ಈ ಪ್ರದೇಶ ಸಿಸಿ ಟಿವಿ ಕಣ್ಗಾಪಿನಲ್ಲಿದೆ
ಈಗ ಶಾಲೆ ಕಾಲೇಜ್ ಆಸ್ಪತ್ರೆ ,ಸರಕಾರಿ ಕಚೇರಿ ಬ್ಯಾಂಕ್ ಎಲ್ಲೆಂದರಲ್ಲಿ ಕಂಡು ಬರುವ ಸೂಚನಾ ಫಲಕ . ತಮ್ಮಲ್ಲಿ ಬರುತ್ತಿರುವ ಅತಿಥಿ ,ಗ್ರಾಹಕರ ಲ್ಲಿ ಕೆಲವರ ಮೇಲೆ ಅಪನಂಬಿಕೆ ಇರುವ ಸೂಚನೆ . ಸರ್ವಾನ್ತರ್ಯಾಮಿ ಯಾದ ದೇವರನ್ನು ಪ್ರತಿಷ್ಠಿಸಿರುವ ದೇವಾಲಯ ಗಳಲ್ಲಿಯೂ ಇಂತಹ ಎಚ್ಚರಿಕೆ ಇರುವುದು ವಿಪರ್ಯಾಸ . ಗುರುಗಳು ಶಿಷ್ಯರಿಗೆ ತಲಾ ಒಂದು ಬಾಳೆಹಣ್ಣು ಕೊಟ್ಟು ದೇವರು ಇಲ್ಲದ ತಾಣದಲ್ಲಿ ತಿನ್ನಿರಿ ಎಂದು ಹೇಳಿದಾಗ ಎಲ್ಲರೂ ಹಣ್ಣು ಸಹಿತ ವಾಪಸು ಬಂದ ಕತೆ ಕೇಳಿದ್ದೇವೆ .
ಮನೆಯಲ್ಲಿ ನಿಜಕ್ಕೂ ನಾಯಿ ಇಲ್ಲದಿದ್ದರೂ ಕಚ್ಚುವ ನಾಯಿ ಇದೆ ಎಂದು ಕೆಲವರು ಬೋರ್ಡ್ ಹಾಕಿ ಕೊಂಡು ಇರುತ್ತಾರೆ .;. ಕಳ್ಳರನ್ನು ಹೆದರಿಸಲು . ಹಾಗೆಯೇ ಸಿಸಿಟಿವಿ ಎಚ್ಚರಿಕೆ ಯೂ ಇರುವ ಸಾಧ್ಯತೆ ಇದೆ .
ಪರೀಕ್ಷಾ ಕೇಂದ್ರಗಳಲ್ಲಿ ಈಗ ಸಿಸಿಟಿವಿ ಕಡ್ಡಾಯ . ಆದರೂ ಕಾಪಿ ಹೊಡೆಯುವುದು ಕಡಿಮೆ ಆಗಿದೆ ಎಂದು ಎದೆ ತಟ್ಟಿ ಹೇಳುವುದು ಕಷ್ಟ . ನೀವು ಚಾಪೆಯ ಕೆಳಗೆ ನುಗ್ಗಿದರೆ ರಂಗೋಲಿ ಕೆಳಗೇ ಅಡಗುವವರು ಇದ್ದಾರೆ ನೆಸೆ ಸಿಟಿ ಈಸ್ ಮದರ್ ಆಫ್ ಇನ್ವೆಂಷನ್ .
ಸರಕಾರಿ ಕಚೇರಿಗಳಲ್ಲಿ ಇದರ ಅಳವಡಿಕೆಯಿಂದ ಲಂಚದ ಹಾವಳಿ ಕಡಿಮೆ ಆಗಿದೆಯೇ ,ಸಾರ್ವಜನಿಕರೇ ಹೇಳಬೇಕು . ಲಂಚವನ್ನು ಮಧ್ಯವರ್ತಿಗಳ ಮೂಲಕ ,ಕಾಪಿ ಕುಡಿಯುವಾ ಎಂದು ಪಕ್ಕದ ಹೋಟೆಲ್ ನಲ್ಲಿ ಮತ್ತು ಕೆಲವರು ಕಚೇರಿಯ ಶೌಚಾಲಯದಲ್ಲಿ (ಅಲ್ಲಿ ಸಿಸಿಟಿವಿ ಹಾಕುವಂತಿಲ್ಲ )ವಸೂಲು ಮಾಡುವರು ಎಂದು ಕೇಳಿದ್ದೇನೆ .
ಸಿಸಿಟಿವಿ ಸಹಾಯದಿಂದ ಅಪರಾಧಿಗಳನ್ನು ಪತ್ತೆ ಹಚ್ಚಿದ ವಾರ್ತೆ ಓದಿದ್ದೇವೆ . ಇತ್ತೀಚೆಗೆ ಕುಟುಂಬ ಕಲಹ ,ಆತ್ಮಹತ್ಯೆ ,ಕೊಲೆ ಇತ್ಯಾದಿ ಅಧಿಕ ಆಗುತ್ತಿರುವುದರಿಂದ ಇನ್ನು ಎಲ್ಲಾ ಮನೆಗಳ ಒಳಗೂ ಸಿಸಿಟಿವಿ ಕಡ್ಡಾಯ ಮಾಡ ಬಹುದು .
ಕೆಲವು ಶಾಲೆಗಳಲ್ಲಿ ಸಿಸಿಟಿವಿ ಲಿಂಕ್ ಮತ್ತು ಪಾಸ್ವರ್ಡ್ ಹೆತ್ತವರಿಗೆ ಕೊಟ್ಟು ಶಾಲೆಯಲ್ಲಿ ಚೆನ್ನಾಗಿ ಕಲಿಸುತ್ತಾರೆಯೋ ಇಲ್ಲವೋ ,ತಮ್ಮ ಮಕ್ಕಳು ತರಗತಿಗಳಲ್ಲಿ ಆಸಕ್ತಿಯಿಂದ ಕಲಿಯುವರೋ ಎಂದು ತತ್ಸಮಯ ಗಮನಿಸುವ ವ್ಯವಸ್ಥೆ ಮಾಡಿರುತ್ತಾರೆ ಎಂದು ಕೇಳಿದ್ದೇನೆ .
ಅಪರಾಧ ಗಳನ್ನು ತಿಳಿದೂ ತಿಳಿದೂ ಮಾಡಿ ದೇವಾಲಯಗಳಿಗೆ ದೊಡ್ಡ ಕಾಣಿಕೆ ಹಾಕಿ ಲೇವಾದೇವಿ ಮಾಡುವ ಮಂದಿಗೆ ಸರ್ವನ್ತರ್ಯಾಮಿ ಯ ಭಯ ಇಲ್ಲದಿದ್ದರೂ ಮಾನವ ನಿರ್ಮಿತ ಸಿಸಿಟಿವಿ ಯ ಹೆದರಿಕೆ ಸ್ವಲ್ಪ ಇರಬಹುದು .
ಹಿಂದೆ ಮನೆ ಕಾವಲಿಗೆ ನಾಯಿ ಸಾಕುತ್ತಿದ್ದೆವು . ಅಪರಿಚಿತರು ಬಂದರೆ ಮಾತ್ರ ಅವು ಬೊಗಳುವವು . ಕತ್ತಲೆಯಲ್ಲಿ ಮನೆಯವರು ಬಂದಾಗಲೂ ಕೆಲವೊಮ್ಮೆ ಬೊಗಳಿದಾಗ "ನಾನಲ್ಲವೇ ನಾಯಿ ,ನೀನ್ಯಾಕೆ ಬೊಗಳುವೆ "ಎನ್ನುವುದು ಸಾಮಾನ್ಯ . ಇನ್ನು ಮನೆ ಮಂದಿಯ ಮುಖ ಚರ್ಯೆ ಯನ್ನು ಸಿಸಿಟಿವಿ ಯಲ್ಲಿ ದಾಖಲಿಸಿ ಅಪರಿಚಿತರು ಬಂದಾಗ ಸೈರನ್ ಮಾಡುವ ವ್ಯವಸ್ಥೆ ಬಂದರೆ ಕಾವಲು ನಾಯಿ ಸಾಕಣೆ ನಿಲ್ಲ ಬಹುದು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ