ರೈವರ್ ಗಾರ್ಡ್ ನಂತಹ ಹುದ್ದೆಯಲ್ಲಿ ಇರುವವರ ತಪಾಸಣೆ ಮಾಡಿ ಅವರು ಸುರಕ್ಷಿತತೆಗೆ ಅಪಾಯ ಅಲ್ಲಾ ಎಂದು ನಿರ್ಧರಿಸುವುದು .ಅಫಘಾತ ಸಂಭವಿಸಿದರೆ ಸ್ಥಳಕ್ಕೆ ಧಾವಿಸಿ ಪರಿಹಾರ ಕಾರ್ಯಾಚರಣೆಯಲ್ಲಿ ಭಾಗವಹಿಸುವುದು . 

                   ನನ್ನಂತಹ ಕಿರಿಯ ವೈದ್ಯರು ಓ ಪಿ ಡಿ ಯಲ್ಲಿ ರೋಗಿಗಳ ತಪಾಸಣೆ ಮತ್ತು ಸ್ಪೆಷಲಿಸ್ಟ್ ವೈದ್ಯರಿಗೆ ವಾರ್ಡ್ ನಲ್ಲಿ ಸಹಾಯ ಮಾಡುವುದು .ಇದರ ಜತೆ ಮೈಸೂರಿನ ಹೊರಗೆ ಅರೋಗ್ಯ ಕೇಂದ್ರಗಳ ವೈದ್ಯರು ರಜೆ ಹಾಕಿದರೆ ಬದಲಿ ವೈದ್ಯರಾಗಿ ಹೋಗುವುದು .ನನ್ನೊಡನೆ ಮುಖ್ಯ ವೈದ್ಯಾಧಿಕಾರಿ ಫಿಸಿಷಿಯನ್ ಜತೆ ರೌಂಡ್ಸ್ ಗೆ ಹೋಗಲೂ ತಾಕೀತು ಮಾಡಿದ್ದರು .ಡಾ (ಹೆಸರು ಬೇಡ ) ಎಂಬವರು ಫಿಸಿಷಿನ್ .ಸ್ವಲ್ಪ ಕುಳ್ಳಗೆ .ನಾನು ಸ್ವಲ್ಪ ಉದ್ದ .ರೌಂಡ್ಸ್ ನಲ್ಲಿ ರೋಗಿಗಳಿಗೆ ಅವರು ಪ್ರಶ್ನೆ ಹಾಕಿದಾಗ ಅವರು ನನ್ನನ್ನು ನೋಡಿ ಉತ್ತರಿಸುವರು .ಇದು ಅವರಿಗೆ ಕಿರಿ ಕಿರಿ ಆಗುತ್ತಿತ್ತು .ಸ್ವಲ್ಪ ಸಮಯದ ನಂತರ ನೀವು ಬರುವುದು ಬೇಡ ,ನಾನೊಬ್ಬನೇ ರೌಂಡ್ಸ್ ಮಾಡುತ್ತೇನೆ ಎಂದರು .ಒಳ್ಳೆಯ ವೈದ್ಯ .ನನಗೇನೂ ಬೇಸರ ಆಗಲಿಲ್ಲ .ಆಸ್ಪತ್ರೆಯಲ್ಲಿ ಡಾ ರಾಜಾರಾಮ ಶೆಟ್ಟಿ ಎಂಬ ಹಿರಿಯ ವೈದ್ಯರು ಇದ್ದರು ,ಇವರು ಕಾಸರಗೋಡಿನಲ್ಲಿ ಇದ್ದ ಹೆಸರಾಂತ ಡಾ  ಕ್ಯಾಪ್ಟನ್ ಶೆಟ್ಟಿ ಅವರ ಸಹೋದರ .ಇವರಂತ ಸಜ್ಜನ ,ಮೃದು ಭಾಷಿ ವೈದ್ಯರನ್ನು ನಾನು ಜೀವನದಲ್ಲಿ ಬೆರಳೆಣಿಕೆಯಲ್ಲಿ ಕಂಡಿರುವೆನು .ಅಲ್ಲಿ ಆದ ಅವರ ಪರಿಚಯ ಮತ್ತು ಸ್ನೇಹ ಅವರ ಕೊನೆಯ ವರೆಗೂ ಮುಂದುವರಿದದ್ದು ನನ್ನ ಸೌಭಾಗ್ಯ .ಅವರು ನನಗೆ ನನ್ನ ಕರ್ತವ್ಯಗಳ ಪರಿಚಯ ಮಾಡಿಕೊಟ್ಟರು .ಎಷ್ಟೋ ದಿನ ಅವರ ಮನೆಯಲ್ಲೇ ಊಟ ಉಪಹಾರ ಆಗುತ್ತಿತ್ತು .ನಾನು ಸೇರಿದ ಕೆಲವು ದಿನಗಳಲ್ಲಿ ಡಾ ಪ್ರಸನ್ನ ಕುಮಾರ್ ನನ್ನ ಹಾಗೆಯೇ ADMO  ಆಗಿ ಸೇರಿದರು .ಅವರು ಮುಂದೆ ನನ್ನೊಡನೆ ಚೆನ್ನೈ ನಲ್ಲಿ ಜತೆಯಾಗಿ ಇದ್ದು ಈಗ ದಕ್ಷಿಣ ಮಧ್ಯ ರೈಲ್ವೆ ಮುಖ್ಯ ವೈದ್ಯಾಧಿಕಾರಿ ಆಗಿ ದ್ದಾರೆ .ಈಗಲೂ ನಮ್ಮ ಸ್ನೇಹ ಗಟ್ಟಿಯಾಗಿಯೇ ಇದೆ .ಅವರ ಮನೆ ಒಂಟಿಕೊಪ್ಪಲ್ ಸಮೀಪ ಸರಸ್ವತಿ ಪುರಂ ನಲ್ಲಿ ಇತ್ತು .ಅವರ ಮನೆಗೆ ಹೋಗುವಾಗ ಕುವೆಂಪು ಮನೆ ದಾಟಿ ಹೋಗಬೇಕು .ಎಷ್ಟೋ ದಿನ ಅವರ ಮನೆಯಲ್ಲಿ ಅಮ್ಮ ನನಗೆ ಊಟ ಪ್ರೀತಿಯಿಂದ ಉಣಿಸಿದ್ದಾರೆ . 

             ಕೆಲವು ದಿನ ರೆಟೈರಿಂಗ್ ರೂಮ್ ವಾಸ  ನಂತರ ನನಗೆ ಒಂದು ವಸತಿ ಗೃಹ ಬಂಗಲೆ ಅಲೋಟ್ ಆಯಿತು .ಈಗಿನ ವಿಕ್ರಂ ಆಸ್ಪತ್ರೆ ಎದುರು .ನಾನು ಅವಿವಾಹಿತ ಒಬ್ಬನೇ ಇದ್ದು ,ಫ್ಲಾಟ್ ನಲ್ಲಿ ಕ್ವಾರ್ಟರ್ ಅಲೋಟ್ ಆದ  ಹಿರಿಯರು ನನ್ನೊಡನೆ ಅದನ್ನು ಎಕ್ಸ್ಚೇಂಜ್ ಮಾಡಿ ಕೊಂಡರು .ವಸತಿ ಗೃಹಕ್ಕೆ ಕುರ್ಚಿ ಮೇಜು ಕೊಳ್ಳಲು ಹಣ ಇಲ್ಲದ್ದರಿಂದ ಬಾಡಿಗೆ ಫರ್ನಿಚರ್ ಮೊರೆ ಹೋದೆನು .ಮಲಗಲು ಒಂದು ಮಡಿಚುವ ಟೇಪ್ ಮಂಚ ಕೊಂಡೆನು .ಅಡಿಗೆ ಮಾಡಲು ಗ್ಯಾಸ್ ಸ್ಟವ್ ಮತ್ತು ಕನೆಕ್ಷನ್ ,ಕುಕ್ಕರ್ ,ಪಾತ್ರೆಗಳು . 

ಇದರ ನಡುವೆ ಪುತ್ತೂರು ,ಸಕಲೇಶಪುರ ,ಅರಸೀಕೆರೆ ಮತ್ತು ಹರಿಹರಕ್ಕೆ  ಬದಲಿ ಕರ್ತವ್ಯ ಕ್ಕೆ ಹೋಗುವ ಅವಕಾಶ ಸಿಕ್ಕಿತು .ಹೀಗೆ  ಹೋದಾಗ ಸಾಮಾನ್ಯವಾಗಿ ನಾವು ಅಲ್ಲಿಯ ವೈದ್ಯರ ವಸತಿ ಗೃಹದಲ್ಲಿ ತಂಗುತ್ತಿದ್ದೆವು .ಅವರಿಗೂ ಕಾವಲಿಗೆ ಒಬ್ಬರು ಇದ್ದಂತೆ ಆಯಿತು ,ಸ್ಥಳೀಯ ಹೆಲ್ತ್ ಇನ್ಸ್ಪೆಕ್ಟರ್ ನಮ್ಮ ಅವಶ್ಯಕತೆ ನೋಡಿ ಕೊಳ್ಳುತ್ತಿದ್ದರು .ಅಕ್ಟೋಬರ್ ೩೦ ೧೯೮೪ ರಂದು ನಾನು ಹರಿಹರಕ್ಕೆ ಪ್ರಯಾಣಿಸುತ್ತಿದ್ದಾಗ ಡಾ ಹಾ ಮಾ ನಾಯಕ್ ಅದೇ ಕಂಪಾರ್ಟ್ಮೆಂಟ್ ನಲ್ಲಿ ಸಹಯಾತ್ರಿ .ಅವರು ಗುಲ್ಬರ್ಗ ವಿಶ್ವವಿದ್ಯಾಲಯಕ್ಕೆ ಉಪ ಕುಲಪತಿ ಯಾಗಿ ಸ್ಥಾನ ವಹಿಸಿ ಕೊಳ್ಳಲು ಹೋಗುತ್ತಿದ್ದರು .ಅಂತಹ ಮಹಾನ್ ಸಾಹಿತಿ ಮತ್ತು ಅಧ್ಯಾಪಕರ ಜತೆ ಪಯಣಿಸುವ ಭಾಗ್ಯ ಬಯಸದೇ  ಬಂದುದು .ಅದರ ಮರು ದಿನ ಇಂದಿರಾ ಗಾಂಧಿ ಹತ್ಯೆ ನಡೆದು ದೇಶವೇ ಸ್ಥಬ್ದ ಆಗಿತ್ತು .ನಮ್ಮ ಸಿಬ್ಬಂದಿ ಮನೆಯಿಂದಲೇ ಊಟ ಉಪಹಾರ ಸರಬರಾಜು ಮಾಡಿ ನಾನು ಉಪವಾಸ ಇರದಂತೆ ನೋಡಿ ಕೊಂಡರು .ಹರಿಹರದಲ್ಲಿ ಭಾರೀ ಸೆಖೆ ,ಮೇಲೆ ಮನೆಯ ಮಾಡಿನಿಂದ ಬಿಸಿ ರೇಡಿಯೇಶನ್ ಆಗುತ್ತಿತ್ತು ,ಅದಕ್ಕೆ ನಾನು ಮಂಚದ ಕೆಳಗೇ ಮಲಗುತ್ತಿದ್ದೆ .,ಅಲ್ಲಿ ಇದ್ದ ಡಾ ಕೇಶವ್ ಪ್ರಹ್ಲಾದ ರೈಚುರ್ಕರ ಇಂದು ಮೈಸೂರಿನ ಹಿರಿಯ ರೇಡಿಯೊಲೊಜಿಸ್ಟ್ (ಖಾಸಗಿ ).ಸ್ನೇಹಮಯಿ . 

ಮೈಸೂರು ಸುಂದರ ನಗರ .ಆದರೂ ನಮ್ಮಂತೆ ಕರಾವಳಿಯಿಂದ ಬಂದವರಿಗೆ ಸ್ವಲ್ಪ ಕಾಲದಲ್ಲಿ ಇಲ್ಲಿಯ ನಿಧಾನ ಕ್ಕೆ  ಹೊಂದಿ  ಕೊಳ್ಳುವುದು ಸ್ವಲ್ಪ ಕಷ್ಟ .ಪ್ರವಾಸ ಕ್ಕೆ ಬಂದು ಕೆಲ ದಿನ ತಂಗಲು ಇದರಷ್ಟು ಒಳ್ಳೆಯ ಜಾಗ ಇಲ್ಲ .

 ಇದರ ನಡುವೆ ನನಗೆ ಬರೋಡ ದಲ್ಲಿ ರೈಲ್ವೆ ಆಫೀಸರ್ಸ್ ಟ್ರೇನಿಂಗ ಕಾಲೇಜು ನಲ್ಲಿ ಒಂದು ತಿಂಗಳ ತರಬೇತಿ ಆಯಿತು .ಮೈಸೂರಿನಂತೆ ಅದೂ ರಾಜರ ಊರು .ಮೈಸೂರಿನ ಸೌಂದರ್ಯ ಇಲ್ಲ .ನಮ್ಮ ಕಾಲೇಜು ಅಲ್ಲಿಯ ಹಳೇ  ಅರಮನೆಯಲ್ಲ್ಲೂ ವಸತಿ ಮಾಜಿ ಕುದುರೆ ಲಾಯದಲ್ಲಿಯೂ  ಇದ್ದಿತು .ಒಳ್ಳೆಯ ಊಟ ಉಪಚಾರ ಮತ್ತು ಒಳಾಂಗಣ ಆಟದ ವ್ಯವಸ್ಥೆ ಇದೆ .ಕೋರ್ಸ್ ನ ಅಂಗವಾಗಿ ಮುಂಬೈ ಪ್ರವಾಸ ಕೂಡಾ ಇತ್ತು . 

ಇಷ್ಟೆಲ್ಲಾ ಆಗುವಾಗ ಸಕಲೇಶ ಪುರದ ರೈಲ್ವೆ ವೈದ್ಯಾಧಿಕಾರಿ ,(ಇವರು ತಾತ್ಕಾಲಿಕ ಹುದ್ದೆಯಲ್ಲಿ ಇದ್ದವರು ,ನನ್ನಂತೆ ಲೋಕ ಸೇವಾ ಆಯೋಗದಿಂದ ನೇಮಕಾತಿ ಆದವರಲ್ಲ )ಯವರ ಕೋರಿಕೆ ಮೇರೆಗೆ ಅವರನ್ನು ಮೈಸೂರಿಗೆ ವರ್ಗಾಯಿಸಿ ನನ್ನನ್ನು ಅಲ್ಲಿಗೆ ಹಾಕಿದರು .ಅಲ್ಪ ಕಾಲದಲ್ಲಿಯೇ ಆದ  ವರ್ಗಾವಣೆಯಿಂದ ಸ್ವಲ್ಪ ಬೇಸರ ಹಾಗೂ ಕಸಿವಿಸಿ ಆದರೂ ಒಬ್ಬಂಟಿಗನಾಗಿದ್ದ ನನಗೆ ಹೊಸ ಊರು ನೋಡುವ ಅವಕಾಶ ಎಂದು ಕೊಂಡು ಮೈಸೂರಿಗೆ ವಿದಾಯ ಹೇಳಿದೆನು 

 

1 ಕಾಮೆಂಟ್‌: