ಬೆಂಬಲಿಗರು

ಬುಧವಾರ, ಸೆಪ್ಟೆಂಬರ್ 28, 2022

ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲಾ

               ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲಾ 

            



ನನ್ನಲ್ಲಿ ಬಹಳ ಮಂದಿ ನಿಮಗೆ ಶಾಸ್ತ್ರೀಯ ಸಂಗೀತದಲ್ಲಿ ಆಸಕ್ತಿ ಹೇಗೆ ಬಂತು ?ಎಂದು ಪ್ರಶ್ನಿಸುತ್ತಾರೆ . 

ನಮ್ಮ ಅಜ್ಜನ ಮನೆ ಉಕ್ಕಿನಡ್ಕ ಸಮೀಪ ಗುರುವಾರೆ . ಅಜ್ಜನ ಮನೆ ದಾಟಿ ಮುಂದೆ ಹೋದರೆ ನೆಲ್ಲಿಕುಂಜೆ ಗುತ್ತು .ಗುತ್ತು ಗೋವಿಂದ ಭಟ್ ಎಂಬವರು ತಮಿಳು ನಾಡಿಗೆ ಹೋಗಿ ಸಂಗೀತ ಕಲಿತು ಬಂದು ಪ್ರಸಿದ್ಧ ವಯಲಿನ್ ವಾದಕ ಎಂದು ಹೆಸರು ಪಡೆದಿದ್ದು ಆಸಕ್ತರಿಗೆ ಕಲಿಸುತ್ತಿದ್ದರು . ಅವರ ಮಗಳನ್ನು ನನ್ನ ದೊಡ್ಡಪ್ಪ ಸಿನೆಮಾ ನಟ ಗಣಪತಿ ಭಟ್ ಅವರಿಗೆ ಮದುವೆ ಮಾಡಿ ಕೊಟ್ಟುದರಿಂದ ನಮ್ಮ ಬಂಧುವೂ ಆಗಿದ್ದರು . ಮಗ  ವಿಘ್ನೇಶ್ವರ ಭಟ್ ಮೃದಂಗ ದಲ್ಲಿ ,ಸದಾಶಿವ ಭಟ್ ಕೊಳಲು ಮತ್ತು ಪಿಟೀಲು ,ಬಾಲಸುಬ್ರಹ್ಮಣ್ಯಂ ಮೋರ್ಸಿಂಗ್ ವಾದನದಲ್ಲಿ ನುರಿತವರಾಗಿ ಇದ್ದು ನಮ್ಮ ಮನೆಯಲ್ಲಿ ಕೂಡಾ ಕೆಲವು ಕಚೇರಿ ನಡೆಸಿದ್ದರು .ನನ್ನ ದೊಡ್ಡಪ್ಪನ ಮಗಳು ಪುಷ್ಪಲತಾ ಅಕ್ಕ ಮದ್ರಾಸ್ ನಲ್ಲಿ ಸಂಗೀತ ಕಲಿಯುತ್ತಿದ್ದು ಊರಿಗೆ ಬಂದಾಗ ಸಣ್ಣ ಸಣ್ಣ ಕಚೇರಿ ನಡೆಯುವುದು . 

ನನ್ನ ದೊಡ್ಡ ಅಕ್ಕ ಪರಮೇಶ್ವರಿ ನನಗಿಂತ ಎಂಟು ವರ್ಷ ದೊಡ್ಡವಳು . ಅವಳ ಬಾಲ್ಯ ,ಶಿಕ್ಷಣ ನನ್ನ ಅಜ್ಜನ ಮನೆಯಲ್ಲಿ . ಅವಳು ಕೂಡಾ ಗುತ್ತು  ಗೋವಿಂದ ಅಜ್ಜನವರ ಬಳಿ ಹಾಡುಗಾರಿಕೆ ಮತ್ತು ಪಿಟೀಲು ಕಲಿಯುತ್ತಿದ್ದ್ದು ರಜೆಯಲ್ಲಿ  ಮನೆಗೆ ಬಂದಾಗ ' ರಾ ರಾ ವೇಣು  ಗೋಪಾ ಬಾ ಲಾ , ಲಂಬೋದರ ಲಕುಮಿಕರಾ ನುಡಿಸುತ್ತಿದ್ದ ನೆನಪು ಇದೆ . ನನಗೆ ಸರಿ ಅರಿವು ಮೂಡುವಾಗ ಅವಳ ಮದುವೆ ಆಗಿ ಗಂಡನ ಮನೆಗೆ ಹೋಗಿ ಆಗಿತ್ತು . 

ಮದುವೆ ಆದ ಬಳಿಕ ಸಂಗೀತ ಕ್ಕೆ ವಿರಾಮ ಬಿದ್ದು ,ಪಿಟೀಲು ಅಟ್ಟ ವೇರಿತ್ತು .ಮತ್ತೆ ನಾಲ್ಕು ಮಕ್ಕಳು ಆದ ಮೇಲೆ ಅವಳಿಗೆ ಸಂಗೀತ ಕಲಿಕೆ ಮುಂದುವರಿಸುವ ಹುಕ್ಕಿ ಬಂದು ,ಅಟ್ಟದಿಂದ ಪಿಟೀಲು ಕೆಳಗಿರಿಸಲು ವಾತಾಪಿ ಗಣಪತಿಯ ವಾಹನ ದ ಮರಿಗಳು ಅದರ ಹೊರಗಿಂದ ಒಂದೊಂದೇ ಬಂದವು .ಅದನ್ನೆಲ್ಲ ಸರಿ ಪಡಿಸಿ ,ತನ್ನ ದೊಡ್ಡ ಮಗಳು ಉಷಾ ಳನ್ನು ಕರೆದು ಕೊಂಡು ಕಾಂಚನ ಐಯ್ಯರ್ ಬಳಿಗೆ ಹೋಗಿ ತಾಯಿ ಮಗಳು ಇಬ್ಬರೂ ಶಿಷ್ಯ ವೃತ್ತಿ ಸ್ವೀಕರಿಸಿದರು .ಆಗ ಅಕ್ಕನ ಮನೆಯಿಂದ ಆರು ಮೈಲು ಉಪ್ಪಿನಂಗಡಿಗೆ ನಡೆದು ಹೋಗ ಬೇಕು .ಅಲ್ಲಿಂದ ಕಾಂಚನಕ್ಕೆ . ಹೀಗೆ ಮಧ್ಯ ವಯಸ್ಸಿನಲ್ಲಿ ಸಂಗೀತ ಜೂನಿಯರ್ ಮತ್ತು ಸೀನಿಯರ್ ಪರೀಕ್ಷೆ ಮಾಡಿದಳು .ಆಗೆಲ್ಲಾ ಈ ಪರೀಕ್ಷೆ ಮಂಗಳೂರಿನಲ್ಲಿ ನಡೆಯುತ್ತಿದ್ದು ಒಂದು ಪರೀಕ್ಷೆಗೆ ನಾನೇ ಕರೆದು ಕೊಂಡು ಹೋಗಿದ್ದೆ . 

ಪರಿಸರದವರು ಸಂಗೀತ ಕಲಿಯಲು ಕಷ್ಟ ಆಗುವುದನ್ನು ಕಂಡು ಮುಂದೆ ಇಳಂತಿಲ ಮತ್ತು ಉರುವಾಲು ಪದವಿನಲ್ಲಿ ಕಾಂಚನ ಶಿಷ್ಯೆಯರಿಂದ  (ಶ್ರೀಮತಿ ಮೀನಾಕ್ಷಿ ಟೀಚರ್ ಎಂಬುವರು ಚೆನ್ನಾಗಿ ಕಲಿಸುತ್ತಿದ್ದರು ) ಸಂಗೀತ ತರಗತಿಗಳನ್ನು ಆರಂಭಿಸುವಲ್ಲಿ ನನ್ನ ಸಹೋದರಿಯ ಪ್ರಯತ್ನ ಗಮನಾರ್ಹ . ಅಕ್ಕನ ಮಗಳು ಉಷಾ ಮುಂದೆ ಎಂ ಎಸ ಶೀಲಾ ಅವರಲ್ಲಿ ಅಭ್ಯಾಸ ಮುಂದುವರಿಸಿ ವಿದುಷಿ ಆದರೆ ಅವಳ ಮಗಳು ಶಿಖಾ ಇಂಜಿನಿಯರ್ ಪದವೀಧರೆ ಕೂಡಾ ತಾಯಿಯ ಪರಂಪರೆ ಮುಂದುವರಿದ್ದಾಳೆ . 

ನನ್ನ ಎರಡನೇ ಅಣ್ಣ ಕೃಷ್ಣ ಭಟ್ ಸುರತ್ಕಲ್ ನಲ್ಲಿ ಇಂಜಿನಿಯರಿಂಗ್ ಕಲಿಯುವಾಗ ಅಲ್ಲಿ ವೇಣು ವಾದನ ಕಲಿಯುತ್ತಿದ್ದು ,ಈಗ ಇಳಿ ವಯಸ್ಸಿನಲ್ಲಿಯೂ ಅದನ್ನು ಮುಂದು ವರಿಸಿರುವನು . 

ನನ್ನ ಚಿಕ್ಕಮ್ಮ ಸಾವಿತ್ರಿ ಅಮ್ಮ ,ಹಿಂದೂಸ್ತಾನಿ ಹಾಡುಗಾರಿಕೆ ಕಲಿತಿದ್ದು ,ವಾರಕ್ಕೊಮ್ಮೆ ಹಾರ್ಮೋನಿಯಂ ಹಿಡಿದು ಸುಶ್ರಾವ್ಯ ವಾಗಿ ಹಾಡುವಾಗ ನಾವು ಮಕ್ಕಳು ಸುತ್ತಲೂ ಕುಳಿತು ಕೇಳುತ್ತ್ತಿದೆವು . 

ಮೊನ್ನೆ ಬಹುವಚನಮ್ ನಲ್ಲಿ  ಶ್ರೀಶ ಕುಮಾರ್ ಅವರ ಸಹೋದರಿಯರು ನನ್ನ ಅಕ್ಕ ಮತ್ತು ಸೊಸೆಯ ಸಂಗೀತ ಸಾಂಗತ್ಯ ಪುನಃ ಪುನಃ ನೆನೆಸಿ ಕೊಂಡಾಗ ಇದೆಲ್ಲಾ ಜ್ಞಾಪಕಕ್ಕೆ ಬಂತು  .

 Violin - Wikipedia

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ