ನಾನು ಆಸ್ಪತ್ರೆಯಲ್ಲಿ ಗೌರವಿಸುವ ಒಂದು ನೌಕರ ವರ್ಗ ಸ್ವಚ್ಛ ಕಾರಿಣಿ ಯರದು . ಮುಂಜಾನೆ ಎಂಟು ಗಂಟೆಗೆ ನಾನು ಆಸ್ಪತ್ರೆಯಲ್ಲಿ ಹಾಜರು ಆಗುವ ವೇಳೆ ಹಗಲು ಪಾಳಿಯಯವರು ಗುಡಿಸಿ ಸಾರಿಸುತ್ತಾ ಇರುವರು . ನಾನು ಅವರೊಡನೆ ಉಭಯ ಕುಶಲೋಪರಿ ವಿಚಾರಿಸುವೆನು . ನನ್ನನ್ನು ಕಂಡ ಕೂಡಲೇ ಅವರು ಕೈಯಲ್ಲಿ ಇರುವ ಪೊರಕೆಯನ್ನು ಅಡಗಿಸುವರು ಮತ್ತು ವಂದಿಸುವರು . ಪೊರಕೆ ಅಡಗಿಸುವುದು ಬೆಳ ಬೆಳಗ್ಗೆ ನನಗೆ ಅದರ ದರ್ಶನ ಆಗದಿರಲಿ ಎಂದು ಇರ ಬೇಕು .
ಬರಗೂರು ರಾಮಚಂದ್ರಪ್ಪ ಅವರ ಅನುಭವ ಕಥನ ಕಾಗೆ ಕಾರುಣ್ಯದ ಕಣ್ಣು ಓದಿ ಮುಗಿಸಿದೆ .. ಕೊಂಡೆತಿಮ್ಮನಹಳ್ಳಿ ಯಲ್ಲಿ ತಾವು ಹೈ ಸ್ಕೂಲ್ ಅಧ್ಯಾಪಕರಾಗಿದ್ದಾಗ ಬಾಡಿಗೆ ಮನೆಯಲ್ಲಿ ಮುಂಜಾನೆ ಎದ್ದ ಒಡನೆ ಕಾಣುವ ಜಾಗದಲ್ಲಿ ಹಿಡಿ ಸೂಡಿ ಇಡುತ್ತಿದ್ದು ತಮ್ಮ ಮನೆಯಲ್ಲಿ ಮಲಗಲು ಬರುತ್ತಿದ್ದ ಪರವೂರಿನ ವಿದ್ಯಾರ್ಥಿಗಳಿಗೆ ''ಪೊರಕೆ ಮನೆಯನ್ನು ಸ್ವಚ್ಛ ಮಾಡುತ್ತೆ ,ನಾವು ಮನವನ್ನೂ ಸ್ವಚ್ಛ ಮಾಡಿಕೊಂಡು ಬೆಳಿಗ್ಗೆ ಎದ್ದ ಕೂಡಲೇ ಮನೆ ,ಮನೆಯ ಹೊರಗೆಲ್ಲಾ ಸ್ವಚ್ಛ ಮಾಡುವ ಪೊರಕೆಯ 'ದರ್ಶನ 'ಮಾಡಿ ಕೈ ಮುಗಿಯ ಬೇಕು .ಇದು ಅಂತರಂಗ ಮತ್ತು ಬಹಿರಂಗ ಸ್ವಚ್ಛತೆಗೆ ಕೊಡುವ ಗೌರವ ''ಎಂದು ವಿವರಿಸಿ ಮನವರಿಕೆ ಮಾಡಿ ಕೊಟ್ಟಿದ್ದೆ .''ಎಂದು ವಿವರಿಸಿರುವರು . ನನಗೂ ಇದೇ ಅಭಿಪ್ರಾಯ ಇದ್ದರೂ ಅದನ್ನು ವಿವರಿಸಿ ನನ್ನ ಸಹೋದ್ಯೋಗಿಗಳನ್ನು ಗಲಿಬಿಲಿ ಮಾಡ ಹೋಗುವುದಿಲ್ಲ .
ಶ್ರೀ ಪುರುಷೋತ್ತಮ ಬಿಳಿಮಲೆ ಅವರು ತಮ್ಮ ಆತ್ಮ ಚರಿತ್ರೆ ಗೆ' ಕಾಗೆ ಮುಟ್ಟಿದ ನೀರು 'ಎಂದು ಕರೆದಿದ್ದಾರೆ . ಬರಗೂರು ಆತ್ಮ ಚರಿತ್ಮಾತ್ಮಕ ವಾದ ಕೃತಿಗೆ 'ಕಾಗೆ ಕಾರುಣ್ಯ' ಎಂದು ಹೆಸರು ಇಟ್ಟಿ ರುವರು . ಕಾಗೆ ಕೋಗಿಲೆಯು ಮೊಟ್ಟೆಗೆ ಕಾವು ಕೊಟ್ಟು ಮರಿ ಮಾಡಿ ಬೆಳೆಸುವ ಕೂಡಿ ಬಾಳುವ ,ಮಮತೆ ಮತ್ತು ಸಮತೆಯ ಸಂಕೇತ ಎಂಬ ಅರ್ಥದಲ್ಲಿ ಅದನ್ನು ಬಳಸಿದ್ದಾರೆ .
ಪುಸ್ತಕದ ಸಮರ್ಪಣೆ ಹೀಗಿದೆ -''ನನ್ನಲ್ಲಿ ಪರ್ಯಾಯ ಚಿಂತನೆಗೆ ಪ್ರೇರಣೆ ನೀಡಿದ ,ನಮ್ಮೂರು ಬರಗೂರಿನ ಕಾಗೆ ,ಕತ್ತಾಳೆ ,ಕೆರೆ ,ಕುಂಟೆ ,ಹಳ್ಳ ,ಕೊಳ್ಳ.ಗುಬ್ಬಚ್ಚಿ ,ಬೇವು,ಹೊಂಗೆ ,ಜಾಲಿಯ ಮರಗಳೇ ಮುಂತಾದ ಪ್ರಕೃತಿ ಸಂಪತ್ತಿಗೆ ಈ ಕೃತಿಯನ್ನು ಕೃತಜ್ಞತೆಯಿಂದ ಅರ್ಪಿಸುತ್ತೇನೆ ''
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ