ಬೆಂಬಲಿಗರು

ಶನಿವಾರ, ಫೆಬ್ರವರಿ 28, 2015

ಅರಬಿ ನಾಡಿನಲ್ಲಿ ಮೊದಲ ದಿನ

ಮುಂಬೈ ನಿಂದ ರಿಯಾದ್ ಗೆ ತೆರಳುವ ಸೌದಿ ಏರ್ವೇಸ್ ವಿಮಾನ .ವಿಮಾನ ತುಂಬಾ ಲುಂಗಿ ಉಟ್ಟ ಕೂಲಿ ಕಾರ್ಮಿಕರು .ಮಲಯಾಳಿಗಳು ಮತ್ತು ಉತ್ತರ ಭಾರತದವರು .ವೈಭವೇತ ವಿಮಾನದಲ್ಲಿ ಇದು ಒಂದು ವಿಚಿತ್ರ ಸಂಯೋಗ ವಾಗಿ ಕಾಣುತ್ತಿತ್ತು.ಹೆಚ್ಚಿನವರು ಅನಕ್ಷರಸ್ಥರು.ಬಹಳ ಮಂದಿಯ ಫಾರಂ ನಾನೇ ತುಂಬಿಸಿ ಕೊಟ್ಟೆ .ವಿಮಾನದ ನಡಾವಳಿಕೆಗಳನ್ನ ಅಕ್ಕ ಪಕ್ಕದವರನ್ನು ನೋಡಿ ಮಾಡುತ್ತಿದ್ದರು .ವಿಮಾನ ತುಂಬಾ ನಿಟ್ಟುಸಿರು ಮತ್ತು ಕನಸುಗಳು ಹೆಪ್ಪುಗಟ್ಟಿದ ವಾತಾವರಣ .
ಮನೆ ಮತ್ತು ಮನೆಯವರನ್ನು ಬಿಟ್ಟು  ಅರಿಯದ ದೂರದ ನಾಡಿಗೆ ಹೋಗುವ ವ್ಯಾಕುಲ ವಾದರೆ ,ಅಲ್ಲಿ ಸಂಪಾದನೆ ಮಾಡಿ
ತಾವು ವೀಸಾ ಕ್ಕೆ ಮಾಡಿದ ಸಾಲ ತೀರಿಸಿ ,ಮಡದಿ ,ತಾಯಿ ತಂಗಿಯರಿಗೆ ಚಿನ್ನ ,ಒಂದು ಪುಟ್ಟ ಮನೆ ಯ ಕನಸು ,ಅಪರಿಚಿತ ಊರಿನ ಅವ್ಯಕ್ತ ಭಯ ಗಳು ಅಮೂರ್ತ ರೂಪದಲ್ಲಿ ಕಾಣಿಸುತ್ತಿದ್ದವು . ವಿಮಾನ ಮೇಲೆ ಹಾರುತ್ತಿದ್ದರೂ ಎಲ್ಲರೂ  ಅದೃಶ್ಯ ಹೊಕ್ಕುಳ ಬಳ್ಳಿಯಿಂದ  ಜನ್ಮ  ನಾಡಿಗೆ  ಬಂಧಿಸಲ್ಪಟ್ಟಿದ್ದರು .                                                                                            ರಮ್ಜಾನ್ ಮಾಸ ಆದುದರಿಂದ ಉಪವಾಸ ಮಾಡದವರಿಗೆ ಮಾತ್ರ ಆಹಾರ ಸರಬರಾಜು ಆಗುತ್ತಿತ್ತು .ರಿಯಾದ್ ವಿಮಾನ ನಿಲ್ದಾಣದಲ್ಲಿ ನಮ್ಮಂಥವರಿಗೆ ಬೇರೆ ಸಾಲು .ಅಮೇರಿಕಾ ಇಂಗ್ಲೆಂಡ್ ಇತ್ಯಾದಿಯವರಿಗೆ ಬೇರೆ ,ಗಲ್ಫ್ ನಾಡಿನವರಿಗೆ ಬೇರೆ ಸಾಲು .ಅಲ್ಲಿಯ ಪೊಲೀಸರು ನಯ ವಿನಯ ಶಿಷ್ಟಾಚಾರಗಳನ್ನು ನಮ್ಮಂತಹ ಹುಲು ಮಾನವರಿಗೆ ತೋರಿ  ಪೋಲು ಮಾಡುವುದು ಏಕೆ ಎಂಬ ಮನೋಭಾವದವರು .(ನಮ್ಮ ದೇಶದ ಸರಕಾರೀ ನೌಕರರು ಬಹಳ ಮಂದಿ ಇದಕ್ಕೆ ಹೊರತಲ್ಲ )
ಬಡ ಜೀವಿಗಳ ಚೀಲ ಗಳನ್ನು ಜಾಲಾಡಿ ನೋಡಿ ದಬಾಯಿಸುತ್ತಿದ್ದರು .ಏನು ಮಾಡುವುದು ?ದ್ರೌಪದಿಯ ವಸ್ತ್ರಾಪಹರಣ ನೋಡಿ ಹಲ್ಲು ಕಡಿಯುತ್ತಿದ್ದ ಪಾಂಡವರ ಪರಿಸ್ಥಿತಿ ಎಲ್ಲರದ್ದು .ನಾನು ಡಾಕ್ಟರ ಎಂದು ತಿಳಿದು ಅಲ್ಪ ಸ್ವಲ್ಪ ವಿನಾಯಿತಿ .

ಅಂತೂ ವಿಮಾನ ನಿಲ್ದಾಣ ದಲ್ಲಿ ಸ್ವಲ್ಪ ನಡೆದು ತಾಯಿಫ್ಫ್ ನಗರಕ್ಕೆ ಹೋಗುವ ವಿಮಾನಕ್ಕೆ ಹತ್ತಿದೆ .ಸಂಜೆ ಆರೂವರೆ ಗೆ ತಾಯಿಫ್ ನಗರದಲ್ಲಿ ಇಳಿಯಿತು .ತುಂತುರು ಮಳೆ ಟರ್ಮಕ್ ನಿಂದ ನಿಲ್ದಾಣ ಸೇರುವಾಗ ಒದ್ದೆ .ಹೊರಗೆ ಶೀತ ಗಾಳಿ .
ಮುಂಬೈಯಲ್ಲಿ ಏಜೆಂಟ್ ಹೇಳಿದ್ದ ,ನಿಲ್ದಾಣಕ್ಕೆ ಅರೋಗ್ಯ ಇಲಾಖೆಯವರು ಬಂದು ಸ್ವಾಗತಿಸುವರು ಎಂದು .ಹಾಗೇ ಅರ್ಧ ಗಂಟೆ ಯಾರಾದರೂ ಪ್ಲೇ ಕಾರ್ಡ್ ಹೊತ್ತು ಕಾಯುತ್ತಿದ್ದರೆಯೇ ಎಂದು ಕೊರಳುದ್ದ ಮಾಡಿ ನಿರೀಕ್ಷಿದೆ .ಸ್ವಲ್ಪ ಭಯವಾಯಿತು.ನನಗೆ ಭಾಷೆ ಬರುವುದಿಲ್ಲ .ಯಾರನ್ನು ಕೇಳುವುದು ?ರಂಜಾನ್ ಮಾಸ ಬೇರೆ ,ಎಲ್ಲರೂ ಉಪವಾಸ ಬಿಡುವ ತರಾತುರಿಯಲ್ಲಿ ಇದ್ದಾರೆ.ಕೊನೆಗೆ ಅಲ್ಲಿಯ ಟ್ರಾವೆಲ್ ಏಜೆಂಟ್ ಕೌಂಟರ್ ನಲ್ಲಿ ಮಲಯಾಳಂ ಭಾಷೆ ಕೇಳಿ ಬಂತು .ಕೂಡಲೇ ಅಲ್ಲಿ ಹೋಗಿ ನನ್ನ ಸಮಸ್ಯೆ ಹೇಳಿಕೊಂಡೆ .ಅವರು ನೀವು ಚಿಂತೆ ಮಾಡ ಬೇಡಿ ,ಅರೋಗ್ಯ ಇಲಾಖೆಯ ವಾಹನ ವಿಮಾನದಲ್ಲಿ ಬಂದಿಳಿದ ನರ್ಸ್ ನವರನ್ನು ಕೊಂಡು ಹೋಗಲು ಬರುತ್ತಿರುತ್ತದೆ .ಅವರನ್ನು ಕೇಳುವಾ ಎಂದನು .ಸ್ವಲ್ಪ ಹೊತ್ತಿನಲ್ಲಿ  ಆ ವಾಹನ ಬಂದು ಸಿಸ್ಟರ್ ಗಣ ಅದನ್ನು ಏರಿತು .ಹೆಚ್ಚಿನವರು ಮಲಯಾಳಿಗಳು .ಟ್ರಾವೆಲ್ ಏಜೆಂಟ್ ಅದರ ಡ್ರೈವರ್ ಅರಬ್ಬಿಯಲ್ಲಿ ನನ್ನನ್ನು ತೋರಿಸಿ ಅರೇಬಿಕ್ ಭಾಷೆಯಲ್ಲಿ ಏನೋ ಹೇಳಿದ .ಡ್ರೈವರ್ ಲಾ ಲಾ (ಇಲ್ಲಾ ಇಲ್ಲ ) ಎಂದು ನಿರಾಕರಿಸಿದ .ಅವನ ಕೆಲಸ ಸಿಸ್ಟರ್ ಗಳನ್ನು ಕೊಂಡೊಯ್ಯುವುದು ,ನನ್ನ ಬಗ್ಗೆ ಗೊತ್ತಿಲ್ಲ ಎಂದ .ನಮ್ಮ ಮಲಯಾಳಿ ಮಿತ್ರ ಬಿಡದೆ ವ್ಯಾನ್ ನ ಒಳಗೆ ನನ್ನನ್ನೂನನ್ನ ಬ್ಯಾಗೇಜ್ ನನ್ನು ತೂರಿ ಸಿಸ್ಟರ್ ಗಳ ಬಳಿ ಮಲಯಾಳಂ ನಲ್ಲಿ  ನನ್ನ ಬಗ್ಗೆ ಹೇಳಿದ . ಅಂತೂ ಡ್ರೈವರ್ ಅಸಹನೆಯಿಂದ ವಾಹನ ಚಾಲನೆ ಮಾಡಿದ .ಒಳಗಿದ್ದ ಸಿಸ್ಟರ್ ಗಣ (ಅವರೆಲ್ಲ್ಲ ಅನುಭವಿಗಳು ,ರಜೆ ಮುಗಿಸಿ ಮರಳುತ್ತಿದ್ದವರು )ನನ್ನನ್ನು ಬಲಿ ಕಂಬಕ್ಕೆ ಒಯ್ಯಲ್ಪಡುತ್ತಿರುವ ಕೈದಿಯನ್ನು ನೋಡುವಂತೆ ಕನಿಕರದಿಂದ ನೋಡುತ್ತಿದ್ದರು .ಒಬ್ಬಳು ಬಾಯಿ ಬಿಟ್ಟು ಕೇಳಿದಳು ಊರಿನಲ್ಲಿರುವ ಪ್ರಾಕ್ಟೀಸ್ ಬಿಟ್ಟು ಈ ನರಕಕ್ಕೆ ಏಕೆ ಬಂದಿರಿ ?ಮತ್ತೊಬ್ಬಳು ,ಸುಮ್ಮನಿರೆ, ಪಾಪ ಹೊಸದಾಗಿ ಬರುತ್ತಿದ್ದಾರೆ .ಹೆದರಿಸ ಬೇಡ ಎಂದು ಗದರಿ ನನಗೆ ಸಮಾಧಾನ ಮಾಡಿದಳು .
ಅಸ್ಟರಲ್ಲಿ ಮಾಲಿಕ್ ಫೈಸಲ್ ಆಸ್ಪತ್ರೆ ಬಂತು .ಸಿಸ್ಟರ್ ನವರು ನನ್ನನ್ನು ಅಲ್ಲಿ ಇಳಿಸುವಂತೆ  ಡ್ರೈವರ್ ಗೆ ಹೇಳಿದರು .ಈ ಆಸ್ಪತ್ರೆಯಲ್ಲಿ ಯಾರಾದರೂ ನಮ್ಮ ದೇಶದ ಡಾಕ್ಟರ ಸಿಗ ಬಹುದು .ಅವರು ನಿಮ್ಮ ಸಹಾಯಕ್ಕೆ ಬಂದಾರು ಎಂದು ಗುಡ್ ಬೈ ಹೇಳಿದರು .ಮನಸಾರೆ ಆ ದೇವತೆಗಳಿಗೆ ವಂದಿಸಿ ಆಸ್ಪತ್ರೆಯ ಕ್ಯಾಶು ವಾಲಿಟಿ ಬಳಿ ಹೋದೆ.ಮಯ್ಯಿ ಒದ್ದೆ ,ಹೊಟ್ಟೆ ಚುರು ಚುರು ಹೇಳುತ್ತಿತ್ತು .ಪಾಕಿಸ್ತಾನಿ ಡಾಕ್ಟರ್ ಒಬ್ಬರು ನನ್ನನ್ನು ಕಂಡು ಮಾತನಾಡಿಸಿ ಅವರಿಗೆ ಬಂದ ಊಟ ಮತ್ತು ಪಾನೀಯ ನನಗೆ ಸ್ವಲ್ಪ ಕೊಟ್ಟರು .ರಾತ್ರಿಗೆ ಅಲ್ಲೇ ಪಕ್ಕದಲ್ಲಿ ಒಂದು ಹೋಟೆಲ್ ಇದೆಯೆಂದೂ  ,ಅಲ್ಲಿ ವಿಶ್ರಮಿಸಿ ಬೆಳಿಗ್ಗೆ  ಅರೋಗ್ಯ ಇಲಾಖೆಯ ಕಚೇರಿ (ಮುದಿರಿಯಾ)ಕ್ಕೆ ತೆರಳ ಬಹುದು ಎಂದು ಸಲಹೆ ಮಾಡಿದರು .ಅಸ್ಟರಲ್ಲಿ ಆಂಧ್ರ ಪ್ರದೇಶ ದ ಒಬ್ಬರು ತರುಣ ವೈದ್ಯ ನಿಮಗೆ ಅಡ್ಡಿಯಿಲ್ಲ ದಿದ್ದರೆ ನನ್ನ ಮನೆಗೆ ಬಂದು ವಿಶ್ರಮಿಸಿ ಎಂದು ನನ್ನನ್ನು ಅಲ್ಪ ದೂರದಲ್ಲಿ ಇದ್ದ ಅವರ ನಿವಾಸಕ್ಕೆ ಕೊಂಡೊಯ್ದರು .ಮುಸ್ಲಿಂ ಆದ ಅವರು ಈಗ ಉಪವಾಸ ಆದುದರಿಂದ ತಾನು ಬೆಳಕು ಹರಿಯುವ ಮೊದಲೇ ಊಟ ಮಾಡುವೆನೆಂದು ,ನೀವು ಸಾವಕಾಶ ಎದ್ದು ಇಲ್ಲಿ ಇತ್ತ ಆಹಾರ ದಲ್ಲಿ ಬೇಕಿದ್ದು ತಿನ್ನಿರಿ ಎಂದರು .ಎಂತಹ ಒಳ್ಳೆಯ ಮನಸ್ಸು .ಇವರಿಗೆ  ನಾನು ಚಿರ ಋಣಿ .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ