ಬೆಂಬಲಿಗರು

ಮಂಗಳವಾರ, ಆಗಸ್ಟ್ 20, 2024

 

ನಿನ್ನೆಯ ದಿನ  ಅಪರಾಹ್ನ ಎರಡು ಗಂಟೆಗೆ ಪುತ್ತೂರು ನ್ಯಾಯಾಲಯ ಪರಾಶರ ಸಭಾಂಗಣದಲ್ಲಿ ಎರಡು ಚೊಕ್ಕ ಕಾರ್ಯಕ್ರಮಗಳು . ನೂತನ ನ್ಯಾಯಾಧೀಶ ದೇವರಾಜ್ ಅವರಿಗೆ ಸ್ವಾಗತ ಮತ್ತು  ವಕೀಲ ಭಾಸ್ಕರ ಕೋಡಿಂಬಾಳ ಅವರ ಲಲಿತ ಪ್ರಬಂಧಗಳ ಸಂಕಲನ "ಕಣ್ಣಿಗೆ ಕಾಣದ್ದು ಮನಸ್ಸನ್ನು ಕಾಡಿದ್ದು " ಬಿಡುಗಡೆ . ಪುತ್ತೂರು ವಕೀಲರ ಸಂಘದ ಆಶ್ರಯದಲ್ಲಿ . ನಿವೃತ್ತ ಹೈ ಕೋರ್ಟ್ ನ್ಯಾಯಾಧೀಶ ನ್ಯಾ ಮೂ ಕೃಷ್ಣ ಭಟ್ ಅವರು ಮುಖ್ಯ ಅತಿಥಿ ಮತ್ತು ಕೃತಿ ಅನಾವರಣ ಮಾಡಿದವರು . ಪುತ್ತೂರು ನ್ಯಾಯಾಲಯದ ನ್ಯಾಯಾಧೀಶರು ,ಬಾರ್ ಕೌನ್ಸಿಲ್ ಅಧ್ಯಕ್ಷರು ,ಹಿರಿಯ ನ್ಯಾಯವಾದಿ ಶ್ರೀ ರಾಮ ಮೋಹನ ರಾವು ,ಇಂತಹವರ ಜೊತೆಗೆ ವೇದಿಕೆ ಹಂಚಿಕೊಳ್ಳುವ ಗೌರವ ನನಗೆ .ವೇದಿಕೆಯಲ್ಲಿ ತಲೆ ಹಣ್ಣಾದವರು(ಬಿಳಿ ಅದವರು )ನಾನು ಮತ್ತು ರಾಮ ಮೋಹನ ರಾವ್ ಮಾತ್ರ . ನ್ಯಾಯಾಧೀಶರು ಮತ್ತು ನ್ಯಾಯವಾದಿ ಗಳು  ಕಕ್ಷಿದಾರರ ವಿಚಾರಗಳನ್ನು ತಲೆಗೆ ತೆಗೆದು ಕೊಂಡರೂ ಅದನ್ನು ಹಚ್ಚಿ ಕೊಳ್ಳುವುದಿಲ್ಲ ಎಂದು ತೋರುತ್ತದೆ ವೈದ್ಯರು ರೋಗಿಗಳ ಸಮಸ್ಯೆಗಳನ್ನೂ .

ವಕೀಲರು ,ಸಾಹಿತಿಗಳು ಮತ್ತು ಭಾಸ್ಕರ್ ಅವರ ಬಂಧು ಮಿತ್ರರಿಂದ ತುಂಬಿದ ಸಭಾಂಗಣ .ನ್ಯಾ ಮೂ ಕೃಷ್ಣ ಭಟ್  ಧೋತಿ ಶಾಲು ಧಾರಿಯಾಗಿ ಬಂದಿದ್ದು ವಿಶೇಷ . ಕೃತಿಯನ್ನು ಬಿಡುಗಡೆ ಗೊಳಿಸಿ ಪಾಂಡಿತ್ಯ ಪೂರ್ಣ ಭಾಷಣ ಮಾಡಿದರು ;ಕೃತಿಯನ್ನು ಬಹಳ ಮೆಚ್ಚಿ ಕೊಂಡರು. ವೃತ್ತಿಯಲ್ಲಿ ಅವರು ಎಲ್ಲರ ಪ್ರೀತಿ ಗೌರವ ಗಳಿಸಿದ್ದವರು ಎಂದು ನೆರೆದಿದ್ದ  ನ್ಯಾಯಾಧೀಶರ ಭಾಷಣಗಳಿಂದ ವೇದ್ಯ ವಾಯಿತು .ಸಂಸ್ಕೃತ ,ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯವನ್ನು ಚೆನ್ನಾಗಿ ಓದಿ ಕೊಂಡವರು.ತಾವು ನ್ಯಾಯಾಧೀಶ ರಾಗಿದ್ದಾಗ  ಸಾಹಿತಿಗಳನ್ನು ಕರೆಸಿ ವಕೀಲರ ಸಂಘಗಳಲ್ಲಿ ಭಾಷಣ ಗಳನ್ನು ಏರ್ಪಡಿಸುತ್ತಿದ್ದುನನ್ನು ನೆನೆಪಿಸಿ ಕೊಂಡರು . ಹಿರಿಯ ನ್ಯಾಯವಾದಿ ರಾಮ ಮೋಹನ ರಾವು ಅವರ ಭಾಷಣ ,ನ್ಯಾಯಾಧೀಶರ ,ವಕೀಲ ಸಂಘದ ಪದಾಧಿಕಾರಿಗಳ  ಶುಭಾಂಶನೆ ,ಕೃತಿ ಕರ್ತನ ಭಾಷಣ ಎಲ್ಲವೂ ಚೆನ್ನಾಗಿ ಬಂತು .ಒಟ್ಟಿನಲ್ಲಿ ಒಂದು ಸಂಜೆ ಅರ್ಥ ಪೂರ್ಣ ವಾಗಿ ಕಳೆಯಿತು .  

ರವಿ ಕಾಣದ್ದನ್ನು ಕವಿ ಕಾಣುವ ಎಂಬ ಮಾತು ಇದೆ . ಇಲ್ಲಿ ಕವಿ ರವಿ (ಭಾಸ್ಕರ )ಒಂದು ಗೂಡಿದಾಗ ಆದ ಕೃತಿ ಈ ಹೊತ್ತಿಗೆ .

ಪುಸ್ತಕದ ಮೊದಲ ಲೇಖನ 'ಭಕ್ತರಿಲ್ಲದ ಭಗವಂತನಿಗೆ ಕೆದಿಲ್ಲಾಯ ರಿಂದ  ನಿತ್ಯ ಪೂಜೆ .ಅದರ ಎರಡು ಪಾರಾ ಹೀಗಿದೆ .

ತಿನ್ನಲು ಉಣ್ಣಲು ಬಹಳ ಕಷ್ಟದ ಕಾಲ ವೊಂದಿತ್ತು .ಆದರೆ ಅದೇ ಕಾಲದಲ್ಲಿ ನೆಮ್ಮದಿಗೇನೂ ಕೊರತೆಯಿರಲಿಲ್ಲ .ಆ ಕಾಲದಲ್ಲಿ ಕೋಡಿಂಬಾಳದ ಶ್ರೀ ಮಹಾ ವಿಷ್ಣು ದೇವರ ಬಳಿ ವರ್ಷಕ್ಕೊಮ್ಮೆ ಅಥವಾ ಎರಡು ಸಲ ಬರುತ್ತಿದ್ದ ಭಕ್ತರಲ್ಲಿ ಅನೇಕರು ಬರುವಾಗ ಕಿಸೆಯಲ್ಲಿ ಹುಡುಕುವುದು ಇದ್ದದ್ದರಲ್ಲಿ ಅತೀ ಸಣ್ಣ ಪಾವಲಿಯನ್ನು,ಭಕ್ತರ ಅಂಗಿಯ ಕಿಸೆಯಲ್ಲಿಯೋ ,ಪಂಚೆಯೊಳಗಿನ ಪಟ್ಟೆನಾಮದ ಚಡ್ಡಿಯ ಕಿಸೆಯಲ್ಲಿಯೂ ಅಡಗಿ ಕುಳಿತ ಪಾವಲಿಗೆ ಕೈ ಹಾಕಿದಾಗ ತಪ್ಪಿಸಿ ಕೊಳ್ಳಲಾರದೇ ಸಿಕ್ಕಿ ಹಾಕಿಕೊಂಡವುಗಳಲ್ಲಿ ದೊಡ್ಡದನ್ನೆಲ್ಲಾ ಪುನಃ ಕಿಸೆಗೆ ಹಾಕಿ ಉಳಿದವುಗಳಲ್ಲಿ ಅತೀ ಸಣ್ಣ ಪಾವಳಿಯನ್ನು ಆಯ್ಕೆ ಮಾಡಿ ಭಕ್ತ ತನ್ನ ಡಬ್ಬಿಗೆ ಹಾಕುತ್ತಿದ್ದ .ಇದನ್ನು ನೋಡಿದ ದೇವರು ಶತಮಾನಗಳ ಹಿಂದೆಯೇ ಮರುಕ ಪಟ್ಟಿರ ಬೇಕು .

ಆ ಸಣ್ಣ ಪಾವಲಿಯನ್ನಾದರೂ ಮನಸಾರೆ ತನ್ನ ಡಬ್ಬಿಗೆ ಹಾಕುತ್ತಾನೆಯೇ ?ಅದೂ ಇಲ್ಲ .ಆ ಪಾವಲಿಯನ್ನು ಭಕ್ತ ತನ್ನ ತಲೆಗೆ ಮೂರು ಸುತ್ತರಿಳಿಸಿ ತಾನು ಮಾಡಿದ ಪಾಪ -ತಾಪ ದೋಷಗಳನ್ನೆಲ್ಲಾ ಅದರೊಳಗೆ ಆಪೋಷಣೆ ಗೊಳಿಸಿ ಟಿಂಗ್ ಎಂದು ಡಬ್ಬಿಯೊಳಗೆ ಹಾಕುತ್ತಿದ್ದ .ಡಬ್ಬಿ ಪಾಲಾದ ಪಾವಲಿ ವ್ಯರ್ಥವಾಗದಿರಲಿ ಎಂದು ಎರಡು ಕೈ ಜೋಡಿಸಿ ಕಣ್ಮುಚ್ಚಿ ಅಲ್ಲೇ ಅಡ್ಡ ಬೀಳುತ್ತಿದ್ದ .ಎಲ್ಲವನ್ನೂ ಬಲ್ಲ ದೇವರಿಗೆ ಇದೆಲ್ಲಾ ಅರ್ಥವಾಗದಿರಲು ಸಾಧ್ಯವೇ ?ಖಂಡಿತಾ ಇಲ್ಲ .ಈ ಚಿಲ್ಲರೆ ಪ್ರತಿಫಲ ಹಣಕ್ಕೆ ಜನರು ಮಾಡಿದ ಪಾಪ ತಾನೇಕೆ ಹೊತ್ತು ಕೊಳ್ಳಬೇಕು ಎಂದು ಕೊಂಡಿರಬೇಕು .ಜನರ ಚಿಲ್ಲರೆ ಹಣವೂ ಬೇಡ ,ಆ ಚಿಲ್ಲರೆ ಹಣದಿಂದ ತಾವು ಮಾಡಿದ ಪಾಪ ನಿವಾರಣೆ ಆಯಿತು ಎಂದೂ ಬೇಡ ಎಂದು ನಮ್ಮೂರ ದೇವರು ಜನ ಸಂಚಾರ ವಿರದ ಕೋಡಿಂಬಾಳದ ನಿರ್ಜನ ಪ್ರದೇಶದಲ್ಲಿ ಹಲವು ಶತಮಾನದ ಹಿಂದೆಯೇ ನೆಲಸಿರ ಬೇಕು ."


ಪುಸ್ತಕದ ಮುಖ ಬೆಲೆ ರೂ 150 .ಪ್ರತಿಗಳು ಆದಾಯ ತೆರಿಗೆ ಕಚೇರಿ ಪಕ್ಕದ  ಭಾಸ್ಕರ ಕೋಡಿಂಬಾಳ ಅವರ ಆಫೀಸು ಮತ್ತು ಪುತ್ತೂರು ವಕೀಲರ ಸಂಘದ ಕಚೇರಿಯಲ್ಲಿ ಲಭ್ಯ ಎಂದು ಲೇಖಕರು ತಿಳಿಸಿದ್ದಾರೆ . ಮೊಬೈಲ್ 9448548226.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ