ಬೆಂಬಲಿಗರು

ಬುಧವಾರ, ಆಗಸ್ಟ್ 3, 2022

ಜಂಬೂ ದ್ವೀಪೇ ಪರಶುರಾಮ ಕ್ಷೇತ್ರೇ ಕಲಿಯುಗೇ ಪ್ರಥಮ ಪಾದೇ

ನಿನ್ನೆ ಕೇರಳ ಮತ್ತು  ದಕ್ಷಿಣ ಕನ್ನಡದಲ್ಲಿ ಮಳೆಯ ಅನಾಹುತ ದೃಶ್ಯಗಳನ್ನು ಟಿ ವಿ ಯಲ್ಲಿ ನೋಡುತ್ತಿದ್ದೆ . ಬಾಲ್ಯದಲ್ಲಿ ನನ್ನ ಅಜ್ಜ ಈ ಭಾಗ ವೆಲ್ಲಾ ಪರಶುರಾಮ ಕ್ಷೇತ್ರ ,ಇಲ್ಲಿ ಪ್ರಾಕೃತಿಕ ವಿಕೋಪಗಳು ಆಗುವುದಿಲ್ಲ ಎಂದು ಆಗಾಗ ಹೇಳುತ್ತಿದ್ದರಿಂದ ಒಂದು ಸುರಕ್ಷಿತ ಭಾವನೆ ನಮ್ಮ ಮನಸಿನಲ್ಲಿ ಬೇರೂರಿತ್ತು . ಪರಶುರಾಮನು ಕ್ಷತ್ರಿಯ ಸಂಹಾರ ಮಾಡಿ ಗೆದ್ದ ರಾಜ್ಯಗಳನ್ನೆಲ್ಲಾ  ದಾನ ಮಾಡಿದ ಮೇಲೆ ತನಗೆ ಇರುವುದಕ್ಕೆ ಅರಬೀ ಸಮುದ್ರದಿಂದ  ರಿ ಕ್ಲೈಮ್  ಮಾಡಿದ  ಭೂಮಿಯೇ ಈ ಪ್ರದೇಶ ವೆಂಬ ನಂಬಿಕೆ . ಮುಂಬೈಯಲ್ಲಿ ಬಾಂದ್ರಾ ರಿಕ್ಲ ಮೇಷನ್ ಇದ್ದ ಹಾಗೆ . ಪರಶುರಾಮ  ಕೆಲಸ ಮುಗಿದ ಮೇಲೆ ಯಾಕೆ ಬೇಕು ಎಂದು ಎಸೆದ ಕೊಡಲಿಯ ಅಳತೆಯಷ್ಟು ಸಮುದ್ರರಾಜ ಬಿಟ್ಟು ಕೊಟ್ಟ ಜಾಗ ,ಪಶ್ಚಿಮ ಘಟ್ಟದ ತಪ್ಪಲಲ್ಲಿ ಸಮುದ್ರ ಕರಾವಳಿ ವರೆಗೆ ಇದೆ. 

ಈಗ ಪ್ರಾಕೃತಿಕ ಅನಾಹುತಗಳನ್ನು ನೋಡುವಾಗ ಸಮುದ್ರ ರಾಜ ಪರಶುರಾಮನಿಗೆ ಕೊಟ್ಟ ಲೀಸ್ ಪಿರಿಯಡ್ ಮುಗಿದ ಹಾಗಿದೆ . ಇದು ಯಾಕೆ ಹೀಗೆ ? ಇಲ್ಲಿನ ಗುಡ್ಡ ಬೆಟ್ಟಗಳು ಬೆಂಕಿ ಪೆಟ್ಟಿಗೆಯ ಮನೆಗಳಂತೆ ಉರುಳುತ್ತಿವೆ . ನಮ್ಮಲ್ಲಿ ಮನೆಗಳು ಗುಡ್ಡದ ತಳದಲ್ಲಿ ಇರುವುದು ಸಾಮಾನ್ಯ .ಅಂಗ್ರಿ ಯಲ್ಲಿ ನಮ್ಮ ಮನೆಯೂ ಹಾಗೆಯೇ ಇತ್ತು . ಈಗ ಯಾವ ಸಮಯ ಇವು ಕುಸಿದು ಮನೆಯನ್ನು ಆಹುತಿ ತೆಗೆದು ಕೊಳ್ಳುತ್ತವೆಯೋ ಎಂದು ಹೇಳಲಾಗದ ಸ್ಥಿತಿ .ಪದ ಕುಸಿಯೇ ನೆಲವಿವುದು ಸರಿ ,ಆದರೆ ನೆಲ ಕುಸಿಯೇ ?

ಮಣ್ಣು ಯಾಕೆ ಹೀಗಾಯಿತು ?ನಾವು ಕಾಡು ನಾಶ ಮಾಡಿದ್ದು ,ಕಲ್ಲಿನ ಹಾಸು ಕಡಿದು ತೆಗೆದದ್ದು ,ಸಿಕ್ಕ ಸಿಕ್ಕಲ್ಲಿ ನೀರಿನ ನೈಸರ್ಗಿಕ ಹರಿವಿಗೆ ಅಡ್ಡ ಕಟ್ಟಿ ದ್ದು  ಕಾರಣವೇ ?ಅಲ್ಲ ವಾತಾವರಣ ಉಷ್ಣತೆ ಏರು ಪೇರಾಗಿ ಮಳೆ ಒಂದೊಂದು ಪ್ರದೇಶದಲ್ಲಿ  ಯರಾ ಬಿರ್ರಿ ಬರುತ್ತಿದ್ದೆಯೇ ?

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ