ಬೆಂಬಲಿಗರು

ಬುಧವಾರ, ಫೆಬ್ರವರಿ 25, 2015

ಪ್ರಸಿದ್ದ ವೈದ್ಯರು

ಅಷ್ಟೇನು ಪ್ರಾಕ್ಟೀಸ್ ಇಲ್ಲದ ನನಗೆ ಕೆಲವೊಮ್ಮೆ ಸಭೆ ಸಮಾರಂಭಗಳಿಗೆ ಅತಿಥಿಯಾಗಿ ಹೋಗುವ ಭಾಗ್ಯ ಸಿಗುತ್ತದೆ .ಅಲ್ಲಿ

ಅತಿಥೇಯರು ನನ್ನನ್ನು ಪ್ರಸಿದ್ದ ವೈದ್ಯರು ತಮ್ಮ ಬಿಡುವಿಲ್ಲದ ವೇಳೆಯಲ್ಲಿ ಎಲ್ಲಾ ಕಾರ್ಯಗಳನ್ನು ಬದಿಗಿಟ್ಟು ಬಂದಿರುತ್ತಾರೆ

ಎಂದು ಪರಿಚಯಿಸುವಾಗ ಮುಜುಗರ ಆಗುತ್ತದೆ . ನನ್ನಲ್ಲಿಗೆ ಬರುವ ರೋಗಿಗಗಳು ನಗರದ ಪ್ರಸಿದ್ಧ ವೈದ್ಯರ ಹೆಸರು ಹೇಳಿ

ಅಲ್ಲಿ ಬಹಳಷ್ಟು ಕ್ಯೂ ಇರುವುದರಿಂದ ತತ್ಕಾಲಕ್ಕೆ ನಿಮ್ಮ ಕೈಗುಣ ನೋಡೋಣ ಎಂದು ಬಂದೆವೆಂದು ಓಪನ್ ಆಗಿ ಹೇಳುವರು .

ನಾನು ಸುಮ್ಮನೆ ಕತೆ ಪುಸ್ತಕ ಓದುತ್ತಲೋ ಕಂಪ್ಯೂಟರ್ ಕುಟ್ಟುತ್ತಲೋ ಇರುವುದು ಜನನಿತ ವಾದ ವಿಚಾರ ,


ಮತ್ತೆ ನನಗೆ ರೋಗಿಗಳು ಬರುವುದಾದರೂ ಹೇಗೆ ?ನನಗೆ ಓರ್ವ ಧರ್ಮ ಪತ್ನಿ ಇದ್ದಾರೆ .( ಧರ್ಮ ಪತ್ನಿ ಎಂದು ಏಕೆ

ಕರೆಯುತ್ತಾರೆ ಎಂದು ಇದು ವರೆಗೆ ತಿಳಿದಿಲ್ಲ .ಅಧರ್ಮ ಪತ್ನಿ ಯರಿಂದ ಬೇರ್ಪಡಿಸಲು ಆ ತರಹದ ಪತ್ನಿಯರೇ ಇಲ್ಲವಲ್ಲ

.ನಾವು ಜಗಳವಾಡುವಾಗ ಹೆಂಡತಿ ನಾನು ಧರ್ಮಕ್ಕೆ ಸಿಕ್ಕಿದವಳೋ ಎಂದು ಲಾ ಪಾಯಿಂಟ್ ಹಾಕುವುದುಂಟು )

ಈಕೆ ವಾರಕ್ಕೆ ಒಂದು ದಿನ  ಲಲಿತಾ ಸಹಸ್ರನಾಮ ವನ್ನೂ .ಇನ್ನೊಂದು ದಿನ  ವಿಷ್ಣು ಸಹಸ್ರನಾಮವನ್ನೂ ,ಮಿಕ್ಕುಳಿದ

ದಿನಗಳಲ್ಲಿ  ನನಗೆ ಸಹಸ್ರ ನಾಮವನ್ನೂ ಮಾಡುತ್ತಾಳೆ .ದೈವ ಭಕ್ತೆಯಾದ ಆಕೆ ಈ ಸಹಸ್ರನಾಮದ  ಕೊನೆಗೆ  ಸರ್ವೇ ಜನಾ

ಸುಖಿನೋಭವಂತು  ಎಂದು ಪ್ರಾರ್ಥಿಸುವುದು ವಾಡಿಕೆ .ಇದರಿಂದಾಗಿ  ಪಕ್ಕದ ಸರ್ವೇ (ಒಂದು ಊರಿನ ಹೆಸರು ),

ಕಾಣಿಯೂರು ಪ್ರದೇಶದಲ್ಲಿ ಎಲ್ಲರೂ ಆರೋಗ್ಯವಂತರಾಗಿ  ನನ್ನ  ಪ್ರಾಕ್ಟೀಸ್ ಗಣನೀಯವಾಗಿ  ಇಳಿಯಿತು .ಇದನ್ನು ಅವಳಿಗೆ

ಹೇಳಿದರೆ ಸರ್ವೇ ಜನಾ ಬಿಟ್ಟು ಲೋಕ ಸಮಸ್ತಾ ಸುಖಿನೋ ಭವಂತು ಎನ್ನ ತೊಡಗಿ ನಾಲ್ದೆಸೆ ಯಿಂದ  ನನಗೆ  ಇದ್ದ

ರೋಗಿಗಳೂ ಇಲ್ಲದಂತಾಯಿತು .


ನನಗೆ ಬರುವ ಮುಜುಗರ ನನ್ನ ವೈರಿಗಳಿಗೂ ಬೇಡ .ಒಂದು ಮುಂಜಾನೆ ನಿವೃತ್ತ ಪ್ರಿನ್ಸಿಪಾಲ್ ಓರ್ವರು ತಮ್ಮ ಪತ್ನಿ

ಸಮೇತವಾಗಿ ಬಂದು ತನಗೆ ಗ್ಯಾಸ್ಟ್ರಿಕ್ ,ಒಳ್ಳೆಯ ಔಷಧಿ ಕೊಡಿ ಎಂದು ಹೇಳಿದರು ,ಆದರೆ ಅವರ ರೋಗ ಲಕ್ಷಣ

ನೋಡುವಾಗ ನನಗೆ ಸಂಶಯ ಬಂದು ಇ ಸಿ ಜಿ ಮಾಡಿ ನೋಡಿದರೆ  ಅವರಿಗೆ ಲಘು ಹೃದಯಾಘಾತ ಆಗಿತ್ತು .ಅದನ್ನು

ಅವರಿಗೆ ತಿಳಿಸಿ( ಒಳ್ಳೆ ಡಯಾಗ್ನೋಸಿಸ್ ಮಾಡಿದ ಹೆಮ್ಮೆಯಲ್ಲಿ  )ದಾಗ   ಆ ದಂಪತಿಗಳ  ಮರು  ಪ್ರಶ್ನೆ  :ಒಳ್ಳೇ ಡಾಕ್ಟರ್


ಯಾರಿದ್ದಾರೆ ? ನಾನು  ಒಳ್ಳೆಯ ಡಾಕ್ಟರ್ ಎಂದು ನಾನೆ  ಹೇಗೆ ಹೇಳಿಕೊಳ್ಳುವುದು ?


 ನನ್ನ ಗುರುಗಳಾದ  ಡಾ ಎಂ ಕೆ ಮಣಿಯವರು ಸಾವಿರಾರು ಔಷಧಿಗಳು ಇರುವುದರಿಂದ  ಯಾವುದೇ ಒಂದನ್ನು ಬರೆಯುವ

ಮೊದಲು ಅದರ ಸರಿಯಾದ ಡೋಸ್ ಮತ್ತು ಅಡ್ಡ  ಪರಿಣಾಮಗಳ ಬಗ್ಗೆ  ಸಂದೇಹ ಇದ್ದರೆ  ಅದರ ಮಾಹಿತಿ ಇರುವ

ಪುಸ್ತಕವನ್ನು ಓದಿ ಕೊಡಿರಿ ಎಂದು ಹೇಳುತ್ತಿದ್ದರು .ಅದನ್ನು ಶಿರಸಾವಹಿಸಿ  ಪಾಲಿಸುತ್ತಿದ್ದ ನನ್ನನ್ನು ನೋಡಿ ರೋಗಿಗಳು ಇವನು


ಪುಸ್ತಕ ನೋಡಿ  ಔಷಧಿ ಕೊಡುವ ಡಾಕ್ಟರ ಎಂದು ಪುಕ್ಕಟೆ ಪ್ರಚಾರ ಮಾಡಿದ  ಪರಿಣಾಮ ನನ್ನ ಪಾಡು ಹೇಳ ತೀರದಾಯಿತು

.ಈಗ  ನಾನು ಪುಸ್ತಕದ ಬದಲಿಗೆ  ಕಂಪ್ಯೂಟರ್ ಉಪಯೋಗಿಸ  ತೊಡಗಿದ್ದೇನೆ .ಪರಿಸ್ಥಿತಿ  ಕೊಂಚ ಸುಧಾರಿಸಿದೆ .


ಮತ್ತೊಂದು ಸಮಸ್ಯೆ ಇದೆ .ನಾನು ಬಂಧು ಮಿತ್ರರ ಮನೆ ಮದುವೆ ಸಮಾರಂಭಗಳಿಗೆ ಮುಹೂರ್ತಕ್ಕೆ ಸರಿಯಾಗಿ

ಹೋಗುತ್ತಿದ್ದೆ ಅಲ್ಲಿ  ಬಂದ ಕೆಲವೇ ಮಂದಿ ನನ್ನನ್ನು ಸಖೇದಾಶ್ಚರ್ಯ ಮತ್ತು ಮರುಕದಿಂದ ನೋಡಿ ಏನು ಡಾಕ್ಟ್ರೆ ಪೇಶೆ೦ಟ್ಸ್

ಇಲ್ಲವೇ ಎಂದು  ಪ್ರಶ್ನಿಸುತ್ತಿದ್ದರು .ಆ ಮೇಲೆ ನನ್ನ ಹಿತೈಷಿಗಳು ಇಂತಹ ಕಾರ್ಯಕ್ರಮಗಳಿಗೆ  ಊಟದ ಸಮಯಕ್ಕೆ

ಹಾಜರಾಗುವುದೇ ಮರ್ಯಾದೆ ಎಂದು ಹೇಳಿದರು.
   

   ಮೊನ್ನೆ ಒಬ್ಬರು ಬಂದರು .ನಮ್ಮ ಪಕ್ಕದ ಓಣಿಯಲ್ಲಿ  ವಾಹನಗಳ  ಬಿಡಿಭಾಗ ಮಾರುವ ಅಂಗಡಿ ಉಧ್ಘಾಟನೆ ಕಾರ್ಯಕ್ರಮ .

ಒಂದೆರಡು ಸ್ಥಳೀಯ   ಪ್ರಮುಖರ ಹೆಸರು  ಹೇಳಿ ಆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ  ಕರೆದಾಗ ತಾವು ತುಂಬಾ ಬ್ಯುಸಿ

ಎಂದೂ ನನ್ನನ್ನು ಕೇಳಿನೋಡಿ ಅವರಿಗೆ ಹೆಚ್ಚು ಕೆಲಸ ಇರುವುದಿಲ್ಲ ಎಂದು ಹೇಳಿದರೆಂದು .ಮತ್ತೇನು ಮಾಡಲಿ

ಯೋಗ್ಯರಾದವರು  ಯಾರೂ ಸಿಗುತ್ತಿಲ್ಲ  ನೀವು ಬಂದರೆ ಆಗುತ್ತಿತ್ತು ಎಂದರು !ಮತ್ತೊಮ್ಮೆ  ಒಂದು ಪುಸ್ತಕ ಪ್ರದರ್ಶನ

ಉದ್ಘಾಟನೆಗೆ  ನಿಗದಿತ ಮುಖ್ಯ ಅತಿಥಿ ಕೊನೆ ಗಳಿಗೆಯಲ್ಲಿ ಕೈಕೊಟ್ಟಾಗ  ಅದರ ಪ್ರಾಯೋಜಕರು ಏನು ಮಾಡುವುದು ಸಾರ್

ಹೊತ್ತು ಬಂದಾಗ ಕತ್ತೆ ಕಾಲು ಹಿಡಿ ಎಂಬಂತೆ ನಿಮ್ಮನ್ನು ಕೇಳಿಕೊಳ್ಳುತ್ತೇವೆ ಎಂದು ಅಂಗಲಾಚಿದರು .                                          


ನನಗೊಂದು ಭಯ ಮತ್ತು ಆಸೆ .ಇತ್ತೀಚಿಗೆ ಮದುವೆ ಮಂಟಪದಿಂದ ವರನ ನಾಪತ್ತೆ  ಎಂಬ ವಾರ್ತೆಗಳನ್ನು  ಮೇಲಿಂದ ಮೇಲೆ

ಓದುತ್ತಿರುತ್ತೇವೆ .ಎಲ್ಲಿಯಾದರೂ ಅಂತಹ ಸಂದರ್ಭದಲ್ಲಿ  ನನಗೆ ಏನಾದರೂ ಬದಲಿ ವರನಾಗಿ  ನನಗೆ  ಚಾನ್ಸ್

ಸಿಗಬಹುದೋ ಎಂಬ ಆಸೆ ಮನದಲ್ಲಿ ಇದೆ .ದಯವಿಟ್ಟು  ಈ ವಿಚಾರವನ್ನು ನನ್ನ ಹೆಂಡತಿಗೆ ಹೇಳಬೇಡಿ .

7 ಕಾಮೆಂಟ್‌ಗಳು: