ಬೆಂಬಲಿಗರು

ಸೋಮವಾರ, ಫೆಬ್ರವರಿ 15, 2021

ಪಿತ್ತ ಕೋಶದ ಕಲ್ಲು

                ಪಿತ್ತ ಕೋಶದ ಕಲ್ಲು 

ನಮ್ಮಲ್ಲಿ ಯಾವುದಾದರೂ ನಿರ್ಮಾಣಕ್ಕೆ ಮೊದಲು ಶಂಕು ಸ್ಥಾಪನೆ ಅಥವಾ ಕಲ್ಲು ಹಾಕುವುದು ಎಂದು ವಾಡಿಕೆಯಲ್ಲಿ ಇದೆ . ಕಲ್ಲು ಹಾಕಿ ಭಾವಚಿತ್ರ ಸುದ್ದಿ ಬಂದ ಮೇಲೆ ಬರೀ ಕಲ್ಲು ಮಾತ್ರ ಉಳಿದದ್ದನ್ನೂ ಕಂಡಿದ್ದೇವೆ . ಪಿತ್ತ ಕೋಶದ ಕಲ್ಲೂ ಮುಂದೆ ಬರುವ ತೊಂದರೆಗಳ ಶಂಕು ಸ್ಥಾಪನೆ ಇರಬಹುದು . 

                     
The Biliary Tree | Radiology Key

ಪಿತ್ತ ಕೋಶ ಎಂದರೆ ಪಿತ್ತ ಜನಕಾಂಗ(ಲಿವರ್ ) ದಿಂದ ಕರುಳಿನ ದಾರಿಯಲ್ಲಿ ಯಲ್ಲಿ ಇರುವ ಒಂದು ಶೇಖರಣಾ ಸಂಚಿ . ಮುಖ್ಯವಾಗಿ ಮೇದಸ್ಸಿನ ಜೀರ್ಣ ಕ್ರಿಯೆಗೆ  ಬೇಕಾದ ಪಿತ್ತ ರಸವನ್ನು ಪಿತ್ತ ಜನಕಾಂಗ ಉತ್ಪಾದಿಸಿ ಕರುಳಿಗೆ  ಕಳುಸಿಸುತ್ತದೆ .ತನ್ನಲ್ಲಿ ಕಾಪಿಟ್ಟ ಪಿತ್ತ ರಸವನ್ನು ಪಿತ್ತ ಕೋಶ ಕೊಬ್ಬು ಉಳ್ಳ ಆಹಾರ ಕರುಳು ತಲುಪಿದಾಗ  ತಾ ನು ಸಂಕುಚಿಸಿ ಪಿತ್ತ ನಾಳದ ಮೂಲಕ ಅಲ್ಲಿಗೆ ರವಾನಿಸುವುದು .ಪಿತ್ತ ರಸದಲ್ಲಿ ಕೊಲೆಸ್ಟರಾಲ್ ಅಧಿಕ ಇದ್ದು ಕೆಲವೊಂದು ಕಾರಣಗಳಿಂದ ಅದು ಹರಳು ಗೊಂಡು ಕಲ್ಲಾಗುವುದು ..ಇದರ ಜೊತೆ ಕೆಂಪು ರಕ್ತ ಕಣದ ಅವಶೇಷಗಳೂ ಸೇರಿ ಕಲ್ಲನ್ನು ವರ್ಣಮಯ ಮಾಡುವುದುಂಟು 

ಈ ಕಲ್ಲು (ಕಲ್ಲುಗಳು ) ತಟಸ್ಥ ವಾಗಿ ಇದ್ದು ಯಾವುದೇ ತೊಂದರೆ ಕೊಡದೇ ಇರುವುದು ಜಾಸ್ತಿ .ಆದರೆ ಕೆಲವೊಮ್ಮೆ ಮುಂದಿನ ಅನಾಹುತಗಳಿಗೆ ಆಹ್ವಾನ ಇರ ಬಹುದು .ಮುಖ್ಯವಾಗಿ  ಪಿತ್ತ ಕೋಶದ ಸೋಂಕು ಮತ್ತು ಅಪರೂಪಕ್ಕೆ ಅದರ ಕ್ಯಾನ್ಸರ್ ಕಾಯಿಲೆ  ಇನ್ನು ಕೆಲವರಲ್ಲಿ ಇಲ್ಲಿ ಉತ್ಪತ್ತಿ ಆದ ಕಲ್ಲುಗಳು ಪಿತ್ತ ನಾಳವನ್ನು ಹೊಕ್ಕು  ಅಲ್ಲಿ ತಡೆ ,ಸೋಂಕು ಇತ್ಯಾದಿ ಉಂಟು ಮಾಡುವುದಲ್ಲದೆ ,ಪಿತ್ತ ನಾಳ ಕರುಳಿಗೆ ಸೇರುವ ಸನಿಹದಲ್ಲಿ ಇರುವ ಮೇದೋಜೀರಕ ಗ್ರಂಥಿಯ ಉರಿಯೂತಕ್ಕೆ ಕಾರಣ  ಆಗುವವು . 

ಶ್ವೇತ ವರ್ಣಿಯರು ,ಬಹು ಪ್ರಸವಿಸಿದ ಹೆಂಗಳೆಯರು ,ಸ್ಥೂಲ ಕಾಯದವರು (ಬೊಜ್ಜು ಇದ್ದು ಹಠಾತ್ ಕಡಿಮೆ ಮಾಡಿಕೊಂಡವರು ಕೂಡ ) ,ಕುಟುಂಬದಲ್ಲಿ ಪಿತ್ತ ಕಲ್ಲಿನ ಇತಿಹಾಸ ಇರುವವರು ಇದರ ಉಪಟಳಕ್ಕೆ ಗುರಿಯಾಗುವುದು ಹೆಚ್ಚು .(Female ,Fertile ,Forty ,Fair ,Family History of gall stones 5 Fs).

ಪಿತ್ತ ಕೋಶದ ಕಲ್ಲುಗಳು  ಬಹುತೇಕ ಯಾವುದೇ ರೋಗ ಲಕ್ಷಣಗಳನ್ನು  ಉಂಟು ಮಾಡದೇ ಮೌನವಾಗಿ ಇರುತ್ತವೆ . ಆದರೆ ಕಲ್ಲು ಪಿತ್ತ ಕೋಶದ ಬಾಯಿಗೆ ಅಡ್ಡ ಬಂದರೆ  ಆಹಾರ ಸೇವನೆ (ಮುಖ್ಯವಾಗಿ ಎಣ್ಣೆ ಪದಾರ್ಥ )ನಂತರ ಉದರದ ಮೇಲ್ಬಾಗ  ನೋವು ತೊಡಗಿ ಕೆಲ ಕಾಲ ಇರುವುದು . 

ಇನ್ನು  ಪಿತ್ತ ಕೋಶದ  ಸೋಂಕು ಉಂಟಾದರೆ ಹೊಟ್ಟೆ ನೋವು ,ವಾಂತಿ ಮತ್ತು  ಜ್ವರ ಬರ ಬಹುದು . 

ಅಲ್ಟ್ರಾ  ಸೌಂಡ್ ಸ್ಕ್ಯಾನ್ ಮೂಲಕ ಈ ಕಲ್ಲುಗಳನ್ನು  ದೃಡೀಕರಿಸುವರು

ಪಿತ್ತ  ಕೋಶದ ಸಣ್ಣ ಕಲ್ಲುಗಳಿಗೆ ಸಾಮಾನ್ಯವಾಗಿ ಯಾವುದೇ  ಚಿಕಿತ್ಸೆ ಬೇಡ .ಕಲ್ಲು  ದೊಡ್ಡದಿದ್ದರೆ ,ಪಿತ್ತ ಕೋಶ ತನ್ನ ಸಂಕುಚನಾ ಸಾಮರ್ಥ್ಯ ಕಳೆದು ಕೊಂಡಿದ್ದರೆ  ಮತ್ತು  ಪಿತ್ತ  ಕೋಶದ ಸೋಂಕು ಉಂಟು ಮಾಡಿದರೆ  ಪಿತ್ತ ಕೋಶ ವನ್ನು ಶಸ್ತ್ರ ಕ್ರಿಯೆಯ ಮೂಲಕ  ತೆಗೆದು ಹಾಕುವರು .ಇದನ್ನು ಉದರ ದರ್ಶಕ ಶಸ್ತ್ರ ಚಿಕಿತ್ಸೆ ಮೂಲಕ ಮಾಡಿದರೆ ರೋಗಿ ಬೇಗ ಗುಣಮುಖನಾಗಿ  ತನ್ನ ಕೆಲಸ ಕಾರ್ಯಗಳಲ್ಲಿ ತೊಡಗಿ ಕೊಳ್ಳ ಬಹುದು .ಪಿತ್ತ ಕೋಶದ ಕಲ್ಲು  ಕರಗಿಸುವ ಮಾತ್ರೆಗಳು  ಇದ್ದರೂ  ಅವನ್ನು ನಿಲ್ಲಿಸಿದಾಗ ಕಲ್ಲುಗಳು ಮರುಕಳಿಸುವವು . 

 

 

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ