ಬೆಂಬಲಿಗರು

ಮಂಗಳವಾರ, ಮಾರ್ಚ್ 22, 2022

ಹುಲಿಗೆಪ್ಪ ಕಟ್ಟಿಮನಿ

                 ಹುಲಿಗೆಪ್ಪ ಕಟ್ಟಿಮನಿ 


ನಿನ್ನೆಯ ದಿನ ಸಂಜೆ ಬಹು ವಚನಂ ನಲ್ಲಿ ರಂಗ ಕರ್ಮಿ ಶ್ರೀ ಹುಲಿಗೆಪ್ಪಾ ಕಟ್ಟಿಮನಿ ಯವರ ಕಾರ್ಯಕ್ರಮ ಇತ್ತು . ಶ್ರೀಯುತರು ಹಿರಿಯ ಕಲಾವಿದರು ;ರಂಗಾಯಣದ  ಸುಧೀರ್ಘ ಅರ್ಥಪೂರ್ಣ ಕಲಾ ಸೇವೆಯಿಂದ ಇತ್ತೀಚಿಗೆ ನಿವೃತ್ತ ರಾದವರು. ಜೈಲು ಕೈದಿಗಳಿಗೆ ನಾಟಕ ತರಬೇತಿ ಮಾಡಿಸಿ ಅವರ ಬಂಧಿ ಜೀವನ ಸಹ್ಯವಾಗುವಂತೆ ಮಾಡಿದ್ದಲ್ಲದೆ ಅವರ ಮನ ಪರಿವರ್ತನೆ  ಮಾಡುವದುದರಲ್ಲಿ ಬಹು ಮಟ್ಟಿಗೆ ಯಶಸ್ವಿ ಆದವರು . ನಾನು ನೇರವಾಗಿ ಇವರ ನಾಟಕಗಳನ್ನು ನೋಡಿಲ್ಲ .ಕುತೂಹಲದಿಂದ ನಿನ್ನೆ ಸಂಜೆ ಹೋಗಿದ್ದೆ . 

ಕಟ್ಟೀಮನಿಯವರು ತಮ್ಮ ಗುರು ಶ್ರೀ  ಬಿ ವಿ ಕಾರಂತರನ್ನು ನೆನೆಪಿಸಿಕೊಂಡು ತಮ್ಮ ಆರಂಭದ ಕಲಿಕಾ ದಿನಗಳಲ್ಲಿ ಗುರುಗಳು ಬಸ್ ಸ್ಟಾಂಡ್ , ರೈಲ್ವೆ ಸ್ಟೇಷನ್ ನಂತಹ ಸಾರ್ವಜನಿಕ ಸ್ಥಳಗಳಿಗೆ ಹೋಗಿ ಎಲ್ಲರೊಡನೆ  ಒಂದಾಗಿ ಅಲ್ಲಿಯ ಒಂದೊಂದು ಘಟನೆಯನ್ನೂ ಸೂಕ್ಷ್ಮವಾಗಿ ಗಮನಿಸುವ ಅಭ್ಯಾಸ ಮಾಡಿಸಿದರು .'ನಾಟಕವೆಂದರೆ ವೇಷ ಹಾಕಿ ಸಂಭಾಷಣೆ ಕಕ್ಕುವುದು ಅಲ್ಲಾ ;ಪಾತ್ರದ ಆತ್ಮ ರಂಗಕ್ಕೆ ಬರಬೇಕು .ಕಳೇಬರ ಅಲ್ಲ .'ಎಂಬುದನ್ನು ಹೇಳಿ ಕೊಟ್ಟವರು . 

ಕೈದಿಗಳಿಗೆ ನಾಟಕ ಹೇಳಿಕೊಡುವ ಕಾರ್ಯ ತಾವು ಪ್ರಸಿದ್ಧ ಬಳ್ಳಾರಿ ಜೈಲಿನಲ್ಲಿ ಆರಂಭಿಸಿದ್ದು ;ಆರಂಭದಲ್ಲಿ ಎದುರಿಸಿದ  ಸವಾಲುಗಳನ್ನು ವಿವರಿಸಿದ ಅವರು ಮುಂದೆ ಅದು ಯಶಸ್ವೀ ಆದ ಬಗ್ಗೆ ತಿಳಿಸಿದರು .ಶ್ರವಣ ಬೆಳಗೊಳ ಮಹಾಮಸ್ತಕಾಭಿಷೇಕ ದ ಜನ  ಜಂಗುಳಿಯಲ್ಲಿಯೂ  ತಮ್ಮ  ತಂಡ ದ ಕೈದಿಗಳು ತಪ್ಪಿಸಿ ಓಡಿ ಹೋಗದೆ ಪುನಃ ಬಂದ ವಿಚಾರ ಸ್ವಾರಸ್ಯ ವಾಗಿತ್ತು . ಪುನಃ ಯಾಕೆ ಬಂದ್ರಿ ಎಂದು ಕೇಳಿದ್ದಕ್ಕೆ'ನಾಟಕ್ದಲ್ಲಿ   ನಮ್ಮ ಪಾತ್ರ ಮಾಡ್ಬೇಕಲ್ರೀ" ಎನ್ನುವಷ್ಟು ಇನ್ವೋಲ್ವೆಮೆಂಟ್ ಅವರಲ್ಲಿ ಇತ್ತು ಎಂದರು . 

ವಿಶ್ವ ರಂಗ ಭೂಮಿ ದಿನ (ಒಂದು ವಾರ ಮೊದಲೇ ಆಚರಿಸಿದರು )ದ ಅಂಗವಾಗಿ ನಡೆದ ಕಾರ್ಯಕ್ರಮ . ಐ ಕೆ ಬೊಳುವಾರು ಶ್ರೀ ಪೀಟರ್ ಸೆಲ್ಲರ್ಸ್ ಅವರ ಸಂದೇಶದ ಕನ್ನಡ ಅನುವಾದ ಓಡಿದರು . 24x7 ಸುದ್ದಿ ಮಾಧ್ಯಮಗಳ ಭರಾಟೆಯಿಂದ ತಪ್ಪಿಸಿ ಮಾನವೀಯ ಸಂಬಂಧಗಳನ್ನು ಹುಡುಕುವ ,ಸೃಜ್ನನಶೀಲ ಮನಸುಗಳ ಕಟ್ಟುವಿಕೆ ಆಗ ಬೇಕೆಂಬುದು ಒಟ್ಟಾರೆ ಆಶಯ .ಇದನ್ನು ಅತಿಥಿಗಳೂ ಒತ್ತಿ ಹೇಳಿದರು . 

ಒಟ್ಟಾರೆ  ಒಂದು ಸುಂದರ ಸಂಜೆ ,ಉಪಯುಕ್ತವಾಗಿ ಕಳೆದ  ಭಾವ .ಆಯೋಜಕರರಿಗೆ ಧನ್ಯವಾದಗಳು .

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ