ಬೆಂಬಲಿಗರು

ಮಂಗಳವಾರ, ಆಗಸ್ಟ್ 27, 2024

  ಅಧ್ಯಾಪಕ 

ನಿರಂತರ ಅಧ್ಯಯನ ಒಳ್ಳೆಯ  ಅಧ್ಯಾಪಕನ  ಅವಶ್ಯಕತೆ .  ಬಿ ಎಡ್  ಸೇರಿ ಪದವಿ  ಸ್ನಾತಕೋತ್ತರ ಪದವಿ ಪಿ ಎಚ್ ಡಿ ಇದ್ದರೆ ಸಾಕು ಎಂಬ ನಂಬಿಕೆ ಇದೆ . ದೊಡ್ಡ ಡಿಗ್ರಿ ಇದ್ದಷ್ಟು ಅಧಿಕ  ವೇತನ ಶ್ರೇಣಿ . ಶಿಕ್ಷಣ ವಾಣಿಜ್ಯೀಕರಣ ಆಗಿರುವ ಈ ದಿನಗಳಲ್ಲಿ  ಪದವಿಗಳ ಮೌಲ್ಯಾಂಕನವೇ  ಪ್ರಶ್ನಾರ್ಹ ಆಗಿರುವಾಗ  ಪದವಿಯ ತೂಕ ನೋಡಿ ಅಧ್ಯಾಪಕನ ನಿಜ ಮೌಲ್ಯ ನಿರ್ಧರಿಸುವುದು ತಪ್ಪಾಗುತ್ತದೆ . ಒಂದು ವಿಷಯದಲ್ಲಿ ಸ್ನಾತಕ ,ಸ್ನಾತಕೋತ್ತರ ಪದವಿ ಮಾತ್ರ ಇರುವ ವ್ಯಕ್ತಿ ಪಿ ಎಚ್ ಡಿ ಉಪಾಧಿ ಇರುವವರಿಗಿಂತ ಒಳ್ಳೆಯ ಅಧ್ಯಾಪಕ ನಾಗಿ ಇರ ಬಹುದು . ಒಂದು ಪದವಿ ಗಳಿಸಿದ ಮೇಲೆ ಅಧ್ಯಯನ ಅನಾವಶ್ಯಕ ಎಂಬ ನಂಬಿಕೆ ಸಾರ್ವತ್ರಿಕ ಅಗಿದೆ. ಇನ್ನು ವೈದ್ಯಕೀಯ ರಂಗವೂ ಸೇರಿ ತಥಾ ಕಥಿತ ನಿರಂತರ ಕಲಿಕಾ ಕಾರ್ಯಕ್ರಮಗಳು ಹರಕೆ ಸಂದಾಯ ಕಾರ್ಯಕ್ರಮಗಳೂ ,ಪ್ರದರ್ಶನ ವೇದಿಕೆಗಳೂ ಆಗಿ ಮಾರ್ಪಡುತ್ತಿವೆ ಎಂಬುದು ವಿಷಾಧನೀಯ .ಅಧ್ಯಾಪಕ ವೃತ್ತಿಗೆನೈಜ ಆಸಕ್ತಿ   ಇರುವವರು ಮಾತ್ರ ಬರಬೇಕು    ಕೇವಲ ಸಂಬಳ ಸಾರಿಗೆ ಗಾಗಿ ಅಲ್ಲ .ಮತ್ತು ತನ್ನ ಅಧ್ಯಯನ ಶೀಲತೆ ಕುಂದಿದಾಗ  ಈ ವೃತ್ತಿಗೆ ವಿದಾಯ ಹೇಳ ಬೇಕು.

  ನನ್ನ ಪ್ರಾಥಮಿಕ ಮತ್ತು ಮಾಧ್ಯಮಿಕ ತರಗತಿಗಳಲ್ಲಿ ಎರಡು ವಿಧದ ಅಧ್ಯಾಪಕರು ಇದ್ದರು . ಪಾಠ ವಿಷಯವನ್ನು ಚೆನ್ನಾಗಿ ಓದಿ  ಮನನ ಮಾಡಿ ತರಗತಿಗೆ ಬರುವವರು ಒಂದು ವರ್ಗ . ಮತ್ತು ಹಾಗೆಯೇ ಕ್ಲಾಸ್ ಗೆ ಬಂದು ಪಠ್ಯ ಪುಸ್ತಕ ಓದುವವರು ಎರಡನೇ ವರ್ಗ . ಇವರು ಪಠ್ಯ ಪುಸ್ತಕ ಕೂಡಾ ಯಾವುದಾದರೂ ವಿದ್ಯಾರ್ಥಿಯ ಕೈಯ್ಯಿಂದ ತೆಗೆದು ಕೊಳ್ಳುವವರು, "ನಿನ್ನೆ ನಾವು ಎಲ್ಲಿ ಇದ್ದೆವು ?ಎಂದು ವಿದ್ಯಾರ್ಥಿಗಳನ್ನೇ ಕೇಳಿ ಅಲ್ಲಿಂದ ಮುಂದುವರಿಕೆ .ಒಂದು ವಾಕ್ಯ ಓದಿ ಅದರ ಪೂರ್ವಾರ್ಧ ಪ್ರಶ್ನಾರ್ಥಕ ವಾಗಿ ಪುನರುಕ್ತಿ . ಉದಾ  ಅಶೋಕನು ಸಾಲು ಮರಗಳನ್ನು ನೆಡಿಸಿದನು . ಎಂದು ಓದಿ ಅಶೋಕನು ಸಾಲು ಮರಗಳನ್ನು ? ಎಂಬ ಪ್ರಶ್ನೆ .ಮಕ್ಕಳು ಒಕ್ಕೊರಲಿನಿದ ನೆಡಿಸಿದನು ಎನ್ನಬೇಕು . ಪಠ್ಯ ಪುಸ್ತಕದಲ್ಲಿ ಮುದ್ರಣ ತಪ್ಪು ಇದ್ದರೂ ಅವರ ಗಮನಕ್ಕೆ ಬಾರದು .ಉದಾಹರಣೆಗೆ ನನ್ನ ಸಮಾಜ ಅಧ್ಯಾಪಕರು ಪುಸ್ತಕದಲ್ಲಿ ಇದ್ದುದನ್ನು ಓದುತ್ತಾ "ಕಾರ್ನ್ ವಾಲೀಸ ನು 1799 ನೇ ಫೆಬ್ರುವರಿ 30 ರಂದು ನಾಲ್ಕನೇ ಮೈಸೂರ್ ಯುದ್ಧದಲ್ಲಿ ಟಿಪ್ಪು ಸುಲ್ತಾನ ನನ್ನು ವಧಿಸಿದನು ' ಎಂಬುದನ್ನು ಹಾಗೆಯೇ ಓದಿ ಪುರರುಕ್ತಿ ಮಾಡಿಸುವಾಗ ಒಬ್ಬ ವಿದ್ಯಾರ್ಥಿ ಸಾರ್ ಫೆಬ್ರುವರಿ ಯಲ್ಲಿ ಮೂವತ್ತು ಇಲ್ಲವಲ್ಲಾ ಎಂದು ಹೇಳಿದಾಗ ಅವರು ತಬ್ಬಿಬ್ಬು .ಇಲ್ಲಿ ಪಠ್ಯ ವಿಷಯ ತಮಗೇ ಸರಿಯಾಗಿ ಮನನ ಆಗದಿದ್ದರೂ ಯು ಅಂಡರ್ ಸ್ಟಾಂಡ್ ?ಯು ಅಂಡರ್ ಸ್ಟಾಂಡ್ ?ಎಂದು ವಿದ್ಯಾರ್ಥಿಗಳನ್ನು ಪ್ರಶ್ನಿಸುವರು .

ಪ್ರಸಿದ್ದ ವೈದ್ಯ ಪ್ರಾಧ್ಯಾಪಕ ಡಾ ಕೆ ವಿ ತಿರುವೆಂಗಡಮ್ ' ಕಲಿಸುವುದು ಕಲಿಕೆಯ ಉತ್ತಮ ಮಾರ್ಗ . ಯಾವತ್ತೂ ನಿನಗೆ ತಿಳಿದಿರುವ ಜ್ನಾನ ವನ್ನು ಇನ್ನೊಬ್ಬರಿಗೆ ತಿಳಿಸುತ್ತಲಿರು .ನಿನ್ನ ಜ್ನಾನವೂ ವೃದ್ದಿಸುವುದು "ಎನ್ನುತ್ತಿದ್ದರು .ಅದನ್ನು ತಮ್ಮ ಜೀವನದಲ್ಲಿ ಮಾಡಿ ತೋರಿಸಿದರು  ತಮ್ಮ ಇಳಿ ವಯಸ್ಸಿನಲ್ಲೂ ವೈದ್ಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಕ್ಲಾಸ್ ತೆಗೆದು ಕೊಳ್ಳುತ್ತಿದ್ದರು .

ಇದೆಲ್ಲಾ ಆಲೋಚನೆ ಬರಲು ಕಾರಣ ಮೊನ್ನೆ ನಿಧನರಾದ ನನ್ನ ಗುರು ಕಮ್ಮಜೆ ಸುಬ್ಬಣ್ಣ ಭಟ್ ಅವರ ನೆನಪು . ನೈಜ ಅಧ್ಯಯನ ಶೀಲ ಅಧ್ಯಾಪಕ ರನ್ನು ಮೊದಲು ನಾನು ಕಂಡುದು ಅವರಲ್ಲಿ .

ಸೋಮವಾರ, ಆಗಸ್ಟ್ 26, 2024

ಆಧಾರ ಪುರಾಣ

 

 ಸರಕಾರ ಆಧಾರ್ ಕಾರ್ಡ್ ಪದ್ದತಿ ಜಾರಿಗೆ ತಂದಾಗ ವ್ಯಕ್ತಿಯ  ಗುರುತು ಖಾತರಿ ಪಡಿಸುವ ಉದ್ದೇಶ ಮಾತ್ರ ಇತ್ತು . ಉದಾ- ಯಾವುದೇ ಸರಕಾರಿ ಯೋಜನೆಯ ಪ್ರಯೋಜನ ಪಡೆಯುವಾಗ ನಿರ್ದಿಷ್ಟ ವ್ಯಕ್ತಿಗೆ ಸಿಗುವಂತೆ  ಖಾತರಿ ಮಾಡಿಕೊಳ್ಳುವುದು . ಆಧಾರ್ ರಾಷ್ಟ್ರೀಯತೆಯನ್ನು  ಖಾತರಿ ಮಾಡುವುದಿಲ್ಲ . ಈಗ ಬ್ಯಾಂಕ್ ಖಾತೆ ,ಅಸ್ತಿ ನೋಂದಣಿ ,ಗ್ಯಾಸ್ ಕನೆಕ್ಷನ್ ,ಆಸ್ಪತ್ರೆಯಲ್ಲಿ ದಾಖಲು ಎಲ್ಲಾ ಕಡೆ ಆಧಾರ್ ಕೇಳುತ್ತಾರೆ .ದಿನಗಳ ಹಿಂದೆ ಗ್ಯಾಸ್ ಏಜನ್ಸಿ ಯವರು ಆಧಾರ್ ಬೆರಳಚ್ಚು ದೃಡೀಕರಣ ಮಾಡಲು ಸಂದೇಶ ಕಳುಸಿದರು . ನನಗೆ ಗ್ಯಾಸ್ ಸಬ್ಸಿಡಿ ಇಲ್ಲ .ಆದರೂ ದೃಢೀಕರಣ ಏಕೆ ?ಏಜನ್ಸಿ ಯವರಲ್ಲಿ ಕೂಡಾ ಉತ್ತರ ಇರಲಿಲ್ಲ .. ಕುರುಡು ಕಾನೂನುಗಳು . ಬದುಕಲು ಮತ್ತು ಸಾಯಲೂ ಆಧಾರ ಬೇಕು . 

 ನಿಮ್ಮ ಗ್ರಾಹಕರನ್ನು ಅರಿಯಿರಿ (Know your customer)  ಅಥವಾ ಸದಾ ಕಾಡುವ ಕೆ ವೈ ಸಿ  ಒಂದು ಕಾಟ ವಾಗಿ ಮಾರ್ಪಟ್ಟಿದೆ . ಅದಕ್ಕೂ ಆಧಾರ ಬೇಕು . ಬ್ಯಾಂಕ್ ,ಫೋನ್ ,ಗ್ಯಾಸ್ ,ಫಾಸ್ಟಾಗ್ ,ಆಸ್ತಿ ನೋಂದಣಿ  ,ಬಸ್ ಟಿಕೆಟ್ ಇತ್ಯಾದಿ  ಇತ್ಯಾದಿ . ಮೋಸ ಮಾಡುವವರು   ಕೆ ವೈ ಸಿ ಅಪ್ಡೇಟ್ ಎಂದು ಮೆಸೇಜ್ ಲಿಂಕ್ ಕಳುಹಿಸಿ ಪಂಗ ನಾಮ ಹಾಕುವ ಸುದ್ದಿ ಕೇಳುತ್ತಿರುತ್ತೇವೆ . ನಿಮ್ಮ ಆಧಾರ್ ನಂಬರ್ ನಲ್ಲಿ ಬುಕ್ ಮಾಡಿದ ಪಾರ್ಸೆಲ್ ನಲ್ಲಿ ನಿಷೇಧಿತ ವಸ್ತುಗಳಿವೆ ಎಂಬ ಸಂದೇಶ ಕಳುಹಿಸಿ ಬೆದರಿಸಿ ಇ -ದರೋಡೆ ಮಾಡುವವರೂ ಇದ್ದಾರೆ . ಬ್ಯಾಂಕ್ ಗಳಲ್ಲಿ ನೀವು ಕೆ ವೈ ಸಿ ಅಪ್ಡೇಟ್ ಮಾಡಿ ಸ್ವತಃ  ಹೋದರೆ ಅಲ್ಲಿ ನಿಮ್ಮನ್ನು ಗುರುತಿಸಿ ಸ್ವಾಗತಿಸುವವರು ಯಾರೂ ಇರರು .ಮುಖ ಎತ್ತಿ ನಿಮ್ಮನ್ನು ನೋಡಿದರೆ ಪುಣ್ಯ . ಇದು ನೊ  ಯುವರ್ ಕಸ್ಟಮರ್ ಮಹಿಮೆ . 

ಇನ್ನು ಸರಕಾರಿ ಕಚೇರಿಗಳಲ್ಲಿ ಲಂಚ ತೆಗದು ಕೊಳ್ಳುವಾಗ ,ಸಾಮಾನ್ಯವಾಗಿ ಹೇಳುವ ಮಾತು "ಇದು ನಮಗಲ್ಲ ಮೇಲಿನವರಿಗೂ ಪಾಲು ಹೋಗಬೇಕು " ಆದುದರಿಂದ ಅದನ್ನೂ ಆಧಾರ್ ಗೆ ಲಿಂಕ್ ಮಾಡಿದರೆ ನೈಜ ಫಲಾನುಭವಿ ಯಾರು ಎಂದು ಕೊಟ್ಟವನಿಗೆ ತಿಳಿದೀತು .. 

ಆಧಾರ್ ಕಾರ್ಡ್ ,ವೋಟರ್ ಕಾರ್ಡ್ , ಎಟಿಎಂ ಕಾರ್ಡ್ ,ರೇಷನ್ ಕಾರ್ಡ್,ಆಸ್ಪತ್ರೆ ಕಾರ್ಡ್  .ಐಡಿ ಕಾರ್ಡ್ ಇತ್ಯಾದಿ ಕಾರ್ಡ್ ಗಳೂ ಅವುಗಳ ಜೆರಾಕ್ಸ್ ಕಾಪಿಗಳೂ ಎಲ್ಲರ ಜೋಳಿಗೆಗಳಲ್ಲಿ ರಾರಾಜಿಸುವ ಈ ಕಾಲದಲ್ಲಿ  ಕೆಲವು ರೋಗಿಗಳು ರೋಗ ವಿವರ ಇರುವ ನಮ್ಮ ಚೀಟಿ ಕೇಳಿದರೆ ಎಲ್ಲವನ್ನೂ ನಮ್ಮ ಮುಂದೆ ಸುರುವಿ ಹುಡುಕ ಹೇಳುವರು. 

ಆಧಾರ್ ಇದ್ದರೆ ಸಾಲದು . ಅದಕ್ಕೆ ಜೋಡಣೆ ಆಗ ಬೇಕು . ಪಾನ್ ಕಾರ್ಡ್ ,ಬ್ಯಾಂಕ್ ಅಕೌಂಟ್ , ಡಿಮ್ಯಾಟ್ ಅಕೌಂಟ್ ,ರೇಷನ್ ಕಾರ್ಡ್  ಎಲ್ಲದಕ್ಕೂ . ವರ್ಷಗಳ ಹಿಂದೆ ಸೀತಾ ಪರಿತ್ಯಾಗ ಯಕ್ಷಗಾನದಲ್ಲಿ ಅಗಸನ ಪಾತ್ರ ಮಾಡಿದವರು ಹೆಂಡತಿಯೊಡನೆ ಕೋಪದಲ್ಲಿ ಮನೆ ಬಿಟ್ಟು ಎಂದು ಹೇಳಲು ಆಕೆ ನೀವು ಮದುವೆಯಾಗಿ ಕರೆದು ಕೊಂಡು ಬಂದಕ್ಕೆ ಆಧಾರ ಇದೆ ಎಂದು ತಾಳಿ ಯನ್ನು ತೋರಿಸಿದಾಗ ಆತ ಆಧಾರ ಇದ್ದರೆ ಸಾಲದು ಅದು ಜೋಡಣೆಯಾಗಿಯೋ ಎಂದು ಪ್ರಶ್ನಿಸುತ್ತಾನೆ . ಮುಂದೆ ಮದುವೆಯಾಗುವ ಮೊದಲು ಗಂಡು ಹೆಣ್ಣಿನ ಆಧಾರ ಜೋಡಣೆ ಯಾಗಬೇಕು ಎಂದು ಕಾನೂನು ಬಂದೀತು.

ಆದುದರಿಂದ ಆಧಾರ್ ಕಾರ್ಡ್ ಯಾವತ್ತೂ ಜೋಪಾನವಾಗಿ ಇಟ್ಟಿರಿ :ನಿರಾಧಾರ ಆಗದಿರಿ .

ಮಂಗಳವಾರ, ಆಗಸ್ಟ್ 20, 2024

 

ನಿನ್ನೆಯ ದಿನ  ಅಪರಾಹ್ನ ಎರಡು ಗಂಟೆಗೆ ಪುತ್ತೂರು ನ್ಯಾಯಾಲಯ ಪರಾಶರ ಸಭಾಂಗಣದಲ್ಲಿ ಎರಡು ಚೊಕ್ಕ ಕಾರ್ಯಕ್ರಮಗಳು . ನೂತನ ನ್ಯಾಯಾಧೀಶ ದೇವರಾಜ್ ಅವರಿಗೆ ಸ್ವಾಗತ ಮತ್ತು  ವಕೀಲ ಭಾಸ್ಕರ ಕೋಡಿಂಬಾಳ ಅವರ ಲಲಿತ ಪ್ರಬಂಧಗಳ ಸಂಕಲನ "ಕಣ್ಣಿಗೆ ಕಾಣದ್ದು ಮನಸ್ಸನ್ನು ಕಾಡಿದ್ದು " ಬಿಡುಗಡೆ . ಪುತ್ತೂರು ವಕೀಲರ ಸಂಘದ ಆಶ್ರಯದಲ್ಲಿ . ನಿವೃತ್ತ ಹೈ ಕೋರ್ಟ್ ನ್ಯಾಯಾಧೀಶ ನ್ಯಾ ಮೂ ಕೃಷ್ಣ ಭಟ್ ಅವರು ಮುಖ್ಯ ಅತಿಥಿ ಮತ್ತು ಕೃತಿ ಅನಾವರಣ ಮಾಡಿದವರು . ಪುತ್ತೂರು ನ್ಯಾಯಾಲಯದ ನ್ಯಾಯಾಧೀಶರು ,ಬಾರ್ ಕೌನ್ಸಿಲ್ ಅಧ್ಯಕ್ಷರು ,ಹಿರಿಯ ನ್ಯಾಯವಾದಿ ಶ್ರೀ ರಾಮ ಮೋಹನ ರಾವು ,ಇಂತಹವರ ಜೊತೆಗೆ ವೇದಿಕೆ ಹಂಚಿಕೊಳ್ಳುವ ಗೌರವ ನನಗೆ .ವೇದಿಕೆಯಲ್ಲಿ ತಲೆ ಹಣ್ಣಾದವರು(ಬಿಳಿ ಅದವರು )ನಾನು ಮತ್ತು ರಾಮ ಮೋಹನ ರಾವ್ ಮಾತ್ರ . ನ್ಯಾಯಾಧೀಶರು ಮತ್ತು ನ್ಯಾಯವಾದಿ ಗಳು  ಕಕ್ಷಿದಾರರ ವಿಚಾರಗಳನ್ನು ತಲೆಗೆ ತೆಗೆದು ಕೊಂಡರೂ ಅದನ್ನು ಹಚ್ಚಿ ಕೊಳ್ಳುವುದಿಲ್ಲ ಎಂದು ತೋರುತ್ತದೆ ವೈದ್ಯರು ರೋಗಿಗಳ ಸಮಸ್ಯೆಗಳನ್ನೂ .

ವಕೀಲರು ,ಸಾಹಿತಿಗಳು ಮತ್ತು ಭಾಸ್ಕರ್ ಅವರ ಬಂಧು ಮಿತ್ರರಿಂದ ತುಂಬಿದ ಸಭಾಂಗಣ .ನ್ಯಾ ಮೂ ಕೃಷ್ಣ ಭಟ್  ಧೋತಿ ಶಾಲು ಧಾರಿಯಾಗಿ ಬಂದಿದ್ದು ವಿಶೇಷ . ಕೃತಿಯನ್ನು ಬಿಡುಗಡೆ ಗೊಳಿಸಿ ಪಾಂಡಿತ್ಯ ಪೂರ್ಣ ಭಾಷಣ ಮಾಡಿದರು ;ಕೃತಿಯನ್ನು ಬಹಳ ಮೆಚ್ಚಿ ಕೊಂಡರು. ವೃತ್ತಿಯಲ್ಲಿ ಅವರು ಎಲ್ಲರ ಪ್ರೀತಿ ಗೌರವ ಗಳಿಸಿದ್ದವರು ಎಂದು ನೆರೆದಿದ್ದ  ನ್ಯಾಯಾಧೀಶರ ಭಾಷಣಗಳಿಂದ ವೇದ್ಯ ವಾಯಿತು .ಸಂಸ್ಕೃತ ,ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯವನ್ನು ಚೆನ್ನಾಗಿ ಓದಿ ಕೊಂಡವರು.ತಾವು ನ್ಯಾಯಾಧೀಶ ರಾಗಿದ್ದಾಗ  ಸಾಹಿತಿಗಳನ್ನು ಕರೆಸಿ ವಕೀಲರ ಸಂಘಗಳಲ್ಲಿ ಭಾಷಣ ಗಳನ್ನು ಏರ್ಪಡಿಸುತ್ತಿದ್ದುನನ್ನು ನೆನೆಪಿಸಿ ಕೊಂಡರು . ಹಿರಿಯ ನ್ಯಾಯವಾದಿ ರಾಮ ಮೋಹನ ರಾವು ಅವರ ಭಾಷಣ ,ನ್ಯಾಯಾಧೀಶರ ,ವಕೀಲ ಸಂಘದ ಪದಾಧಿಕಾರಿಗಳ  ಶುಭಾಂಶನೆ ,ಕೃತಿ ಕರ್ತನ ಭಾಷಣ ಎಲ್ಲವೂ ಚೆನ್ನಾಗಿ ಬಂತು .ಒಟ್ಟಿನಲ್ಲಿ ಒಂದು ಸಂಜೆ ಅರ್ಥ ಪೂರ್ಣ ವಾಗಿ ಕಳೆಯಿತು .  

ರವಿ ಕಾಣದ್ದನ್ನು ಕವಿ ಕಾಣುವ ಎಂಬ ಮಾತು ಇದೆ . ಇಲ್ಲಿ ಕವಿ ರವಿ (ಭಾಸ್ಕರ )ಒಂದು ಗೂಡಿದಾಗ ಆದ ಕೃತಿ ಈ ಹೊತ್ತಿಗೆ .

ಪುಸ್ತಕದ ಮೊದಲ ಲೇಖನ 'ಭಕ್ತರಿಲ್ಲದ ಭಗವಂತನಿಗೆ ಕೆದಿಲ್ಲಾಯ ರಿಂದ  ನಿತ್ಯ ಪೂಜೆ .ಅದರ ಎರಡು ಪಾರಾ ಹೀಗಿದೆ .

ತಿನ್ನಲು ಉಣ್ಣಲು ಬಹಳ ಕಷ್ಟದ ಕಾಲ ವೊಂದಿತ್ತು .ಆದರೆ ಅದೇ ಕಾಲದಲ್ಲಿ ನೆಮ್ಮದಿಗೇನೂ ಕೊರತೆಯಿರಲಿಲ್ಲ .ಆ ಕಾಲದಲ್ಲಿ ಕೋಡಿಂಬಾಳದ ಶ್ರೀ ಮಹಾ ವಿಷ್ಣು ದೇವರ ಬಳಿ ವರ್ಷಕ್ಕೊಮ್ಮೆ ಅಥವಾ ಎರಡು ಸಲ ಬರುತ್ತಿದ್ದ ಭಕ್ತರಲ್ಲಿ ಅನೇಕರು ಬರುವಾಗ ಕಿಸೆಯಲ್ಲಿ ಹುಡುಕುವುದು ಇದ್ದದ್ದರಲ್ಲಿ ಅತೀ ಸಣ್ಣ ಪಾವಲಿಯನ್ನು,ಭಕ್ತರ ಅಂಗಿಯ ಕಿಸೆಯಲ್ಲಿಯೋ ,ಪಂಚೆಯೊಳಗಿನ ಪಟ್ಟೆನಾಮದ ಚಡ್ಡಿಯ ಕಿಸೆಯಲ್ಲಿಯೂ ಅಡಗಿ ಕುಳಿತ ಪಾವಲಿಗೆ ಕೈ ಹಾಕಿದಾಗ ತಪ್ಪಿಸಿ ಕೊಳ್ಳಲಾರದೇ ಸಿಕ್ಕಿ ಹಾಕಿಕೊಂಡವುಗಳಲ್ಲಿ ದೊಡ್ಡದನ್ನೆಲ್ಲಾ ಪುನಃ ಕಿಸೆಗೆ ಹಾಕಿ ಉಳಿದವುಗಳಲ್ಲಿ ಅತೀ ಸಣ್ಣ ಪಾವಳಿಯನ್ನು ಆಯ್ಕೆ ಮಾಡಿ ಭಕ್ತ ತನ್ನ ಡಬ್ಬಿಗೆ ಹಾಕುತ್ತಿದ್ದ .ಇದನ್ನು ನೋಡಿದ ದೇವರು ಶತಮಾನಗಳ ಹಿಂದೆಯೇ ಮರುಕ ಪಟ್ಟಿರ ಬೇಕು .

ಆ ಸಣ್ಣ ಪಾವಲಿಯನ್ನಾದರೂ ಮನಸಾರೆ ತನ್ನ ಡಬ್ಬಿಗೆ ಹಾಕುತ್ತಾನೆಯೇ ?ಅದೂ ಇಲ್ಲ .ಆ ಪಾವಲಿಯನ್ನು ಭಕ್ತ ತನ್ನ ತಲೆಗೆ ಮೂರು ಸುತ್ತರಿಳಿಸಿ ತಾನು ಮಾಡಿದ ಪಾಪ -ತಾಪ ದೋಷಗಳನ್ನೆಲ್ಲಾ ಅದರೊಳಗೆ ಆಪೋಷಣೆ ಗೊಳಿಸಿ ಟಿಂಗ್ ಎಂದು ಡಬ್ಬಿಯೊಳಗೆ ಹಾಕುತ್ತಿದ್ದ .ಡಬ್ಬಿ ಪಾಲಾದ ಪಾವಲಿ ವ್ಯರ್ಥವಾಗದಿರಲಿ ಎಂದು ಎರಡು ಕೈ ಜೋಡಿಸಿ ಕಣ್ಮುಚ್ಚಿ ಅಲ್ಲೇ ಅಡ್ಡ ಬೀಳುತ್ತಿದ್ದ .ಎಲ್ಲವನ್ನೂ ಬಲ್ಲ ದೇವರಿಗೆ ಇದೆಲ್ಲಾ ಅರ್ಥವಾಗದಿರಲು ಸಾಧ್ಯವೇ ?ಖಂಡಿತಾ ಇಲ್ಲ .ಈ ಚಿಲ್ಲರೆ ಪ್ರತಿಫಲ ಹಣಕ್ಕೆ ಜನರು ಮಾಡಿದ ಪಾಪ ತಾನೇಕೆ ಹೊತ್ತು ಕೊಳ್ಳಬೇಕು ಎಂದು ಕೊಂಡಿರಬೇಕು .ಜನರ ಚಿಲ್ಲರೆ ಹಣವೂ ಬೇಡ ,ಆ ಚಿಲ್ಲರೆ ಹಣದಿಂದ ತಾವು ಮಾಡಿದ ಪಾಪ ನಿವಾರಣೆ ಆಯಿತು ಎಂದೂ ಬೇಡ ಎಂದು ನಮ್ಮೂರ ದೇವರು ಜನ ಸಂಚಾರ ವಿರದ ಕೋಡಿಂಬಾಳದ ನಿರ್ಜನ ಪ್ರದೇಶದಲ್ಲಿ ಹಲವು ಶತಮಾನದ ಹಿಂದೆಯೇ ನೆಲಸಿರ ಬೇಕು ."


ಪುಸ್ತಕದ ಮುಖ ಬೆಲೆ ರೂ 150 .ಪ್ರತಿಗಳು ಆದಾಯ ತೆರಿಗೆ ಕಚೇರಿ ಪಕ್ಕದ  ಭಾಸ್ಕರ ಕೋಡಿಂಬಾಳ ಅವರ ಆಫೀಸು ಮತ್ತು ಪುತ್ತೂರು ವಕೀಲರ ಸಂಘದ ಕಚೇರಿಯಲ್ಲಿ ಲಭ್ಯ ಎಂದು ಲೇಖಕರು ತಿಳಿಸಿದ್ದಾರೆ . ಮೊಬೈಲ್ 9448548226.


ಶನಿವಾರ, ಆಗಸ್ಟ್ 17, 2024

 ಆತ್ಮೀಯ  ವಕೀಲ ಮಿತ್ರ  ಶ್ರೀ ಭಾಸ್ಕರ  ಕೋಡಿ೦ಬಾಳ  ಅವರ ಲಲಿತ ಪ್ರಬಂಧ ಗಳ ಸಂಕಲನ '' ಕಣ್ಣಿಗೆ ಕಾಣದ್ದು ಮನಸ್ಸನ್ನು ಕಾಡಿದ್ದು" ಇದೆ ಸೋಮವಾರ 19.8.2024  ಅಪರಾಹ್ನ 2 ಗಂಟೆಗೆ ಪುತ್ತೂರು ವಕೀಲರ ಸಂಘ ದ  'ಪರಾಶರ ಸಭಾ ಭವನ "ದಲ್ಲಿ ನೆರವೇರಲಿದೆ .

ಪಂಜೆ ಮಂಗೇಶ ರಾಯರ ಸಬ್ ಅಸಿಸ್ಟಂಟ್ ನ ಸುಳ್ಳು ಡೈರಿ ಯಿಂದ , ಶ್ರೀನಿವಾಸ ಮೂರ್ತಿ ಯವರ ರಂಗಣ್ಣನ ಕನಸಿನ ದಿನಗಳು ,ಬಿ ಜಿ ಎಲ್ ಸ್ವಾಮಿ ಯವರ  ಕೃತಿಗಳಂತೆ  ಗಂಭೀರ ವಿಚಾರ ಗಳನ್ನು ಮೃದು ಹಾಸ್ಯ ಲೇಪನ ದೊಡನೆ ಓದುಗರಿಗೆ ಆಪ್ಯಾಯ ಮಾನ ಆಗುವಂತೆ ಇರುವ ಲೇಖನಗಳು ಈ ಕೃತಿಯಲ್ಲಿ ಇವೆ .

ವಕೀಲರು ನ್ಯಾಯಾಧೀಶರಿಂದ ರಚಿತವಾದ ಮೌಲಿಕ ಕೃತಿಗಳು ಅನೇಕ ಇವೆ .ಮಾಸ್ತಿ ವೆಂಕಟೇಶ ಐಯ್ಯಂಗಾರ್ ಅವರ  ಆತ್ಮ ಚರಿತ್ರೆ "ಭಾವ " ಮತ್ತು ನವರತ್ನ ರಾಮ ರಾವ್ ಅವರ ಕೆಲವು ನೆನಪುಗಳು ಕೃತಿಯಲ್ಲಿ ತಾವು ನ್ಯಾಯಾಧೀಶ ರಾಗಿ ಕಾರ್ಯ ನಿರ್ವಹಿಸುವಾಗ ನಡೆದ ರೋಚಕ ಕತೆಗಳ ಉಲ್ಲೇಖ ಇದೆ . ಅದೇ ರೀತಿ ಕೆ ಪಿ ಎಸ್ ಮೇನೋನ್ ಅವರ ಆತ್ಮ ಚರಿತ್ರೆ ಮೆನಿ ವರ್ಲ್ಡ್ಸ್ ನಲ್ಲಿ . ಇವುಗಳಲ್ಲಿ ಹೆಚ್ಚಿನವು ಆತ್ಮ ಚರಿತ್ರೆಗಳು . ಪ್ರಾಥ ಸ್ಮರಣೀಯ ಎಚ್ ಆರ್  ಖನ್ನಾ ಅವರ ನೀದರ್  ರೋಸಸ್ ನೋರ್ ಥಾರ್ನ್ಸ್ ,ಎಂ ಸಿ ಛಾಗ್ಲಾ  ಅವರ ರೋಸಸ್ ಇನ್ ಡಿಸೆಂಬರ್ ., ಲೈಲಾ ಸೇಥ್ ,ಫಾಲಿ  ನಾರಿಮನ್ ,ಹಿದಾಯತುಲ್ಲಾ ,ಕೃಷ್ಣ ಐಯ್ಯರ್ ,ಎಸ ಎಸ ಸೋಧಿ ಮತ್ತು ನಮ್ಮವರೇ ಆದ  ಎಚ್ ಹನುಮಂತ ರಾಯ ,ಬಿ ವಿ ಆಚಾರ್ಯ ಮತ್ತು ಯು ಎಲ್ ಭಟ್  ಅವರ ಕೃತಿಗಳು ಸಾಹಿತ್ಯಿಕವಾಗಿಯೂ  ಹೆಸರು ಗಳಿಸಿದಂತಹವು . ವಕೀಲರಿಗೆ ತಮ್ಮ ವೃತ್ತಿ ಯಲ್ಲಿ  ಜೀವ ಮತ್ತು ಜೀವನದ ಹಲವು ಮುಖ ಮತ್ತು  ಮಗ್ಗುಲುಗಳು  ಅಯಾಚಿತವಾಗಿ ಗೋಚರವಾಗಿತ್ತವೆ . ಸಾಹಿತ್ಯ ರಚನೆಗೆ ಒಳ್ಳೆಯ ವಸ್ತು ಆಗ ಬಲ್ಲುವು . 

ವಸ್ತು ಇದ್ದರೆ  ಸಾಲದು . ಅದನ್ನು ಗ್ರಹಿಸುವ ಮನಸ್ಸು ಮತ್ತು ಅಕ್ಷರಕ್ಕೆ ಇಳಿಸುವ ಭಾಷಾ ಜ್ಞಾನ ಕೂಡ ಬೇಕಾಗುತ್ತದೆ ,ಇಂತಹ ಪ್ರತಿಭೆ ಭಾಸ್ಕರ್ ಅವರಲ್ಲಿ ಇದೆ ..ಸೂಕ್ಷ್ಮ ಗ್ರಹಣ ,ಹಾಸ್ಯ ಪ್ರಜ್ಞೆ ಮತ್ತು ವೃತ್ತಿ ಕಾರಣ  ನಗರ ವಾಸಿ ಯಾದರೂ ಜತನ ದಿಂದ ಕಾಯ್ದು ಕೊಂಡು ಬಂದ  ಮಣ್ಣಿನ ವಾಸನೆ ಇವು ಅವರ ಪ್ರಭಂದ ಗಳಲ್ಲಿ ಎದ್ದು ಕಾಣುವ ಗುಣಗಳು .