ಆದರ್ಶ ವೈದ್ಯ ಶಿಕ್ಷಕ ಡಾ ಬಳ್ಳಮಜಲು ರಾಜೇಂದ್ರ ಪ್ರಸಾದ್
ಒಬ್ಬ ವ್ಯಕ್ತಿ ಪ್ರತಿಕೂಲ ವಾತಾವರಣದಲ್ಲಿ ಚಡಪಡಿಸುತ್ತಿದ್ದಾಗ ಇನ್ನೊಬ್ಬರು ತಮ್ಮ ಪರಿಚಯದವರೂ ಕೂಡ ಅಲ್ಲಿಗೆ ಬಂದರೆ ಇವನೂ ಇಲ್ಲಿಗೇ ವಕ್ಕರಿಸಿದನಲ್ಲ ಎಂದು (ನಾನೂ ಸೇರಿ )ತಿಳಿಯುವುದು ಮನುಜ ಗುಣ . ೮೦ ರ ದಶಕದಲ್ಲಿ ಒಂದು ಸಂಸ್ಥೆಯಲ್ಲಿ ನಾನು ವಿದ್ಯಾರ್ಥಿಯಾಗಿ ಸೇರಿ ಕೊಂಡಾಗ ಅಲ್ಲಿ ಉಸಿರು ಕಟ್ಟುವ ವಾತವರಣ ಮತ್ತು ಅನಿಶ್ಚತೆ ಇದ್ದಿತು .ನಮ್ಮ ಊರಿನವರು ಮತ್ತು ಪರಿಚಯದವರಾದ ಹಿರಿಯ ವಿದ್ಯಾರ್ಥಿಗಳು ನಮಗೆ ಧೈರ್ಯ ಕೊಡುವ ಸ್ಥಿತಿಯಲ್ಲಿ ಇಲ್ಲದ ಕಾರಣ ನಮ್ಮ ಮುಖ ನೋಡದೇ ಹೋಗುತ್ತಿದ್ದರು . ಆ ಸಮಯ ನನಗೆ ಪರಿಚಯ ಆದವರು ಡಾ ರಾಜೇಂದ್ರ ಪ್ರಸಾದ್ . ತಾವು ಸ್ವತಃ ಒತ್ತಡದಲ್ಲಿ ಇದ್ದರೂ ನಮ್ಮನ್ನು ನಗುಮೊಗದಿಂದ ಮಾತನಾಡಿಸಿ ಧೈರ್ಯ ಹೇಳಿ ನೈತಿಕ ಸ್ಥೈರ್ಯ ಕುಸಿಯದಂತೆ ನೋಡಿಕೊಂಡವರು."ವಿಪದಿ ಧೈರ್ಯಂ ಅಭ್ಯುದಯೇ ಕ್ಷಮಾ". ಅವರದ್ದು ಆಗಲೂ ಈಗಲೂ ಬಹಳ ಮೃದು ಮಾತು ,ಅವರ ಪರಿಚಯ ಇದ್ದವರಿಗೆ ಇದು ಗೊತ್ತು . ಯಾವುದೇ ಅವಸರ ತೋರಿಸರು ,ನೀವು ಹೇಳಿದ್ದನ್ನು ಸಾವಕಾಶ ಕೇಳುವರು . ಅಷ್ಟೇ ಸಮಾಧಾನದಿಂದ ಉತ್ತರ ಮತ್ತು ರೋಗಿಯ ಪರೀಕ್ಷೆ .ನನ್ನಲ್ಲಿ ಯಾರಾದರೂ ಒಬ್ಬ ಆದರ್ಶ ವೈದ್ಯ ಹೇಗಿರ ಬೇಕು ಎಂದು ಕೇಳಿದರೆ ತೋರಿಸ ಬಲ್ಲ ಕೆಲವೇ ಮಂದಿಗಳಲ್ಲಿ ಇವರು ಒಬ್ಬರು, .
ಪ್ರತಿಷ್ಠಿತ ಬೆಂಗಳೂರು ಡೆಂಟಲ್ ಕಾಲೇಜು ನಿಂದ ಬಿಡಿಎಸ್ ಮತ್ತು ಎಂಡಿಎಸ್ ಪದವಿ ಗಳಿಸಿದ ಇವರು ,ಮಂಗಳೂರಿನಲ್ಲಿ ಎ ಬಿ ಶೆಟ್ಟಿ ಡೆಂಟಲ್ ಕಾಲೇಜು ಆರಂಭವಾದಾಗ ಓರಲ್ ಸರ್ಜರಿ ವಿಭಾಗದ ಮುಖ್ಯಸ್ಥ ರಾಗಿ ಸೇರಿ ಕೊಂಡು ಮುಂದೆ ಹಲವು ವರ್ಷ ಅದರ ಡೀನ್ ಆಗಿ ನಿವೃತ್ತರಾದರು . ತಮ್ಮ ವಿಭಾಗ ಮತ್ತು ಕಾಲೇಜ್ ಒಳ್ಳೆಯ ಹೆಸರು ಪಡೆಯಲು ಇವರ ಕೊಡುಗೆ ಅಪಾರ . ಎ ಬಿ ಶೆಟ್ಟಿ ಡೆಂಟಲ್ ಕಾಲೇಜು ನ ಮೊದಲ ಡೀನ್ ಡಾ ಶ್ರೀಧರ ಶೆಟ್ಟಿ ಬೆಂಗಳೂರು ಡೆಂಟಲ್ ಕಾಲೇಜಿ ನಲ್ಲಿ ಇವರ ಗುರುಗಳು .
ನಾನು ರೈಲ್ವೆ ವೈದ್ಯಾಧಿಕಾರಿ ಆಗಿ ಮಂಗಳೂರಿನಲ್ಲಿ ಇದ್ದಾಗ ಇವರ ಸಹಾಯದಿಂದ ನೌಕರರಿಗಾಗಿ ಡೆಂಟಲ್ ಕ್ಯಾಂಪ್ ನಡೆಸಿದ್ದೆನು .ಮುಂದೆ ಕೆ ಎಸ ಹೆಗ್ಡೆ ಮೆಡಿಕಲ್ ಕಾಲೇಜು ಸೇರಿದಾಗ ಆಗಾಗ ಭೇಟಿಯಾಗುತ್ತಿದ್ದು ,ಅದೇ ಮುಗುಳ್ನಗು ,ಅದೇ ಮಂಜುಭಾಷಿ . ಅವರ ಶಿಷ್ಯರಾಗಿ ತರಬೇತು ಪಡೆದ ಸಾವಿರಾರು ವಿದ್ಯಾರ್ಥಿಗಳು ವಿದೇಶಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ .
ನುರಿತ ಬಾಯಿ ದವಡೆ ಶಸ್ತ್ರ ತಜ್ಞರಾದ ಅವರು ಈಗಲೂ ನಿಯಮಿತ ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದಾರೆ . ಅವರು ಆರೋಗ್ಯದಿಂದ ಇನ್ನೂ ಹಲ ವರ್ಷ ನಮಗೆಲ್ಲಾ ಮಾರ್ಗದರ್ಶನ ಮಾಡುತ್ತಲಿರಲಿ ಎಂದು ನನ್ನ ಹಾರೈಕೆ .
ಯಾವತ್ತೂ ಪ್ರಚಾರದಿಂದ ದೂರ ಉಳಿದು ,ಸಮಾಜಕ್ಕೆ ಪ್ರಾಮಾಣಿಕ ಸೇವೆ ಸಲ್ಲಿಸಿದ ಇಂತಹ ಹಿರಿಯರನ್ನು ಗುರುತಿಸಿ ಗೌರವಿಸಿ ನೆನಪಿಸಿ ಕೊಳ್ಳುವುದು ನಮ್ಮ ಕರ್ತವ್ಯ .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ