ಬೆಂಬಲಿಗರು

ಶುಕ್ರವಾರ, ಸೆಪ್ಟೆಂಬರ್ 4, 2015

ನನ್ನ ಅಮೇರಿಕಾ ಯಾತ್ರೆ

ಬೆಂಗಳೂರು  ವಿಮಾನ ನಿಲ್ದಾಣದಲ್ಲಿ ಮುಂಜಾನೆ ನಾಲ್ಕು ಗಂಟೆಗೆ  ಎಮಿರೇಟ್ 

ವಿಮಾನ ಏರಿದೆವು .ಅರಬೀ ಭಾಷೆಯಲ್ಲಿ ನಮ್ಮನ್ನು ಸ್ವಾಗತಿಸಿದಾಗ ಅರೇಬಿಯಾದ 

ಹಳೇ ನೆನಪುಗಳು ಮರುಕಳಿಸಿದುವು.ಸ್ವಲ್ಪ ನಿದ್ದೆ ಮಾಡೋಣ ಎನ್ನುವಾಗ 

ಮುಂಜಾವಿನ ಊಟವೋ ತಿಂಡಿಯೋ ತಿಳಿಯದು ಬಂದು ಎಚ್ಚರಿಸಿತು .ಮತ್ತೆ 

ಯಾವಾಗಲೋ ಎಂದು ಸಿಕ್ಕಿದುದನ್ನು ತಿಂದು ಕುಡಿದೆವು .ನಿದ್ದೆ ಕಣ್ಣಿಗೆ ಹತ್ತಲಿಲ್ಲ .

ಬೆಳಗ್ಗೆ ಎಂಟು ಗಂಟೆ ಸುಮಾರಿಗೆ ದುಬೈ ತಲುಪಿದೆವು .ವಿಮಾನದ ಹೊರಗೆ 

ನೀಲ ಕಡಲು ,ಆಗಸದಲ್ಲಿ  ಬಿಳಿ ಮೋಡಗಳ ನಡುವೆ ಭಾಸ್ಕರನ ಹೊಂಗಿರಣಗಳ 

ವಿಹಂಗಮ ನೋಟ ,ಒಳಗೆ ದುಬಾಯಿಯ  ಸುಂದರ ಕಟ್ಟಡಗಳ ಮಾಟ.

   ದುಬೈ ನಿಲ್ದಾಣದಲ್ಲಿ ನಮಗೆ ಭಾರತ ದೇಶದಲ್ಲಿ ಇದ್ದಂತೆ ಭಾಸವಾಗುವುದು .

ಏಕೆಂದರೆ ಅಲ್ಲಿ ಮಲೆಯಾಳಿಗಳು ,ಉತ್ತರ ಭಾರತ ದವರು ಪ್ರಯಾಣಿಕರೂ 

,ಉದ್ಯೋಗಿಗಳೂ ಬಹಳ ಮಂದಿ .ನಿಲ್ದಾಣದ ಅಂಗಡಿಗಳಲ್ಲಿ  ನಮ್ಮವರನ್ನು 

ಕಾಣಬಹುದು .ಪ್ರಾತಃವಿಧಿ ಗಳನ್ನು ಮುಗಿಸಿ  ನಿಲ್ದಾಣದ ಉಚಿತ  ವೈ ಫೈ ಸೇವೆಯ 

ಸಹಾಯದಿಂದ ಸಿಯಾಟಲ್ ನಲ್ಲಿರುವ  ಮಗನಿಗೆ ಸಂದೇಶ ರವಾನಿಸಿದೆನು .

     ದುಬಾಯಿ ಯಿಂದ ಸಿಯಾಟಲ್ ಗೆ   ಪುನಃ ಎಮಿರೇಟ್ ವಿಮಾನ .ನಮ್ಮ 

ಲಗೇಜ್ ಮೊದಲೇ ಚೆಕ್ ಇನ್ ಆಗಿದ್ದುದರಿಂದ  ಹಗುರಾಗಿದ್ದೆವು .ವಿಮಾನ 

ಏರುವಾಗ ಸಂಸ್ಥೆಯ ಉದ್ಯೋಗಿ ಓರ್ವರು  ನಮ್ಮ  ಸೀಟ್  ಎಕಾನಮಿ  ವರ್ಗದಿಂದ 

ಬಿಸಿನೆಸ್  ಕ್ಲಾಸ್ ಗೆ  ಉಚಿತವಾಗಿ  ಏರಿಸಿಲಾದ  ಶುಭ ಸುದ್ದ್ದಿ ಕೊಟ್ಟರು . 

ಇದರಿಂದ ನಮಗೆ ಕಾಲು ನೀಡಿ  ವಿಶ್ರಮಿಸುವ ಅವಕಾಶ ,ಪರಿಚಾರಿಕೆಯರಿಂದ

ರಾಜೋಪಚಾರ .೧೪ ತಾಸುಗಳ  ತಡೆ ರಹಿತ ಪ್ರಯಾಣ .ವಿಮಾನ ಏರಿ 

ನಿದ್ರಿಸುವಾ ಎಂದರೆ  ತಿಂಡಿ  ತೀರ್ಥಗಳು ಬಂದುವು .ಬಾಯಿ ಚಪ್ಪರಿಸಿ  ತಿಂದೆವು .


ಕಿಟಿಕಿ  ಹಾಕಿ ,ದೀಪಗಳನ್ನು ಆರಿಸಿ ಮಲಗಿದರೆ  ಗಾಢ ನಿದ್ರೆ .ಎಚ್ಚರ  ಆಗುವಾಗ 

ಹೊಟ್ಟೆ ಚುರು ಚುರು.ಎಕಾನಮಿ ತರಗತಿಯಂತೆ  ಸಾಮೂಹಿಕ ಊಟ  ಸರಬರಾಜು 

ಇಲ್ಲಾ ಎಂದು ತೋರುತ್ತದೆ .ಹಾಗೆ ಪರಿಚಾರಿಕೆಗೆ ಸಸ್ಯಾಹಾರಿ ಊಟ  ಇದ್ದರೆ ಕೊಡಿ 

ಎಂದೆ.ಅರೇಬಿಕ್ ಸಸ್ಯಾಹಾರಿ ಎಂದು ವರ್ಣಮಯ ಊಟ ಬಂತು ,ಬಾಯಿಗೆ 

ರುಚಿಸದು .ನಾವು ಹಾಗೇ ಬಿಟ್ಟುದು ಕಂಡು ನಮ್ಮ  ಅತಿಥೇಯರಿಗೆ ಬೇಸರ ,

ಬೇರೇನಾದರೂ ಕೊಡಲೇ ಎಂದು ನಾವು ಕೇಳಿರದ ತಿಂಡಿಗಳ ಹೆಸರು ಹೇಳಿದರು .

ನಾವು  ಕೃತಜ್ಞತಾಪೂರ್ವಕವಾಗಿ ನಿರಾಕರಿಸಿದೆವು.  ಬಿಸಿನೆಸ್ ಕ್ಲಾಸ್ ನ  ಸೀಟ್ 

ದಂತ ವೈದ್ಯರ ಚೇರ್ ನಂತೆ ಇದೆ ,ಕೀಲಿ ತಿರುಗಿಸಿ ಅದನ್ನು ಹಾಸಿಗೆಯಾಗಿ 

ಪರಿವರ್ತಿಸ ಬಹುದು .ನಾವು ಬಾಕಿ ಉಳಿದಿದ್ದ ನಿದ್ದೆಯನ್ನು  ವಸೂಲಿ ಮಾಡು 

ವವರಂತೆ  ಹೊದಿಕೆ ಹೊಡೆದು ಬಿದ್ದು ಕೊಂಡೆವು .
     
             

      

ನಿಗದಿತ  ಸಮಯಕ್ಕೆ ಸರಿಯಾಗಿ  ವಿಮಾನ ಸಿಯಾಟಲ್ ನಗರದಲ್ಲಿ ಇಳಿಯಿತು .

ದೂರ ವಿಮಾನ ಪ್ರಯಾಣ ಬಹಳ ತ್ರಾಸ ದಾಯಕ ,ಅದೂ ರಾತ್ರೆ ಹೊತ್ತಲ್ಲದ 

ಹೊತ್ತಿನಲ್ಲಿ  ಹೊರಡುವ ವಿಮಾನ ಏರಿದರೆ  ನಿದ್ದೆಯೂ ಇಲ್ಲ ,ಅವರು ಕೊಡುವ 

ಟಿ ವಿ ನೋಡಲೂ ಅಲ್ಲ .ಸಮಯವೇ ಹೋಗದು .


  ಮಧ್ಯಾಹ್ನ ಮೂರುವರೆ ಗಂಟೆ .ವಲಸೆ ಅಧಿಕಾರಿಗಳ ಪರಿಶೀಲನೆ ಮುಗಿಸಿ 

ಲಗೇಜ್ ನ್ನು  ಸುರಕ್ಷಾ ಅಧಿಕಾರಿಗಳ ಬಳಿಗೆ ಒಯ್ಯಲಾಗಿ ಇದರಲ್ಲಿ ಧಾನ್ಯ 

ತಿಂಡಿ ಏನೂ ಇಲ್ಲವಲ್ಲ ಎಂದು ನಗುತ್ತಲೇ ನಮ್ಮನ್ನು ಬಿಟ್ಟರು .ಹಣ್ಣು ತರಕಾರಿ 

ಇತ್ಯಾದಿ ಸಾಗಿಸುವಂತಿಲ್ಲ . ಸಿಯಾಟಲ್ ನಿಲ್ದಾಣದಲ್ಲಿ ಹಲವು  ಚೈನೀಸ್ 

ಮೂಲದವರನ್ನು ಕಂಡೆವು .ನಿಲ್ದಾಣದಲ್ಲಿ ಸ್ಪ್ಯಾನಿಷ್ ಮತ್ತು ಇಂಗ್ಲಿಷ್ ಭಾಷೆಯಲ್ಲಿ 

ಉದ್ಘೋಷಣೆ  ಮಾಡುತ್ತಲಿದ್ದುದ ಕಂಡೆ .

  ನಿಲ್ದಾಣದಲ್ಲಿ ನಮ್ಮನ್ನು ಸ್ವಾಗತಿಸಲು  ಬಂದಿದ್ದ ಮಗನನ್ನು ಕಂಡು ಆಯಾಸ 

ಸ್ವಲ್ಪ ಪರಿಹಾರ ಆಯಿತು .ಅವನು ತಂದಿದ್ದ ಕಾರ್ ನಲ್ಲಿ ಲಗೇಜ್ ತುಂಬಿಸಿ 

ನಗರ ಮಧ್ಯೆ ಇರುವ ಮನೆಗೆ ಬಂದೆವು .ಮಗ ತಯಾರಿಸಿದ್ದ  ಅನ್ನ ,ಬೆಂಡೆಕಾಯಿ

ಸಾಂಭಾರ್ ಮೊಸರು ಹೊಟ್ಟೆಗೆ ಹೋದೊಡನೆ  ತೃಪ್ತಿಯಾಗಿ  ಸ್ವಲ್ಪ ಯೋಗ ಕ್ಷೇಮ 

ಮಾತನಾಡಿ ವಿಶ್ರಮಿಸಿದೆನು .ಅವನ ತಾಯಿ ಮಗನಿಗೆ ತಂದ ತಿಂಡಿಗಳನ್ನು 

ಹೊರ ತೆಗೆದು ,ಅಡುಗೆ ಮನೆ ಸರಿ ಪಡಿಸುವುದಕ್ಕೆ ಆರಂಭಿಸಿದಳು .

     ಮಲಗಿದ ನನಗೆ  ಲೋಕದಲ್ಲೇ ಇಲ್ಲದ ನಿದ್ರೆ ಆವರಿಸಿತು .ಆದರೆ ಸ್ವಲ್ಪ 

ಹೊತ್ತಿನಲ್ಲಿ ಬಂದ ಮಗ ಹಿಡಿದು ಏಳಿಸಿದ ,ನಿದ್ದೆಯ ಆಸೆಯಲ್ಲಿ ನಾನು ಸ್ವಲ್ಪ 

ಮಲಗಲೇ ಎಂದು ಯಾಚಿಸಲು ನಿರ್ದಾಕ್ಷಿಣ್ಯವಾಗಿ ಇಲ್ಲವೆಂದ .

     ಸಂಜೆ ಆರಕ್ಕೆಲ್ಲ  ನಗರದ ಹೊರವಲಯದ  ಭಾರತೀಯ ಅಂಗಡಿ ಅಪ್ನಾ 

ಬಜಾರ್ ಗೆ ಹೋಗಿ  ಬೇಕಾದ ದಿನಸು ತರಕಾರಿ ಖರೀದಿಸಿದೆವು.

 ಅಲ್ಲೇ ಸಮೀಪದಲ್ಲಿ ಸ್ನೋಕಾಲ್ಮಿನ್ ಎಂಬ ಸಣ್ಣದಾದರೂ ಸುಂದರ ಜಲಪಾತ ಇದೆ .

ಅಲ್ಲಿಗೆ ತೆರಳಿ  ಅದರ ಸೌಂದರ್ಯ ಅಸ್ವಾದಿಸಿದೆವು 

                

ಮರಳುವ ದಾರಿಯಲ್ಲಿ  ಮಲಯಾಳಿಗಳು ನಡೆಸುವ ಆಹಾರ ರೆಸ್ಟುರಾದಲ್ಲಿ 

ಅವಿಯಲ್ ,ಅನ್ನ ,ದೋಸೆ ಇತ್ಯಾದಿ ಸವಿದೆವು 
                  
ಮತ್ತೆ ಮನೆಗೆ ಮರಳಿದಾಗ  ರಾತ್ರಿ ಹತ್ತು ಗಂಟೆ ,ಸೂರ್ಯ ಈಗ ತಾನೇ ಮುಳುಗಿದ್ದ .

ಸಿಯಾಟಲ್ನಲ್ಲಿ ಬೇಸಿಗೆ ,ಹಗಲು ಧೀರ್ಘ .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ