ಬ್ಯಾಂಕ್ ವೃತ್ತಿಯಿಂದ ನಿವೃತ್ತರಾದ ಮೇಲೆ (೬೦ ರ ನಂತರ )ಬರೆಯಲಾರಂಬಿಸಿ ಮೌಲಿಕ ಕೃತಿಗಳನ್ನು ಕೊಟ್ಟವರು ಶ್ರೀ ಶ್ರೀನಿವಾಸ ವೈದ್ಯರು . ಅವರ ಬರಹಗಳಲ್ಲಿ ಎದ್ದು ಕಾಣುವುದು ಒಳ್ಳೆಯ ಹಾಸ್ಯ ಪ್ರಜ್ಞೆ . ವೃತ್ತಿಯಲ್ಲಿ ಇದ್ದುಕೊಂಡೇ ಬರೆದು ಪ್ರಸಿದ್ದರಾದವರು ಶ್ರೀ ಡುಂಡಿರಾಜ್ . ಡುಂಡಿರಾಜ್ ಕೃಷಿ ಪದವೀಧರರು . ಹನಿಗವನ ಕೃಷಿ ಗೆ ಪ್ರಸಿದ್ದರಾದವರು . ಈಗ ನನ್ನ ಕೈಗೆ ಒಂದು ಕೃತಿ ಬಂದಿದೆ .ಅದರ ಲೇಖಕ ಶ್ರೀ ಏನ್ ಎಸ ಲಕ್ಷ್ಮೀನಾರಾಯಣ ಅವರು .ಕೃಷಿ ಪದವೀಧರ ,ಬ್ಯಾಂಕ್ ಉದ್ಯೋಗಿ . ೬೫ ವಯಸ್ಸಿನ ಮೇಲೆ ಅವರ' ಆಕಸ್ಮಿಕ ಆತ್ಮಕಥನ ಕೀಟಲೆಯ ದಿನಗಳು 'ಪ್ರಕಟವಾಗಿದೆ . ಇವರು ರೈತ ಹೋರಾಟದಲ್ಲಿ ಕೂಡಾ ಸಕ್ರಿಯವಾಗಿ ಪಾಲುಗೊಂಡವರು . ಪುಸ್ತಕದುದ್ದಕ್ಕೂ ಅವರ ಹಾಸ್ಯ ಪ್ರಜ್ಞೆ ಎದ್ದು ಕಾಣುವುದು .
ಪುಸ್ತಕದ ಮೊದಲ ಲೇಖನ ನಾಟಿಕೋಳಿ v /s ಕೆಂಟಕಿ ಫ್ರೈಡ್ ಚಿಕನ್ . ಊರಿಂದ ಬಂದ ಹಿರಿಯರು ಇನ್ನೇನು ಮರಳಿ ಹೊರಡುತ್ತೇನೆ ಎಂದಾಗ ಅಮ್ಮ ಮಧ್ಯಾಹ್ನ ಕೋಳಿ ಸಾರು ಮಾಡುವೆ ಉಂಡು ಹೋಗಿ ಎಂದು ಒಪ್ಪಿಸಿ ಭಾರತೀಯ ಕಾಲಮಾನ ಮುಂಜಾನೆ ಹತ್ತು ಗಂಟೆಗೆ ಮಕ್ಕಳ ಬಳಿ ಗೂಡಿನಿಂದ ಸಾಕಿದ ಕೋಳಿ ತರಲು ಹೇಳಿ ಮಸಾಲೆ ಅರೆಯಲು ತೊಡಗುತ್ತಾರೆ . ಆದರೆ ಕೋಳಿ ತಪ್ಪಿಸಿ ಕೊಂಡು ಓಡಾಡಿ ಕೊನೆಗೂ ಸಿಕ್ಕು ಊಟ ಮುಗಿದಾಗ ಭಾರತೀಯ ಕಾಲಮಾನ ೧೫-೩೦ . (ಮಿತ್ರ ಭಾಸ್ಕರ ಕೊಡಿ೦ಬಾಳ ಅವರ ಹರಕೆಯ ಕೋಳಿ ಉಪ್ಪಿನಂಗಡಿ ಪೇಟೆಯಲ್ಲಿ ತಪ್ಪಿಸಿ ಕೊಂಡ ಕತೆ ನೆನಪಿಗೆ ಬಂತು .).
ಲೇಖಕ ಬರೆಯುತ್ತಾರೆ ''ಈ ಕೋಳಿ ಬೇಟೆ ಆ ಕಾಲದ ಮನೆ ಮನೆಯ ಕಥೆಯೇ ಆಗಿತ್ತು .
ಆದರೆ ಈಗೆಲ್ಲಿದೆ ಆ ಸಂಭ್ರಮ ?
ಒಂದು ಫೋನ್ ಕರೆ ಸಾಕು .ಹಸಿ ಮಾಂಸವೂ ,ಕೋಳಿ ಮೀನುಗಳೂ .ಬಿಸಿ ಬಿಸಿ ದೇಶ -ವಿದೇಶಿ ಕಂಪನಿ ಗಳ ತಿನಿಸು ಭಕ್ಷ್ಯಗಳೂ ,ಕೇವಲ ಮೂವತ್ತು ನಿಮಿಷದಲ್ಲಿ ನಿಮ್ಮ ಟೇಬಲ್ ಮೇಲೆ ಕಂಗೊಳಿಸುತ್ತವೆ .ಆ ದಿನಗಳ ಕೋಳಿ ಬೇಟೆಯೂ .ಅತಿಥಿಗಳ ಇರಿಸು ಮುರುಸೂ ,ಮಸಾಲೆ ಸಾಮಗ್ರಿಗಳನ್ನು ಹೊಂದಿಸುವ ಕಷ್ಟಗಳು ಯಾವುವೂ ಈಗಿಲ್ಲ .ದುಡ್ಡಿಗೂ ಬರವಿಲ್ಲ .ಬರವಿರುವುದು ಆ ಆತ್ಮೀಯತೆಯಲ್ಲಿ ;ಅಡಿಗೆ ಮಾಡಿ ಬಡಿಸುವ ಸಂಭ್ರಮದಲ್ಲಿ .ಕೋಳಿ ಬೇಟೆಯ ಮಕ್ಕಳಾಟದಲ್ಲಿ .ಆ ಚಡಪಡಿಕೆಯಲ್ಲಿ .ಆ' ಇಲ್ಲದಿರುವಿಕೆಯ ಶ್ರೀಮಂತಿಕೆ ಯಲ್ಲಿ 'ಈಗಿನ 'ಇರುವಿಕೆಯ ಬಡತನದಲ್ಲಿ ಅಲ್ಲ .''
ಪುಸ್ತಕದುದ್ದಕ್ಕೂ ಹಾಸ್ಯ ಲೇಪಿತ ಪನ್ ಗಳೂ ,ನುಡಿಗಟ್ಟುಗಳೂ ಇದ್ದು ನಗೆ ಉಕ್ಕಿಸಿದರೆ(ವೈ ಏನ್ ಕೆ ಬರಹ ನೆನಪಿಸುವ ) ,ಹೃದಯ ಭಾರವಾಗಿಸುವ ಆತ್ಮೀಯ ಘಟನೆಗಳ ಚಿತ್ರಣವೂ ಇದೆ .ಕೆಲ ನುಡಿಗಟ್ಟುಗಳ ಉದಾ : ಅಕುಡುಕ ,ಕುಡಿಯದ ಕೂಸು (ಕುಡಿಯದವನು ).ಎಲೆಮಾನವ (ಇಸ್ಪೀಟು ಎಲೆಗೆ ದಾಸ ),ಗುಂಡು ಮೇಜಿನ ಪರಿಷತ್ ,ಒಂದು ಹಣ್ಣೂ ಬಿಡದೆ ಕದಿ ಯುವ 'ಬೋಳುವಾರರು'ನಿತ್ಯ ಸಂಜೆ ಕ್ಲಬ್ ಗೆ ಭೇಟಿ ನೀಡುವ 'ಸಂಜೇವ 'ರರು ಇತ್ಯಾದಿ .
ಒಟ್ಟಿನಲ್ಲಿ ಇತ್ತೀಚೆಗೆ ಖರೀದಿಸಿ ಓದಿದ ಸಂತೋಷ ಪಟ್ಟ ಪುಸ್ತಕ . ಇವರಿಂದ ಇನ್ನೂ ಒಳ್ಳೆಯ ಕೃತಿಗಳನ್ನು ನಿರೀಕ್ಷಿಸ ಬಹುದು ಎಂದು ಖಂಡಿತವಾಗಿ ಹೇಳುತ್ತೇನೆ .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ