ಬೆಂಬಲಿಗರು

ಮಂಗಳವಾರ, ಮಾರ್ಚ್ 25, 2025

                                     


 

 ಹಿಂದಿನ ಮದ್ರಾಸ್ ಅಥವಾ ಈಗಿನ ಚೆನ್ನೈ ಯನ್ನು ವೈದ್ಯ ಕೀಯ  ಕ್ಷೇತ್ರದ ಕಾಶಿ ಎನ್ನ ಬಹುದು.ದಕ್ಷಿಣ ಭಾರತದಲ್ಲಿ ಬ್ರಿಟಿಷರ ಆಢಳಿತಾತ್ಮಕ ಕೇಂದ್ರ ಆಗಿದ್ದ ಕಾರಣ ಅಲ್ಲಿ ವೈದ್ಯಕೀಯ ಕಾಲೇಜು ಇತ್ಯಾದಿ ಬಹಳ ಹಿಂದೆಯೇ ಸ್ಥಾಪನೆ ಆಗಿದ್ದವು   . ಟ್ರೋಪಿಕಲ್ ಸ್ಪ್ರೂ ,ಮದ್ರಾಸ್ ಮೋಟಾರ್ ನ್ಯೂರೋನ್ ಡಿಸೀಸ್ ,ಲೀಷ್ಮೆ ನಿಯಾ  ಮುಂತಾದ ಹಲವು ಕಾಯಿಲೆಗಳ ದಾರಿ ತೋರುವ ಅಧ್ಯಯನ ಇಲ್ಲಿಯೇ ಆಗಿತ್ತು . ದಂತ ಕತೆ ಗಳಾದ ವೈದ್ಯಕೀಯ ಶಿಕ್ಷಕ ರಾದ ಡಾ ತಿರುವೆಂಗಡಂ (ಫಿಸಿಷಿಯನ್ ).ಡಾ ಏನ್ ಮದನಗೋಪಾಲನ್ (ಗ್ಯಾಸ್ಟ್ರೋ ಎಂಟೆರೊಲೊಜಿ),ಡಾ ಸೇತುರಾಮನ್ (ಹೆಮಟೊಲೊಜಿ ),ಡಾ ಎ   ಎಸ ತಂಬೈಯ್ಯ (ಡರ್ಮಟಾಲಜಿ ),ಡಾ ರಾಮ ಮೂರ್ತಿ (ನೂರೋ ಸರ್ಜರಿ ),ಡಾ ರಂಗ ಭಾಷ್ಯಮ್ (ಗ್ಯಾಸ್ಟ್ರೋ ಎಂಟೆರೋ ಸರ್ಜರಿ ) ಕೆಲವು ಹೆಸರುಗಳು . 

ಇವರಲ್ಲಿ ತಿರುವೆಂಗಡಂ ಬಿಟ್ಟರೆ ಉಳಿದವರು  ಹೊಸ ವಿಭಾಗಗಳಿಗೆ ಅಡಿಪಾಯ ಹಾಕಿ ಕಟ್ಟಿ ಬೆಳೆಸಿದವರು . ನಮ್ಮ ದೇಶದಲ್ಲಿ ಸ್ನಾತಕೋತ್ತರ ಕಲಿಕೆಗೆ ಅವಕಾಶ ಇಲ್ಲದ ವಿಷಯಗಳ ಅಧ್ಯಯನ ವನ್ನು ವಿದೇಶ (ಮುಖ್ಯವಾಗಿ ಇಂಗ್ಲೆಂಡ್ )ಮಾಡಿ ಪುನಃ ತಾಯಿ ನಾಡಿಗೆ ಬಂದು ಇಲ್ಲಿ ಕಲಿಕೆಗೆ ಅವಕಾಶ ಕಲ್ಪಿಸಿದವರು . 

ಡಾ ಎ  ಎಸ ತಂಬಯ್ಯ  ಇಂಗ್ಲೆಂಡ್ ದೇಶದಲ್ಲಿ ಚರ್ಮ ರೋಗ ಪತ್ತೆ ಮತ್ತು ಚಿಕಿತ್ಸೆಯಲ್ಲಿ  ವಿಶೇಷ ಅಧ್ಯಯನ ಮಾಡಿ ಮದ್ರಾಸ್ ಮೆಡಿಕಲ್ ಕಾಲೇಜು ವಿಭಾಗ ಆರಂಬಿಸಿದವರು . ಅವರ ಅಧ್ಯಾಪನ ರೀತಿ ಬಲು ಆಕರ್ಷಕ ವಾಗಿದ್ದು ಹಲವು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆಗ ವಿದ್ಯಾರ್ಥಿಗಳಲ್ಲಿ ಅಷ್ಟು ಜನಪ್ರಿಯವಾಗಿ ಇಲ್ಲದಿದ್ದ ಡರ್ಮಟಾಲಜಿ ಅಧ್ಯಯನ ಕ್ಕೆ ಬರುವಂತೆ ಮಾಡಿತು .ಅವರು ಸೇವೆಯಿಂದ ನಿವೃತ್ತರಾದ ಮೇಲೂ ನಿರಂತರ ಕಲಿಕಾ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಭಾಗವಹಿಸುತ್ತಿದ್ದು ಚೆನ್ನೈ ಯಲ್ಲಿ  ನನಗೂ ಅವರ  ಪಾಂಡಿತ್ಯ ಭರಿತ ಉಪನ್ಯಾಸ ಕೇಳುವ ಅವಕಾಶ ಸಿಕ್ಕಿತ್ತು . 

ಡಾ ತಂಬಯ್ಯ ಅವರ ದಾರಿಯಲ್ಲಿ ನಡೆದು ಬಂದ ಚರ್ಮ ರೋಗ ತಜ್ಞ ಪ್ರಾಧ್ಯಾಪಕ ಡಾ ಪ್ಯಾಟ್ರಿಕ್ ಯೇಸುದಿಯನ್ . ಮದ್ರಾಸ್ ಮೆಡಿಕಲ್ ಕಾಲೇಜು ನಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ನಂತರ  ಕಿಲ್ಪಾಕ್ ನಲ್ಲಿ  ಕ್ಲಿನಿಕ್ ನಡೆಸುತ್ತಿದ್ದು  ,ಚಿತ್ರ ನಟನಟಿಯರು ,ರಾಜಕಾರಿಣಿಗಳು ಸೇರಿ ದಂತೆ  ಬಹು ಬೇಡಿಕೆಯ ವೈದ್ಯರು. ಆರ್ ಕೆ ಲಕ್ಷ್ಮಣ್ ನ ಕಾಮನ್ ಮ್ಯಾನ್ ನ ವ್ಯಕ್ತಿತ್ವ . ವೈದ್ಯಕೀಯ ಅಲ್ಲದೆ ಇತರ ಸಾಹಿತ್ಯವನ್ನೂ ಚೆನ್ನಾಗಿ ಓದಿ ಕೊಂಡಿದ್ದ ಇವರ ಭಾಷಣಗಳಲ್ಲಿ  ಅವುಗಳಿಂದ ಆಯ್ದ ನುಡಿ ಮುತ್ತುಗಳು ಸಹಜವಾಗಿ ಪುಂಖಾನುಪುಂಖವಾಗಿ ಬಂದು ಕೇಳುಗರ ಕಿವಿ ಮತ್ತು ಮನಕ್ಕೆ ಹಿತವಾಗಿರುತ್ತಿತ್ತು . ಚರ್ಮ ರೋಗ ನಿಧಾನದಲ್ಲಿ ನೋಡುವಿಕೆಗೆ ಆದ್ಯತೆ .ಹಲವು  ಅಪರೂಪದ ಕಾಯಿಲೆಗಳೂ ಸೇರಿ ಚರ್ಮ ರೋಗಗಳ  ಛಾಯಾಚಿತ್ರ ಗಳ  ಸ್ಲೈಡ್ ಗಳ  ಅಮೂಲ್ಯ ಸಂಗ್ರಹ ಅವರ ಬಳಿ ಇತ್ತು .ಆಗಿನ್ನೂ ಪವರ್ ಪಾಯಿಂಟ್ ಬಂದಿರಲಿಲ್ಲ . ಚರ್ಮ ರೋಗ ತಜ್ಞ ಕ್ಕಿಂತ ಹೆಚ್ಚಾಗಿ ಅವರು ಒಬ್ಬ ಪರಿಣತ ಫಿಸಿಷಿಯನ್ ಆಗಿದ್ದರು . ಒಳ ರೋಗಗಳು  ಚರ್ಮದಲ್ಲಿ  ಹಲ ರೂಪದಲ್ಲಿ ಪ್ರಕಟವಾಗುವದು ಸಾಮಾನ್ಯ; ಡಾ ಪ್ಯಾಟ್ರಿಕ್ ಅವುಗಳ ಜಾಡು ಹಿಡಿಯುವುದರಲ್ಲಿ ನಿಸ್ಸೀಮರು . 

ನಾನು ಪೆರಂಬೂರು ರೈಲ್ವೆ ಆಸ್ಪತ್ರೆಯಲ್ಲಿ ಇದ್ದಾಗ ನಮ್ಮ ವಿಭಾಗ ಮುಖ್ಯಸ್ಥ ರಾಗಿದ್ದ  ಡಾ ಜಿ ಸಿ ರಾಜು ರವರು ನನ್ನ ಬಳಿ ಡಾ ಪ್ಯಾಟ್ರಿಕ್ ನಮ್ಮ ಆಸ್ಪತ್ರೆಗೆ ವಾರಕ್ಕೊಮ್ಮೆ ಕ್ಲಾಸ್ ತೆಗೆದು ಕೊಳ್ಳಲು ಬರಬಹುದೋ ಎಂದು ವಿಚಾರಿಸುವಂತೆ ಕೇಳಿದರು .ನಾನು ಅವರ ಕ್ಲಿನಿಕ್ ಗೆ ಹೋಗಿ ವಿನಂತಿಸಲು ತಮಗೆ ಪಾಠ ಮಾಡುವುದು ಇಷ್ಟ ವಾದರೂ ಸಮಯಾವಕಾಶ ಕಷ್ಟ ಎಂದು ಮೊದಲು ನಿರಾಕರಿಸಿದರೂ ನಾನು ಛಲ ಬಿಡದ ತ್ರಿವಿಕ್ರಮನಂತೆ  ಕ್ಲಿನಿಕ್ ಗೆ ಪುನಃ ಪುನಃ ಎಡತಾಕಿ ಅವರನ್ನು ಒಪ್ಪಿಸಿದೆ . ಸ್ಲೈಡ್ ಸಹಿತವಾದ ಅವರ ಕ್ಲಾಸ್ ವರ್ತ್  ಗೋಲ್ಡ್ ಅನ್ನುತ್ತಾರಲ್ಲ ಹಾಗೆ . ಪ್ಯಾಥಾಲಜಿ ,ಬಯೋ ಕೆಮಿಸ್ಟ್ರಿ ,ಮೆಡಿಸಿನ್  ಎಲ್ಲಾ ಕರತಾ ಮಲಕ  . 

ಮೊನ್ನೆ ಇಂಟರ್ನೆಟ್ ನಲ್ಲಿ ಜಾಲಾಡುವಾಗ ಅವರ ಭಾಷಣಗಳ ಸಂಗ್ರಹವೊಂದನ್ನು  "All I should say to my young friends"ಎಂಬ ಶೀರ್ಷಿಕೆಯಲ್ಲಿ ಅವರ ವಿದ್ಯಾರ್ಥಿ ಡಾ ಮುರುಗಸುಂದರಂ ಪ್ರಕಟಿಸಿದ್ದಾರೆ ಎಂದು ತಿಳಿದು ಅದನ್ನು ತರಿಸಿ ಓದುತ್ತಿದ್ದೇನೆ . ಹಿಂದೆ ಅವರ ಉಪನ್ಯಾಸಗಳನ್ನು ಕೇಳಿದ ನೆನಪು ಮತ್ತೆ ಆಯಿತು . ಅವರ ಗುರು ಪ್ರೊ ತಂಬಯ್ಯ  ಆಗಾಗ ಉದ್ಧರಿಸುತ್ತಿದ್ದ  ಫ್ರಾನ್ಸಿಸ್ ಬೇಕನ್ ನ 'Reading makes a full man,Writing an exact man ,Conversation a ready man "ಉಲ್ಲೇಖ ಮಾಡಿ ವೈದ್ಯರಿಗೆ  ಓದುಬರೆಯುವಿಕೆ ಮತ್ತು ಸಂವಹನ ದ  ಪ್ರಾಮುಖ್ಯತೆ ಒತ್ತಿ ಹೇಳಿದ್ದಾರೆ .                                ಇದರಲ್ಲಿ ನಾನು ಕಂಡಂತೆ ಇತ್ತೀಚಿನ ದಿನಗಳಲ್ಲಿ ವೈದ್ಯ ವೈದ್ಯ ರ ನಡುವೆ ನೇರ ಸಂವಹನ ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿದೆ .ಒಬ್ಬ ರೋಗಿಯನ್ನು ಹಲವು ಸ್ಪೆಷಲಿಸ್ಟ್ ಗಳು ನೋಡುತ್ತಿದ್ದರೂ ಒಟ್ಟಾಗಿ ರೋಗಿಯ ಬಗ್ಗೆ ಕೂಡಿ ಚರ್ಚಿಸುವುದು ಕಡಿಮೆ ಆಗಿರುವುದು ದುರ್ದೈವ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ