ಬೆಂಬಲಿಗರು

ಶನಿವಾರ, ಅಕ್ಟೋಬರ್ 17, 2020

ಚೆನ್ನೈ ದಿನಗಳು 5

                         ಚೆನ್ನೈದಿನಗಳು 5

ಚೆನ್ನೈ ದಕ್ಷಿಣ ಭಾರತದ ಮಹಾ ನಗರ .ಬ್ರಿಟಿಷರ ಆಢಳಿತ ಕೇಂದ್ರ ವೂ ಇಗಿತ್ತು .ಹಳೆಯ ಮದ್ರಾಸ್ ಪ್ರಾಂತ್ಯದಲ್ಲಿ ಕನ್ನಡ ,ಮಲಯಾಳ  ಮತ್ತು ತೆಲುಗು ಭಾಷಿಕ  ಭಾಗಗಳೂ ಇದ್ದುದರಿಂದ ಇಲ್ಲಿ ಇವರೆಲ್ಲರ ಇರುವಿಕೆ ಬೇರೆ ಬೇರೆ ಅನುಪಾತದಲ್ಲಿ ಕಾಣ ಬಹುದು .. 

                  ಇಲ್ಲಿಯ  ನಾಸ್ತಿಕತೆ ಯ ಪ್ರತಿಪಾದಕ  ತಂದೈ ಪೆರಿಯಾರ್  ಅನುಯಾಯಿಗಳು ಅಧಿಕ ಸಂಖ್ಯಯಲ್ಲಿ ಇದ್ದರೂ ದೇವಾಲಯ ,ಪೂಜಾ ಸ್ಥಳ ಗಳಲ್ಲಿ ಫುಲ್ ರಶ್ .ಮೈಗೆಲ್ಲಾ  ಅರಿಶಿನ ಹಚ್ಚಿ ಕೊಂಡು ತುರುಬು ತುಂಬಾ ಹೂವು ಮತ್ತು ರೇಷ್ಮೆ ಸೀರೆ ಉಟ್ಟ ಭಕ್ತೆಯರು ಮತ್ತು ಹಣೆ ಉದ್ದಗಲ ನಾಮ ಹಾಕಿದ ಭಕ್ತರು ಎಲ್ಲೆಲ್ಲೂ ಕಾಣ ಸಿಗುವರು .ಸುಪ್ರಭಾತ , ದೇವರನಾಮಗಳು ಧ್ವನಿ ವರ್ಧಕಗಳ ಮೂಲಕ ಗಲ್ಲಿ ಗಲ್ಲಿಗಳಲ್ಲಿ  ಭಕ್ತಿ ಪ್ರಚೋದನೆ ಮಾಡುತ್ತಿರುವವು . 

ಚೆನ್ನೈ ನಗರ ಅನ್ವೇಷಣೆ ಮಾಡಲು ಟಿ ಟಿ ಕೆ ನಗರ ದರ್ಶನ ಮ್ಯಾಪ್ ತೆಗೆದುಕೊಂಡು ದರ್ಶನೀಯ ಸ್ಥಳ ಗಳು ಮತ್ತ್ತು ಅಲ್ಲಿಗೆ ಹೋಗುವ ರಸ್ತೆ ,ಸಿಟಿ ಬಸ್ ರೂಟ್ ಇತ್ಯಾದಿ ಕಲೆ ಹಾಕಿದೆವು . ಈಗಿನಂತೆ ಗೂಗಲ್ ಮ್ಯಾಪ್ ಇಲ್ಲ .ಚೆನ್ನೈ ನಗರ ಬಸ್ ಮತ್ತು ಉಪನಗರ ರೈಲು ವ್ಯವಸ್ಥೆ ಚೆನ್ನ್ನಾಗಿದೆ .ಈಗ ಸಾಲದ್ದಕ್ಕೆ ಮೆಟ್ರೋ ಸೇರಿಕೊಂಡಿದೆ . 

ಆ ಮೇಲೆ ರಜಾ ದಿನಗಳಂದು ಪ್ಯಾರಿಸ್ ಕಾರ್ನರ್(  ಬೆಂಗಳೂರಿನ ಮೆಜೆಸ್ಟಿಕ್ ,ಅಥವಾ ಮಂಗಳೂರಿನ ಸ್ಟೇಟ್ ಬ್ಯಾಂಕ್ ತರಹ )ಗೆ ಹೋಗಿ ನಮಗೆ ಹೋಗ ಬೇಕಾದ ಜಾಗಕ್ಕೆ ಬಸ್ ಹಿಡಿಯುವೆವು .ಚೆನ್ನೈ ಸಿಟಿ ಬಸ್ ಪಲ್ಲವನ್ ಟ್ರಾನ್ಸ್ಪೋರ್ಟ್ ಕಂಪನಿ  ಅಥವಾ ಪಿ ಟಿ ಸಿ .ಅದರಲ್ಲಿ ಮುಂದಿನ ಬಾಗಿಲು ಮಹಿಳೆಯರಿಗೆ ,ಹಿಂದಿನಿಂದ ಪುರುಷರಿಗೆ .ನಿರ್ವಾಹಕರು ತಮ್ಮ ಆಸನದಿಂದ ಏಳರು .ಕುಳಿತಲ್ಲಿಂದಲೇ ಪ್ರಯಾಣಿಕರ ಮೂಲಕ ಟಿಕೆಟ್ ಪಾಸ್ ಮಾಡುವರು . 

ಸಮೀಪದ  ಸ್ಥಳಗಳಿಗೆ ಬೈಕ್ ನಲ್ಲಿ  ಮೂವರು ಕುಳಿತು ಹೋಗುತ್ತಿದ್ದೆವು .ಈಗಿನ ಜನದಟ್ಟಣೆ ಇರಲಿಲ್ಲ ,ಈಗ ನನಗೆ ಸಿಂಗಲ್ ಆಗಿ ಬೈಕ್ ಸಂಚಾರ ಮಾಡಲೂ ಸಾಧ್ಯವಿಲ್ಲ . 

ಚೆನ್ನೈ ನಗರಕ್ಕೆ ರೈಲು ಮೂಲಕ ಬಂದಿಳಿದೊಡನೆ ಪ್ರತ್ಯೇಕ ವಾಸನೆ ಬರುವುದು .ಅದು  ಜೀವನಾಡಿ ಕೂವಂ ನದಿಯ ಗಂಧ ..ಎಲ್ಲ ಕಲ್ಮಶಗಳನ್ನು ಹೊತ್ತ ನದಿಯ ಆಕ್ರಂದ .ಮೊದಮೊದಲು ಹಿಂಸೆಯಾದರೂ ಆ ಮೇಲೆ ರೂಡಿಯಾಗುವುದು . 

                                  ಕೂವಂ ನದಿ 

                             
    ಒಂದು  ಭಾನುವಾರ  ನಾವು ವಂಡಲೂರಿನಲ್ಲಿ ಇರುವ ಅಣ್ಣಾ ಪ್ರಾಣಿ ಸಂಗ್ರಹಾಲಯಕ್ಕೆ  ತೆರಳಿ ಆನಂದಿಸಿದೆವು . 

                       ವಂಡಲೂರು ಪ್ರಾಣಿ ಸಂಗ್ರಹಾಲಯ ಮುಖ್ಯದ್ವಾರ 

ಚೆನ್ನೈ  ಕರಾವಳಿ ನಗರ ಆದುದರಿಂದ ಇಲ್ಲಿ ಬೀಚ್ ಗಳು ಇದ್ದೇ ಇರುತ್ತವೆ .ಸಾರ್ವಜನಿಕ ವಾದ  ಮರೀನಾ ಬೀಚ್ ಪ್ರಸಿದ್ಧ .ಇದರ ಪಕ್ಕದಲ್ಲಿ  ರಾಜಕೀಯ ನಾಯಕರ ಸಮಾಧಿ ಇದೆ ,ನಿರ್ವಹಣೆ  ಅಷ್ಟು ಚೆನ್ನಾಗಿ ಇರಲಿಲ್ಲ .ಇದು ಬಿಟ್ಟರೆ ಬೆಸಂಟ್ ನಗರ ಬೀಚ್ ಇದೆ . 

                        ಬೆಸಂಟ್ ನಗರ ಮತ್ತು ಮರೀನಾ ಬೀಚ್ 


           ವಿ ಜಿ ಪಿ ಬೀಚ್ ಎಂಬ ಖಾಸಗಿ ನಿರ್ವಹಣೆಯ ಕಡಲ ತೀರ ಇದೆ .ನಿರ್ಮಲ ವಾಗಿದೆ .ಮತ್ತು ಮಕ್ಕಳಿಗೆ ಆಟವಾಡಲು ಬೇಕಾದ ವ್ಯವಸ್ಥೆ ಇದೆ .ಇಲ್ಲಿಯ ಕ್ಯಾಂಟೀನ್ ನಲ್ಲಿ ಒಂದು ಭಾರೀ ದೊಡ್ಡ ದೋಸೆ ಆಕರ್ಷಣೆ .ಮತ್ತು ಒಬ್ಬ ಕಾವಲುಗಾರ ಬೊಂಬೆಯಂತೆ ನಿಂತಿರುವನು .ನಾವು ಏನು ಲಾಗ ಹಾಕಿದರೂ ಕಣ್ಣವೆ ಮಿಟುಕಿಸನು .                            



                                
ಮೇಲಿನ ಚಿತ್ರ  ಅಬ್ದುಲ್ ಅಜೀಜ್ ಎಂಬ ಜೀವಂತ ಮೂರ್ತಿ ವಿ ಜಿ ಪಿ ಬೀಚ್ ನ ಆಕರ್ಷಣೆ ಆಗಿದ್ದರು 

ಇತಿಹಾಸ ಪ್ರಸಿದ್ದವಾದ ಮಹಾಬಲಿಪುರಂ ೫೮ ಕಿ ಮೀ ದೂರ ಇದೆ .ಇಲ್ಲಿಯ ಕೋಟೆ ಮತ್ತು  ಸಮುದ್ರ ಕಿನಾರೆ ಪ್ರೇಕ್ಷಣೀಯ .ಹೋಗುವ ದಾರಿಯಲ್ಲಿ ಮೊಸಳೆ ಪಾರ್ಕ್ ಇದೆ .                         


ಇನ್ನು  ನಗರದ ಒಳಗೆ  ಸೆಂಟ್ರಲ್  ನಿಲ್ದಾಣದ  ಕಾರ್ಪೋರೇಶನ್ ಆಡಳಿತ ಕಟ್ಟಡ ರಿಪ್ಪನ್ ಬಿಲ್ಡಿಂಗ್ ರಚನೆ ನೋಡಲು ಅರ್ಹ 

             

ಅಲ್ಲಿಂದ ಪಶ್ಚಿಮ ಕ್ಕೆ ಹೋದರೆ  ರಾಜ್ಯದ  ವಿಧಾನ ಸೌಧ ಸೈನ್ಟ್  ಫೋರ್ಟ್ ಜೋರ್ಜೆ ಮತ್ತು ಹೈ ಕೋರ್ಟ್ ಕಟ್ಟಡಗಳು ಹಳೆಯ ವಾಸ್ತು  ಸೌನ್ದರ್ಯವನ್ನು ತೋರುತ್ತವೆ ..ಪ್ಯಾರಿ ಕಾರ್ನರ್  (ಇಲ್ಲಿ ಪ್ಯಾರಿ ಕಂಪನಿಯ  ಕಚೇರಿ ಇದ್ದುದರಿಂದ ಬಂದಿರಬೇಕು )ಆಗಿನ ದೊಡ್ಡ ಲ್ಯಾಂಡ್ ಮಾರ್ಕ್ .ನಗರ ಮತ್ತು ಪರವೂರ ಬಸ್ ಗಳು ಇಲ್ಲಿಂದ ಹೊ ರಡುತ್ತಿದ್ದವು .ಮತ್ತು ರಖಂ ತರಕಾರಿ ಮಾರ್ಕೆಟ್ ಇತ್ತು .ಈಗ ಅವು ಕೊಯಂಬೀಡಿ ಗೆ 
ಸ್ಥಳಾಂತರ ಹೊಂದಿವೆ .ಪ್ಯಾರಿ ಕಾರ್ನರ್ ಕೊನೆಗೆ  ಬರ್ಮಾ ಬಜಾರ್ ಇತ್ತು .ಇಲ್ಲಿ ಬ್ಲೇಕ್ ಮಾರ್ಕೆಟ್ ಐಟಂ ಗಳು ಸಿಗುತ್ತಿದ್ದವು ಎಂದು ಪ್ರತೀತಿ ..ಫೋರ್ಟ್ ಜಾರ್ಜೆ ಗೆ ಬೀಚ್ ರೈಲ್ವೆ ಸ್ಟೇಷನ್ ಬಳಿಯಿಂದ ಒಂದು ಕಿಂಡಿ ದಾರಿ ಇದೆ .ನಾನು ಈ ದಾರಿಯಿಂದ ಅಲ್ಲಿಗೆ ಆಗಾಗ ಹೋಗುತ್ತಿದ್ದೆ .ಅಲ್ಲಿ ತಮಿಳ್ನಾಡು ಸರಕಾರದ ಟೀ ಕಂಪನಿ ಟಾನ್ ಟೀ ಮಾರುವ ಔಟ್ಲೆಟ್ ಇತ್ತು .ನಮಗೆ ಅವರ ಟೈಗರ್ ಟೀ ರುಚಿ ಹಿಡಿದು ಹೋಗಿತ್ತು . 

ಹೈ ಕೋರ್ಟ್ ಕಟ್ಟಡ 
ಇನ್ನು ನುಂಗಂಬಾಕಂ ಬಳಿ ಕವಿ ದಾರ್ಶನಿಕ ತಿರು ವಳ್ಳ  ರ್  ಸ್ಮಾರಕ ವಳ್ಳುವರ್ ಕೋಟಂ ಇದೆ .ಇಲ್ಲಿ ಕರ ಕುಶಲ ವಸ್ತುಗಳ ಪ್ರದರ್ಶನ ನಡೆಯುವುದು . 

ವಳ್ಳುವರ್ ಕೊಟಂ 
ಸರ್ಕಾರೀವಸ್ತು ಸಂಗ್ರಹಾಲಯ ನೋಡ ಬೇಕಾದುದು ,ಇಲ್ಲಿ ರವಿ ವರ್ಮನ ಚಿತ್ರಗಳು ,ಮತ್ತು ತಂಜಾವೂರಿನ ಕೆತ್ತನೆ ಕೆಲಸಗಳನ್ನು ನೋಡ ಬಹುದು . 

ಮ್ಯೂಸಿಯಂ 
ನನಗೆ ಪ್ರಿಯವಾದ ಕೊನ್ನೆಮಾರಾ ರಾಷ್ಟೀಯ ಪುಸ್ತಕ ಭಂಡಾರ ಪಕ್ಕದಲ್ಲಿಯೇ ಇದೆ .ಕನ್ನಡ ಸೇರಿ ದೇಶದ ಎಲ್ಲಾ ಭಾಷೆಯ ಪುಸ್ತಕಗಳು ,ದಿನ ,ವಾರ ಮತ್ತು ಮಾಸ ಪತ್ರಿಕೆಗಳು ಇಲ್ಲಿಗೆ ಖಡ್ಡಾಯ ಬರುವವು 

ಕೊನ್ನೆಮಾರ ರಾಷ್ಟ್ರೀಯ ಪುಸ್ತಕ ಭಂಡಾರದ ಒಳ ನೋಟ . 
 
ಇನ್ನು  ಇಂಜಂಬಾಕಮ್ ನಲ್ಲಿ  ಚೋಳಮಂಡಲಂ ಕಲಾಗ್ರಾಮ .,ಕೊಟ್ಟೂರ್ ಪುರಂ ನಲ್ಲಿ ಯ ಬಿರ್ಲಾ ಪ್ಲಾನೆಟೋರಿಯಂ ಮತ್ತು ಗಿಂಡಿ ಉರಗ ಉದ್ಯಾನ  ಪ್ರವಾಸಿಗರಲ್ಲಿ ಜನಪ್ರಿಯ .ದೈವ ಭಕ್ತರಿಗೆ ಕಪಾಳೀಶ್ವರ ದೇವಸ್ಥಾನ ,ಪಾರ್ಥ ಸಾರಥಿ ಗುಡಿ ,ಸಂತೋಮ್ ಚರ್ಚ್ ಇತ್ಯಾದಿ ಪವಿತ್ರ ಸ್ಥಳಗಳು ಇವೆ . ಬಹು ಪಾಲು ಸಭಾ ಭವನಗಳು ಟಿ ನಗರ ,ಮೈಲಾಪುರ್ ,ನುಂಗಂಬಾಕಂ (ಎಲ್ಲ ದಕ್ಷಿಣ ಚೆನ್ನೈ )ಸುತ್ತ ಮುತ್ತ ಇವೆ .ಇಲ್ಲಿ ಜಗತ್ ಪ್ರಸಿದ್ಧ ಮಾರ್ಗಳಿ ಸಂಗೀತೋತ್ಸವಕ್ಕೆ ರಸಿಕರು ಮುಗಿ ಬೀಳುವರು . 
ಚೆನ್ನೈ ನಲ್ಲಿ  ಕೂವಂ ತೀರದಲ್ಲಿ ಒಂದು ವಸ್ತುಪ್ರದರ್ಶನ ದ್ವೀಪ ಇದೆ .ಇಲ್ಲಿ ವಾರ್ಷಿಕ ಕೈಗಾರಿಕಾ ವಸ್ತು ಪ್ರದರ್ಶನ ನಡೆಯುವುದು .ಇಲ್ಲಿಯೇ ನನಗೆ ಟೈಗರ್ ಟೀಯ ಪರಿಚಯ ಅದುದು .ರಾತ್ರಿ ಹೊತ್ತು ವಿಹಂಗಮ ನೋಟ ಇರುತ್ತಿತ್ತು . 

ವಸ್ತು ಪ್ರದರ್ಶನ ದ್ವೀಪ . 

ಚೆನ್ನೈ ಗೆ ಬರುವ ಅತಿಥಿಗಳು ರೇಷ್ಮೆ ಸೀರೆಗೆ ಅಸೆ ಪಡುವರು ,ಅವರನ್ನು ಟಿ ನಗರದ ನಲ್ಲಿ ಅಂಡ್ ಕೋ ಗೆ ದರ್ಶನ ಮಾಡಿಸುವೆವು .ಅಲ್ಲಿ ಗಂಡಸರು ಬೇಸರ ಕಳೆಯಲು ಕುಳಿತು ಕೊಳ್ಳುವ ಸ್ಟಳ ಇದೆ .ಕನ್ನಡ ಬಲ್ಲ ಸೇಲ್ಸ್ ಮ್ಯಾನ್ ಇದ್ದಾರೆ .ಈಗ ಕುಮಾರನ್ ಅಂತಹ ಅಂಗಡಿಗಳು ಮೇಲೆ ಬಂದಿವೆ . 

ಬಂದವರನ್ನು ಹೋಟೆಲ್ ಗೆ ಕರೆದುಕೊಂಡು ಹೋಗದಿದ್ದರೆ ಲೋಪ ಆಗುವುದು .ಶರವಣ ಭವನ ಪ್ರಸಿದ್ಧ ಸಸ್ಯಾಹಾರಿ ಹೋಟೆಲ್ .ಈಗ ಜಗತ್ತಿನಾದ್ಯಂತ ಶಾಖೆಗಳು ಇವೆ .ಇಲ್ಲಿಯ  ಮಿನಿ ಇಡ್ಲಿ ಅಥವಾ ತಿರುಪತಿ ಇಡ್ಲಿ ನಮ್ಮ ಮಗನಿಗೆ ಇಷ್ಟ .ನಾವು ಯಾವುದಾದರೂ ಕೆಲಸಕ್ಕೆ ಪುರುಷ್ವಕಾಮ್ ಗೆ  ಹೋದರೆ ಅವನು ಕೂಡಲೇ ನನಗೆ ಬಾಯಾರಿಕೆ ಆಗುವುದು ಎನ್ನುವನು .ಅದು ಶರವಣ ಭವನಕ್ಕೆ ಹೋಗಲು ಸೂಚನೆ . 


ಅಡ್ಯಾರ್ ಗ್ರಾಂಡ್ ಸ್ವೀಟ್ಸ್ ಸಿಹಿತಿಂಡಿ ಮತ್ತು ಖಾರರಕ್ಕೆ ಪ್ರಸಿದ್ಧ ..ಒಳ್ಳೆಯ ಗುಣಮಟ್ಟ ಮತ್ತು ರುಚಿ .ಅಲ್ಲಿಯ ಅತ್ತಿ ರಸ ,ಮುರುಕ್ಕು ಚೆನ್ನಾಗಿ ಇರುತ್ತಿತ್ತು 
ಚೆನ್ನೈ  ಗೆಳೆಯರು

 “I would rather walk with a friend in the dark, than alone in the light.” — Helen Keller. 

                                                                        

“True friends are never apart, maybe in distance but never in heart.” 

 

'ಗೆಳೆತನದ ಸುವಿಶಾಲ ಆಲದ ತಣ್ಣೆಳಲ ತಂಪಿನಲಿ ತಂಗಿರುವೆನು'- ಚೆನ್ನವೀರ ಕಣವಿ

 

ಚೆನ್ನೈ ವಾಸದಲ್ಲಿ ನಮ್ಮ ಬದುಕನ್ನು ಚಂದಗೊಳಿಸಿದ ಮಿತ್ರರು ಹಲವರು.ಅದರಲ್ಲಿ ಮೊದಲಿಗೆ ನೆನಪಿಗೆ ಬರುವುದು ಡಾ ಪ್ರಸನ್ನ ಕುಮಾರ್ .ಅವರ ತಂದೆ ಅರಣ್ಯ ಇಲಾಖೆಯಲ್ಲಿ  ದುಡಿದು ನಿವೃತ್ತ ಜೀವನವನ್ನು ಮೈಸೂರಿನಲ್ಲಿ ನಡೆಸುತ್ತಿದ್ದರು .ನಾನು  ರೇಲ್ವೆ ವೈದ್ಯಕೀಯ ಸೇವೆಯನ್ನು ಮೈಸೂರಿನ ಒಂಟಿಕೊಪ್ಪಲಿನಲ್ಲಿರುವ  ವಿಭಾಗೀಯ ಆಸ್ಪತ್ರೆಯಲ್ಲಿ ಆರಂಭಿಸಿದೆನು .ಅದರ ಮೊದಲು ಮಡಿಕೇರಿ ಅಶ್ವಿನಿ ಆಸ್ಪತ್ರೆಯಲ್ಲಿ ಒಂದು ವರ್ಷ ಇದ್ದೆ. ಪ್ರಸನ್ನ ನಾನು ಮಡಿಕೇರಿ ಬಿಟ್ಟ ಮೇಲೆ ಅಶ್ವಿನಿಗೆ ಸೇರಿದ್ದರು .ನಾನು ಮತ್ತು ಅವರು ಯು ಪಿ ಎಸ ಸಿ ಒಂದೇ ಬ್ಯಾಚ್ ,ವಯಸ್ಸಿನಲ್ಲಿ ನನಗಿಂತ ತುಂಬಾ ಕಿರಿಯರು .ಅವರು ಮೈಸೂರಿನ ರೈಲ್ವೆ ಆಸ್ಪತ್ರೆ ಸೇರಿದಾಗಲೇ ಪರಿಚಯ .ಇಬ್ಬರೂ  ಬ್ಯಾಚಲರ್ .ಸಾಯಂಕಾಲ ಕೆಲಸ ಮುಗಿಸಿ ಒಂಟಿಕೊಪ್ಪನಿಂದ ಸರಸ್ವತಿ ಪುರಂ ನ ಅವರ ಮನೆಗೆ ನಡೆದುಕೊಂಡು ಹೋಗುವುದು .ದಾರಿಯಲ್ಲಿ ಕುವೆಂಪು ಮನೆ ಇತ್ತು .ಭಯ ಭಕ್ತಿಯಿಂದ ಅವರ ಮನೆಯತ್ತ ದೃಷ್ಟಿ ಹಾಕಿ ಹೋಗುತ್ತಿದ್ದೆವು .ಪ್ರಸನ್ನರ ಮನೆಯಲ್ಲಿ  ಅವರ ತಂದೆ ತಾಯಿ ಮಾತ್ರ .ಮಗನ ಸಹೋದ್ಯೋಗಿ ಬಂದರು ಎಂಬ ಖುಷಿಯಲ್ಲಿ  ತರಾತುರಿಯಲ್ಲಿ  ಸ್ಪೆಷಲ್ ಏನಾದರೂ ಮಾಡಿ ಬಡಿಸುವರು .ಅವರ ತಂದೆ ಅಗಾಧ ಆಂಗ್ಲ ಭಾಷಾ ಜ್ಞಾನ ಇದ್ದವರು .ಇಂಗ್ಲಿಷ್ ನಲ್ಲಿ  ಬಹುತೇಕ ಸಂಭಾಷಣೆ ಮಾಡುವರು .ಸ್ನೇಹಮಯಿ ಹೃದಯಗಳ ನೆನಪು ಈಗಲೂ ಬರುತ್ತದೆ . 

  ಮುಂದೆ ನನಗೆ ಸಕಲೇಶಪುರ ,ಪುತ್ತೂರಿಗೆ ವರ್ಗ ಆಯಿತು .ಅಲ್ಲಿಯೂ ನಾನು ರಜೆ ಹಾಕಿದಾಗ ರಿಲೀವಿಂಗ್ ಡ್ಯೂಟಿ ಗೆ ಪ್ರಸನ್ನ ಬರುತ್ತಿದ್ದರು .ಪುತ್ತೂರಿಗೆ ಬಂದರೆ ನನ್ನ ಬಂಧುಗಳ ಮನೆಗೆ ಬರುವರು .ಹಾಗೆ ನನ್ನ ಬಂಧುಗಳಿಗೂ ಪರಿಚಿತ .. ಮುಂದೆ ಅವರು ಸೂಕ್ಷ್ಮಾಣು ಜೀವ ಶಾಸ್ತ್ರ ದಲ್ಲಿ  ಪಿ ಜಿ ಮಾಡಲು ರಜೆ ಹಾಕಿ ಬೆಂಗಳೂರು ವೈದ್ಯಕೀಯ ಕೊಲೆಜ್ ಸೇರಿದರು .ಆಮೇಲೆ ಪ್ರಸಿದ್ಧ ಪೆರಂಬೂರ್ ರೈಲ್ವೆ ಆಸ್ಫತ್ರೆಗೆ ಸೇರಿದವರು ದಕ್ಷಿಣ ರೈಲ್ವೆ ವೈದ್ಯಕೀಯ ವಿಭಾಗ ಮುಖ್ಯಸ್ಥ ರ ಹುದ್ದೆಗೆ ಏರಿ ಪ್ರಸ್ತುತ  ದಕ್ಷಿಣ ಮಧ್ಯ ರೈಲ್ವೆ ಯ ಅದೇ ಹುದ್ದೆಯಲ್ಲಿ ಹೈದರಾಬಾದಿನಲ್ಲಿ ಇರುವರು . 

                                      

ಸರಕಾರಿ ಸೇವೆಗೆ ಬೇಕಾದ ತಾಳ್ಮೆ ,ಸಹನೆ ಮತ್ತು ಕ್ರಿಯಾಶೀಲತೆ  ಅವರಲ್ಲಿ ಇದೆ

                   ನನ್ನ ಚೆನ್ನೈ ದಿನಗಳಲ್ಲಿ ಅವರು ಜೊತೆ ಇದ್ದುದು ನನ್ನ ಭಾಗ್ಯ .ನಾನು ,ಅವರು  ಡಾ ಕೇಶವ್ ಮತ್ತು ಪ್ರಸನ್ನ ಅವರ ಮಿತ್ರರಾದ ಪ್ರದೀಪ್ (-ಇವರು ಓ ಏನ್ ಜಿ ಸಿ ರಲ್ಲಿ ಇಂಜಿನಿಯರ್ ಆಗಿದ್ದವರು ಮುಂದೆ ಕೆಲವೇ ವರ್ಷಗಳಲ್ಲಿ ಬಾಂಬೆ ಹೈ ಅಗ್ನಿ ದುರಂತದಲ್ಲಿ ಕರ್ತವ್ಯದ ವೇಳೆ ಮೃತ ಪಟ್ಟರು ) ಸಾಯಂಕಾಲ ಮಿತ್ರ ಮಂಡಳಿ ನಡೆಸುತ್ತಿದ್ದೆವು .ಆಗ ಹರ್ಷದ್ ಮೆಹತಾ ಏರು ಕಾಲ .ಶೇರ್ ಮಾರ್ಕೆಟ್ ಬಗ್ಗೆ ಚರ್ಚೆ ಆಗುತ್ತಿತ್ತು .ಪ್ರಸನ್ನ ಅವರಿಗೆ ಈ ವಿಷಯದಲ್ಲಿ ಅಷ್ಟು ತಾತ್ಪರ್ಯ ಇರಲಿಲ್ಲ .ನಮ್ಮಲ್ಲೇನೂ  ಹೂಡಿಕೆ ಮಾಡಲು ಭಾರಿ ನಿಕ್ಷೇಪ ಇರಲಿಲ್ಲ .ನನ್ನ  ಎರಡೂವರೆ  ಸಾವಿರ ಇತ್ತ್ತೋ ಏನೋ ?ಆದರೂ ಒಂದು ಮಾತು ಸತ್ಯ .ಹರ್ಷದ್ ಮೆಹ್ತಾ ಏನು ಗೋಲ್ಮಾಲ್ ಮಾಡಿದರೂ ಸಾಮಾನ್ಯ ಭಾರತೀಯರಲ್ಲಿ ವಿತ್ತೀಯ ಹೂಡಿಕೆ ಬಗ್ಗೆ ಆಸಕ್ತಿ ಹುಟ್ಟಿಸಿದ್ದು ಸತ್ಯ .ಆಸ್ಪತ್ರೆಯ ಆಗು ಹೋಗುಗಳು ನಗರದ ವಿದ್ಯಮಾನಗಳು ಚರ್ಚೆಯ  ವಿಷಯ ಆಗಿರುತ್ತಿದ್ದವು . 

ಪ್ರಸನ್ನ ಅವರ ವಿವಾಹ ನಾವು ಚೆನ್ನೈ ನಲ್ಲಿ ಇರುವಾಗ ಆಯಿತು .ತಿರುಚಿನಾಪಳ್ಳಿ  ಯಿಂದ  ಹುಡುಗಿ .ಆರ್ಕಿಟೆಕ್ಟ್ ಆಗಿದ್ದವರು,ತಂದೆ ವೈದ್ಯರು ,ಕನ್ನಡಿಗರು. ನಾವೆಲ್ಲ ಮನೆ ಮದುವೆ ಎಂದೇ ತಿರುಚಿಗೆ ದಿಬ್ಬಣದಲ್ಲಿ ತೆರಳಿ ಸಂಭ್ರಮಿಸಿದೆವು .. ಪತ್ನಿ ಅಪರ್ಣಾ ಅವರೂ ಸ್ನೇಹ ಜೀವಿ .ನಾವು  ಮುಂದೆ ಚೆನ್ನೈ ಗೆ ತೆರಳಿದಾಗ ಅವರ ಮನೆಯಲ್ಲಿಯೇ  ಠಿಕಾಣಿ . 

                                   



ನನ್ನ ಮಗನಿಗೆ  ಪ್ರಸನ್ನ ಅಚ್ಚು ಮೆಚ್ಚಿನ ಫ್ರೆಂಡ್ ..ಅವನನ್ನು ನಮ್ಮಂತೆಯೇ ಚಾಮಿ ಎಂದೇ  ಕರೆಯುತ್ತಿದ್ದರು ಮತ್ತು ಈಗಲೂ ಕರೆಯುವರು .ಪ್ರಸನ್ನ ಅವರಿಗೆ  ಬೀದಿ ನಾಯಿಗಳೆಂದರೆ  ಬಹಳ ಪ್ರೀತಿ .ಎಲ್ಲಿ ಕಂಡರೂ ಕರೆಯುವರು .ಅವರ ಬಳಿ ಒಂದು ಸ್ಕೂಟರ್ ಮತ್ತು ನನ್ನ ಬಳಿ ಬೈಕ್ ಇತ್ತು .ಈ ದ್ವಿಚಕ್ರದಲ್ಲಿ ನಾವು ಚೆನ್ನೈ ಉದ್ದಗಲ ಸುತ್ತಿದ್ದೆವು. 

  ರೈಲ್ವೆ ಆಸ್ಪತ್ರೆಯ ಮೈಕ್ರೋಬಯಾಲಜಿ  ವಿಭಾಗವನ್ನು ಅಭಿವೃದ್ಧಿ ಪಡಿಸಿದ ಶ್ರೇಯಸ್ಸು  ಅವರಿಗೆ ಸಲ್ಲಬೇಕು ..ಇದರ ಜತೆ  ತುರ್ತು ಚಿಕಿತ್ಸಾ ವಿಭಾಗದ ಡ್ಯೂಟಿ ಹಲವು ವರ್ಷ ನಿಭಾಯಿಯಿದ್ದಾರೆ .ಅದು ಸಾಲದೆಂದು  ಆಸ್ಪತ್ರೆಯ ಔಷಧಿ ಭಂಡಾರದ ಮೇಲುಸ್ತುವಾರಿ ಅವರಿಗೆ ಹೊರಿಸಿದ್ದರು .ಸಾಕಷ್ಟು ಹೊರೆ ಎನಿಸಿದ್ದಿರಬಹುದಾದರೂ ಮುಂದೆ ಅವರು ಉನ್ನತ ಹುದ್ದೆ ಗಳಿಗೆ ಹೋಗುವಾಗ ಅನುಭವ ಅವರಿಗೆ ಉಪಯೋಗ ಆಗಿರಬಹುದು .ಅವರು  ಬೆರಳಚ್ಚು ಗಾರರೂ ಆಗಿದ್ದು ನನ್ನ ಪಿ ಜಿ ಪ್ರಬಂಧವನ್ನು  ಟೈಪ್ ಅವರೇ ಮಾಡಿಕೊಟ್ಟಿದ್ದರು . 

ಮಗಳು  ಭಾವನಾ  , ಮಕ್ಕಳ ರೋಗ ದಲ್ಲಿ ಉನ್ನತ ವ್ಯಾಸಂಗ  ಮಾಡುತ್ತಿರುವಳು . 

ಈಗ ಚೆನ್ನೈ ನಲ್ಲಿ ಪ್ರಸನ್ನ ಇಲ್ಲದಿರುವುದರಿಂದ ಆ ನಗರ ನಮಗೆ ತಾಯಿ ಇಲ್ಲದ ತವರು ಮನೆ ಆಗಿದೆ

          ಡಾ  ಕೇಶವ ಪ್ರಹ್ಲಾದ ರಾಯ್ಚುರ್ಕರ್ 

                                


ಡಾ ಕೇಶವ್ ನಾವು ಮೈಸೂರಿನಲ್ಲಿ ಇದ್ದಾಗ ಹರಿಹರ  ರೈಲ್ವೆ ಡಿಸ್ಪೆನ್ಸರಿ ಯಲ್ಲಿ ಇದ್ದರು .ನಾನು ೧೯೮೪ ರ ಅಕ್ಟೋಬರ್ ಅಂತ್ಯಕ್ಕೆ ಅವರ  ಅವರ ರಜಾ ಬದಲಿ ವೈದ್ಯನಾಗಿ ಹೋಗಿದ್ದೆ .ನಾನು ಅಲ್ಲಿರುವಾಗಲೇ ಇಂದಿರಾ ಗಾಂಧಿಯವರ ಹತ್ಯೆ ನಡೆದು ಎಲ್ಲಾ ಬಂಧ್ ಆಗಿತ್ತು .ಅವರ ಫಾರ್ಮಸಿಸ್ಟ್ ದೇವಣ್ಣ ಎಂಬವುವರು ನನ್ನ ಊಟ ಉಪಚಾರ ವ್ಯತ್ಯಯ ಆಗದಂತೆ ನೋಡಿಕೊಂಡರು .ದೇವಣ್ಣ ಯಾವಾಗಲೂ ನಗು ಮುಖ ಮತ್ತು ಸರ್ವ ವ್ಯವಹಾರ ಚತುರರು .ಹರಿಹರಕ್ಕೆ  ನಾನು ತೆರಳುವ ಟ್ರೈನಿನಲ್ಲಿ ಹಾ ಮಾ ನಾಯಕ್ ನಮ್ಮ ಕಂಪಾರ್ಟ್ಮೆಂಟ್ ನಲ್ಲಿ ಇದ್ದರು .ಅವರು ಗುಲ್ಬರ್ಗ ವಿಶ್ವವಿದ್ಯಾಲಯದ  ಉಪ ಕುಲಪತಿ ಯಾಗಿ ಅಧಿಕಾರ ಸ್ವೀಕರಿಸಲು ತೆರಳುತ್ತಿದ್ದರು .. 

               ಕೇಶವ್ ಮುಂದೆ ರೇಡಿಯಾಲಜಿ ಯಲ್ಲಿ ಉನ್ನತ ವ್ಯಾಸಂಗ ಮಾಡಿ ಪೆರಂಬೂರಿಗೆ ಬಂದರು ,ಅವರ ಪತ್ನಿ ವೈದ್ಯೆ ಪ್ಯಾಥೋಲಾಜಿಸ್ಟ್ .ಇಬ್ಬರೂ ಸರಳ ಸುಸಂಸ್ಕೃತ  ಜೀವಿಗಳು .ನಾನು ಚೆನ್ನೈಗೆ ಬಂದಾಗ ಅವರ ಕುಟುಂಬ ಇನ್ನೂ  ಬಂದಿರಲಿಲ್ಲ .ಅವರ ಬಳಿ ಒಂದು ಫಿಯಟ್   ಕಾರ್ ಇತ್ತು .ನಮ್ಮ ಓಡಾಟ ಅದರಲ್ಲಿ 

.ಮಹಾಬಲಿಪುರಂ , ವಿ ಜಿ ಪಿ ಬೀಚ್ ಇತ್ಯಾದಿ ಸುತ್ತಿದೆವು .ಕೇಶವ್ ಸಮಾಧಾನಿ ,ಕೋಪ ಬರುವುದು ಅಪರೂಪ .ಮುಂದೆ ಅವರ ಕುಟುಂಬ ಚೆನ್ನೈಗೆ ಬಂದಾಗ ಅವರ ಮನೆಯ ಊಟೋಪಚಾರ ಸ್ನೇಹ ಆನಂದಿಸಿದ್ದೇವೆ  .ಕೇಶವ್ ರೈಲ್ವೆ ಗೆ ರಾಜೀನಾಮೆ ಕೊಟ್ಟು ಮೈಸೂರಿಗೆ  ಖಾಸಗಿ  ಆರಂಭಿಸಿದರು .ಅವರು ಚೆನ್ನೈ ಬಿಟ್ಟಾಗ ಸಂಕಟ ಆದುದು ಸಹಜ  .ಪ್ರಸನ್ನ ಮದುವೆ ಸಮಯ ಅವರು ಇದ್ದರು .ಈಗ  ಮೈಸೂರಿನಲ್ಲಿ  ಸ್ವಂತ  diagnostic ಸೆಂಟರ್ ನಡೆಸುತ್ತಿದ್ದು  ಮಕ್ಕಳು ಉನ್ನತ  ವೈದ್ಯಕೀಯ ತಜ್ಞರಾಗಿರುವರು .ತಂಪು  ಸಮಯದಲ್ಲಿ    ಅವರನ್ನು  ನೆನೆಸಿಕೊಳ್ಳುವೆನು  . 

                          ಬಾಲಸುಬ್ರಹ್ಮಣ್ಯಂ 

ಇವರ ಬಗ್ಗೆ ಹಿಂದಿನ ಬ್ಲಾಗ್  ನಲ್ಲಿ  ಬರೆದಿರುವೆನು ..ಇವರು ನಮ್ಮ ವಿಭಾಗದಲ್ಲಿ ಆಫೀಸ್ ನಿರ್ವಹಣೆ ಮಾಡುತ್ತಿದ್ದರು .ಅವಿವಾಹಿತ .ನಮಗೆ ಚೆನ್ನೈ ಯ ಭೂಗೋಳ ,ಸರಕಾರಿ ಕಚೇರಿಗಳು ಮತ್ತು ರೈಲ್ವೆ  ಕಟ್ಟಳೆಗಳ ಬಗ್ಗೆ  ಸದಾ  ಸಲಹೆ ಸೂಚನೆ ಕೊಡುತ್ತಿದ್ದರು .ನಿಜ ಅರ್ಥದಲ್ಲಿ ಹಿತೈಷಿ . ಆಸ್ಪತ್ರೆಯ ಎಲ್ಲಾ ವಿಭಾಗದ ನೌಕರರರು ಅವರ ಅನುಭವ ಮತ್ತು ಸೇವಾ ಮನೋಭಾವದ ಲಾಭ ಪಡೆಯುತ್ತಿದ್ದರು .ಈಗ ಅವರು ಇಲ್ಲ .ಅವರ ನೆನಪು ಹಸಿರಾಗಿದೆ 

                       

            ಶಶಿಧರನ್

ಇವರ ಬಗ್ಗೆ ಹಿಂದೆ ಬರೆದಿದ್ದೇನೆ .ರೈಲ್ವೆ ವಿದ್ಯುತ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು .ನನ್ನ ಮಗನನ್ನು ಆವಡಿ ಕೇಂದ್ರೀಯ ವಿದ್ಯಾಲಯ ಕ್ಕೆ ಸೇರಿಸುವಲ್ಲಿ ಮತ್ತು ವೈಷ್ಣವಿ ನಗರದ ವಾಸದಲ್ಲಿ ಅವರು  ಮತ್ತು ಅವರ ಕುಟುಂಬ ತುಂಬಾ ಸಹಾಯ ಮಾಡಿದರು .ಅವರ ಮಕ್ಕಳು   ಕಣ್ಣ ಮತ್ತು ಕುಟ್ಟ(ಕರೆಯುತ್ತಿದ್ದ ಅಡ್ಡ ಹೆಸರು ) ನಮ್ಮ ಮಗನ ಸಹಚರರು .

                          

ಈಗ ನಿವೃತ್ತಿ ಜೀವನ ಕೇರಳದ ಚಾಲಕ್ಕುಡಿಯಲ್ಲಿ ನಡೆಸುತ್ತಿರುವರು . 

ಇದಲ್ಲದೆ   ವೈಷ್ಣವಿ ನಗರದಲ್ಲಿ ಶಂಕನಾ ರಾಯಣನ್ ,ಸರಸ್ವತಿ ದಂಪತಿಗಳು  ಅವರ ಮಗಳು  ಅನಿತಾ ,ಅನಿತಾಳ ದೊಡ್ಡಮ್ಮನ ಮಗಳು ವನಿತಾ ನಮಗೆ ಬಹಳ ಸಹಾಯ ಮಾಡಿರುವರು . ಪರ್ವತ ಆಂಟಿ ಎಂಬ ಪಕ್ಕದ ಮನೆ ಹಿರಿಯರು ಕುಟುಂಬ   ಊರಿಗೆ ಹೋಗಿದ್ದಾಗ  ಕರೆದು ಊಟ   ಹಾಕಿರುವರು .ಅವರನ್ನೆಲ್ಲ ನೆನೆಸಿಕೊಳ್ಳುತ್ತೇನೆ .


ಚೆನ್ನೈ ಯಲ್ಲಿ ನಾವು ಇದ್ದ ವೇಳೆ ಜಯಲಲಿತಾ ಮುಖ್ಯ ಮಂತ್ರಿ .ನಾವು ನಗರಕ್ಕೆ ಕಾಲು ಇಟ್ಟಾಗ  ಕಾವೇರಿ ಗಲಬೆ ಜೋರಾಗಿತ್ತು .ಆದರೂ ಆಕೆ ಕನ್ನಡಿಗರಿಗೆ ಮತ್ತು ಅವರ ವ್ಯವಹಾರಕ್ಕೆ ಹಾನಿ ಆಗದಂತೆ ನೋಡಿಕೊಂಡರು .ಮೊದ ಮೊದಲು ಜನಪ್ರಿಯ ರಾಗಿದ್ದ ಅವರು  ಕ್ರಮೇಣ  ಜನರಿಂದ ದೂರವಾಗ ತೊಡಗಿದರು .ವೀರಪ್ಪನ್ ಅಟ್ಟಹಾಸ ನಡೆಯುತ್ತಿದ್ದ ಸಮಯ .ಈ ವಿಚಾರದಲ್ಲಿ ಅವರು ಕಠಿಣ ಮತ್ತು ಸಮಯೋಚಿತ ವಾಗಿ ನಡೆದು ಕೊಂಡರು.ವಾಲ್ಟರ್ ದೇವಾರಂ ,ರಾಂಬೊ ಗೋಪಾಲಕೃಷ್ಣನ್  ಅವರಂತ ದಕ್ಷ  ಪೋಲೀಸು ಅಧಿಕಾರಿಗಳಿಗೆ (ಆಮೇಲೆ ವಿಜಯಕುಮಾರ್) ಪೂರ್ಣ ಸ್ವಾತಂತ್ರ್ಯ ಕೊಟ್ಟರು .ನಕ್ಕಿರನ್ ಪತ್ರಿಕೆಯ ಸಂಪಾದಕ ಗೋಪಾಲನ್ ವೀರಪ್ಪನ್ ಭೇಟಿ ಮಾಡಿ ಬಂದು ಡಿ ಎಂ ಕೆ ಯ ಮುಖವಾಣಿ ಸನ್ ಟಿ ವಿ ಯಲ್ಲಿ ಅದನ್ನು ಪ್ರಚಾರ ಮಾಡಿದರು .ಏನೇ ಆದರೂ ಜಯಲಲಿತಾ ವೀರಪ್ಪನ್ ಯಾವ ಬೇಡಿಕೆಗಳಿಗೂ ಸೊಪ್ಪು ಹಾಕಲಿಲ್ಲ ಎಂಬುದು ಗಮನಾರ್ಹ .ಜಯಲಲಿತಾ ಅವರ ದತ್ತು ಪುತ್ರ ಸುಧಾಕರನ್ ಅವರ  ಭಾರೀ ಪ್ರಚಾರದ ವಿವಾಹ ಮತ್ತು ಅದರ ಲ್ಲಿ ನಡೆದ ಸಂಪತ್ತು ಮತ್ತು ಅಧಿಕಾರದ ಪ್ರದರ್ಶನ ಜನ ಮೆಚ್ಚಲಿಲ್ಲ .ವಿಧಾನ ಸಭಾ ಚುನಾವಣೆಗೆ ಮೊದಲು ಕಾಂಗ್ರೆಸ್ ಪಕ್ಷದ ಪ್ರಧಾನ ಬಣವೊಂದು ಜಿ ಕೆ ಮೂಪನಾರ್ ನೇತ್ರತ್ವದಲ್ಲಿ ಪಕ್ಷದಿಂದ ಸಿಡಿದು ತಮಿಳು ಮಾನಿಲ ಕಾಂಗ್ರೆಸ್ ಪಕ್ಷ ಸ್ಥಾಪಿಸಿ  ಡಿ ಎಂ ಕೆ ಪಕ್ಷಕ್ಕೆ ಬೆಂಬಲ ಘೋಷಿಸಿತು .ಕಾಂಗ್ರೆಸ್ ಪಕ್ಷದ ಭೀಷ್ಮ  ಸಿ ಸುಬ್ರಹ್ಮಣ್ಯಂ ಕೂಡ ಮೂಪನಾರ್ ಗೆ ಬೆಂಬಲ ಸೂಚಿಸಿದರು .ಪಿ ಚಿದಂಬರಂ ಟಿ ಎಂ ಸಿ ಸೇರಿದರು .ಪಿ ವಿ ನರಸಿಂಹ ರಾವು ಪ್ರಧಾನಿ ಆಗಿದ್ದ ಕಾಲ .ಅವರು ಜಯಲಲಿತಾ ಗೆ ಬೆಂಬಲ ಮುಂದುವರಿಸಿದರು .ನಡೆದ ಚುನಾವಣೆಯಲ್ಲಿ ಜಯಲಲಿತಾ ಪಕ್ಷ ಧೂಳಿಪಟ ಆಯಿತು .ಆಕೆ ಸ್ಪರ್ದಿಸಿದ್ದ ಎರಡೂ ಕ್ಷೇತ್ರಗಳಲ್ಲಿ ಸೋತರು .ಮುಂದೆ ಕರುಣಾನಿಧಿ ಮುಖ್ಯ ಮಂತ್ರಿ ಆಗಿ ಜಯಲಲಿತಾ ಮೇಲೆ ಬ್ರಷ್ಟಾಚಾರ ಕೇಸ್ ಹಾಕಿ ಬಂದಿಸಿ ದರು .ಅದೇ ಕೇಸ್ ದಶಕಗಳ ಕಾಲ ಉದ್ದ ಎಳೆದು ಕೊನೆಗೆ ಸುಪ್ರೀಂ ಕೋರ್ಟ್ ನ ತೀರ್ಪು ಬರುವಾಗ ಆಕೆ ಇಹ ಲೋಕ ತ್ಯಜಿಸಿದ್ದರು ಮತ್ತು ಜೈಲ್ ವಾಸದ ಕಳಂಕದಿಂದ ಕೂಡ .ಇದರ ನಡುವೆ ಆಕೆ ಪುನಃ ಮುಖ್ಯ ಮಂತ್ರಿ ಆಗಿ ಕರುಣಾನಿಧಿಯವರನ್ನು ಬಂಧಿಸಿ ಜೈಲಿಗೆ ಅಟ್ಟಿದ್ದೂ ನಡೆಯಿತು .ಎರಡೂ ಪಕ್ಷಗಳು ಒಬ್ಬರ ಮೇಲೆ ಒಬ್ಬರು ಮಣ್ಣೆರಚಿದರೂ ಜನರಿಗೆ ಎರಡೂ ಪಕ್ಷ ಗಳ ಕೈ ನಿರ್ಮಲ ಇಲ್ಲ ಎಂಬುದು ನಿಚ್ಚಳ ವಾಗಿ ಕಾಣುತ್ತಿತ್ತು .

ಪೂರ್ವ ಕರಾವಳಿ ಯಲ್ಲಿ ಚಂಡ ಮಾರುತ ಹಾವಳಿ ಸಾಮಾನ್ಯ .ನಾನು ಇದ್ದ ಒಂದು ವರ್ಷ ಚೆನ್ನೈ ನಗರದಲ್ಲಿ ಅದರ ಅಟಾಟೋಪ ನೋಡಿದೆನು .ರಾತ್ರಿ ಮಲಗಿದ್ದವರು ಎದ್ದು ನೋಡುವಾಗ  ಎಲ್ಲೆಲ್ಲೂ ಜಲ ಸಾಗರ ,ಮರಗಳು ಧರಾಶಾಯಿ.ರೈಲ್ವೇ ಟ್ರಾಕ್ ನಲ್ಲಿ  ಮರಗಳು ಕಂಬಗಳು ಬಿದ್ದು ಅಸ್ತವ್ಯಸ್ತ .ನಾನು ಹೇಗೋ ಕಷ್ಟ ದಿಂದ ಆಸ್ಪತ್ರೆ ಸೇರಿದೆನು.

ದೀಪಾವಳಿ ಮತ್ತು ಪೊಂಗಲ್ ತಮಿಳು ನಾಡಿನ ಭಾರೀ ಸಂಭ್ರಮ ದಿಂದ  ಆಚರಿಸಲ್ಪಡುವ ಹಬ್ಬಗಳು .ದೀಪಾವಳಿ ಸಮಯ ಅಂಗಡಿಗಳಲ್ಲಿ ನೂಕು ನುಗ್ಗಲು .ಹೊಸ ಬಟ್ಟೆ ಕೊಳ್ಳುವರು .ಪಟಾಕಿ ತಯಾರಿಕೆಯ ರಾಜ್ಯ ತಾನೇ .ಪೊಂಗಲ್ ಹಬ್ಬವನ್ನು .ಬೋಗಿ ,ಸೂರ್ಯ ,ಮಾಟ್ಟು  ಮತ್ತು ಕಾಣಾ ಪೊಂಗಲ್ ಎಂದು ವಿಸ್ತೃತ ವಾಗಿ ಆಚರಣೆ .ಭೋಗಿ ದಿನ ಇಡೀ ನಗರವೇ ಹೊಗೆಯಿಂದ ಆವೃತ್ತವಾಗುವುದು ,ವಿಮಾನ ಸಂಚಾರಕ್ಕೆ ಅಡಚಣೆಯಾದುದೂ ಇದೆ .ಹಬ್ಬಗಳ ಆಚರಣೆಯಲ್ಲಿ ತಮಿಳುನಾಡು ಮುಂದು ,ಹೊಸತಾಗಿ ಮದುವೆ ಆದವರಿಗೆ ತಲೈ ದೀಪಾವಳಿ ,ತಲೈ ಪೊಂಗಲ್ ಎಂಬ ಸಡಗರ .ಹಬ್ಬ ಬಂದಾಗ ಸೀರೆ ತೆಗೆದು ಕೊಂಡು ಆಯಿತೇ ಎಂದು ಅಕ್ಕ ಪಕ್ಕದವರು ಕೇಳುವರು . 

ಮನೆಯ ಮುಂದೆ ಸಾರಿಸಿ ರಂಗೋಲಿ ಹಾಕುವುದು (ಕೋಲಂ )ಎಲ್ಲಾ  ಮನೆಗಳ ಎದುರು ಸಾಮಾನ್ಯ .. 

ಆಗ ಇಂಡಿಯನ್ ಬ್ಯಾಂಕ್ ನ ಛೇರ್ಮನ್ ಗೋಪಲಕೃಷ್ಣನ್ ಎಂಬುವರು ಇದ್ದರು .ಎಲ್ಲಿ ಉದ್ಘಾಟನೆ ,ವಾರ್ಷಿಕೋತ್ಸವ ಇದ್ದರೂ ಮುಖ್ಯ ಅಥಿತಿ ಯಾಗಿ ಕಾಣಿಸಿ ಕೊಳ್ಳುತ್ತಿದ್ದ ಭಾರೀ ಬೇಡಿಕೆಯ ವ್ಯಕ್ತಿ .ಅವರನ್ನು ಕುತ್ತು ವಿಳಕ್ಕು(ಸಮಾರಂಭದಲ್ಲಿ ಬೆಳಗುವ ದೀಪ ) ಗೋಪಾಲ ಕೃಷ್ಣನ್ ಎಂದೇ ಕರೆಯುತ್ತಿದ್ದರು .,ಪತ್ರಿಕೆಗಳಲ್ಲಿ ಪರಿಚಿತ ಮುಖ ,ಮುಂದೆ ಹಗರಣಗಲ್ಲಿ ಸಿಕ್ಕಿ ಹಾಕಿ ಕೊಂಡರು .ಇನ್ನೊಂದು ನೆನಪಿಗೆ ಬರುವುದು ಬಾಲು  ಜುವೆಲ್ಲರಿ  ಬಾಲಸುಬ್ರಹ್ಮಣ್ಯಂ .,ಪತ್ರಿಕೆ ಮತ್ತು ಟಿ ವಿ ಗಳಲ್ಲಿ ಕೈಮುಗಿದು ನಿಂತ ಮುಖ ಮತ್ತು ರೇಡಿಯೋ ದಲ್ಲಿ ಆಗಾಗ ಬರುತ್ತಿದ್ದ ಜಾಹಿರಾತು .ಅವರು ಮುಂದೆ ಖಾದ್ಯ ತೈಲ ಕಾರ್ಖಾನೆ   ಕೂಡ  ಆರಂಭಿಸಿ ಉದ್ಯಮದಲ್ಲಿ ಸೋತರು .. 

ಟಿ ವಿ ಯಲ್ಲಿ ಬರುತ್ತಿದ್ದ ವಸಂತ್ ಅಂಡ್ ಕೋ ದ  ತಿರುಗು ಕುರ್ಚಿಯ ವಸಂತ್ (ಮೊನ್ನೆ ಮೊನ್ನೆ ತೀರಿ ಕೊಂಡರು -ಸಂಸದ ರಾಗಿದ್ದರು ),ನರಸು ಕಾಫಿ ಯ ಭೇಷ್ ಭೇಷ್ ಅನ್ನುತ್ತಿದ್ದ ಅಜ್ಜ ,ಮಾಂಬಲಂ  ರೈಲ್ವೆ ನಿಲ್ದಾಣ ಬಳಿಯ ಶರವಣ ಸ್ಟೋರ್ ಜಾಹಿರಾತು ಇನ್ನೂ ಗುನುಗುತ್ತಿವೆ . ಕಡಿತದ ಮಾರಾಟಕ್ಕೆ ತಳ್ಳುಪಡಿ ಎನ್ನುವರು .ಪುತ್ತಾಂಡ್ ,ದೀಪಾವಳಿ ,ಪೊಂಗಲ್ ತಳ್ಳುಪಡಿ ವ್ಯಾಪಾರಕ್ಕೆ ಜನ ಮುಗಿ ಬೀಳುವರು ,ಖರೀದಿಸಿ  ಆನಂದಿಸುವರು . 

(ಈ ಸರಣಿ ಇಲ್ಲಿಗೆ ಮುಗಿಯಿತು )

 

 

 





ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ