ಬೆಂಬಲಿಗರು

ಬುಧವಾರ, ಮಾರ್ಚ್ 23, 2022

ಒಂದು ಲಿಫ್ಟ್ ನ ಹಿಂದೆ

 ದಿನಗಳ ಹಿಂದೆ ಮಧ್ಯರಾತ್ರಿ ತನ್ನ ಆಫೀಸ್ ನಿಂದ ಮನೆಗೆ  ಲಿಫ್ಟ್ ನಿರಾಕರಿಸಿ ಓಡುತ್ತಿರುವ  ಯುವಕನ ವಿಡಿಯೋ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು . 

ನಡೆಯುವುದು ಆರೋಗ್ಯಕ್ಕೆ ಒಳ್ಳೆಯದು ಮತ್ತು ವಾಹನಗಳಿಂದ ಆಗುವ ವಾತಾವರಣ ಕಲುಷಿತ ಗೊಳ್ಳುವುದು ಕಡಿಮೆ ಆದೀತು . ಪುತ್ತೂರಿನಂತಹ ಪಟ್ಟಣದಲ್ಲಿ ನಡೆಯುವರಿಗೆ ಕಾಲುದಾರಿ ಬಹುತೇಕ  ಇಲ್ಲದೆ  ಎರ್ರಾ ಬಿರ್ರಿ ಓಡುವ ವಾಹನಗಳಿಂದ ತಪ್ಪಿಸಿ ಹೋಗುವುದು ಹರ ಸಾಹಸ ಆಗಿದೆ . ವಾಹನದಲ್ಲಿ ಸಂಚರಿಸುವುದು ನಡೆಯುವುದಕ್ಕಿಂತ ಸುಲಭ . ಇದರಿಂದ ವಾಹನ ದಟ್ಟಣೆ ಹೆಚ್ಚಾಗಿ ಪಾದಚಾರಿಗಳಿಗೆ ಮತ್ತೂ ಸಂಕಷ್ಟ ..ಇದೊಂದು ವಿಷ ವೃತ್ತ . 

ಬಾಲ್ಯದಲ್ಲಿ ನಾವು ಶಾಲೆಗೆ ಹೋಗುವಾಗ ಅರ್ಧ ಭಾಗ (ಒಂದೂವರೆ ಕಿಲೋಮೀಟರು )ಗದ್ದೆ ಬಯಲು ;ಇನ್ನರ್ಧ ದೂರ ಮಣ್ಣಿನ ರಸ್ತೆ ;ವಿರಳ ಬಸ್ ಸಂಚಾರ ಇತ್ತು . ಕೆಲವೊಮ್ಮೆ ಲಾರಿ ಯವರು ,ಬಾಡಿಗೆ ಕಾರಿನವರು ನಮ್ಮನ್ನು ಬನ್ನಿ ಎಂದು ಕರೆದಾಗ ಬಹಳ ಸಂತೋಷ ದಿಂದ ಹತ್ತಿ ಹೋಗುತ್ತಿದ್ದೆವು . (ಉಚಿತ ಸವಾರಿ ).ರೋಡ್ ರೋಲರ್ ನಲ್ಲಿ ಕುಳಿತು ಹೋದದ್ದೂ ಇದೆ . ನಮ್ಮ  ಹೈ ಸ್ಕೂಲ್ ಅಧ್ಯಾಪಕ ಶ್ರೀಪತಿ ರಾಯರ ಬಳಿ ಒಂದು ಬೈಸಿಕಲ್ ಇತ್ತು .ನಾವು ರಾಜ ರಸ್ತೆಗೆ ಸೇರುವಲ್ಲಿ ಅವರ ಮನೆ .ಅನೇಕ ಬಾರಿ ನನ್ನನ್ನು  ಡಬ್ಬಲ್ ರೈಡ್ ಮಾಡಿ ಕರೆದೊಯ್ಯುತ್ತಿದ್ದರು . (ನಮ್ಮಂತಹ ಧಡಿಯರನ್ನು ಚಡಾವುಗಳು ಇರುವ ಮಣ್ಣಿನ ಮಾರ್ಗದಲ್ಲಿ ಪೆಡಲ್ ಮಾಡಿ ಹೋದ್ದರಿಂದ ಇರಬೇಕು ,ಅವರ ಅರೋಗ್ಯ ಸರಾಸರಿ ಚೆನ್ನಾಗಿದೆ )

  ನಿಜಕ್ಕೂ ಗೆಳೆಯರ ಜತೆ ನಾವು ನಡೆದು ಹೋಗುವುದನ್ನು ಆನಂದಿಸುತ್ತಿದ್ದೆವು .ಚೇಂಜ್ ಗೆ ವಾಹನ ಸಂಚಾರ ಒಂದು ಖುಷಿ ಕೊಡುತ್ತಿತ್ತು . 

ಈಗ ಅಪರಿಚಿತರು ಕರೆದರೆ ಯಾರೂ ವಾಹನ ಹತ್ತರು .ನಂಬಿಕೆ ವಿಶ್ವಾಸ ಕಡಿಮೆ ಆಗಿದೆ . ಆ ತರಹ ಕರೆಯುವವರೂ  ಕಡಿಮೆ . ಸಂಬಂಧಿಕರ ಮನೆಗೆ ಸಮಾರಂಭಕ್ಕೆ ಹೋಗಿ ಬರುವಾಗ ಪರಿಚಯದವರು ಕಂಡರೂ ವಾಹನ ನಿಲ್ಲಿಸಿ ಬರುತ್ತೀರಾ ಎಂದು ಕೇಳುವುದಿಲ್ಲ . ಒಂದು ಶನಿವಾರ ನಾನು ಕೊಣಾಜೆ ಮುಡಿಪ್ಪು ರಸ್ತೆಯಲ್ಲಿ ಮಧ್ಯಾಹ್ನ ಬರುವಾಗ ಶಾಲೆಯ ಹುಡುಗನನ್ನು ಕಂಡು ಕಾರು ನಿಲ್ಲಿಸಿ 'ಬಾ ಮಾರಾಯ ನಿನ್ನನ್ನು ಬಿಡುತ್ತೇನೆ "ಎಂದು ಕರೆದೆ . ಆತ ಒಳಗೆ ಬಂದು ಕುಳಿತ ಮೇಲೆ ನಿನ್ನ ಮನೆ ಎಲ್ಲಿ ಇತ್ಯಾದಿ ವಿಚಾರಿಸಲು ಎಕಾ ಏಕಿ ಹೆದರಿ ನಿಲ್ಲಿಸಿ ನಿಲ್ಲಿಸಿ ಎಂದ .ಅವನಿಗೆ  ಈ ಆಸಾಮಿ ತನ್ನನ್ನು ಕಿಡ್ನ್ಯಾಪ್ ಮಾಡುತ್ತಿದ್ದಾನೆ ಎಂದು ಭಯ ವಾದಂತೆ ಕಂಡಿತು . ಅವನನ್ನು ಸಂತಯಿಸಿ ಅಲ್ಲೇ ಬಿಟ್ಟೆ . 

ಆದರೂ ಹಳ್ಳಿಗಳಲ್ಲಿ ಮತ್ತು ಮನೆಯ ಅಕ್ಕ ಪಕ್ಕದವರು ಕಂಡರೆ ನಾನು ನಿಲ್ಲಿಸಿ ಬರ್ಪಾರಾ ಎಂದು ಕೇಳುತ್ತೇನೆ . ಪಾದಚಾರಿಗಳಿಗೆ ದಾರಿ ಇದ್ದರೆ ನಾನು ನಡೆದೇ ಹೋಗಲು ಇಷ್ಟ ಪಡುವನು . ದ್ವಿಚಕ್ರ ವಾಹನದಲ್ಲಿ ಹೋಗಲು ಮನೆಯವರ ಆಕ್ಷೇಪ (ಸುರಕ್ಷತೆಯ ದೃಷ್ಟಿಯಿಂದ )ಇರುವುದರಿಂದ ಗೃಹ ಶಾಂತಿಗಾಗಿ ಕಾರಿನಲ್ಲಿ ಒಬ್ಬನೇ ಹೋಗುವಾಗ ಏನೋ ಕಸಿವಿಸಿ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ