ಬೆಂಬಲಿಗರು

ಗುರುವಾರ, ಜೂನ್ 29, 2023





ನಮ್ಮ ಆಸ್ಪತ್ರೆ ಕ್ಯಾಂಟೀನ್ ಹರೀಶಣ್ಣ ಒಂದು ಮಾತು ಹೇಳಿದರು . ರೋಗಿಗಳು ಮತ್ತು ಸಂಬಂದಿಕರು ಬದನೆ ಕಾಯಿ ಮತ್ತು ಕ್ಯಾಬೇಜ್ ಸುತರಾಂ ಇಷ್ಟ ಪಡುವುದಿಲ್ಲ ಮತ್ತು ಮೂಗು ಮುರಿಯುತ್ತಾರೆ .ಆದುದರಿಂದ ಅವುಗಳ ಪದಾರ್ಥ ಮಾಡುವುದೇ ಇಲ್ಲ . ತರಕಾರಿ ಬೆಲೆ ಗಗನಕ್ಕೆ ಏರಿರುವ ಈ ದಿನಗಳಲ್ಲಿ ಇವು ನಿಜಕ್ಕೂ ಆಪತ್ ಬಾಂಧವರು . ಈ ಎರಡು ತರಕಾರಿಗಳು ಪೂರ್ವಗ್ರಹ ದಿಂದ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಅಪಪ್ರಚಾರಕ್ಕೆ ಒಳಗೆ ಆಗಿವೆ .ಯಾವಾಗಲೂ ಅಸತ್ಯ ಬೇಗ ಹರಡುವುದು ಮತ್ತು ಜನ ಮಾನಸದಲ್ಲಿ ಗಟ್ಟಿಯಾಗಿ ನಿಲ್ಲುವುದು .ನನ್ನ ಮಾತಿನಲ್ಲಿ ವಿಶ್ವಾಸ ಇಲ್ಲದಿದ್ದರೆ ಇಂಟರ್ನೆಟ್ ಗೆ ಹೋಗಿ ಈ ತರಕಾರಿಗಳ ಬಗ್ಗೆ ಜಾಲಾಡಿರಿ .ಏನಾದರೂ ಸಿಕ್ಕಿದರೆ ತಿಳಿಸಿರಿ . 

   ಕ್ಯಾಬೇಜ್ ನಮ್ಮ ಊರಿಗೆ ಬಂದುದು ನನಗೆ ಒಂದು ಹತ್ತು ಹನ್ನೆರಡು ವರ್ಷ ಪ್ರಾಯ ವಾದ  ಮೇಲೆ . ಅಪರೂಪಕ್ಕೆ ಅದನ್ನು ತರುತ್ತಿದ್ದು ಅದರ ಸಾಂಭಾರ್ ಮತ್ತು ಪಲ್ಯ ಎಲ್ಲರಿಗೂ ಇಷ್ಟ ವಾಗಿತ್ತು .ಈಗೀಗ ಅದರ ಬಜ್ಜಿ ಮತ್ತು ಪತ್ರೊಡೆ ಕೂಡಾ ಮಾಡುವರು . ಈಗ ಮನೆಯಲ್ಲಿ ನಿತ್ಯಕ್ಕೆ ಮತ್ತು ಸಮಾರಂಭಗಳಲ್ಲಿ ಅದು ಕಾಣೆಯಾಗಿದೆ . ಅಲ್ಲದೆ ಯಾವುದೇ ಕೆಲಸ ಗೋಜಲು ಮಾಯವಾಗಿ ಮಾಡಿದರೆ ಅವನು ಅದನ್ನು ಕ್ಯಾಬೇಜ್ ಮಾಡಿದಾ ಮಾರಾಯ ;ಪೇಷಂಟ್ ಆ ಆಸ್ಪತ್ರೆಗೆ ಹೋಗಿ ಈಗ ಕ್ಯಾಬೇಜ್ ಆಗಿದ್ದಾನೆಯ ಇತ್ಯಾದಿ ಅನ್ನುವರು 

ಇನ್ನು ಬದನೆ ;ಇದನ್ನು ಮನೆಗಳಲ್ಲಿ ಈಗಲೂ ಮಾಡಿದರೂ ರೋಗಿಗಳಿಗೆ ಮತ್ತು ಬಾಳಂತಿಯರಿಗೆ ನಂಜು ಎಂದು ಕೊಡರು . ಈ ತರಕಾರಿಯ ಮೇಲೆ ಸುಖಾ ಸುಮ್ಮನೇ ನಂಜು ಕಾರಿದವರು ಯಾರು ?

ನನಗೆ ತರಕಾರಿ ಎಂದರೆ ಬಹಳ ಇಷ್ಟ .ಪಲ್ಯ ಮತ್ತು ಸಾಂಬಾರು ಹೋಳುಗಳನ್ನು ಪುನಃ ಪುನಃ ಹಾಕಿಸಿ ಕೊಳ್ಳುವೆನು .ಬಾಲ್ಯದಲ್ಲಿ ನಾನು ಊಟಕ್ಕೆ ಕುಳಿತಾಗ ಅಮ್ಮ ಎಚ್ಚರಿಸುತ್ತಿದ್ದರು 'ಮೇಲಾರ ಬಾಗ ಎಲ್ಲಾ ಮನಾರ ಮಾಡ ಬೇಡ ಮಗಾ ;ಯಾರಾದರೂ ನೆಂಟರು ಬಂದರೆ ಅವರಿಗೆ ಸ್ವಲ್ಪ ಇರಲಿ "ಆಗಿನ ಕಾಲದಲ್ಲಿ ಮನೆಯಲ್ಲಿ ಹಠಾತ್  ಆಗಮಿಸ ಬಹುದಾದ  ನೆಂಟರಿಗಾಗಿ ಯಾವತ್ತೂ ಅನ್ನ ಮತ್ತು ಪದಾರ್ಥ ತೆಗೆದು ಇಟ್ಟು ಕೊಳ್ಳುತ್ತಿದ್ದರು .ಒಂದು ವೇಳೆ ಬರದಿದ್ದರೆ ಮರುದಿನಕ್ಕೆ ತಮಗೇ . ಇನ್ನು ಕೆಲವೊಮ್ಮೆ ನನ್ನ ಅಕ್ಕ ,ಅತ್ತಿಗೆ ನಾನು ಊಟಕ್ಕೆ ಕುಳಿತಾಗ ಒಳಗೆ ಸಾಕಷ್ಟು ಶೇಖರಿಸಿಟ್ಟು ಉಳಿದುದನ್ನು ಮಾತ್ರ ನನ್ನ ಎದುರು ಇಡುವರು .ಅದಕ್ಕೆ ಪ್ರತೀಕಾರ ವಾಗಿ ನಾನು ಈಗ ದಿನಾಲೂ ಅರ್ಧ ಕಿಲೋ ಪಲ್ಯ ಮಾಡಿ ಗುಳು೦ಕಾಯಿಸುವೆನು 

ಸೋಮವಾರ, ಜೂನ್ 26, 2023


 ಇಂದು ಇಂದು ಮುಂಜಾನೆ ನಾನೇ ಅಡಿಗೆ  ಪುಸ್ತಕ  ನೋಡದೆ ತಯಾರಿಸಿದತಿಂಡಿ  ಸಜ್ಜಿಗೆ ಅವಲಕ್ಕಿ ಅಥವಾ ಸಜ್ಜಿಗೆ ಬಜಿಲು . ನಮ್ಮ ಊರಿನ ಐಕಾನ್ ತಿಂಡಿ . ಹಿಂದೆ ಮದುವೆ  ಇತ್ಯಾದಿ ಸಮಾರಂಭಗಳಲ್ಲಿ  ಮುಂಜಾನೆ ಖಡ್ಡಾಯ ಒಂದೇ ಒಂದು ತಿಂಡಿ ಅವಲಕ್ಕಿ ಸಜ್ಜಿಗೆ ಮತ್ತು ಬಾಳೆ  ಹಣ್ಣು .ಮೊಸರು ಉಪ್ಪಿನ ಕಾಯಿ ಇಲ್ಲ .ಈಗ ಅದರ ಸ್ಥಾನ  ಇಡ್ಲಿ ದೋಸೆ ಬನ್ಸ್ ಪೂರಿ  ಇತ್ಯಾದಿ ಆವರಿಸಿ ಕೊಂಡಿವೆ . ಹೋಟೆಲ್ ಗಳಲ್ಲಿ ಜನಪ್ರಿಯ ಆಗಿದ್ದ ಇದು ಮಂಗಳೂರಿನ ಇಂದ್ರ ಭವನನಂತಹ  ಹೋಟೆಲ್ ಗಳಲ್ಲಿ ಮಾತ್ರ ಸಿಗಬಹುದು . ಬೇಂದ್ರೆ ಯವರ ಇನ್ನೂ ಯಾಕೆ ಬರಲಿಲ್ಲಾವ  ಹುಬ್ಬಳ್ಳಿಯಾವ  ಕವನ ದಲ್ಲಿ  ಚಹಾ ದ ಕೂಡಾ ಚಿವುಡ (ಹುರಿದ ಮಸಾಲೆ ಅವಲಕ್ಕಿ )ದಾಂಗ ಎಂದು  ವರ್ಣಿಸಿದ ಹಾಗೆ ನಮ್ಮಲ್ಲಿ  ಚಹಾ ದ  ಕೂಡಾ ಅವಲಕ್ಕಿ ಸಜ್ಜಿಗೆ ಹಾಂಗಾ ಎಂದು ಧಾರಾಳ ಹೇಳ ಬಹುದಾದ ಕಾಲ ಒಂದಿತ್ತು

ಒಂದು ಚಿಂತನೆ

 

ಅಮೇರಿಕಾ ದಲ್ಲಿ ಮೊಮ್ಮಗ ಮಲಗಿರುವಾಗ ಸಮಯ ಕಳೆಯಲು   ಯು ಟ್ಯೂಬ್ ನಲ್ಲಿ ಸಂಗೀತ ,ಚಲನ ಚಿತ್ರ ಮತ್ತು ಸಂದರ್ಶನ ಇತ್ಯಾದಿ ಕಾರ್ಯಕ್ರಮ ವೀಕ್ಷಿಸುತ್ತಿದ್ದೆ . ಯಾವುದೋ ಮಲಯಾಳಂ ಚಾನೆಲ್ ನಲ್ಲಿ ಮಲಯಾಳಂ ನ ಹಿರಿಯ ಮತ್ತು ನನ್ನನ್ನೂ ಸೇರಿ ವೀಕ್ಷಕರ ಅಚ್ಚು ಮೆಚ್ಚಿನ ನಟಿ  ಕವಿಯೂರು ಪೊನ್ನಮ್ಮ ಅವರ ಸಂದರ್ಶನ ಬರುತ್ತಿತ್ತು . ಕನ್ನಡದಲ್ಲಿ ಹಿಂದೆ ಪಂಡರೀ ಬಾಯಿ ಇದ್ದಂತೆ ಇವರ ತಾಯಿ ಪಾರ್ಟ್ ಟ್ರೇಡ್ ಮಾರ್ಕ್ .ಮೋಹನ ಲಾಲ್ ಅವರಿಗೆ ಅನೇಕ ಚಿತ್ರಗಳಲ್ಲಿ ತಾಯಿ ಆಗಿ ಅಭಿನಯಿಸಿದ್ದಾರೆ . ಹಣೆಯಲ್ಲಿ ರುಪಾಯಿ ಗಾತ್ರದ ಕುಂಕುಮ ಬೊಟ್ಟು ,ಮುಖದಲ್ಲಿ ಮುಗ್ದ ಪರಿಶುದ್ಧ ಮಾತೃಛಾಯೆ . 

ಸಂದರ್ಶನದಲ್ಲಿ ಅವರ ತಾಯಿ ಪಾತ್ರ ಗಳ ಯಶಸ್ವಿಗೆ ಕತೆ ,ತಮ್ಮ ನಟನೆ ಯ ಜತೆ ಸಮಾಜದಲ್ಲಿ (ಮನೆಯಲ್ಲಿ ) ಹಿಂದೆ  ತಾಯಿಗೆ ಇದ್ದ  ಗೌರವ ಸ್ಥಾನ ಕೂಡಾ ಮುಖ್ಯ ಕಾರಣ ಎಂದು ಹೇಳಿದ್ದು ನನ್ನ ಮನಸಿಗೆ ನಾಟಿತು . ಅದೇ ಹಿರಿಯರ ಸ್ಥಾನಮಾನ ನಶಿಸುತ್ತಿರುವ ಇಂದಿನ ದಿನಗಳಲ್ಲಿ ಈಗಿನ ತಲೆಮಾರಿನವರಿಗೆ ಅಷ್ಟೇ ಅಪೀಲ್ ಆಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ  ಎಂಬುದು ಚಿಂತನೆಗೆ ಹಚ್ಚಿತು 

ಶನಿವಾರ, ಜೂನ್ 24, 2023

ಚೌ ಚೌ ಬಾತ್

ನನ್ನ ಸಲಹಾ ಕೊಠಡಿಯ ಹೊರಗೆ ಇಲ್ಲಿ ಕಾಣಿಸಿದ ಫಲಕ ಹಾಕಿದ್ದೇನೆ . ಕಳೆದ ತಿಂಗಳು ಒಬ್ಬರು ಒಳಗೆ ಬಂದು 'ಇಲ್ಲಿ ಚೌ ಚೌ ಬಾತ್ ಸಿಗುತ್ತದೆಯೇ ;ಮಗು ಹಸಿದು ಅಳುತ್ತಿದೆ ' ಎಂದರು .ಮೊನ್ನೆ ಓರ್ವ ಮಹಿಳೆ ಇದು ಅಡಿಗೆ ಪುಸ್ತಕ ,ಇದರಲ್ಲಿ ಆರೋಗ್ಯದಾಯಕ ತಿನಿಸುಗಳ ರೆಸಿಪಿ ಇರಬಹುದು ಎಂದು ವಿಚಾರಿಸಿ ನಿರಾಸೆ ಗೊಂಡರು . 

  ನನ್ನ ಪುಸ್ತಕಗಳನ್ನು ಕುತೂಹಲದಲ್ಲಿ ಮತ್ತು ಆಸಕ್ತಿಯಿಂದ ಕೊಂಡವರು ಬಹುತೇಕ ಜನ ಸಾಮಾನ್ಯರು . ಸಾಹಿತ್ಯ ಕಲಿಯುವವರು ಮತ್ತು ಕಲಿಸುವವರು ಬಹಳ ಕಡಿಮೆ . ನನ್ನ ಬಳಿಗೆ ಸಲಹೆಗೆ ಬಂದವರ ವೃತ್ತಿ ಕನ್ನಡ ಕಲಿಸುವುದು ಎಂದಾದರೆ ನನಗೆ ಸಂತೋಷ ವಾಗಿ ಗೌರವ ಹೆಚ್ಚುವುದು .ಆದರೆ ಅವರಲ್ಲಿಯೇ ಹೆಚ್ಚಿನವರಿಗೆ ತಮ್ಮ ವೃತ್ತಿಯಲ್ಲಿ ಅಭಿಮಾನ ಆಸಕ್ತಿ ಇದ್ದಂತೆ ಕಾಣಿಸುವುದಿಲ್ಲ .ಇದು ದುರದೃ ಷ್ಟಕರ 
 

ಶುಕ್ರವಾರ, ಜೂನ್ 23, 2023

ಏಕ್ ದೊ ತೀನ್ ಚಾರ್

 ಅಮೇರಿಕಾದಲ್ಲಿ ಮಗನ ಮನೆಯ ಹತ್ತಿರ ಒಂದು  ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆ ಇದ್ದು ನಾನು ಪ್ರತಿನಿತ್ಯ  ಅವುಗಳ ಸುತ್ತ ವಾಕಿಂಗ್ ಹೋಗುತ್ತಿದ್ದೆ .ಶಾಲಾ  ಸಮಯದಲ್ಲಿ ಕಾಂಪೌಂಡ್ ಪ್ರವೇಶಿಸ ಬಾರದು ಎಂದು ತೆಲುಗು ತಮಿಳು ಹಿಂದಿ ಚೈನೀಸ್ ಮತ್ತು ಸ್ಪ್ಯಾನಿಷ್ ಭಾಷೆಯಲ್ಲಿ ಬೋರ್ಡ್ ಹಾಕಿರುವರು . ಉಳಿದಂತೆ ಅಲ್ಲಿ ಒಳಗೆ ಹೋಗ ಬಹುದು .ಆಟದ ಮೈದಾನದಲ್ಲಿ ಆಟ ವಾಡ ಬಹುದು .ಕ್ರೀಡೆ ಸಂಗೀತ ಮತ್ತು ನಾಟಕ ಗಳಿಗೆ ಬಹಳ ಮಹತ್ವ ನೀಡುವಂತೆ ಕಾಣುತ್ತದೆ .ಹೈ ಸ್ಕೂಲ್ ಆವರಣದಲ್ಲಿ ಶಾಲೆಯ  ನಾಮಫಲಕ ಕಂಡೆ .ಪ್ರೈಮರಿ ಯಲ್ಲಿ ಇಲ್ಲ . ಶಾಲೆಗೆ ತಾಗಿಕೊಂಡು  ರಸ್ತೆ ಬದಿಯಲ್ಲಿ ಬೇಸ್ ಬಾಲ್ ,ಫುಟ್ ಬಾಲ್ ತರಬೇತಿ ಕೊಡಲಾಗುವುದು ಸಂಪರ್ಕಿಸಿರಿ ಎಂದು ಬಹಳ ಸಣ್ಣ ಜಾಹಿರಾತು ಫಲಕಗಳನ್ನು ಕಂಡೆ . ಇಂಗ್ಲಿಷ್ ,ಗಣಿತ ,ಸಿಈ ಟಿ ಇತ್ಯಾದಿ ಟ್ಯೂಷನ್ ಗಳ ಬಗ್ಗೆ ಒಂದೂ ಕಾಣಿಸಲಿಲ್ಲ . 

ಆಟದ ಮೈದಾನದಲ್ಲಿ ಪಿ ಟಿ ಟೀಚರ್ ಒನ್ ಟೂ ಥ್ರೀ ಫೋರ್ ಎಂದು ಡ್ರಿಲ್ ಮಾಡಿಸುವಾಗ ಬಾಲ್ಯ ನೆನಪಾಯಿತು . ನಮ್ಮ  ಪಿ ಟಿ ಮಾಷ್ಟ್ರು ರಾಮರಾಯರು ಏಕ್ ದೋ ತೀನ್ ಚಾರ್ ಎಂದು ಮಾಡಿಸುತ್ತಿದ್ದರು.(ಇದನ್ನೇ ಅನುಕರಿಸಿ ನಾವು ಏಕ್ ದೋ ತೀನ್ ಚಾರ್ ಇತ್ತೆ  ಪೋಪುನೆ ಕಾಣಿಚಾರ್ ಎಂದು ಶಾಲೆಯಿಂದ ಕಾಣಿಚಾರ್ ಬೈಲು ಮೂಲಕ ಅಂಗ್ರಿಗೆ ಹೋಗುವಾಗ ಹೇಳುತ್ತಿದ್ದೆವು ) .ಅರೇಬಿಯಾದಲ್ಲಿ ನನ್ನ ಮನೆಯ ಹಿಂದೆ ಇದ್ದ ಶಾಲೆಯಲ್ಲಿ 'ವಾಹದ್ ಇತನೇನ್  ತಾಲತಾ ಅರ್ಬಾ 'ಎಂದು ಅವರ ಭಾಷೆಯಲ್ಲಿ ಮಾಡಿಸುತ್ತಿದ್ದರು . ಕನ್ನಡಲ್ಲಿ ಒಂದು ಎರಡು ಮೂರು ನಾಲ್ಕು ಎಂದು ಮಾಡಿಸಿದ್ದನ್ನು ಕಾಣೆ . 

ಶಾಲೆ ಬಳಿ ತಿಂಡಿ ಕಡಲೆ ಮಾರುವ ಅಂಗಡಿಗಳು ಇಲ್ಲ .ಯಾಕೆ ಸನಿಹದಲ್ಲಿ ಯಾವುದೇ ಅಂಗಡಿಗಳು ಕಾಣೆ .ಏನಾದರೂ ಬೇಕಾದರೆ  ನಾಲ್ಕು ಕಿಲೋಮೀಟರು ಹೋಗ ಬೇಕು . ಅಧ್ಯಾಪಕರು ಹೆಚ್ಚಿನವರು ಕಾರಿನಲ್ಲಿ ಬರುತ್ತಾರೆ .ವಿದ್ಯಾರ್ಥಿಗಳು ನಡೆದು ಕೊಂಡು ,ಬೈಸಿಕಲ್ ಮತ್ತು ಕಾರ್ ನಲ್ಲಿ .ಹಳದಿ ಬಣ್ಣದ ಶಾಲಾ ಬಸ್ ಕೂಡಾ ಇದ್ದು ಅದರ ಡ್ರೈವರ್ ಮಹಿಳೆ ಆಗಿದ್ದಾರೆ .ಮಕ್ಕಳನ್ನು ಪ್ರೀತಿಯಿಂದ ಜೋಪಾನವಾಗಿ ಕೊಂಡೊಯ್ಯಲು  ಸ್ತ್ರೀ ಯರೇ ಒಳ್ಳೆಯದು ಎಂಬ ಉದ್ದೇಶ ಇರ ಬಹುದು . 




ಗುರುವಾರ, ಜೂನ್ 22, 2023

 ಅಮೆರಿಕಾ ಪ್ರವಾಸ ಕೊನೆಯ ಕಂತು 

ನನಗೆ  ಇದು ಎರಡನೇ ಬಾರಿ ಅಮೇರಿಕಾ ಪ್ರವಾಸ .ಮೊದಲನೇ ಸಲದ ಕುತೂಹಲ ಮತ್ತು ಸಂಭ್ರಮ ಈ ಬಾರಿ ಏಕೋ ಇರಲಿಲ್ಲ .ಮೊಮ್ಮಗನ ಜತೆ ಕೆಲ ವಾರಗಳನ್ನು ಕಳೆಯುವ ಅಸೆ ಮಾತ್ರ ಇತ್ತು . ಅದು ಈಡೇರಿತು . 

ಇನ್ನು ಅಮೆರಿಕಾ ದೇಶ ದ  ಬೇರೆ ಬೇರೆ ಭಾಗದಲ್ಲಿ ವಾಸಿಸುತ್ತಿರುವ ನೆಂಟರ ಪೈಕಿ ಕ್ಯಾಲಿಫೋರ್ನಿಯಾ ದಿಂದ ನನ್ನ ಸೋದರ ಭಾವ ಸಂಗೀತಾಭಿಮಾನಿ ಮತ್ತು ಕಲಾವಿದ ರವಿ ಜೋಶಿ ಮತ್ತು  ನ್ಯೂಯೋರ್ಕ್ ಪಕ್ಕ ಇರುವ ನನ್ನ ಪತ್ನಿಯ ಚಿಕ್ಕಮ್ಮನ ಮಗಳು ನನ್ನ ಫೇಸ್ಬುಕ್ ಫ್ರೆಂಡ್ ಲಲಿತಾ ಜಯರಾಮ್ ತಮ್ಮಲ್ಲಿಗೆ ಬರುವಂತೆ ಅಹ್ವಾನ ಕೊಟ್ಟಿದ್ದರು .ಜತೆಗೆ ಕೆನಡಾ ದಲ್ಲಿ ನನ್ನ ತಮ್ಮನ ಮಗ ಪವನ್ ಮತ್ತು ಸೊಸೆ ಸ್ವೀಕೃತಾ ಅಲ್ಲಿಗೆ ಭೇಟಿ ನೀಡುವಂತೆ  ಬಹು ಪ್ರೀತಿಯಿಂದ ಉತ್ತಾಯ ಮಾಡಿದ್ದರು ಅಲ್ಲದೆ ನಮ್ಮಲ್ಲಿ ಕೆನಡಾ ವೀಸಾ ಕೂಡಾ ಇತ್ತು ..ಆದರೆ ನನ್ನ ಅರೋಗ್ಯ ದೃಷ್ಟಿಯಿಂದ ಎಲ್ಲಿಗೂ ಹೋಗದೆ ಮಗನ ಮನೆಯಲ್ಲೇ ಇದ್ದೆವು . 

ಇಲ್ಲಿ ಮುಂಜಾನೆ ನಾಲ್ಕು ಗಂಟೆಗೆ ಆಗಿ ಹಕ್ಕಿಗಳ ಚಿಲಿಪಿಲಿ ಆರಂಭ ಆಗುವುದು .ಎದ್ದು ಓಡಾಡಿದರೆ ಇಡೀ ಮನೆಯಲ್ಲಿ ಅಜನೆ ಆಗುವುದು ಏಕೆಂದರೆ ಇಲ್ಲಿ ಎಲ್ಲಾ ಮರದ ಮನೆಗಳು .ಮಕ್ಕಳು ಮೊಮ್ಮಗುವಿನ ನಿದ್ರೆಗೆ ತೊಂದರೆ ಆಗುವುದು .ಆದುದರಿಂದ ಸುಮಾರು ಆರೂವರೆ ಗಂಟೆಗೆ ಎದ್ದು ಕೆಳಗೆ ಚಾವಡಿಗೆ  ಹೋಗುವುದು .ಮೊದಲು ಬೀರನನ್ನು ಹೊರಬಿಟ್ಟು ಒಳಗಡೆ ಮಾಡುವದು . ಆಮೇಲೆ ಒಂದು ಗಂಟೆ ವಾಕಿಂಗ್ ,ಕೆಲವೊಮ್ಮೆ ತಿಂಡಿ ಆದ ಮೇಲೆ . ಮಗು ನಿದ್ದೆ ಮಾಡುತ್ತಿದ್ದ ವೇಳೆ ಟಿವಿ ಯಲ್ಲಿ ಯೌಟ್ಯೂಬ್ ಮೂಲಕ ಸಂಗೀತ ಮತ್ತು ಯಕ್ಷಗಾನ ನೋಡುವುದು ,ಕೇಳುವುದು .ಮಗು ಚಾವಡಿಗೆ ಬಂದಮೇಲೆ ಟಿವಿ ಕಡ್ಡಾಯ ಬಂದ್ .(ಇದು ನಿಜಕ್ಕೂ ಒಳ್ಳೆಯದು )

        ಮಗು ಎದ್ದು ಬಂದಾಗ ಅವನ ಜತೆ ಆಡುವುದು .ಮಧ್ಯಾಹ್ನ ಭರ್ಜರಿ ಊಟ ,ನಿದ್ದೆ .ಸಾಯಂಕಾಲ ಚಹಾ ಆದಮೇಲೆ ಮಗು ನಾಯಿ ಬೀರ ಮತ್ತು ಕುಟುಂಬದ ಸರ್ವರೂ ಸೇರಿ ವಾಕಿಂಗ್ .ರಾತ್ರಿ ಊಟ ,ನಿದ್ದೆ . ವಾರಾಂತ್ಯ ರಜೆಯಲ್ಲಿ ಮಕ್ಕಳು  ನಮ್ಮನ್ನು ವಿಹಾರಕ್ಕೆ ಪಾರ್ಕ್ ಗಳಿಗೆ ಕರೆದು ಕೊಂಡು ಹೋಗುವರು .ವಾಷಿಂಗ್ಟನ್ ರಾಜ್ಯದಲ್ಲಿ ಮೂರು  ನ್ಯಾಷನಲ್ ಪಾರ್ಕ್ ಗಳು ಇವೆ .ಅವುಗಳಲ್ಲಿ ಪ್ರಸಿದ್ದವಾದ ಮೌಂಟ್ ರೈನಿಯರ್ ಗೆ ಕಳೆದ ಬಾರಿ ಹೋಗಿದ್ದ ನೆನಪು .ಈ ಸಲ ನಾರ್ತ್ ಕ್ಯಾಸ್ಕೇಡ್ ನ್ಯಾಷನಲ್ ಪಾರ್ಕ್ ಮತ್ತು ಅದಕ್ಕೆ ತಾಗಿ ಇರುವ ಡಯಾಬ್ಲೊ ಸರೋವರ ಕ್ಕೆ ಹೋದೆವು .ಇದು ನಮ್ಮ ಲಡಾಕ್ ತರಹ ಇದೆ ಎಂದು ಅಲ್ಲಿಗೂ ಹೋಗಿದ್ದ ನನ್ನ ಬೀಗರು ಹೇಳಿದರು . ಈ ರಾಜ್ಯದಲ್ಲಿ ಉದ್ದುದ್ದಕೆ ಬೆಳೆದಿರುವ ಪೈನ್ ವೃಕ್ಷ ಗಳನ್ನೇ ಕಂಡುದು ಹೆಚ್ಚು .ಅವುಗಳ ಹೂ ಪರಾಗ ಗಾಳಿಯಲ್ಲಿ ಹತ್ತಿಯಂತೆ ತೇಲುತ್ತಿದ್ದು ,ನನಗೆ ಅದರ ಅಲ್ಲರ್ಜಿ ಎಂಬ ಸಂದೇಹ ಉಂಟಾದುದರಿಂದ ಮಾಸ್ಕ ಹಾಕಿಕೊಂಡೇ ಸಂಚಾರ . 

ಒಂದು  ಸಂಜೆ ಟ್ಯೂಲಿಪ್ ಹೂ ತೋಟಕ್ಕೆ ಹೋಗಿ ಅಲ್ಲಿ ಯ ವಿಶಾಲ ವರ್ಣರಂಜಿತ ಪುಷ್ಪರಾಜಿ ಯನ್ನು ಕಣ್ಣು ತುಂಬಿ ಕೊಂಡೆವು

ಬೇರೆ ಬೇರೆ ತರಹದ ಆಹಾರ ವನ್ನು ಸವಿಸಿದರು . ನನ್ನ ಮೊಮ್ಮಗನ ಸಂಗೀತ ಶಾಲೆಗೆ ಸೊಸೆ ಕರೆದು ಕೊಂಡು ಹೋದಳು . ಟೀಚರ್ ಬ್ರೆನ್ನಾ  ತುಂಬಾ ಉತ್ಸಾಹ ಭರಿತ ಮತ್ತು ಪುಟ್ಟ ಮಕ್ಕಳ ಆಸಕ್ತಿ ಕುದುರಿಸುವ ,ಸ್ನೇಹ ಮಯಿ ವ್ಯಕ್ತಿ . 

ಮೊಮ್ಮಗನ ಹುಟ್ಟಿದ ಹಬ್ಬದ ಆಚರಣೆ ಗೌಜಿಯಾಗಿ ಒಂದು ಪಾರ್ಕ್ ಸಭಾಂಗಣ ದಲ್ಲಿ ನಡೆಯಿತು .ನಮ್ಮ ದೇಶದ ಮತ್ತು ರಾಜ್ಯದ  ಹಲವು ಮಿತ್ರರು ಭಾಗವಹಿಸಿ ಶುಭ ಕೋರಿದರು . ಒಂದು ದಿನ ಮನೆಯಲ್ಲಿ ಸತ್ಯನಾರಾಯಣ ಪೂಜೆ ಆಚರಣೆ ;  ಪುತ್ತಿಗೆ ಮಠದ  ಪುರೋಹಿತರು . ಸಜ್ಜನರು .ಒಂದು ದಿನ ಮಠ ಕ್ಕೂ ಆಹ್ವಾನಿಸಿ ಪ್ರಸಾದ ಕೊಟ್ಟು ಹರಸಿದರು .

ಇದರ ಹೊರತಾಗಿ ಭಾರತದಲ್ಲಿ ಜೀವಮಾನ ಬಹುಪಾಲು ಕಳೆದ ನಮ್ಮಂತಹವರಿಗೆ ಅಲ್ಲಿ ಸಮಯಾಲಾಪನೆ ಸ್ವಲ್ಪ ಕಷ್ಟವೇ . ಮಕ್ಕಳು ಶಕ್ತಿ ಮೀರಿ ನಮ್ಮನ್ನು ಖುಶಿಯಾಗಿ ಇಡಲು ಶ್ರಮಿಸಿದರು . 

ಹೀಗೆ ಒಂದೂವರೆ ತಿಂಗಳು ಕಳೆದು ಹೋದ ದಾರಿಯಲ್ಲೇ ಅದೇ ಕಂಪನಿ ವಿಮಾನ ದಲ್ಲಿ ವಾಪಾಸು .ವಿಮಾನ ನಿಲ್ದಾಣದಲ್ಲಿ ಪತ್ನಿ ಮಗ ಸೊಸೆ ಮತ್ತು ಮುಖ್ಯವಾಗಿ ಮೊಮ್ಮಗ ವಿಮಾನದ ಬಾಗಿಲಿನ ವರೆಗೆ ಬಂದು ಬೀಳ್ಕೊಟ್ಟರು .ಮೊಮ್ಮಗನಿಗೆ ಟಾಟಾ ಮಾಡುವಾಗ ಹೃದಯ ಭಾರವಾಯಿತು . (ಸಿಯಾಟಲ್ ವಿಮಾನ ನಿಲ್ದಾಣದಲ್ಲಿ ಟಿಕೆಟ್ ಕೊಂಡು ಒಳಗೆ ಹೋಗುವ ಅವಕಾಶ ಇದೆ . ನಮ್ಮಲ್ಲಿ ಇದು ಇಲ್ಲ ). 






 



ಮಂಗಳವಾರ, ಜೂನ್ 20, 2023

ಸಾದರ ಸ್ವೀಕಾರ
ಹಿರಿಯ ಲೇಖಕ ,ಪ್ರಾಧ್ಯಾಪಕ ಮಿತ್ರ ತಮ್ಮ ಎರಡು ಕೃತಿಗಳನ್ನು ಪ್ರೀತಿ ಪೂರ್ವಕ ತಲುಪಿಸಿದ್ದಾರೆ .ಸೋನ್ಸ್ ಫಾರ್ಮ್ಸ್ ಮತ್ತು ಜೇನೇ ಜೀವನ .ಡಾ ಎಲ್ ಸಿ ಸೋನ್ಸ್ ಅವರನ್ನು ನಾನು ಅವರ ಫಾರ್ಮ್ಸ್ ನಲ್ಲಿ ಮತ್ತು ಮೊಗಶಾಲೆಯವರ ಕಾಂತಾವರ ದಲ್ಲಿ ಕಂಡು ಮಾತನಾಡಿದ್ದೆ . ಕಾಂತಾವರದ ನನ್ನ ಒಂದು ಭಾಷಣ ಕಾರ್ಯಕ್ರಮ ಕ್ಕೆ ಸೋನ್ಸ್ ದಂಪತಿಗಳು ಬಂದಿದ್ದು ಸಕ್ರಿಯವಾಗಿ ಪಾಲು ಗೊಂಡಿದ್ದರು .ಅವರ ಸರಳತೆ ಮತ್ತು ಮುಗ್ಧ ಕುತೂಹಲ ಬಹಳ ಆಪ್ತವಾಯಿತು .ನನ್ನ ಪ್ರೀತಿಯ ಕಾಣಿಕೆಯಾಗಿ ಒಂದು ಒಳ್ಳೆಯ ಇಂಗ್ಲಿಷ್ ಕೃತಿ ಅಂಚೆ ಮೂಲಕ ಕಳುಹಿಸಿದ್ದೆ .ಈಚೆಗೆ ಅವರು ತೀರಿಕೊಂಡರು .ಈ ಕೃತಿ ರಚನೆ ಮೊದಲೇ ಆದುದು .ಪುಸ್ತಕ ಬಹಳ ಚೆನ್ನಾಗಿ ಬಂದಿದ್ದು ,ಚಿತ್ರ ಗಳು ನಯನ ಮನೋಹರ . ಇಂತಹ ಪುಸ್ತಕ್ಗಗಳ ಭಾಗಶಃ ಇಲ್ಲವೇ ಪೂರ್ಣ ಶಾಲೆಗಳಲ್ಲಿ ಪಠ್ಯ ವಾಗಿಯೋ ಉಪ ಪಠ್ಯ ವಾಗಿಯೋ ಕೊಡಬೇಕು ಎಂದು ನನ್ನ ಅಭಿಪ್ರಾಯ .
ಇನ್ನೊಂದು ಮತ್ತೊಬ್ಬ ಜೇನು ಕೃಷಿ ಸಾಧಕ ಮನಮೋಹನ ಅವರ ಜೇನೇ ಜೀವನ .ಇದು ಕೂಡಾ ಸಚಿತ್ರ ,ಸೊಗಸಾಗಿ ಮೂಡಿಬಂದಿದೆ