ಬೆಂಬಲಿಗರು

ಭಾನುವಾರ, ಫೆಬ್ರವರಿ 14, 2021

ರೇಬಿಸ್ ಕಾಯಿಲೆ ತಡೆಗಟ್ಟುವಿಕೆ

                       ರೇಬಿಸ್  ಕಾಯಿಲೆ ತಡೆಗಟ್ಟುವುದು 

ನಾನು   ಉದ್ದೇಶ ಪೂರ್ವಕ  ಹುಚ್ಚು ನಾಯಿ ಕಾಯಿಲೆ ಎಂದು ಬರೆದಿಲ್ಲ .ಏಕೆಂದರೆ  ಹುಚ್ಚು  ನಾಯಿ ಕಡಿತದಿಂದ ಬಹುತೇಕ ಬರುವ ರೋಗ ಆದರೂ ಬೆಕ್ಕು ,ರಾಸು ,ಕಾಡು ಪ್ರಾಣಿಗಳು ,ಬಾವಲಿಗಳನಂತಹ  ಇತರ ಸಸ್ತನಿಗಳೂ  ಇದನ್ನು ಹರಡ  ಬಹುದು ,

 ಈ  ಕಾಯಿಲೆ  ಶೇಕಡಾ ನೂರರಷ್ಟು  ಮಾರಣಾಂತಿಕ . ಆದುದರಿಂದ  ಬರದಂತೆ ತಡೆಗಟ್ಟುವುದೇ ಇರುವ   ದಾರಿ . 

ನಾಯಿ  ಕಚ್ಚಿದ ಒಡನೆ ಶುದ್ಧ ನೀರಿನಲ್ಲಿ ಗಾಯವನ್ನು ಸೋಪ್ ಹಾಕಿ ತೊಳೆಯ ಬೇಕು .ಅರಿಶಿಣ ,ಮೆಣಸಿನ ಹುಡಿ ಉಪ್ಪು ಇತ್ಯಾದಿ ಹಚ್ಚಬಾರದು .ವೈರಸ್ ನಿರೋಧಕ ಆಲ್ಕೋಹಾಲ್ ಅಥವಾ ಅಯೋಡೀನ್ ದ್ರಾವಣ ಹಚ್ಚ ಬಹುದು. ಆದಷ್ಟು  ಗಾಯಕ್ಕೆ ಹೊಲಿಗೆ ಹಾಕಬಾರದು .ಒಂದು ವೇಳೆ ಅನಿವಾರ್ಯ   ಅದರೆ  ಗಾಯದ ಸುತ್ತ ರೇಬೀಸ್ ಪ್ರತಿವಿಷ (ಇಮ್ಯೂನೊಗ್ಲೊಬ್ಯೂಲಿನ್ )ಕೊಟ್ಟು ಹೊಲಿಗೆ  ಹಾಕುವರು . 

 ಶಂಕಿತ ರೇಬೀಸ್ ಪ್ರಾಣಿಯ  ಸಂಪರ್ಕ ಮತ್ತು ಗಾಯವನ್ನು  ಮೂರು ತರಹ ವಿ೦ಗ ಡಿಸಿರುವರು

 ೧  ಶಂಕಿತ ಪ್ರಾಣಿಯ ಸ್ಪರ್ಶ ,ಯಾವುದೇ ಗಾಯಗಳಿಲ್ಲದ ಚರ್ಮವನ್ನು ಪ್ರಾಣಿ ನೆಕ್ಕಿದರೆ ಅಥವಾ ಪ್ರಾಣಿಯ ಸ್ರಾವ ಸ್ಪರ್ಶ .ಇಂತಹ ಸಂದರ್ಭ  ಆ ಜಾಗವನ್ನು ಚೆನ್ನಾಗಿ ತೊಳೆದರೆ ಸಾಕು .ರೋಗ ನಿರೋಧಕ ಲಸಿಕೆ ಬೇಡ . 

೨. ರಕ್ತಸ್ರಾವ ಇಲ್ಲದ ಮೇಲ್ಮೈ ಕೆರೆತ ಗಾಯ .ಇದಕ್ಕೆ ಗಾಯವನ್ನು ತೊಳೆದು ಪೂರ್ಣ ಪ್ರಮಾಣದ ರೇಬೀಸ್  ಲಸಿಕೆ    ಹಾಕುವುದು . 

೩.  ಒಂದು ಅಥವಾ ಹೆಚ್ಚು ಆಳವಾದ ಗಾಯ ಅಥವಾ ಮೊದಲೇ ಗಾಯ ಇದ್ದ ಚರ್ಮವನ್ನು ನೆಕ್ಕಿದರೆ . ಇಂತಹ ಸಂದರ್ಭ ಗಾಯದ ಉಪಚಾರದೊಂದಿಗೆ ,  ರೆಡಿ ಮೇಡ್ ರೇಬೀಸ್ ನಿರೋಧಕ (immunoglobulin ),ಜತೆಗೆ ಲಸಿಕೆ ಕೊಡಬೇಕು . 

 ರೇಬೀಸ್ ಲಸಿಕೆ ಹಾಕಿಸಿ ಕೊಳ್ಳುವುದರಲ್ಲಿ ಯಾವದೇ ಚೌಕಾಸಿಗೆ ಆಸ್ಪದ ಇಲ್ಲ .ಮತ್ತು  ಟಿ ಟಿ ಇಂಜೆಕ್ಷನ್ ಕೊಟ್ಟರೆ ಸಾಲದು .ಟಿ ಟಿ ಇರುವದು ಧನುರ್ವಾಯು ಕಾಯಿಲೆ ಬರದಂತೆ ,ರೇಬೀಸ್ ತಡೆಗಟ್ಟದು .ಬಹಳ ಮಂದಿ ನಮ್ಮಲ್ಲಿ  " ನಾಯಿ ಕಚ್ಚಿದೆ ,ಒಳ್ಳೆಯ ನಾಯಿ ,ನಮ್ಮನ್ನು ಕಂಡರೆ ಯಾವಾಗಲೂ ಬಾಲ ಅಲ್ಲಾಡಿಸುತ್ತದೆ . ಇಂಜೆಕ್ಷನ್ ಇಲ್ಲದೇ  ಸುಧಾರಿಸ ಬಹುದೋ ''ಎಂದು ನಮ್ಮ ಬಾಯಿಯಿಂದ ಬೇಡ ಎಂದು ಹೇಳಿಸಲು  ಪ್ರಯತ್ನಿಸುತ್ತಾರೆ .ಇದಕ್ಕೆ ಆಸ್ಪದ ಇಲ್ಲ .ನಾಯಿಗೆ ಆಂಟಿ ರೇಬೀಸ್ ಚುಚ್ಚು ಮದ್ದು ಕೊಟ್ಟಿದ್ದರೂ ನಾವು ತೆಗೆದು ಕೊಳ್ಳುವುದು ಲೇಸು . 

ಲಸಿಕೆಯನ್ನು  ೦ ,೩,೭,೧೪ ಮತ್ತು ೨೮ ನೇ ದಿನ  (ಮೊದಲ ಡೋಸ್  ಕಡಿತದ ಕೂಡಲೇ ಹಾಕಿಸುವುದು ,ಅದು ೦ ದಿನ ) .ಇಂಜೆಕ್ಷನ್ ಭುಜಕ್ಕೆ ಕೊಡುವರು .ಮೊದಲ ಇಂಜೆಕ್ಷನ್ ದಿನದಿಂದ ೧೪ ದಿನಗಳ ನಂತರ  ರೇಬೀಸ್ ಪ್ರತಿರೋಧಕ ಆಂಟಿಬಾಡಿ ನಮ್ಮ ಶರೀರದಲ್ಲಿ ಕಾರ್ಯಾರಂಭ ಮಾಡುವುದು . 

 ಕಚ್ಚಿದ ಪ್ರಾಣಿ  ನಾಯಿ ಅಥವಾ ಬೆಕ್ಕು ಆಗಿದ್ದರೆ ಹತ್ತು ದಿನ ಪೂರ್ಣ ನಿರೀಕ್ಷಣೆಯಲ್ಲಿ ಇಟ್ಟು  ಅವುಗಳ ಅರೋಗ್ಯ ಮತ್ತು ಚಲನವಲನ  ಸಂಪೂರ್ಣ ಮೊದಲಿನಂತೆ ಇದ್ದಾರೆ ೧೪ ನೇ ದಿನದ ಲಸಿಕೆ ಯನ್ನು ಕೊಡಬೇಕಿಲ್ಲ ,೨೮ ನೇ ದಿನ ಮತ್ತೊಂದು ಹಾಕಿಸಿದರೆ ಸಾಕು . ಆದರೆ ಇತರ ಪ್ರಾಣಿಗಳ   ಕಡಿತಕ್ಕೆ ಇದು ಅನ್ವಯ ಆಗುವುದಿಲ್ಲ . 

ಕಾಡು ಪ್ರಾಣಿಗಳ ಕಡಿತಕ್ಕೆ ೩ ನೇ ವರ್ಗದ ಕಡಿತ ದ  ಚಿಕಿತ್ಸೆ ಕೊಡಬೇಕು .ಇಲಿ ಕಡಿತಕ್ಕೆ ರೇಬೀಸ್ ವ್ಯಾಕ್ಸೀನ್ ಬೇಡ .ಭಾರತದಲ್ಲಿ ಬಾವಲಿ ಸಂಪರ್ಕಕ್ಕೂ ಇದರ ಅಗತ್ಯ ಇಲ್ಲ . ಶಂಕಿತ ರೇಬೀಸ್ ಇದ್ದ ದನದ ಹಾಲು ಕಾಯಿಸಿ ಕುಡಿಯಬಹುದು .(ಪ್ಯಾಸ್ಚುರಿ ಕರಿಸಿದ ಹಾಲೂ ).ಮಾಂಸ ಬೇಯಿಸಿ ತಿಂದರೆ ಲಸಿಕೆ ಬೇಡ 

ಒಂದು ವೇಳೆ ಹಲವು ವರ್ಷಗಳ ಹಿಂದೆ ರೇಬೀಸ್ ವ್ಯಾಕ್ಸೀನ್ ತೆಗೆದು ಕೊಂಡಿದ್ದರೆ ಪುನಃ ಕಡಿತಕ್ಕೆ ಒಳಗಾದರೆ  ೦ ಮತ್ತು ೩ ನೇ ದಿನದ ಎರಡು ಡೋಸ್  ಸಾಕು . ೩ನೇ ವರ್ಗದ  ಗಾಯಕ್ಕೂ ರೇಬೀಸ್ ನಿರೋಧಕ  ಇಮ್ಯೂನೊಗ್ಲೊಬ್ಯೂಲಿನ್ ಕೊಡುವ ಅವಶ್ಯಕತೆ ಇಲ್ಲ . 

ಪ್ರಾಣಿಗಳ ಜತೆ ಕೆಲಸ ಮಾಡುವವರು ,ವೈಲ್ಡ್ ಲೈಫ್ ಲೈಫ್ ವಾರ್ಡನ್ ಈ ಕಾಯಿಲೆ ಬರದಂತೆ  ವ್ಯಾಕ್ಸೀನ್ ತೆಗೆದುಕೊಳ್ಳುವುದು ಉತ್ತಮ . ಇವರಿಗೆ  ೦ , ೭ ಮತ್ತು ೨೧ ಅಥವಾ ೨೮ ರಂದು ಹೀಗೆ ಮೂರು  ಡೋಸ್  ಸಾಕು . 

ಮೇಲೆ ತಿಳಿಸಿದ ಡೋಸ್ ಎಲ್ಲಾ ಸಾಮಾನ್ಯವಾಗಿ ಮಾಂಸಖಂಡಗಳಿಗೆ  ಚುಚ್ಚುವ ಇಂಜೆಕ್ಷನ್ ರೀತಿಗೆ .ಇದೇ ಲಸಿಕೆ ಚರ್ಮಕ್ಕೆ ಚುಚ್ಚಿದರೆ  ಕಡಿಮೆ ಪ್ರಮಾಣದ ಲಸಿಕೆ ಸಾಕು ಮತ್ತು  ಕಡಿತದ ನಂತರದ  14 ನೇ ದಿನದ ಡೋಸ್ ಬೇಕಾಗಿಲ್ಲ .ಆದರೆ ಇದನ್ನು ಕೊಡುವವರಿಗೆ ಸೂಕ್ತ ತರಬೇತಿ ಬೇಕು .

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ