ಬೆಂಬಲಿಗರು

ಮಂಗಳವಾರ, ಜನವರಿ 12, 2021

ಮೂತ್ರ ಪಿಂಡಗಳ ಪಠ್ಯೇತರ ಚಟುವಟಿಕೆಗಳು

 ಮೂತ್ರ ಪಿಂಡಗಳ  ಪಠ್ಯೇತರ ಚಟುವಟಿಕೆಗಳು


ಪಠ್ಯ ಪುಸ್ತಕದಲ್ಲಿ ಮೂತ್ರ ಪಿಂಡಗಳು  ಶರೀರದಿಂದ ನೀರು ಮತ್ತು ಕಲ್ಮಶಗಳನ್ನು ವಿಸರ್ಜಿಸುತ್ತವೆ  ; ಲವಣಗಳ ಪ್ರಮಾಣ ,ರಕ್ತದ ಸಾಂದ್ರತೆ ನಿಯಂತ್ರಿಸುತ್ತವೆ ಎಂದು ಕಲಿತಿದ್ದೇವೆ .

ಆದರೆ ಇನ್ನೂ ಕೆಲವು ಪ್ರಾಮುಖ್ಯ ಕೆಲಸಗಳನ್ನು ಅವು ನಿರ್ವಹಿಸುತ್ತವೆ .

೧. ಕೆಂಪು ರಕ್ತ ಕಣಗಳ ಉತ್ಪಾದನೆಗೆ ಪ್ರಚೋದನೆ .                                         ಕೆಂಪು ರಕ್ತ ಕಣಗಳು ಪ್ರಾಣವಾಯು ವನ್ನು ಶ್ವಾಸ ಕೋಶದಿಂದ ದೇಹದ ಕಣ ಕಣ ಗಳಿಗೂ ಸಾಗಿಸುವ ವಾಹಕಗಳು .ಆಮ್ಲಜನಕದ ಪ್ರಮಾಣ ಕಡಿಮೆ ಆದೊಡನೆ  ಮೂತ್ರ ಪಿಂಡಗಳು ಎರಿತ್ರೊ ಪೊಯ್ಟಿನ್  ಎಂಬ ರಸ ವಿಶೇಷ ಉತ್ಪಾದಿಸಿ ರಕ್ತ ಕಣ ಕಾರ್ಖಾನೆ  ಎಲುಬು ಮಜ್ಜೆಗೆ ಹೆಚ್ಚು ಹೆಚ್ಚು ಕೆಂಪು ರಕ್ತ ಕಣ ತಯಾರಿಸಲು ಸಂದೇಶ ನೀಡುತ್ತವೆ .ಇದರಿಂದ ಇದ್ದ ಬದ್ದ ಆಮ್ಲಜನಕ  ಬಾಚಿ ಒಯ್ಯಲು ವ್ಯವಸ್ಥೆ ಆಗುವುದು .ಮೂತ್ರ ಪಿಂಡ ವೈಫಲ್ಯ ಇರುವವರಲ್ಲಿ ರಕ್ತ ಹೀನತೆಗೆ ಮುಖ್ಯ ಕಾರಣ  ಈ ವಸ್ತುವಿನ ಅಭಾವ .ಅದಕ್ಕೆ ಕೃತಕವಾಗಿ ಎರಿತ್ರೊ ಪೊಯ್ಟಿನ್ ತಯಾರು ಮಾಡಿ ರೋಗಿಗೆ ಚುಚ್ಚು ಮದ್ದು ರೂಪದಲ್ಲಿ ಕೊಡುವರು . 

೨. ಕ್ರಿಯಾಶೀಲ  ವಿಟಮಿನ್ ಡಿ  ಉತ್ಪಾದನೆ . 

ನಮ್ಮ  ಶರೀರದಲ್ಲಿ ಕ್ಯಾಲ್ಸಿಯಂ ಕರುಳಿನಿಂದ ರಕ್ತಕ್ಕೆ ಅಲ್ಲಿಂದ ಎಲುಬಿಗೆ ಸೇರಲು ಮತ್ತು  ರಕ್ತದಲ್ಲಿ ಕ್ಯಾಲ್ಸಿಯಂ ಪ್ರಮಾಣ ಕಾಯ್ದು ಕೊಳ್ಳಲು ವಿಟಮಿನ್ ಡಿ ಅತ್ಯವಶ್ಯಕ ..ನಿಮಗೆ ತಿಳಿದಿರುವಂತೆ ಸೂರ್ಯ ಕಿರಣ ಚರ್ಮದ ಮೂಲಕ (ಕರ್ಣನ ನೆನಪು ಆಗುವುದೋ )ವಿಟಮಿನ್ ಡಿ ಉತ್ಪಾದಿಸದರೆ ಸ್ವಲ್ಪ ಆಹಾರದಲ್ಲಿ ಬರುವುದು . ಆದರೆ ಇವು  ನಿಷ್ಕ್ರಿಯಾ ರೂಪದಲ್ಲಿ ಇರುವವು . ಯಕೃತ್ ನಲ್ಲಿ ಇದಕ್ಕೆ ಒಂದು ಕೋಡು (OH -Hydroxyl )ಸೇರಿದರೆ ಎರಡನೆಯದು ಮೂತ್ರ ಪಿಂಡಗಳಲ್ಲಿ ಜೋಡಣೆ ಆದಾಗ ಮಾತ್ರ  ಕ್ರಿಯಾಶೀಲ ವಿಟಮಿನ್ ಡಿ ಆಗಿ ಕಾರ್ಯ ಪ್ರವೃತ್ತ ಆಗುವುದು .ಕಿಡ್ನಿ ಫೈಲ್ಯೂರ್ (ವೈಫಲ್ಯ )ದಲ್ಲಿ  ರೆಡಿ ಮೇಡ್ ಎರಡು ಕೋಡಿನ ವಿಟಮಿನ್ ಡಿ ಕೊಡುವರು.  . 

೩.  ರಕ್ತದ  ಒತ್ತಡ ಕಾಪಾಡುವಿಕೆ . 

   ಮೂತ್ರ  ಪಿಂಡಗಳು ರೆನಿನ್ ಎಂಬ ರಸ  ವಿಶೇಷ ಉತ್ಪತ್ತಿ ಮಾಡುವವು .ಇದು  ಯಕೃತ್ ನಲ್ಲಿ  ಆಂಜಿಯೋ ಟೆನ್ಸಿನೋಜನ್ ತಯಾರು ಮಾಡಲು ಪ್ರೇರೇಪಿಸುವುದು .ಶ್ವಾಸ ಕೋಶದಲ್ಲಿ  ಇದು  ಆಂಜಿಯೋಟೆನ್ಸಿನ್(ಆಂಜಿಯೋ ಅಂದರೆ ರಕ್ತ ನಾಳ ,ಟೆನ್ಸಿನ್ ಅಂದರೆ ಅದರ ಟೆನ್ಷನ್ ಜಾಸ್ತಿ ಮಾಡುವಂತಹುದು ) ಎಂಬ ವಸ್ತುವಾಗಿ ಮಾರ್ಪಟ್ಟು  ರ್ರಕ್ತ ನಾಳಗಳ  ಸಂಕುಚನ ಉಂಟು ಮಾಡುವುದು .ಇದರಿಂದ ರಕ್ತದ ಒತ್ತಡ ಏರುವುದು .ಅಲ್ಲದೆ  ಮೂತ್ರಪಿಂಡಗಳ ಶಿರದಲ್ಲಿ ಅಡ್ರಿನಲ್ ಗ್ರಂಥಿಗಳಿಂದ  ಅಲ್ದೊ ಸ್ಟಿರೋನ್ ಎಂಬ  ಹಾರ್ಮೋನ್ ಉತ್ಪತ್ತಿ ಆಗುವಂತೆ ಮಾಡುವುದು .ಈ ಹಾರ್ಮೋನ್ ಕಿಡ್ನಿ ಗಳು  ನೀರು ಮತ್ತು  ಉಪ್ಪು ಕಾಯ್ದಿಡುವಂತೆ ಮಾಡಿ ಇಳಿಯುತ್ತಿರುವ ರಕ್ತದ ಒತ್ತಡ ಕಾಯ್ದು ಕೊಳ್ಳುವುದು . 

ಇನ್ನೂ ಹಲವು ಕೆಲಸಗಳನ್ನು  ಕಿಡ್ನಿಗಳು ಯಾವುದೇ ಪ್ರಚಾರವಿಲ್ಲದೆ ಮಾಡುತ್ತಿರುತ್ತವೆ .ಮೂತ್ರ ಪಿಂಡಗಳೆಂದರೆ ಬರೀ ವಿಸರ್ಜನಾಂಗಗಳಷ್ಟೇ ಅಲ್ಲ  ಅವು ಒಂದು ವಿವಿದೋದ್ದೇಶ ಸಹಕಾರಿ ಸಂಘಗಳಂತೆ .



ಭಾನುವಾರ, ಜನವರಿ 10, 2021

ಸೋಡಿಯಂ ಕೊರತೆ

                        ಸೋಡಿಯಂ   ಕೊರತೆ 

ಸೋಡಿಯಂ ಕ್ಲೋರೈಡ್ ಎಂದರೆ ಉಪ್ಪು . 

  . ಸೋಡಿಯಂ ,ಪೊಟ್ಯಾಸಿಯಂ ,ಕ್ಯಾಲ್ಸಿಯಂ ಇತ್ಯಾದಿ  ಲವಣಗಳು ಜೀವಕ್ರಿಯೆಯಲ್ಲಿ  ಪ್ರಮುಖ ಪಾತ್ರ ನಿರ್ವಹಿಸುತ್ತವೆ 

 ಉಪ್ಪು ತಿಂದವ ನೀರು ಕುಡಿಯಲೇ ಬೇಕು.ಯಾಕೆ ? ಉಪ್ಪು ಜಾಸ್ತಿ ತಿಂದ ಒಡನೆ ರಕ್ತದ ಸಾಂದ್ರತೆ  ಏರುವುದು .ಮೆದುಳಿನ ಸಾಂದ್ರತಾ ಮಾಪಕ ಜಾಗೃತ ಆಗಿ ತನ್ನಲ್ಲಿರುವ ದಾಹ ಕೇಂದ್ರಕ್ಕೆ ನೀರಡಿಕೆ ಪ್ರಕಟ ಪಡಿಸುವಂತೆ ಸೂಚಿಸುವುದು ಮತ್ತು ಪಿಟ್ಯುಟರಿ  ಗ್ರಂಥಿಗೆ  ಅತಿಮೂತ್ರ ನಿರೋಧಕ (Anti  diuretic Hormone )ಹಾರ್ಮೋನ್ ಸ್ರವಿಸಲು ಆದೇಶ ನೀಡುವುದು .ಈ ಹಾರ್ಮೋನ್ ಮೂತ್ರಪಿಂಡ ನೀರು ಮಾಡುವವು .ಇದರಿಂದ ಏರಿದ ಸಾಂದ್ರತೆ ಕಡಿಮೆ ಆಗುವುದು . 

    ನೀವು  ಇತ್ತೀಚೆಗೆ  ಉಪ್ಪು ಕಡಿಮೆ ಕಾಯಿಲೆ ಎಂದು ಕೇಳಿರಬಹುದು ..ನಾರ್ಮಲ್ ಆಗಿ  ರಕ್ತದಲ್ಲಿ  ಲೀಟರಿಗೆ  ಸೋಡಿಯಂ ೧೩೫ ರಿಂದ ೧೪೫ ಮಿಲ್ಲಿ  ಎಕ್ವಿ ವೆಲೆಂಟ್ ಇರಬೇಕು .ಇದು ೧೩೫ ರಿಂದ ಕಡಿಮೆ ಇದ್ದರೆ  ಕಡಿಮೆ ಆಯಿತು ಎನ್ನುತ್ತೇವೆ . ಸೋಡಿಯಂ ಕಡಿಮೆ ಆದರೆ ಆಯಾಸ ,ತಲೆನೋವು ,ಕಡಿಮೆ ಪ್ರಜ್ಞಾವಸ್ಥೆ ,ಅಪಸ್ಮಾರ ಮತ್ತು  ಕೋಮಾ (ಪೂರ್ಣ ಅಬೋಧವಸ್ಥೆ )ಉಂಟಾಗ ಬಹುದು . 

 ಉಪ್ಪಿನ ಅಂಶ ಕಡಿಮೆ ಆಗಲು ಉಪ್ಪುಸೇವನೆ ಕೊರತೆ ಕಾರಣ ವಾಗುವುದು ಅಪರೂಪ

.ಶರೀರದಿಂದ  ಉಪ್ಪು ಅಧಿಕ ವಿಸರ್ಜನೆ( ಉದಾ ವಾಂತಿ ಭೇದಿ ;ಇಲ್ಲಿ ನೀರಿನ ಮತ್ತು ಉಪ್ಪಿನ ಅಂಶ ಎರಡೂ  ಕಮ್ಮಿ ಆಗುವುದು ),ಅಥವಾ ಅನುಪಾತ ತಪ್ಪಿ  ನೀರು ನಿಲ್ಲುವುದು (ಉದಾ ಹೃದಯ ವೈಫಲ್ಯ ,ಲಿವರ್  ವೈಫಲ್ಯ;ಇಲ್ಲಿ ಹೆಚ್ಚು ನೀರು ನಿಂತು ಸಾಪೇಕ್ಷ ಉಪ್ಪಿನ ಪ್ರಮಾಣ ಕಡಿಮೆ ಆಗುವುದು ). ಉಪ್ಪು ಮತ್ತು ನೀರು ಹೆಚ್ಚು ಹೊರಹಾಕಲು ಕೊಡುವ  ಔಷಧಿಗಳೂ ಕಾರಣ ಇರಬಹುದು . 

                 ಸಾಮಾನ್ಯವಾಗಿ  ಆಸ್ಪತ್ರೆಗಳಲ್ಲಿ ಉಪ್ಪು ಕಡಿಮೆ ಆಗಿ ಬರುವವರು  ವಯಸ್ಸಾದವರು .ಇವರಲ್ಲಿ ಮುಖ್ಯ ಕಾರಣ  ಅತಿ ಮೂತ್ರ ನಿರೋಧಕ ಹಾರ್ಮೋನ್ ನ  ಯದ್ವಾ ತದ್ವಾ ಸ್ರಾವ .ಇದರಿಂದ ಮೂತ್ರ ಪಿಂಡಗಳು ಸುಮ್ಮ ಸುಮ್ಮನೆ ನೀರು ಹಿಡಿದಿಟ್ಟು  ಕೊಂಡು ಸಾಪೇಕ್ಷವಾಗಿ (Relatively )ಉಪ್ಪಿನ ಅಂಶ ರಕ್ತದಲ್ಲಿ ಕಡಿಮೆ ಆಗುವುದು . ಈ ಹಾರ್ಮೋನ್ ಅಧಿಕ ಸ್ರಾವ ಆಗಲು ಖಿನ್ನತೆ,ಅಪಸ್ಮಾರ ಮತ್ತು ಕ್ಯಾನ್ಸರ್ ಗೆ ಕೊಡುವ ಔಷಧಿಗಳು ,ಶ್ವಾಸ  ಕೋಶದ ಕಾಯಿಲೆ ಮತ್ತು  ಸ್ಟ್ರೋಕ್ ನಂತಹ ಮೆದುಳಿನ ಕಾಯಿಲೆಗಳು ಕಾರಣ ಇರ ಬಹುದು ..ಕೆಲವೊಮ್ಮೆ ಯಾವ ಮೂಲ ಕಾರಣವೂ ಸಿಗದು . 

ಈ ತರಹ ಬರುವ ರೋಗಿಗಳಿಗೆ ಕಡಿಮೆ ನೀರು ಸೇವಿಸಲು ವೈದ್ಯರು ಸಲಹೆ ಮಾಡುವರು .ಮತ್ತು ತೀವ್ರತರ ಕೊರತೆ ಇದ್ದರೆ  ಉಪ್ಪಿನ ದ್ರಾವಣ ಡ್ರಿಪ್ ಮೂಲಕ ಕೊಡುವರು .ಅತಿ ಮೂತ್ರ ನಿರೋಧಕ ಹಾರ್ಮೋನ್ ಪ್ರತಿಬಂಧಿಸುವ ಮಾತ್ರೆಗಳೂ ಇವೆ ,

 

 

 

 

 

 

 

ಶುಕ್ರವಾರ, ಜನವರಿ 8, 2021

ನಿಟ್ಟುಸಿರೀ ಕಹಿ ಗಾನ ಎದೆ ಜಲ್ಲನೆ ನೋವಿನ ಬಾಣ

 ನಿಟ್ಟುಸಿರೀ  ಕಹಿ ಗಾನ  ಎದೆ ಝಲ್ಲನೆ ನೋವಿನ ಬಾಣ 

 ವಾಚಕರೆ ನಮ್ಮ ದೇಹದಲ್ಲಿ  ಭೌತ ಶಾಸ್ತ್ರ ,ರಸಾಯನ ಶಾಸ್ತ್ರ ಮತ್ತು ಜೀವ ಶಾಸ್ತ್ರ ಅನ್ಯೋನ್ಯವಾಗಿ  ಸಮ್ಮಿಳಿತ ಗೊಂಡಿವೆ .ಜೀವಕ್ರಿಯೆ ಸರಿಯಾಗಿ ನಡೆಯಲು ರಕ್ತದ  pH  7.35 ರಿಂದ 7.45 ರ  ಒಳಗೆ ಇರಬೇಕು .ಶರೀರದಲ್ಲಿ ಸದಾ ಆಮ್ಲ ಉಂಟು ಮಾಡುವ  ವಸ್ತುಗಳು ಉತ್ಪತ್ತಿ ಆಗುತ್ತಲೇ ಇದ್ದು ಈ ಪ್ರಮಾಣ ಏರು ಪೇರು  ಆಗ  ಬಹುದು .ಅದಕ್ಕೆ ನಮ್ಮ ದೇಹದಲ್ಲಿ  ಬ್ಯುಲ್ಟ್ ಇನ್ ಸ್ಟೆಬಿಲೈಸರ್ ಇದೆ .ಒಂದು ಉಸಿರಾಟದ ಮೂಲಕ ಇಂಗಲಲಾಮ್ಲ (ಕಾರ್ಬನ್ ಡೈ ಆಕ್ಸೈಡ್ )ಹೊರ ಹಾಕುವುದು ಮತ್ತು ಇನ್ನೊಂದು ಮೂತ್ರ ಪಿಂಡಗಳ ಮೂಲಕ ಆಮ್ಲ ವಸ್ತುಗಳ ವಿಸರ್ಜನೆ .ಉಸಿರಾಟದ  ವೇಗ ಮತ್ತು ಆಳ  ಹೆಚ್ಚು ಮಾಡಿದರೆ ರಕ್ತ ಆಮ್ಲ ಅಂಶ ಕಳೆದು ಕೊಂಡು  ಕ್ಷಾರೀಕರಣ ಗೊಳ್ಳುವುದು . 

ಕೆಲವು ಮಂದಿ ಮುಖ್ಯವಾಗಿ ಎಳೆಯ ಹುಡುಗಿಯರು ಕೆಲವೊಮ್ಮೆ ಯಾವುದೇ ಕಾಯಿಲೆ ಇಲ್ಲದಿದ್ದರೂ ಮನಸಿನ ಉದ್ವೇಗದಿಂದ ನಿಟ್ಟುಸಿರು ಅಥವಾ ಏದುಸಿರು ಬಿಡುವರು .ಉದ್ವೇಗಕ್ಕೆ ಕಾರಣ  ಶಾಲಾ ಪರೀಕ್ಷೆ ,ಬರಲಿರುವ ಇಂಟೆರ್ ವ್ಯೂ ಅಥವಾ ಪರಿಸರ ಕಾರಣ ಇರ ಬಹುದು . 

ಆಗ ಅಳ  ವೇಗ ಅಧಿಕ ಉಸಿರಾಟ ಉಂಟಾಗುವುದು ,ಉಸಿರು ಕಟ್ಟಿದಂತೆ ಭಾಸ ಆಗುವುದು .ಎದೆ ನೋವು ,ಹೊಟ್ಟೆ ಉಬ್ಬರ ಇತ್ಯಾದಿ ಸೇರಿಕೊಳ್ಳುವುವು .ಜತೆಗೆ  ಭಯ ಹುಟ್ಟಿಸುವಂತೆ  ಕೈ ಕಾಲು  ಕೊಕ್ಕೆ ಗಟ್ಟುವುವು ,ಇದರಿಂದ ನೋವೂ ಉಂಟಾಗುವುದು . 

             

ಕೆಲವರು  ಇದು ಅಪಸ್ಮಾರ ಎಂದು ತಪ್ಪು ತಿಳಿಯುವರು . 

ಮೊದಲೇ ತಿಳಿಸಿದಂತೆ ಜೋರಾಗಿ ಉಸಿರಾಡಿದಾಗ ರಕ್ತ ಕ್ಷಾರೀಕರಣ  ಗೊಳ್ಳುವುದು .ಇದರ ಪರಿಣಾಮ  ರಕ್ತದ  ಅಯಾನ್ ರೂಪದ  ಕ್ಯಾಲ್ಸಿಯಂ ಪ್ರಮಾಣ ತಾತ್ಕಾಲಿಕ ವಾಗಿ  ಕಡಿಮೆ ಆಗುವುದು .ಕ್ಯಾಲ್ಸಿಯಂ ಕಮ್ಮಿ ಆದುದರ ಲಕ್ಷಣ ಕೈ ಕಾಲು  ಕೊಕ್ಕೆ (ಕೊಚ್ಛೆ )ಗಟ್ಟುವುದು .ನೀವು ರಕ್ತದ ಕ್ಯಾಲ್ಸಿಯಂ ಪ್ರಮಾಣ ನೋಡಿದರೆ ಸರಿ ಇರುವುದು .ಆದುದರಿಂದ ಇವರಿಗೆ ಕ್ಯಾಲ್ಸಿಯಂ ಕೊಟ್ಟು ಪ್ರಯೋಜನ ಇಲ್ಲ . 

ಇಂತಹವರು  ಬಂದಾಗ ಅವರ ರೋಗ ಚರಿತ್ರೆ ತೆಗೆದು ಕೊಂಡು ,ಯಾವುದಾದರು ಬೇರೆ ಗಂಭೀರ ಕಾಯಿಲೆ ಇಲ್ಲ ಎಂದು ಮೊದಲು ಮೊದಲು ದೃಢ ಪಡಿಸಿ ಕೊಳ್ಳುತ್ತೇವೆ . ಕೆಲವು ರಕ್ತ ಪರೀಕ್ಷೆ , ಇ ಸಿ ಜಿ ,ಮತ್ತು ರಕ್ತದ ಆಮ್ಲಜನಕ ಪ್ರಮಾಣ ಇತ್ಯಾದಿ . 

ಆಮೇಲೆ  ರೋಗಿಗೆ ಧೈರ್ಯ ತುಂಬುತ್ತೇವೆ ಮತ್ತು ಅವಶ್ಯವಿದ್ದರೆ  ಉದ್ವೇಗ ಶಮನ ಔಷಧಿ ಕೊಡಬೇಕಾಗುವುದು .ಕೆಲವರಿಗೆ ದೀರ್ಘ ಕಾಲದ ಖಿನ್ನತಾ ನಿವಾರಕ (ಇವು ಉದ್ವೇಗ ಶಮನ ಗುಣವನ್ನೂ ಹೊಂದಿವೆ )ಸಲಹೆ ಮಾಡುವೆವು 

ಇದರದ್ದೇ ಒಂದು ಸಣ್ಣ ರೂಪ ಇದೆ .ಇದರಲ್ಲಿ ರೋಗಿ ತನಗೆ ದಮ್ಮು ಗಟ್ಟುವುದು ಎಂದು ಬರುವರು .ಪರೀಕ್ಷೆ ಮಾಡಿದಾಗ ಅಸ್ತಮಾ ಅಥವಾ ಹೃದ್ರೋಗದ ಲಕ್ಷಣ ಇರುವುದಿಲ್ಲ .ಬದಲಿಗೆ ಆಗಾಗ ದೀರ್ಘ ಶ್ವಾಸ ತೆಗೆದು ಕೊ ಳ್ಳುತ್ತಿರುತ್ತಾರೆ .ಇವರಿಗೆ ಅಶ್ವಾಶನೆ ಸಾಕಾಗುವುದು .

ಈ ಲೇಖನದ  ಶೀರ್ಷಿಕೆ ಗೆ ಸ್ಪೂರ್ತಿ ಹಾಡು ಕೇಳಲು ಈ ಲಿಂಕ್ ಒತ್ತಿರಿ 

   https://youtu.be/-Ry8xeDKnRY

 

 

ಬುಧವಾರ, ಜನವರಿ 6, 2021

ಕಾಲಿಗೆ ನೀರು ಬರುವುದು

                     ಕಾಲಿಗೆ ನೀರು ಬರುವುದು 

ನೆಂಟರು  ಮನೆಗೆ ಬಂದಾಗ ಕಾಲಿಗೆ ನೀರು ಬಂತೋ ಎಂದು ಕೇಳುತ್ತಿದ್ದರು . ಕಾಯಿಲೆ ಶರೀರಕ್ಕೆ  ನೆಂಟನಾಗಿ ಬಂದಾಗ ಕಾಲಿಗೆ ಕೆಲವೊಮ್ಮೆ ನೀರು ಬರುವುದು .ಇದರಿಂದ ಕಾಲು ಭಾರ ಭಾರ ಆಗುವುದು .ಚಪ್ಪಲಿ ಟೈಟ್ ಆಗಿ ಹಿಂಸೆ ಆಗುವುದು . ದೂರದ  ಪ್ರಯಾಣ (ಕು ಳಿತು ಕೊಂಡು ),ಗರ್ಭಿಣಿ ಯರಲ್ಲಿ  ಮತ್ತು ಸ್ತ್ರೀಯರಲ್ಲಿ  ಮುಟ್ಟಿನ  ಸಮಯ ಸ್ವಲ್ಪ ನೀರು  ಹಾಗೆಯೇ ಬಂದು ಹೋಗುವುದು ಕಾಯಿಲೆ ಇರಲಿಕ್ಕಿಲ್ಲ . 

ಇನ್ನು ಕೆಲವು ಔಷಧಿಗಳನ್ನು ತೆಗೆದು ಕೊಳ್ಳುವಾಗ ಸ್ವಲ್ಪ ನೀರು ಬರಬಹುದು .ಉದಾ ರಕ್ತದ ಒತ್ತಡಕ್ಕೆ ಕೊಡುವ ಆಮ್ಲೋ ಡಿಪಿನ್  , ನಿಫೆ ಡೆಫಿನ್ ,ಸಕ್ಕರೆ ಕಾಯಿಲೆಗೆ ಕೊಡುವ  ಪೆಯೋ ಗ್ಲಿಟಝೋನ್ ,ಇನ್ನು ಕೆಲ ನೋವು ನಿವಾರಕಗಳು ಮತ್ತು ಸ್ಟ್ರೆರೋಯಿಡ್ .ಇದು  ಔಷಧಿ ನಿಲ್ಲಿಸಿದಾಗ ನಿವಾರಣೆ ಆಗುವುದು . ಕೆಲವೊಮ್ಮೆ ವೈದ್ಯರು  ಸ್ವಲ್ಪ ಬಾವು ಇದ್ದರೆ  ಪರವಾಗಿಲ್ಲ ,ಔಷಧಿ ಮುಂದು ವರಿಸಲು ಸಲಹೆ ಮಾಡುವರು 

ಎರಡು  ಕಾಲುಗಳಲ್ಲಿ ಏಕಕಾಲಕ್ಕೆ ನೀರು  ಬರುವ ಕಾಯಿಲೆಗಳು :

೧.ಕಾಯಿಲೆಯಿಂದ  ಸೋತ ಹೃದಯ 

 ಹೃದಯದ  ಕಾರ್ಯ ಕ್ಷಮತೆ ಕುಂದಿದರೆ ರಕ್ತದ ಚಲನೆ ಕುಂಠಿತ ವಾಗಿ ಕಾಲುಗಳಲ್ಲಿ ನೀರು ತುಂಬುವುದು .ಈ  ರೋಗಿಗಳಲ್ಲಿ ಹೃದಯ ರೋಗ ಲಕ್ಷಣ ವಾದ  ಉಸಿರು ಕಟ್ಟುವುದು ,ಆಯಾಸ ಕೂಡ ಇರುವದು . ಇಲ್ಲಿ ಕುಳಿತು ಕೊಂಡಾಗ ರೋಗಿಯ ಆಯಾಸ ಮತ್ತು ದಮ್ಮು ಕಡಿಮೆ ಯಾಗಿ  ಮಲಗಿದಾಗ ಹೆಚ್ಚಾಗ ಬಹುದು 

೨. ಮೂತ್ರ ಪಿಂಡದ ಕಾಯಿಲೆಗಳು 

ಮೂತ್ರ ಪಿಂಡಗಳ ವೈಫಲ್ಯ ಮತ್ತು  ನೆಫ್ರೈಟಿಸ್ ,ನೆಫ್ರೋಟಿಕ್  ಸಿಂಡ್ರೋಮ್ ಕಾಯಿಲೆಗಳಲ್ಲಿ  ಕಾಲಲ್ಲಿ ನೀರು ಬರ ಬಹುದು .ಶರೀರದಿಂದ ನೀರು ಮತ್ತು ಉಪ್ಪು ಹೊರ ಹಾಕುವ ಅಂಗ ಕಿಡ್ನಿ ಅಲ್ಲವೇ .ಕಿಡ್ನಿ ಕಾಯಿಲೆಗಳಲ್ಲಿ ಮಖದಲ್ಲಿ  ಕಣ್ಣಿನ ಸುತ್ತ ನೀರು ಮೊದಲು ಬರುವುದು ,ಆಮೇಲೆ ಕಾಲಿನಲ್ಲಿ . 

೩.   ಲಿವರ್ ಅಥವಾ ಯಕೃತ್ ಕಾಯಿಲೆ . 

  ಮದ್ಯಪಾನ  ಅಥವಾ ವೈರಸ್ ಸೋಂಕಿನಿಂದ  ಲಿವರ್ ನಲ್ಲಿ  ಸಿರೋಸಿಸ್ ಎಂಬ ಕಾಯಿಲೆ ಬರುವುದು .ಇದರಿಂದ ಹೊಟ್ಟೆ ಮತ್ತು ಕಾಲಿನಲ್ಲಿ ನೀರು ಬರುವುದು ;ಹೆಚ್ಚಾಗಿ ಹೊಟ್ಟೆಯಲ್ಲಿ  ಮೊದಲು ಆಮೇಲೆ ಕಾಲಿಗೆ .,ಲಿವರ್ ಸಸಾರ ಜನಕ ಉತ್ಪತ್ತಿ  ಮಾಡುವ ಕಾರ್ಖಾನೆ .ಅದು ಸ್ಟ್ರೈಕ್ ಮಾಡಿದರೆ  ರಕ್ತದಲ್ಲಿ  ಆಲ್ಬುಮಿನ್ ಎಂಬ ಸಸಾರಜನಕ ಕಡಿಮೆ  ಆಗುವುದು .ಈ ಪ್ರೊಟೀನ್ ರಕ್ತದೊಳಗೆ ನೀರು ಹಿಡಿದು ಇಟ್ಟು  ಕೊಳ್ಳಲು ಅವಶ್ಯಕ 

 ೪  . ಅಪೌಷ್ಟಿಕತೆ 

ಸಸಾರಜನಕ ಕಡಿಮೆ ಇರುವ ಆಹಾರ ಸೇವನೆ ಮತ್ತು ಕಾಯಿಲೆಗಳಿಂದ ಅದರ ಜೀರ್ಣ  ಕ್ರಿಯೆಯಲ್ಲಿ ಲೋಪ ಆದರೂ  ಕಾಲಿನಲ್ಲಿ ನೀರು ಬರಬಹುದು .ನಾವು  ಪ್ರಾಥಮಿಕ ಶಾಲೆಯಲ್ಲಿ  ವಿಟಮಿನ್ ಬಿ ೧ ಅಥವಾ ಥಯಾಮಿನ್ ಕೊರತೆಯಿಂದ ಬೆರಿ ಬೆರಿ  ಎಂಬ ರೋಗ ಬರುವುದು ಎಂದು ಕಲಿತಿದ್ದೇವೆ .ಈ ರೋಗ ಅಲ್ಲಲ್ಲಿ ಕಾಣಿಸಿ ಕೊಳ್ಳುತ್ತಿದೆ .   

ಇನ್ನು  ಒಂದೇ ಕಾಲಿನಲ್ಲಿ ನೀರು ಬಂದರೆ ಅದು ಫೈಲೇರಿಯಾ (ಆನೆಕಾಲು )ರೋಗ ಇರ ಬಹುದು ,ಇಲ್ಲಿ  ದುಗ್ಧ ನಾಳಗಳು ಬ್ಲಾಕ್ ಆಗುವುವು .ಇನ್ನು ಕಾಲಿನ   ಅಭಿಧಮನಿಯಲ್ಲಿ  ರಕ್ತ ಹೆಪ್ಪುಗಟ್ಟಿದರೆ ,ಅಭಿಧಮನಿಗಳು ಅಶಕ್ತವಾಗಿ ಉಬ್ಬಿಕೊಂಡಾಗ (Varicose Veins ) ನೀರು ಬರುವುದುಂಟು .ನೋವು ಸಹಿತ ಚರ್ಮ ಕೆಂಪಾಗಿ ನೀರು  ತುಂಬಿ ಕೊಂಡರೆ  ಚರ್ಮ ಮತ್ತು ಕಾಲಿನ ಸೋಂಕು (Infection  )ಇರಬಹುದು . 

ನೋಡಿದಿರಾ  ಕಾಲಿನ ನೀರಿಗೆ ಎಷ್ಟು ಕಾರಣಗಳು


ಸೋಮವಾರ, ಜನವರಿ 4, 2021

ಅಪಾಯಕಾರಿ ಗೊರಕೆ ರೋಗ ಚಿಕಿತ್ಸೆ

    ಅಪಾಯಕಾರಿ ಗೊರಕೆ ರೋಗದ(  Obstructive Sleep  Apnea )ಚಿಕಿತ್ಸೆ 

 ಗಂಟಲ ಸುತ್ತ ಮುತ್ತ ಇರುವ ಶ್ವಾಸ ನಾಳ ಉಸಿರಾಟ ವೇಳೆ ಸಂಕುಚಿತ ಗೊಳ್ಳುವುದೇ  ಈ ರೋಗದ ಮೂಲ .ನಿದ್ರೆಯ ವೇಳೆ ಗಂಟಲ ಮಾಂಸ ಖಂಡಗಳು ವಿಶ್ರಾಂತಿ ಯಲ್ಲಿ ಇದ್ದು ಹೊರಗಿನ ಒತ್ತಡ ಜಾಸ್ತಿ ಆದರೆ( ಉದಾ ಸ್ಥೂಲ ಕಾಯದವರಲ್ಲಿ ಕೊಬ್ಬು ) ಮತ್ತು ಗಂಟಲಿನ ಒಳಗೇ  ಟಾನ್ಸಿಲ್ ಮತ್ತು ಸ್ವಲ್ಪ ಮುಂದೆ ದೊಡ್ಡ ಗಾತ್ರದ ನಾಲಿಗೆ ಇತ್ಯಾದಿ ಅಡ್ಡ ಬಂದು ಉಸಿರಾಟಕ್ಕೆ ಅಡಚಣೆ ಆಗುವುದು . 

ಅದಕ್ಕೆ ಮೊದಲು ತೂಕ ಇಳಿಸಲು ಆದ್ಯತೆ ಕೊಡಬೇಕು .ಅವಶ್ಯವಿದ್ದರೆ ತೂಕ ಇಳಿಸಲು ಇರುವ ಶಸ್ತ್ರ ಚಿಕಿತ್ಸೆಗೂ ಮೊರೆ ಹೋಗ ಬೇಕಾಗ ಬಹುದು (Bariatric  Surgery ). ಮದ್ಯಪಾನ ಮತ್ತು ಮಂಪರು ಬರುವ ಔಷಧಿಗಳಿಗೆ ವಿದಾಯ ಹೇಳಬೇಕು .ಇವುಗಳಿಂದ ಶ್ವಾಸ ನಾಳ ದ  ಮಾಂಸ ಖಂಡಗಳು ಇನ್ನೂ  ದುರ್ಬಲವಾಗಿ ಅದನ್ನು  ಅದನ್ನು ತೆರೆದು ಇಡಲು ಅಸಾಧ್ಯವಾಗಿ  ಮುಚ್ಚಿ ಕೊಂಡಾಗ ಉಸಿರು ತತ್ಕಾಲ ಸ್ಥಬ್ಧ ಆಗುವುದು . ನೇರ ಅಥವಾ ಬೋರಲು ಬದಲಿಗೆ ಒಂದು ಮಗ್ಗುಲಿಗೆ ಮಲಗಿದರೆ ಕೆಲವರಿಗೆ ಆಶ್ವಾಸ ಸಿಗುವುದು 

ಇನ್ನು  ಕೆಲವು  ವಿಶಿಷ್ಟ ಉಪಕರಣಗಳ ಮೂಲಕ  ಧನಾತ್ಮಕ ಒತ್ತಡ ದಲ್ಲಿ  ಶ್ವಾಸ ನಾಳಕ್ಕೆ  ಗಾಳಿ ಯನ್ನು ಪಂಪ್ ಮಾಡುವುದು .ಇದರಲ್ಲಿ  ಮೋಟಾರ್ ಇರುವ ಮೆಷಿನ್ ಗಾಳಿಯನ್ನು  ಮೂಗು ಅಥವಾ ಬಾಯಿ ಮೂಲಕ  ಒತ್ತಡದಲ್ಲಿ ಬಿಡುವುದು. ಇದರಲ್ಲಿ ಸಿ ಪೇಪ್ ಮತ್ತು ಬಿ ಪೇಪ್ ಎಂಬ ಎರಡು ವಿಧದ ಯಂತ್ರಗಳು ಇವೆ .ಮೊದಲನೆಯದು ಸದಾ  ಹೆಚ್ಚಿನ ಒತ್ತಡದಲ್ಲಿ ವಾಯು ಸರಬರಾಜು ಮಾಡಿದರೆ  ಇನ್ನೊಂದು ಅವಶ್ಯ ನೋಡಿಕೊಂಡು ಪಂಪ್ ಮಾಡುವುದು ಇದರಿಂದ ಶ್ವಾಸ ನಾಳ  ಸಂಕುಚನ ಗೊಳ್ಳುವುದನ್ನು ತಡೆಗಟ್ಟಲಾಗುತ್ತದೆ .ಇದನ್ನು ಇಟ್ಟು ಕೊಂಡೆ ಮಲಗ ಬೇಕಾಗುವುದು . 

ಇನ್ನು  ಬಾಯಲ್ಲಿ ಕೆಲವು ಕೃತಕ ಸಾಧನಗಳನ್ನು ಇಟ್ಟು  ಮಲಗುವುದು ,ಇದರಿಂದ ನಾಲಿಗೆ  ಅಡ್ಡ ಬರುವುದನ್ನು ತಡೆಗಟ್ಟ ಬಹುದು .,

ಇವು ಯಾವುವೂ ಉಪಯೋಗಕ್ಕೆ  ಬರದಿದ್ದರೆ  ಗಂಟಲು ,ದವಡೆ ,ಶ್ವಾಸ ನಾಳದ  ಸುತ್ತ ಶಸ್ತ್ರ ಚಿಕಿತ್ಸೆ ಮಾಡಿ ಸರಿ ಪಡಿಸಲು ಯತ್ನಿಸುವರು .ಅದರ ಯಶಸ್ಸು ಒಂದೇ ತರಹ ಇರಲಾರದು . 

                                

                   
 




 

ಭಾನುವಾರ, ಜನವರಿ 3, 2021

ನಿದ್ರಾ ಸಮಯದ ಶ್ವಾಸ ಅಡಚೆಣೆ

  ನಿದ್ರಾ ಸಮಯದ ಶ್ವಾಸ ಅಡಚಣೆ 


ಗೊರಕೆ ಹೊಡೆದು ನಿದ್ರಿಸುತ್ತಿರುವವರನ್ನು ಕಂಡು ನೀವು ಕರುಬಿ ಎಂಥಾ ಪುಣ್ಯವಂತನಯ್ಯ ಎಂತಹ ಸುಖ ನಿದ್ರೆ ಎಂದು ಕೊಂಡಿರುವಿರಿ .ಆದರೆ ಇವರಲ್ಲಿ ಬಹಳ ಮಂದಿ  ಮೇಲೆ ಹೇಳಿದ ನಿದ್ರಾ ಸಮಯದ ಶ್ವಾಸ ಅಡಚಣೆ (Obstructive Sleep apnea )ಎಂಬ ಕಾಯಿಲೆಯಿಂದ ಬಳಲುತ್ತಿರಬಹುದು .ಕೆಲವರ ಗೊರಕೆ ಸರಣಿಯಲ್ಲಿ 

ಗೊರ್  ಗೋರ್ ....... ಗೋರ್ರ್  ಗೋರ್    ----------------- ಗೋರ್ ಗೋರ್  ಎಂದು ನಡುವೆ ದೀರ್ಘ ವಿರಾಮ ಇರುವುದನ್ನು  ನೀವು ಗಮನಿಸಿರ ಬೇಕು .ಇದು ಶ್ವಾಸೋಚ್ವಾಸ  ನಿಲುಗಡೆ ಆದ  ಸಂಕೇತ .ಈ ಸಮಯ ರಕ್ತದ ಆಮ್ಲಜನಕ ಪ್ರಮಾಣ ಕಡಿಮೆ ಆಗುವುದು .ಹೃದಯ ಮತ್ತು ಮೆದುಳಿನ ಕಾರ್ಯದಲ್ಲಿ ವ್ಯತ್ಯಯ ಆಗ ಬಹುದು .. 

ಗಟ್ಟಿಯಾದ ಮತ್ತು ಪಕ್ಕದಲ್ಲಿ ಮಲಗಿದವರಿಗೆ ತೊಂದರೆ ಕೊಡಬಲ್ಲ ಗೊರಕೆ ,ಆಗಾಗ ಉಸಿರು ನಿಲ್ಲುವುದು ,ಉಸಿರಾಟದ ವೇಳೆ ಸಂಕಟ ವಾದಂತೆ  ತೋರುವದು ಇತ್ಯಾದಿ ಇದ್ದರೆ ಅದು ರೋಗಗ್ರಸ್ಥ ನಿದ್ರೆ .ಇದರಿಂದ ರಾತ್ರಿ ಆಗಾಗ್ಗೆ ಮೂತ್ರ ವಿಸರ್ಜನೆ ,ಆಗಾಗ ಎಚ್ಚರ ಆಗುವುದು   ಮುಂಜಾನೆ ಏಳುವಾಗ ಇನ್ನೂ ಮಲಗ ಬೇಕೆಂದು ತೋರುವದು ,ತಲೆ ನೋವು ಮತ್ತು ಹಗಲು ಹೊತ್ತು ಕುಳಿತಲ್ಲೇ ತೂಕಡಿಕೆ .ಕೆಲವು ನಾಯಕರು ವೇದಿಕೆಯಲ್ಲಿ ತೂಕಡಿಸುವ ಕಾರಣ ಇದುವೇ .ದೀರ್ಘ ಕಾಲದಲ್ಲಿ ಇದು ಮರೆಗುಳಿ ತನ ,ಮಾನಸಿಕ ಖಿನ್ನತೆ ,ಲೈಂಗಿಕ ದೌರ್ಬಲ್ಯ ಮತ್ತು ಏರು ರಕ್ತದ ಒತ್ತಡ ಉಂಟು ಮಾಡ ಬಹುದು . 

ಇದು ಸಾಮಾನ್ಯ ಗೊರಕೆಯೇ ,ಅಥವಾ ರೋಗವೇ ಎಂದು ಕಂಡು ಹಿಡಿಯಲು ನಿದ್ರೆಯ  ಮಾಪನ ಮಾಡುವರು .ಇದನ್ನು ನಿದ್ರೆಯ ಬಹು ಆಯಾಮ ( polysomnography )ಅಧ್ಯಯನ ಎಂದು ಕರೆಯುವರು .ಇದಕ್ಕೆ ಒಂದು ರಾತ್ರಿ ಆಸ್ಪತ್ರೆಯಲ್ಲಿ  ದಾಖಲಾಗ ಬೇಕಾಗುವುದು .ನಮ್ಮ ಮೈ ಮುಖ ತಲೆ ಗೆ  ವಯರ್ ಕಟ್ಟಿ  ಮೆದುಳು ,ಕಣ್ಣು ,ಶ್ವಾಸೋಚ್ವಾಸ ,ಹೃದಯ ಮತ್ತು ರಕ್ತದ ಆಮ್ಲಜನಕ ಪ್ರಮಾಣ ಅಹೋರಾತ್ರಿ  ಅಳೆಯುವರು .ನಾನು ಇದರ ಅನುಭವ ಪಡೆಯಲೆಂದೇ ಈ ಪರೀಕ್ಷೆ ಮಾಡಿಸಿ ಕೊಂಡಿರುವೆನು .ಆದರೆ ಶರೀರ ತುಂಬಾ ತಂತಿಗಳನ್ನು ಧರಿಸಿ ,ಇನ್ನೊಬ್ಬರ ಕಣ್ಗಾವಲಿನಲ್ಲಿ ನಿದ್ರೆ ಸರಿಯಾದ ನಿದ್ರೆ ಬರಲಿಲ್ಲ .ಆದರೆ ಕಾಯಿಲೆ ಇರುವರಿಗೆ ತಥಾ ಕಥಿತ ಗೊರಕೆ ನಿದ್ರೆ ಬರ ಬಹುದು . 

     



                           

                 

    ಬೊಜ್ಜು ,ಥೈರಾಯಿಡ್ ಹಾರ್ಮೋನ್ ಕೊರತೆ ,ಮದ್ಯಪಾನ ಇತ್ಯಾದಿ ಈ ಕಾಯಿಲೆಗೆ ಕಾರಣ ಇರಬಹುದು .ಕುಂಭಕರ್ಣ ನಿಗೆ ಬಹುಶಃ ಇದೇ ತೊಂದರೆ ಇದ್ದಿರಬೇಕು ಎಂದು ನನ್ನ ಊಹೆ

ಶನಿವಾರ, ಜನವರಿ 2, 2021

ಎಂಬೋಲಿಸಮ್

                             ಎಂಬೋಲಿಸಂ 

ನೀವು ಈ ಶಬ್ದ ಕೇಳಿದ್ದಿರೋ ?ಇಲ್ಲವಾದರೆ ಕೇಳಬೇಕು ..ಹೆಪ್ಪುಗಟ್ಟಿದ ರಕ್ತ ಅಥವಾ ಹೊರಗಿನ ವಸ್ತು ರಕ್ತ ನಾಳಗಳ ಮೂಲಕ ಸಂಚರಿಸಿ ಒಂದು ಆಯಕಟ್ಟಿನ ಜಾಗದಲ್ಲಿ  ನೆಲೆಯೂರಿ  ರಕ್ತ ಸರಬರಾಜು ಬಂದ್ ಮಾಡುವುದಕ್ಕೆ  ಎಂಬಾಲಿಸಂ ಎನ್ನುತ್ತಾರೆ . 

    ಇದರಲ್ಲಿ ಸಾಮಾನ್ಯವಾಗಿ ಕಂಡು ಬರುವುದು ಶ್ವಾಸ ಕೋಶದ ಮುಖ್ಯ ರಕ್ತನಾಳದ (ಪಲ್ಮನರಿ ಆರ್ಟರಿ )ಎಂಬಾಲಿಸಂ . 

                 Thromboembolism (Deep Vein Thrombosis and Pulmonary Embolism) - Harvard  Healthಕಾಲಿನ  ಅಭಿಧಮನಿಗಳಲ್ಲಿ  ಹೆಪ್ಪುಗಟ್ಟಿದ ರಕ್ತ  ಮಹಾ ಅಭಿಧಮನಿ ಮೂಲಕ  ಹೃದಯದ ಬಲ ಹೃತ್ಕರ್ಣ ಮತ್ತು ಹೃತ್ಕುಕ್ಷಿ  ಮೂಲಕ  ಶ್ವಾಶ ಕೋಶದ ಅಪಧಮನಿ ಪ್ರವೇಶಿಸಿ ಅಲ್ಲಿಯ ರಕ್ತ ಸಂಚಾರ ಭಾಗಷಃ ಅಥವಾ ಪೂರ್ಣ ನಿಲುಗಡೆ ಮಾಡುವುದು .ಇದರಿಂದ ಹಠಾತ್ ಉಸಿರು ಕಟ್ಟಿ ಪರಿಸ್ಥಿತಿ ಗಂಭೀರ ಆಗುವುದು ,ಸಾವು ಸಂಭವಿಸಲೂ ಬಹುದು .ಕಾಲಿನ ಅಭಿಧಮನಿ(vein ) ಗಳಲ್ಲಿ  ರಕ್ತ  ಹೆಪ್ಪುಗಟ್ಟುವುದು ಯಾಕೆ ?ಕಾಲಿನ ಚಲನೆಯಿಲ್ಲದೆ (ಉದಾ ಮೂಳೆ ಮುರಿತದಿಂದ  ಮತ್ತು ತೀವ್ರತರ ಕಾಯಿಲೆಗಳಿಂದ ಹಾಸಿಗೆ ಹಿಡಿದವರು ,ದೀರ್ಘ ಕಾಲದ ವಿಮಾನ ಪ್ರಯಾಣ ),  ರಕ್ತನಾಳ ದಲ್ಲಿ  ರಕ್ತ ಚಲನೆ ಕಡಿಮೆ ಆಗುವದು  ಮತ್ತು ಹೆಚ್ಚಿದ ರಕ್ತ ಹೆಪ್ಪುಗಟ್ಟುವ ಸ್ಥಿತಿ (ಉದಾ ಗರ್ಭಿಣಿಯರು ) ಇದಕ್ಕೆ ಮುಖ್ಯ ಕಾರಣಗಳು .ಇಂತಹ ಹೆಪ್ಪು ರಕ್ತ ಮೆಲ್ಲಗೆ ಸ್ಥಾನ ಪಲ್ಲಟ  ಗೊಂಡು ರೋಗಿಯ ಅರಿವಿಲ್ಲದಂತೆಯೇ ಚಲಿಸಿ ಮುಖ್ಯ ಅಂಗದ ರಕ್ತ ನಾಳ ಬಂದ್ ಮಾಡಿ ನಮಗೆ ಚಿಕಿತ್ಸೆಗೆ ಸಮಯ ಕೊಡದೇ  ಪ್ರಾಣಾಪಾಯ ಉಂಟು ಮಾಡ ಬಹುದು .ಸಣ್ಣ ಊರುಗಳಲ್ಲಿ  ಇರುವ ಆಸ್ಪತ್ರೆಯಲ್ಲಿ ಇದನ್ನು ಕಂಡು ಹಿಡಿಯುವ ವ್ಯವಸ್ಥೆ ಇರುವುದಿಲ್ಲ ..ಆಸ್ಪತ್ರೆಯಲ್ಲಿ (ಮತ್ತು ಮನೆಗಳಲ್ಲಿ )ಸಂಭವಿಸುವ  ಅನೀರೀಕ್ಷಿತ ಮರಣಕ್ಕೆ ಒಂದು ಮುಖ್ಯ ಕಾರಣ . 

ಇನ್ನು  ಕೆಲವೊಮ್ಮೆ  ಹೃದಯದ  ಹೃತ್ಕರ್ಣ ಗಳು ಯದ್ವಾತದ್ವಾ  ಸಂಕುಚನ ವಿಕಸನ  ಗೊಂಡು  ಅದರಲ್ಲಿ ರಕ್ತ ಹೆಪ್ಪುಗಟ್ಟಿ  ಅದು ಮಹಾ ಅಪಧಮನಿ ಮೂಲಕ ಮೆದುಳಿಗೆ ಹೋಗಿ ಅಲ್ಲಿ ತನಗೆ ಸರಿಗಂಡ ಕಡೆ ನೆಲೆಯೂರಿ ಆಪತ್ತು ತರಬಹುದು .ಇದರಿಂದ ಮೆದುಳಿನ ಆಘಾತ (ಪಾರ್ಶ್ವ ವಾಯು ಇತ್ಯಾದಿ )ಉಂಟಾಗ ಬಹುದು . 

ಎಂಬಾಲಿಸಂ ವ್ಯಾಖ್ಯೆಯಲ್ಲಿ  ಹೊರಗಿನ ವಸ್ತು ಎಂಬುದು ಇದೆಯಷ್ಟೆ .ಗರ್ಭಿಣಿಯರಲ್ಲಿ  ಮಗುವಿನ ಸುತ್ತ  ಆಮ್ನಿಯಾಟಿಕ್ ದ್ರವ ಇದೆಯಷ್ಟೇ .ಕೆಲವೊಮ್ಮೆ ಇದು ರಕ್ತಕ್ಕೆ ಸೇರಿ ಯಾವುದೇ ಮುನ್ಸೂಚನೆ ಇಲ್ಲದೆ ಹಠಾತ್ ರಕ್ತದ ಒತ್ತಡ ಕುಸಿಯುವುದು ,ಹೃದಯ  ಶ್ವಾಸ ಕೋಶಗಳು ಕಾರ್ಯ ಕ್ಷಮತೆ ಕಳೆದು ಕೊಳ್ಳುವವು .ರಕ್ತ ಹೆಪ್ಪು ಗಟ್ಟದೆ ಎಲ್ಲೆಡೆಗಳಿಂದ  ರಕ್ತ ಸ್ರಾವ ಆಗುವುದು .,ಆಲೋಚನೆ ಮಾಡುವಷ್ಟರಲ್ಲಿ ಸಾವು ಸಂಭವಿಸ ಬಹುದು .ದುರ್ದೈವ ಎಂದರೆ ಇದನ್ನು ಕಂಡು ಹಿಡಿಯುವ ಪರೀಕ್ಷೆಗಳು ಇಲ್ಲಾ .ರೋಗ ಲಕ್ಷಣಗಳನ್ನು ನೋಡಿ ಊಹಿಸ ಬೇಕಷ್ಟೆ .ಹಲವು ಭಾರಿ ರೋಗಿಯ ಸಂಭಂದಿಕರು  ಈ ದುರಂತಕ್ಕೆ ಆಸ್ಪತ್ರೆ ಮತ್ತು ವೈದ್ಯರನ್ನು ದೂಷಿಸುವುದಲ್ಲದೆ  ಹಲ್ಲೆ ಮಾಡಿದ ಸಂಭವವೂ ಇದೆ ..ಇದನ್ನು  ಆಮ್ನಿಯಾಟಿಕ್ ಫ್ಲ್ಯೂಯಿಡ್ ಎಂಬಾಲಿಸಂ ಎಂದು ಕರೆಯುತ್ತಾರೆ .ಇದರ ನಿಖರ ಕಾರಣ ಇದುವರೆಗೆ ನಿಗೂಢ ವಾಗಿದ್ದು ,ಯಾವುದೇ ಪರೀಕ್ಷಣಕ್ಕೆ ಸಮಯ ಇರುವುದಿಲ್ಲ .ವೈದ್ಯರು ಇಂತಹ ಪರಿಸ್ಥಿತಿ ಯಲ್ಲಿ  ನಿಸ್ಸಾಯಕ ರಾಗಿರುತ್ತಾರೆ ಎಂಬುದನ್ನು ಮನಗಾಣ ಬೇಕು . 

ಇನ್ನು ಕೊಬ್ಬು ಮತ್ತು ವಾಯು ರಕ್ತನಾಳಕ್ಕೆ ಸೇರಿ ಸಂಚರಿಸಿ (ಮಕ್ಕಳ ಟೊಪ್ಪಿ ಆಟದಂತೆ )ಸಡನ್ ಆಗಿ ಒಂದು ಪ್ರಮುಖ ರಕ್ತ ಕೊಳವೆ ಬ್ಲಾಕ್ ಮಾಡಿ ಅಪಾಯ ಉಂಟು ಮಾಡಬಹುದು