ಬೆಂಬಲಿಗರು

ಭಾನುವಾರ, ಮಾರ್ಚ್ 5, 2017

ಬೈರಿಕಟ್ಟೆ

ವಿಟ್ಲ ಮಂಜೇಶ್ವರ ರಸ್ತೆಯಲ್ಲಿ  ೫ ಕಿ ಮೀ ಹೋದರೆ ಕಲಂಜಿಮಲೆ ಸೆರಗಿನಲ್ಲಿ ಸಣ್ಣ 

ಪೇಟೆ ಬೈರಿಕಟ್ಟೆ .ಸ್ಥಳ ನಾಮ ಏಕೆ ಬಂತೋ ಗೊತ್ತಿಲ್ಲ .ಉತ್ತರಕ್ಕೆ  ತಲೆಯೆತ್ತಿ ನಿಂತ 

ಕಳಂಜಿಮಲೆ .ದಕ್ಷಿಣ ಕ್ಕೆ  ನಾಲ್ಕೈದು ಅಂಗಡಿಗಳು .ರಾಜಮಾರ್ಗಕ್ಕೆ ಸೇರುವ ರಸ್ತೆ 

ಒಂದೇ .ಅದು ಅರ್ಧ ಕಿ ಮೀ ದಕ್ಷಿಣಕ್ಕೆ  ಕವಲೊಡೆದು ಒಂದು ಅಂಗ್ರಿ ಬಯಲಿಗೂ 

ಇನ್ನೊಂದು  ಮಡೆಯಾಲ  ಕೇಕನಾಜೆ ಗೂ  ಹೋಗುವುದು .ಈ ಊರಿನವರು ಬಸ್ 

ಹಿಡಿಯಲು  ಬೈರಿಕಟ್ಟೆಗೆ ಬರಬೇಕು .
      
  ಕಳಂಜಿಮಲೆ  ರಕ್ಷಿತಾರಣ್ಯ .ಇಲ್ಲಿ  ಹುಲಿ ಚಿರತೆಗಳೂ ಇದ್ದವು ಎಂದು 

ಪ್ರತೀತಿ.ವರುಷಕ್ಕೊಮ್ಮೆ ಊರಿನಲ್ಲಿ  ಯಾರದಾದರೂ ಹಟ್ಟಿಗೆ ಬಂದು ದನವನ್ನೋ 

ಕರುವನ್ನೋ  ಬಲಿತೆಗೆದು ಕೊಳ್ಳುತ್ತಿದ್ದವು .ಹುಲಿ  ಪಶುವನ್ನು ಒಮ್ಮೆ ಕೊಂದು  ಬಿಟ್ಟು 

ಹೋಗಿ ಪುನಃ ತಿನ್ನಲು ಬರುವುದು ಎಂಬ ನಂಬಿಕೆಯಿಂದ  ಕೊಲ್ಲಲ್ಪಟ್ಟ  ಪಶುವಿನ 

ದೇಹಕ್ಕೆ  ವಿಷ ಹಾಕಿ ಜನ ಕಾಯುತ್ತಿದ್ದರು .ಆದರೆ ಇವರ ಉಪಾಯಕ್ಕೆ ಹುಲಿ 

 ಬಲಿಯಾದ  ಸಾಕ್ಷಿಯಿಲ್ಲ .

  ಕಳಂಜಿಮಲೆಯಿಂದ ಸೊಪ್ಪು  ಸೌದೆ ತರಲು  ರೈತಾಪಿ ಜನರು ಹೋಗುತಿದ್ದರು .

ಒಮ್ಮೊಮ್ಮೆ   ಫಾರೆಸ್ಟ್  ಗಾರ್ಡ್ ಗಳು  ಇವರು  ಮರ ಕಡಿಯುವರೆಂದು  

ಆರೋಪಿಸಿ ಇವರ ಅಯುಧವಾದ ಕುಡುಗೋಲನ್ನು (ಕತ್ತಿ) ವಶಪಡಿಸಿ  

ಓಡಿಸುತ್ತಿದ್ದರು . ಮೊದಲು  ದಟ್ಟ ಮರಗಳಿಂದ ತುಂಬಿದ್ದ  ಮಲೆಯನ್ನು  ಸವರಿ 

ವಾಣಿಜ್ಯ ಉದ್ದೇಶಕ್ಕಾಗಿ   ಅಕೇಶಿಯ  ನೆಟ್ಟಿರುವರು . ಈ  ಪರ್ವತ ಶ್ರೇಣಿಯಿಂದ 

ಹತ್ತಾರು  ನೀರ ತೊರೆಗಳು  ಹರಿದು  ಕೆಳಗಿನ ಬಯಲಿಗೆ  ನೀರುಣಿಸುವುವು .ಪುಣ್ಯ ,

ಸದ್ಯ ರಕ್ಷಿತಾರಣ್ಯದಲ್ಲಿ  ಹುಟ್ಟುವ ಕಾರಣ  ಆ ನೀರಿಗೆ ತೆರಿಗೆ  ಕೊಡಬೇಕೆಂದು 

ಸರಕಾರ ಹೇಳಿಲ್ಲ .

        ಬೈರಿಕಟ್ಟೆಯಲ್ಲಿ ಒಂದು ಹೋಟೆಲ್ .ಮರದ ಕಟ್ಟಿಗೆಯೇ ಉರುವಲು .ಇಂತಹ 

ಸಣ್ಣ  ಹೋಟೆಲ್ ಗಳಲ್ಲಿ  ಅಡುಗೆಯವನು ,ಕ್ಯಾಷಿಯರ್ ಮತ್ತು  ತಟ್ಟೆ ಎತ್ತುವವರು 

ಎಲ್ಲಾ ಒಬ್ಬರೇ .ಅವರೇ ಲೋಟ ತೊಳೆಯುವವರು .ಚಾ ದೊಡ್ಡ  ಗ್ಲಾಸ್ 

ಲೋಟದಲ್ಲ್ಲಿ.ಒಂದು  ಗ್ಲಾಸ್ ಚಾ  ಎನ್ನುತ್ತಿದ್ದರು .ಒಂದು ಕಪ್ ಚಾ ಇಲ್ಲಿ ಬಳಕೆಯಲ್ಲಿ 

ಇಲ್ಲ .ಇಲ್ಲಿ ಬಂದು ಚಾ ಕುಡಿಯಲು  ಕುಳಿತರೆ  ಊರ ಸಮಾಚಾರ  ಸಿಗುವುದು .

ರೇಶನ್ ಅಂಗಡಿಗೆ  ಅಕ್ಕಿ ಸಕ್ಕರೆ ಬಂದ ಸುದ್ದಿ ,  ರಾಂಪಣ್ಣ ನ ಬಸ್ಸು ಬಾಕ್ರಬೈಲು 

ಚಡವಿನಲ್ಲಿ  ಮಗುಚಿದ್ದು . ಪಟೇಲರ ಮನೆಗೆ ಹುಡುಗಿ ನೋಡಲು ಬಂದದ್ದು ಎಲ್ಲಾ 

ಇಲ್ಲಿ  ಸಿಗುವುದು .

ಇದು ಬಿಟ್ಟರೆ  ಒಂದು ಸಣ್ಣ ಬಟ್ಟೆ  ಅಂಗಡಿ .ಆಗೆಲ್ಲ  ಕ್ಯಾಶ್ ಕೊಟ್ಟು  ಬಟ್ಟೆ 

ಕೊಳ್ಳುತ್ತಿದ್ದುದು  ಕಡಿಮೆ  .ಎಲ್ಲಾ  ಉದ್ರಿ ಅಥವಾ ಸಾಲದ ಲೆಕ್ಕ .ದೀಪಾವಳಿ  

ಅಂಗಡಿ  ಪೂಜೆಗೆ  ಸಾಲ ಚುಕ್ತಾ ಮಾಡಿ ಹೊಸ ಲೆಕ್ಕ ಆರಂಬಿಸುವರು .

ಒಂದು  ಜೀನಸು ಅಂಗಡಿ ,ಅದಕ್ಕೆ ತಾಗಿ ರೇಶನ್ ಶಾಪ್ .ಕೆಂಪು ಬೋರ್ಡಿನ  

ಸರಕಾರಿ  ಸಾರಾಯಿ ಅಂಗಡಿ .ಬಸ್ ಸ್ಟಾಪ್ ಇದ್ದರೂ  ತಂಗುದಾಣ ಇರಲಿಲ್ಲ .

    ಈ  ರಸ್ತೆಯಲ್ಲಿ  ಇದ್ದುದು ಕೆಲವೇ ಬಸ್ ಗಳು .ಬಸ್ಗಳು  ಅವುಗಳ  ಡ್ರೈವರ್ 

ಹೆಸರಿನಿಂದ ಗುರುತಿಸಲ್ಪದುತ್ತಿದ್ದವು .ಉದಾ   ಪೀರ್ ಸಾಹೇಬರ ಬಸ್ ,ರಾಂಪಣ್ಣನ

ಬಸ್ , ಗೋಪಾಲನ ಬಸ್ , ಮಹಾಬಲ ರೈ ಬಸ್ ಇತ್ಯಾದಿ .ಬಸ್ ಬೈರಿಕಟ್ಟೆಗೆ 

ಬರುವಾಗ ಯಾವಾಗಲೂ   ಪ್ರಯಾಣಿಕರಿಂದ ತುಂಬಿರುತ್ತಿದ್ದವು . ಹಳ್ಳಿಯಿಂದ 

ಗಡಿಬಿಡಿಯಿಂದ  ಹೊರಟು ಬೆವರು ಸುರಿಸಿಕೊಂಡು  ಏದುಸಿರು ಬಿಡುತ್ತಾ   

ಮಾರ್ಗದ ಬಳಿಗೆ  ಇನ್ನೇನು ಎತ್ತಿದೆವು ಎನ್ನುವಷ್ಟರಲ್ಲಿ   ದೂಳು ಹಾರಿಸುತ್ತಾ 

ನಮ್ಮನು  ಹಂಗಿಸಿ ಎಂಬಂತೆ ಓಡಿ ಹೋಗುತ್ತಿದ್ದುದು  ಸಾಮಾನ್ಯ .

                    ಈ  ಬಸ್ಸಿನ ಚಾಲಕರು  ಫಲಾಪೇಕ್ಷೆ ಇಲ್ಲದೆ ಊರ ಜನರಿಗೆ 

 ಕುರಿಯರ್ ಸೇವೆ ಸಲ್ಲಿಸುತ್ತಿದ್ದರು . ಪೇಟೆಯಿಂದ  ಔಷಧಿ , ವಾರ್ತಾ ಪತ್ರ ಇತ್ಯಾದಿ 

 ತಂದು ಕೊಡುತ್ತಿದ್ದರು .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ