ಕೇರಳ ಲಿಟರೇಚರ್ ಫೆಸ್ಟಿವಲ್ ನ ನಾನು ಮೆಚ್ಚಿದ ಇನ್ನೊಂದು ಗೋಷ್ಠಿ ಶ್ರೀ ಸಂತೋಷ್ ಜಾರ್ಜ್ ಕುಳಂಗರ ಅವರದ್ದು . ಈ ವ್ಯಕ್ತಿ ಒಂದು ವಿಸ್ಮಯ . ಚರಿತ್ರೆ ಮತ್ತು ಪ್ರವಾಸ ಸಂಬಂದಿಸಿದ ಮಲಯಾಳಂ ಟಿ ವಿ ಚಾನೆಲ್ ' ಸಫಾರಿ 'ಯನ್ನು ದಶಕಗಳಿಂದ ,ಯಾವುದೇ ಬಾಹ್ಯ ಜಾಹಿರಾತು ಇಲ್ಲದೆ ನಡೆಸಿ ಕೊಂಡು ಬರುತ್ತಿದ್ದಾರೆ .ತಾನು ಸ್ವಯಂ ೧೩೦ ಕ್ಕೂ ಅಧಿಕ ದೇಶಗಳ ಪ್ರವಾಸ ಕೈಗೊಂಡು ಅದನ್ನು ದಾಖಲಿಸಿ ಸಂಚಾರಂ ಎಂಬ ಶೀರ್ಷಿಕೆಯಲ್ಲಿ ಪ್ರಸಾರ ಮಾಡಿದ್ದಾರೆ . ಅವುಗಳ ಡಿವಿಡಿ , ಯು ಎಸ್ ಬಿ ಗಳನ್ನು ತಯಾರಿಸಿ ಆಸಕ್ತರಿಗೆ ಲಭ್ಯ ಮಾಡಿದ್ದಾರೆ . ನಾನು ಹಲವು ಎಪಿಸೋಡ್ ಗಳನ್ನು ನೋಡಿ ಆನಂದ ಪಟ್ಟಿದ್ದೇನೆ . ಅವರೊಡನೆ ನಾವೂ ದೇಶ ಸಂಚಾರ ಮಾಡಿದ ಅನುಭವ ಆಗುತ್ತದೆ .
ತಮಗೆ ಸ್ಪೂರ್ತಿ ಪ್ರವಾಸ ಸಾಹಿತ್ಯ ,ಕಾದಂಬರಿ ,ಸಣ್ಣಕತೆ ಇತ್ಯಾದಿಗಳಿಂದ ಪ್ರಸಿದ್ಧ ರಾಗಿ ,ಸಂಸದರೂ ಆಗಿದ್ದ ಜ್ಞಾನ ಪೀಠ ,ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಸಾಹಿತಿ ಪ್ರಸಿದ್ಧ ಸಾಹಿತಿ ಕಲ್ಲಿಕೋಟೆ ಯವರೇ ಆದ ಶ್ರೀ ಎಸ್ ಕೆ ಪೊಟ್ಟೆಕ್ಕಾಟ್ ಎಂದರು . ಪೊಟ್ಟೆಕ್ಕಾಟ್ ಅವರ ಪ್ರವಾಸ ಸಾಹಿತ್ಯ ಬಹುಶಃ ಬೇರೆ ಭಾಷೆಗಳಿಗೆ ಅನುವಾದ ಆಗಿರದಿದ್ದರೂ ಅನುವಾದ ಆಗಿರುವ ಸಣ್ಣ ಕತೆ ಕಾದಂಬರಿಗಳಲ್ಲಿ ಅವರಲ್ಲಿರುವ ಪ್ರವಾಸಿ ಅಲ್ಲಲ್ಲಿ ಪ್ರಕಟವಾಗುವುದನ್ನು ಕಂಡಿದ್ದೇನೆ
ಗೋಷ್ಠಿಯಲ್ಲಿ ಒಂದು ವಿಷಯ ಉಲ್ಲೇಖಿಸಿದರು ..ನಮ್ಮಲ್ಲಿ ಶೈಕ್ಷಣಿಕ ಪ್ರವಾಸ ಎಂದರೆ ಗಟ್ಟಿಯಾಗಿ ಡಿಶುಮ್ ಡಿಶುಮ್ ಸಂಗೀತ ಹಾಕಿಕೊಂಡು ಬಸ್ಸಿನಲ್ಲಿ ಹೋಗಿ ಅಲ್ಲಿ ಇಲ್ಲಿ ಅಡ್ಡಾಡಿ ಬರುವದು .ಆದರೆ ಪಾಶ್ಚಾತ್ಯ ದೇಶಗಳಲ್ಲಿ ಮಕ್ಕಳು ತಿಂಗಳು ಗಟ್ಟಲೆ ಹೊರ ನಾಡುಗಳಿಗೆ ತಾವೇ ಹೋಗಿ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸುವುದರ ಜತೆ ಅಲ್ಲಿಯ ಜೀವನ ಕ್ರಮ ,ಸಂಸ್ಕೃತಿ ಮತ್ತು ಚರಿತ್ರೆ ಯ ಅಧ್ಯಯನ ಮಾಡಿ ವರದಿ ಸಲ್ಲಿಸುವುದು ಪಠ್ಯ ಕ್ರಮದ ಒಂದು ಭಾಗ . (ಇಂಗ್ಲೆಂಡ್ ನಲ್ಲಿ ಕಲಿಯುವ ನನ್ನ ಅಣ್ಣನ ಮೊಮ್ಮಗಳು ಶ್ರೀ ಲಂಕಾ ದೇಶದಲ್ಲಿ ಪ್ರವಾಸಿ ವಾಸ್ತವ್ಯ ಮಾಡಿದ್ದಳು ). ಇದರಿಂದ ವಿದ್ಯಾರ್ಥಿಗಳ ದೃಷ್ಟಿ ಕೋನ ವಿಶಾಲವಾಗುವುದು .
ನಮ್ಮ ದೇಶದಲ್ಲಿ ವಿದ್ಯಾಭ್ಯಾಸ ದ ಜತೆಗೆ ನಾಗರೀಕ ಪ್ರಜ್ಞೆ ಯ ಮೈಗೂಡಿಸುವಿಕೆ ಇಲ್ಲದಿರುವುದು ವಿಷಾದನೀಯ ಎಂದರು .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ