ಬೆಂಬಲಿಗರು

ಶುಕ್ರವಾರ, ಜುಲೈ 15, 2022

ರೇಷನ್ ಅಂಗಡಿ

 ಕರೋಪಾಡಿ ಕನ್ಯಾನದಿಂದ ಪಶ್ಚಿಮಕ್ಕೆ ಕೇರಳಕ್ಕೆ ತಾಗಿ ಇರುವ ಗ್ರಾಮ.ಮಿತ್ತನಡ್ಕ ಇದರ ಕೇಂದ್ರ ಸ್ಥಾನ . ಕರೋಪಾಡಿ ಯಲ್ಲಿ ಕೃಷಿಕರ ಸಹಕಾರಿ ಸಂಘ ಸ್ಥಾಪಿತವಾಗಿ ಇದ್ದು ಕನ್ಯಾನದಲ್ಲಿ  ಒಂದು ರೇಷನ್ ಷಾಪ್ ನಡೆಸುತ್ತಿದ್ದರು . ಕನ್ಯಾನ ಗ್ರಾಮದ ಕೃಷಿಕರೂ ಇದೇ ಸಂಘವನ್ನು ಅವಲಂಬಿಸಿ ಇದ್ದರು.(ಮುಖ್ಯವಾಗಿ ಸಾಲ ಕ್ಕೆ ).ಪಾದೆಕಲ್ ನ ಶ್ರೀ ಸಿ ಎಚ್ ಶಂಕರ ನಾರಾಯಣ ಭಟ್ ಎಂಬುವರು ಈ ಸೊಸೈಟಿ ಯ ಅಧ್ಯಕ್ಷರಾಗಿ ಇದ್ದರು ,


                         ಕನ್ಯಾನ ದಲ್ಲಿ  ಮುಖ್ಯ ರಸ್ತೆಯ  ಡಿ ಕೆ ಶೇಕಬ್ಬ ನವರ ಜೀನಸು ಅಂಗಡಿ ಪಕ್ಕ ರೇಷನ್ ಅಂಗಡಿ .ಇಲ್ಲಿ  ಪದ್ಮನಾಭ ಭಟ್ ಮತ್ತು ಶಂಕರ ಭಟ್ ಎಂಬುವರು ಉಸ್ತುವಾರಿ ನೋಡಿಕೊಳ್ಳುತ್ತಿದ್ದು , ಡಾ ಮಹಾದೇವ ಶಾಸ್ತ್ರಿ ಅವರ ಕಾಂಪೌಂಡರ್ ಆಗಿಯೂ ಇದ್ದ ತಿಮ್ಮಪ್ಪ ಶೆಟ್ಟರು ತೂಕ ಮಾಡಿ ಕೊಡುವ ಅಸಿಸ್ಟೆಂಟ್ ಆಗಿದ್ದರು .ಕನ್ಯಾನ ಆಗ ಬೆಲ್ಟ್ ಏರಿಯಾ ದಲ್ಲಿ ಇದ್ದುದರಿಂದ  ಅಕ್ಕಿ ,ಅವಲಕ್ಕಿ ,ಸಕ್ಕರೆ ,ಚಿಮಿಣಿ ಎಣ್ಣೆ ಇತ್ಯಾದಿ ಗಳನ್ನು ರೇಷನ್ ಅಂಗಡಿಯಲ್ಲಿಯೇ  ಖರೀದಿಸ ಬೇಕಿತ್ತು .ಈಗಿನಂತೆ ನಿಯತವಾದ ಸರಬರಾಜು ಇರಲಿಲ್ಲ . ಪೇಟೆಗೆ ಹೋಗಿ ಬಂದವರು ಇನಿ ಅರಿ ಬತ್ತುದುಂಡು ,ಇನೀ ಚಿಮ್ಮಿಣಿ ದ ಎಣ್ಣೆ ಬತ್ತುದುಂಡಿಗೆ ಇತ್ಯಾದಿ ಸುದ್ದಿ ತರುವರು.ನಾವು ಶಾಲೆಯಿಂದ ಮರಳುವಾಗ 'ಬಾಲೆ, ಅರಿ ಬಜಿಲು ಬತ್ತುದುಂಡಾ' ಎಂದು ವಿಚಾರಿಸುವರು . ಹೀಗೆ ತಿಳಿದುಕೊಂಡು ಅಂಗಡಿಗೆ ಹೋಗುವುದು .ಕೆಲವೊಮ್ಮೆ ನಾವು ಹೋಗುವಾಗ ಖಾಲಿ . ನೆನೆಸಿದರೆ ಆಶ್ಚರ್ಯ ಆಗುತ್ತದೆ . ಮೊನ್ನೆ ಮೊನ್ನೆಯ ವರೆಗೆ  ನಾವು ರೇಷನ್ ಅಕ್ಕಿ ,ಸಕ್ಕರೆ ,ಗೋಧಿ ,ಎಣ್ಣೆ ಇತ್ಯಾದಿ ಗಳ  ಮೇಲೆ ಎಷ್ಟು ಅವಲಂಬಿಸಿ ಇದ್ದೆವು .ನಾನು ಸರ್ವೀಸ್ ನಲ್ಲಿ ಇದ್ದಾಗ  ವರ್ಗವಾದ ಸಮಯ ರೇಷನ್ ಕಾರ್ಡ್ ಸರೆಂಡರ್ ಮಾಡುವುದು ,ಹೊಸ ಊರಿನಲ್ಲಿ ಅದನ್ನು ಪುನಃ ಪಡೆದು ರೇಷನ್ ಅಂಗಡಿ ಹುಡುಕುವುದು ಮುಖ್ಯ ಕೆಲಸ ಆಗಿತ್ತು ,

 ಕೆಲವೊಮ್ಮೆ ಅಕ್ಕಿ ಕಡಿಮೆ ಬಂದಾಗ ಜೋಳ ಕೊಡುತ್ತಿದ್ದು ಅದನ್ನು ಹೇಗೆ ತಿನ್ನುವುದು ಎಂದು ತಿಳಿಯದೆ ಜೋಳದ ಗಂಜಿ ,ಅಡ್ಯೆ ಇತ್ಯಾದಿ  ಪ್ರಯೋಗ ಮಾಡಿ ಮುಖಃ ಸಿಂಡರಿಸಿ ಕೊಂಡು ತಿನ್ನುತ್ತಿದ್ದೆವು . ರೇಷನ್ ಅಂಗಡಿಯಲ್ಲಿ  ಅಪರೂಪಕ್ಕೆ ಕೋರಾ ಬಟ್ಟೆ ಸಿಗುತ್ತಿದ್ದು ಅದನ್ನೂ ಮುಗಿ ಬಿದ್ದು ಖರೀದಿಸುತ್ತಿದ್ದರು . 

ಧಾನ್ಯಗಳಲ್ಲಿ ಕಲ್ಲು ಮಿಶ್ರಣ ಮಾಡುತ್ತಿದ್ದರೋ ಕಲ್ಲಿನ ಹರಳುಗಳ ಜತೆ ಅಕ್ಕಿ ಸೇರಿಸುತ್ತಿದ್ದರೋ ಎಂದು ಗೊಂದಲ ಆಗುವಂತೆ ಕಲ ಬೆರಕೆ ಸಾಮಾನ್ಯ ಆಗಿತ್ತು .ಎಷ್ಟು ಹೆಕ್ಕಿದರೂ ಉಳಿಯುತ್ತಿತ್ತು .ನಾವು ಕೇಜಿ ಬಟ್ಟಲಿನಲ್ಲಿ ಗಂಜಿ ಹಾಕಿ ಕೈಯಲ್ಲಿ ಜಾಲಾಡುವಾಗ ಕರ ಕರ ಶಬ್ದ ವಾದರೆ ಕಲ್ಲು ಹೆಕ್ಕಿ ಇಡುವುದು .

ಇದನ್ನೆಲ್ಲ ನೆನೆಸುವಾಗ ಆಗ ಎಷ್ಟು ಬಡತನ ಇತ್ತು ಎಂದು ನೀವು ಆಲೋಚಿಸುತ್ತಿರ ಬಹುದು .ಹೌದು ,ಆದರೆ ಆಗಿನ  ಬಡತನದಲ್ಲಿಯೂ ಒಂದು ಸುಖ ಶಾಂತಿ ,ಸುರಕ್ಷತೆ ಅಡಗಿತ್ತು .ಈಗಿನ ಸಂಪತ್ತಿನ ಒಳಗೂ ಹೊರಗೂ ಅಶಾಂತಿ ಅತೃಪ್ತಿ ಅಸುರಕ್ಷಿತತೆ ಹಾಸು ಹೊಕ್ಕಾಗಿ ಇರುವಂತೆ .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ