ಬೆಂಬಲಿಗರು

ಬುಧವಾರ, ಜುಲೈ 7, 2021

ಮೂರು ದಾರಿಗಳು

                               ಮೂರುದಾರಿಗಳು . 

 ಇದು ಯಶವಂತ ಚಿತ್ತಾಲರ ಕಾದಂಬರಿ ಬಗ್ಗೆ ಅಲ್ಲ . 

ಡಿ ಪಿ ಶೆಟ್ಟರ ಬಗ್ಗೆ ನನ್ನ ಬರಹಕ್ಕೆ ಪ್ರತಿಕ್ರಿಯಿಸುತ್ತಾ  ಶಂಕರಿ ಅಕ್ಕ ನಾವು ಶಾಲೆಗೆ ಬರುವ ದಾರಿಯಲ್ಲಿ ಜವುಳಿ ಶೆಟ್ಟರ ಪತ್ನಿಯ ಜೊತೆ ಸುಖ ದುಃಖ ಮಾತನಾಡಿ ಮುಂದುವರಿಯುತ್ತಿದ್ದೆವು ಎಂದು ಬರೆದಿದ್ದರು  .ಅವರ ಮನೆ ಕಣಿಯೂರು . ಮನೆಯಿಂದ ನಡೆದುಕೊಂಡು ಛೆ೦ಬರ್ಪು ದಾಟಿ ಸುಮಾರು ಒಂದೂವರೆ ಮೈಲು ನಡೆದು ಬರಬೇಕು . ದಾರಿಯಲ್ಲಿ ಅನೇಕ ಸಹಪಾಠಿಗಳು ಸೇರಿಕೊಳ್ಳುವರು . ಇದರ ಬಗ್ಗೆ ಯೋಚಿಸುವಾಗ ನನಗೆ ನಾವು ಶಾಲೆಗೆ ಹೋಗುತ್ತಿದ್ದ ದಿನಗಳು ನೆನಪಿಗೆ ಬಂದವು . 

ನಮ್ಮ ಮನೆಯಿಂದ ನಾವು ಕನ್ಯಾನಕ್ಕೆ ಬಳಸುತ್ತಿದ್ದ ದಾರಿಗಳು ಮೂರು 

 

                    

ನಾವು ಸಾಮಾನ್ಯವಾಗಿ ಬಳಸಿತ್ತಿದ್ದುದು ವಯಾ  ಕಿರಿಂಚಿಮೂಲೆ ದಾರಿ .ನಮ್ಮ ಮನೆಯಿಂದ ಕಡಿಮೆ ಪಕ್ಷ ಆರು ಮಕ್ಕಳು ಹೊರಡುವದು . ಮೊದಲು ಸಿಗುವುದು ಡಿ ಕೆ ಅಬ್ದುಲ್ ಖಾದರ್ ಅವರ ಮನೆ . ಅಬ್ಬ ಬ್ಯಾರಿ ಅಥವಾ  ಅಬ್ಬಿಚ್ಚ .ಅವರು ಪಿ ಡಬ್ಲ್ಯೂ ಡಿ ಕಾಂಟ್ರಾಕ್ಟ ರ್ ಮತ್ತು ಕೃಷಿಕ .ಕೆಲಸದ ನಿಮಿತ್ತ ಅವರು ಹೊರಗಡೆ ಇರುತ್ತಿದ್ದರಿಂದ ಅವರ ಪತ್ನಿ ಕೃಷಿ  ಕೆಲಸ ಮಾಡಿಸುವರು .ತಲೆಯ ಮೇಲೆ ಸೆರಗು ಹಾಕಿಕೊಂಡು ಕಟ್ಟಪ್ಪುಣಿ ಮೇಲೆಯೋ ,ಮನೆಯಂಗಳ ದಲ್ಲಿಯೋ ನಮಗೆ ಸಿಗುವರು .ನಮ್ಮನ್ನು ಪ್ರೀತಿಯಿಂದ ಮಾತನಾಡಿಸಿ ಯೋಗ ಕ್ಷೇಮ ವಿಚಾರಿಸುವರು .ಅವರ ಮಕ್ಕಳೂ ನಮ್ಮ ಶಾಲೆಗೆ ಬರುತ್ತಿದ್ದರು .ಅಲ್ಲಿಂದ ಮುಂದೆ ನಡೆದರೆ  ಒಂದು ತಡಮ್ಮೆ ಒರುಂಕು ಮತ್ತು ಮಣ್ಣಿನ ಮಾರ್ಗ ,ಮುಂದೆ ಬಲಬದಿಯಲ್ಲಿ ಬಾಳಪ್ಪ ಮೂಲ್ಯರ ಗದ್ದೆ ,ಎಡಗಡೆ ತ್ಯಾಂಪ ಪೂಜಾರಿಯವರ ಹೊಲ ಮತ್ತು  ಮಾಂಕಾಳಿ ಭೂತದ ಚಾವಡಿ . ಗದ್ದೆ ಹುಣಿಯಲ್ಲಿ ಸುಗ್ಗಿ ಸಮಯ  ಮೆತ್ತನೆ ಮಣ್ಣು ಹಾಕುತ್ತಿದ್ದು ,ಒಣಗುವ ವರೆಗೆ ಸ್ವಲ್ಪ ಕಷ್ಟ ಆದರೂ ನಂತರ ಸ್ಪಂಜಿನಂತೆ ನಮ್ಮ ಬರಿಗಾಲುಗಳಿಗೆ ಹಿತವಾಗಿರುತ್ತಿತ್ತು . ಅಲ್ಲಿಂದ ಮುಂದೆ ಕೆಲವು ಗದ್ದೆಗಳು .ಒಂದು ದೊಡ್ಡ ತೋಡು . ಇದು ಸಣ್ಣ ಜಂಕ್ಷನ್ .ಇಲ್ಲಿ ಮುದ್ಕುಂಜ ದ  ಮಕ್ಕಳು ನಮ್ಮನ್ನು ಸೇರುವರು . ಮೊದಲು ಬಂದವರು ಕಾಯದೇ ಹೋದರೆ ಒಂದು ಎಲೆಯ ಮೇಲೆ ಕಲ್ಲು ಇಟ್ಟು ಹೋಗುವೆವು . ಮುದ್ಕುಂಜ ದಿವಾಕರ ಪ್ರಭು ನನ್ನಿಂದ ಒಂದು ಕ್ಲಾಸ್ ಮೇಲೆ .ಅವನ ಪಠ್ಯ ಪುಸ್ತಕಗಳನ್ನು ಪಾಸಾದ ಮೇಲೆ ನನಗೆ ಕೊಡುವನು . ಪುಸ್ತಕಗಳನ್ನು ಓದಿಯೂ ಚೆನ್ನಾಗಿ ಇಟ್ಟು ಕೊಳ್ಳುತ್ತಿದ್ದನು . 

     ತೋಡ  ಸಂಕ ದಾಟಿದರೆ ಕ್ರಿಶ್ಚಿಯನ್ ಬಂಧುಗಳ ಮನೆ ಮತ್ತು ತೋಟ ಗದ್ದೆಗಳು  . ಹಿಲೆರಿ ಮತ್ತು ಲಾದಿನ ಎಂಬ ಮಕ್ಕಳು ನಮ್ಮೊಡನೆ ಬರುತ್ತಿದ್ದರು . ನನ್ನ ಅಕ್ಕನ ಗೆಳತಿ ಪಿಯಾದ ಳ  ಮನೆಯ ಅಂಗಳ ದಾಟಿ ಹೋಗ ಬೇಕು .ಅಲ್ಲಿ ಚಂದ ಚಂದದ ಬಾಳೆ ಹೂವು ಇದ್ದವು ;ನನ್ನ ಅಕ್ಕ ಅದರ ಕುರುಲೆ ತಂದು ಮನೆಯಲ್ಲಿ ನಡುವಳು . 

ಮುಂದೆ ಬರುವುದು ಕಿರಿಂಚಿಮೂಲೆ .ಇಲ್ಲಿಂದ ರಾಜ ರಸ್ತೆ . (ಆಗ ಮಣ್ಣು ರಸ್ತೆ ). ಅಲ್ಲಿಯೇ ನಮ್ಮ ಶ್ರೀನಿವಾಸ ಮಾಸ್ತರರ   ಮನೆ .ಅಲ್ಲಿ ಮೂರು ನಾಲ್ಕು ಹುಡುಗ ಹುಡುಗಿಯರು ನಮ್ಮನ್ನು ಸೇರುವರು ,ಇನ್ನು ರಸ್ತೆಯಲ್ಲಿಯೇ ಹಿಂದಿನಿಂದ ಬರುವ ಕೆಲವು ಮಕ್ಕಳೂ ,ಇವರಲ್ಲಿ ಕಿರಿಂಚಿ ಮೂಲೆ ಚೀನಣ್ಣನ ,ರಾಮಕೃಷ್ಣ ರಾಯರ ಮಕ್ಕಳು ಇರುವರು .ಹೀಗೆ ದೊಡ್ಡದಾದ ಮಕ್ಕಳ ಸೈನ್ಯ ತಮಾಷೆ ಮಾಡಿಕೊಂಡು ,ನಡೆಯುವಾಗ ದಣಿವೇ  ಆಗುತ್ತಿರಲಿಲ್ಲ . ರಸ್ತೆಯ ಉತ್ತರಕ್ಕೆ ಕಳಂಜಿ ಮೂಲೆ ಗುಡ್ಡೆ ಯ ಸೆರಗು . ಕೇಪುಳ ಗುಡ್ಡೆ ಮೊದಲ ತಿರುಗಾಸಿನಲ್ಲಿ ಒಂದು ಹುಣಿಸೇ ಮರ ಇತ್ತು ,ಈಗಲೂ ಇದೆ .ಹುಣಿಸೆ ಮುಪ್ಪಾದರೂ ಅದರ ಹಣ್ಣಿನ ಹುಳಿಗೆ ಮತ್ತು ಅದರ ನೆನಪಿಗೆ ಮುಪ್ಪಿಲ್ಲ . ನಾವು ಅದಕ್ಕೆ ಆಗಾಗ ಧಾಳಿ ಇಡುವೆವು . 

 


ಮುಂದೆ ಕಳಂಜಿ ಮಲೆಗೆ ಕಲ್ಲು ಪಾದೆಯ ಹೊದಿಕೆ ,ಅಲ್ಲೊಂದು ಬತ್ತದ ನೀರಿನ ಝರಿ . 

ಹೀಗೇ ಪಂಜಾಜೆ ಬುಡ ಬರುವದು . ಅಲ್ಲೇ ಕನ್ಯಾನ ದಲ್ಲಿ ಪೇಪರ್ ಏಜೆಂಟ್ ಆಗಿದ್ದ ರಾಘವರ ಮನೆ . .  ,ಇಲ್ಲಿಯೇ ಪಂಜಾಜೆಯಿಂದ ನನ್ನ ಸಹಪಾಠಿ ನರಸಿಂಹ ಮತ್ತು ಮನೇ ಮಕ್ಕಳು ಸೇರಿ ಕೊಂಡರೆ ಸ್ವಲ್ಪ ಮುಂದೆ ಮಿತ್ರ ಪ್ರಿನ್ಸಿಪಾಲ್ ಆಗಿದ್ದು ನಿವೃತ್ತ ರಾಗಿರುವ   ಕ್ಸೆವಿಯರ್  ಮತ್ತು ಅವರ ನೆರೆಕರೆಯವರು ,ಡ್ರೈವರ್ ಗೋಪಾಲನ ಮಕ್ಕಳು ಸೇರುವರು  ..ಶಾಲೆಗೆ ತಲುಪುವಾಗ ಮತ್ತು ಬಿಟ್ಟು ಹೊರಡುವಾಗ ಮಕ್ಕಳ ದೊಡ್ಡ ಸೈನ್ಯ ಇರುವದು . 

ಇನ್ನೊಂದು ದಾರಿ ದೇಲಂತ ಬೆಟ್ಟು ದೇವಸ್ಥಾನ ಮೂಲಕ ಹೋಗುವುದು .ಇದನ್ನು ಬಳಸುತ್ತಿದುದು ಕಡಿಮೆ . 

ಮೂರನೇ ದಾರಿ ನಂದರಬೆಟ್ಟು ,ಕಾಣಿಚಾರ್ ,ಅರ್ಪಿಣಿ ಮೂಲಕ . ಇಲ್ಲಿ ಗುಡ್ಡೆ ,ಗದ್ದೆ ಮತ್ತು ಒರುಂಕುಗಳು .ಮಾರ್ಗ ಇಲ್ಲ . ಕೇಕಣಾಜೆ ,ಕಾಣಿಚಾರ್ ನ ಮಕ್ಕಳು ಸಿಗುವರು  .ಕಾಣಿಚಾರ್ ನಲ್ಲಿ ಕೇಕಣಾಜೆ ಚೈನ್ ಮಾಸ್ಟ್ರು ಎಂಬವರ ಗದ್ದೆ ಮೂಲಕ ಹೋಗುವದು .ಅವರ ಕೊರಳಲ್ಲಿ ಯಾವಾಗಲೂ ಬಂಗಾರದ ಚೈನ್ ಇರುತ್ತಿತ್ತು . ಕಾಣಿಚಾರಿನಲ್ಲಿ  ಹಲವು ಗೌಡ ಕುಟುಂಬಗಳು ಇದ್ದು ನಮ್ಮ  ಪ್ರಾಥಮಿಕ ಶಾಲೆಯ ಹಿಂದಿ ಅಧ್ಯಾಪಕರಾದ ಕೃಷ್ಣಪ್ಪ ಗೌಡರು ಕೂಡಾ ಅಲ್ಲಿಯವರೇ . ಮಕ್ಕಳು ತಮಾಷೆಗೆ 'ಏಕ್ ದೊ ತೀನ್ ಚಾರ್ ಇತ್ತೆ  ಪೋಪುನೆ ಕಾಣಿಚಾರ್ ' ಎಂದು ಹೇಳುತ್ತಿದ್ದೆವು .

ಈಗಿನಂತೆ ನೀರಿನ ಬಾಟಲ್ ಕೊಂಡು ಹೋಗುವ ಪದ್ದತಿ ಇಲ್ಲ ,ಎಲ್ಲಿ ನೀರಡಿಕೆ ಆಯಿತೋ ಆಲ್ಲಿ ಅಕ್ಕ ಪಕ್ಕದ ಮನೆಯಿಂದ ನೀರು ಕೇಳಿ ಕುಡಿಯುವುದು.ನೀರಿನೊಡನೆ ಬೆಲ್ಲ .ಕೆಲವು ಕಡೆ ಮಜ್ಜಿಗೆ ನೀರು ಸಿಗುವುದು . ಶಾಲೆಯ ಮಕ್ಕಳು ಎಂದು ಎಲ್ಲರೂ ಪ್ರೀತಿಯಿಂದ ಕೊಡುವರು ,

ಹೀಗೆ ಶಾಲೆಗೆ ಹೋಗುವ ದಾರಿಯಲ್ಲಿಯೂ ಏಕತಾನತೆ ಬರುತ್ತಿರಲಿಲ್ಲ . ಗದ್ದೆ ಕೃಷಿಯ ವಿವಿಧ ಹಂತಗಳ ಪಾಠ ನಮಗೆ ಆಗುವುದು .ನೇಜಿ ನೆಡುವವರ ಓಬೇಲೆ,ನಗು ಉಳುವವರ ರಾಗಬದ್ದ ಸಂಗೀತ  ; ಬೆಳೆದ ಬತ್ತದ ಸಸಿಗಳು ನಮಗೆ ಚಾಮರ . ದಾರಿಯಲ್ಲಿ ಮಾವು ,ಗೇರು ,ನೆಲ್ಲಿಕಾಯಿ ಮತ್ತು ಹುಣಿಸೇ ಹಣ್ಣು ಇತ್ಯಾದಿ ಸಿಗುವುವು . ಹಕ್ಕಿಗಳು ,ಪ್ರಾಣಿಗಳು ಮತ್ತು ಸರೀಸೃಪಗಳು ಇತ್ಯಾದಿ ನಮ್ಮ ಸಹಜೀವಿಗಳು ಆಗುವುವು . ಶುದ್ಧ ವಾತಾವರಣದಲ್ಲಿ ನಡೆದು ಹೋಗುವುದರಿಂದ ಅಯಾಚಿತ ವ್ಯಾಯಾಮ .

ಈಗ ಮನೆ ಬಾಗಿಲಿಗೇ ಶಾಲಾ ಬಸ್ ಅಥವಾ ರಿಕ್ಷಾ ಬರುವುದು .ಮಕ್ಕಳನ್ನು ಅದರಲ್ಲಿ ತುಂಬಿಕೊಂಡು ಹೋಗಿ ಶಾಲಾ ಬಾಗಿಲಿಗೆ ಬಿಡುವರು . ಶಾಲೆಯ ಒತ್ತಡ ಮನೆಗೆ ಮನೆಯ ಒತ್ತಡ ಶಾಲೆಗೆ ;ನಡುವೆ ಗೆಳೆಯ ಗೆಳತಿಯರೊಂದಿಗೆ ಮಾತಾಡುತ್ತಾ ,ಪ್ರಕೃತಿ ಸವಿಯುತ್ತಾ ನಡೆದು ಹಗುರಾಗುವ ಮಧ್ಯಂತರ  ಕಾಣೆಯಾಗಿದೆ .ಅಲ್ಲದೆ ಸಣ್ಣ ಸಣ್ಣ ತರಗತಿಯ ಕನ್ಯಾನದ ಮಕ್ಕಳು ವಿಟ್ಲಕ್ಕೆ ,ವಿಟ್ಲದವರು ಆಳಿಕೆಗೆ ಹೋಗುವರು .ಕನ್ಯಾನ ಶಾಲೆಗೆ ಕೇರಳದ ಪೈವಳಿಕೆ ,ಬಾಯಾರು ,ಆನೆಕಲ್ಲು ,ದೈಗೋಳಿ ಮತ್ತು ಮೀಯಪದವು ನಿಂದ ಮಕ್ಕಳು ಬರುತ್ತಿದ್ದರು .ಕಳಂಜಿ ಮೂಲೆ ಹತ್ತಿ ಇಳಿದು ಕುಡ್ತಮೊಗರು ,ಕುಳಾಲು ಮತ್ತು ಮಾವೆಯಿಂದ ಮಕ್ಕಳು ಬರುತ್ತಿದ್ದರು .ಈಗ ಇಲ್ಲಿಯ ಮಕ್ಕಳು ವಾಹನಗಳಲ್ಲಿ ಬೇರೆ ಕಡೆ ಹೋಗುವಂತೆ ಆಗಿದೆ .

ಇಷ್ಟೆಲ್ಲಾ ಆದರೂ ಆರಂಕುಶವಿಟ್ಟೊಡಮ್ ನೆನೆವುದೆನ್ನ ಮನಂ ಬನವಾಸಿ ದೇಶವಮ್ ಎಂದು ಪಂಪ ಹೇಳಿದಂತೆ ನಮ್ಮ ಮನ ಕನ್ಯಾನವ ನೆನೆಯುವುದು .ಆಸ್ಪತ್ರೆಗೆ ಕನ್ಯಾನ ಕಡೆಯವರು ಬಂದರೆ ತವರು ಮನೆಯ ಕಡೆಯವರು ಹೆಣ್ಣಿಗೆ ಆಗುವಂತೆ  ಕಿವಿ ನೆಟ್ಟಗೆ ಆಗುವುದು ,ಮನಸು ಅರಳುವುದು . ನಮ್ಮ ಊರಿನ ಹೆಸರು ಕೆಟ್ಟ ಕಾರಣಕ್ಕಾಗಿ ಆಗಾಗ ಸುದ್ದಿಯಲ್ಲಿ ಬಂದಾಗ ಮನ ಮುದುಡುವುದು .

 ನಾನು ಹಿಂದೆ ಪೋಸ್ಟ್ ಮಾಡಿದ ಕೆಲವು ಸಾಲುಗಳನ್ನು ಇತ್ತೀಚೆಗೆ ನನ್ನ ಫೇಸ್ ಬುಕ್ ಮಿತ್ರರಾದವರಿಗಾಗಿ

 

ಹುಟ್ಟೂರೆಂದರೆ ಬರೀ ಹೆಸರಲ್ಲ ,ನೆನಪ ಒಸರು
ನಡೆದ ಒರುಂಕು ಹಾರಿದ ತಡಮ್ಮೆ ಸವೆದ ಸಂಕ
ಹೊಲದಲ್ಲಿ ಏರು ದನಿ ಓ ಬೇಲೆ ಹಾಕುವಾ ಯೆಂಕ ,
ಅಂಬಾ ಎನುವವಳು ಹಟ್ಟಿಯಲಿ ಗೌರಿಯಲ್ಲವೇ ಹೆಸರು .
ಗುಡ್ಡೆಯಿಳಿದು ಬರೆ ಕಾಣುವಾ ಬಚ್ಚಲಿನ ಹೊಗೆ
ಬೌ ಬೌ ಎಂದು ಟೈಗರ್ ಸಂತಸದಿ ಸ್ವಾಗತಿಪ ಬಗೆ
ಅಂಗಳದಿ ಹರಡಿಯುವ ಧನ ರಾಶಿ ಅಡಿಕೆ
ಚಾವಡಿ ಜಗಲಿ ಗೆ ಕಟ್ಟಿದ ಓಲೆಯಾ ತಡಿಕೆ .
ನಿತ್ಯ ಶಾಲೆಗೆ ನಡೆದ ಹಸಿರ ಹಾದಿ
ಬರಿಗಾಲು ಪಾದ ಮೆಟ್ಟಿದಾ ಸುಗ್ಗಿ ಹುಣಿ ಮೆತ್ತೆ
ಬಾಗಿ ಬಾಗಿ ಚಾಮರ ಬೀಸುವ ಪೈರಿನಾ ಗತ್ತೇ
ಮರೆಯಲಿ ಹೇಗೆ ಚಡ್ಡಿದಾರೀ ಮಿತ್ರಗಣಮತ್ತೆ.
ಶಾಲೆಯೆಂದರೆ ಬರೀ ಕಟ್ಟಡವೇ ಅಲ್ಲ ನಮ್ಮ ಉಸಿರು
ಮಮ್ಮದೆ ಸಂಕಪ್ಪ ನರಸಿಂಹ ಅಲ್ಲವೇ ಅವರ ಹೆಸರು
ಅಲ್ಲಿ ಜೋಡು ಜಡೆ ಬಣ್ಣ ಬಣ್ಣದ ಲಂಗ
ಸಾವಿತ್ರಿ ಪಾರ್ವತಿ ಶ್ರೀದೇವಿ ಗೆಳತಿ ಗೆಳೆಯರ ಸಂಗ .
ಆಗೋ ಕಾಣುವುದು ಐತಪ್ಪನಾಯ್ಕರ ಗಾಂಧಿ ಟೋಪಿ
ಇಲ್ಲಿ ಕರೆವರು ರಾಮ ರಾಯರು ಆಟಕ್ಕೆ ಶೀಘ್ರ ಕೋಪಿ
ಮಾಸ್ತರರ ಮೆರವಣಿಗೆ ಕೃಷ್ಣಪ್ಪ ,ಸಂಜೀವ , ಕೊರಗಪ್ಪಶೆಟ್ಟಿ
ಏರುತಿದೆ ಸಂತಸದಿ ನೆನಪಿನಾ ಅಟ್ಟಿ.
ಕೋಡಿ ಭಟ್ಟರ ಹೊಟೇಲ್ ನೀರುಳ್ಳಿ ಬಜೆ ಕಂಪು
ಸಾಯಿಬ್ಬರಾ ಅಂಗಡಿ ಗೋಲಿ ಸೋಡದ ತಂಪು
ಜವಳಿ ಶೆಟ್ಟರ ಅಂಗಡಿ ಎದುರು ಹೊಲಿಗೆ ಯಂತ್ರದ ಸದ್ದು
ಪಕ್ಕದಲೇ ಡಾ ಮಹಾದೇವ ಶಾಸ್ತ್ರಿಗಳ ಮದ್ದು .
ಗಂಟೆ ಬಾರಿಸುತಲೆ ಕಲರವದಿ ಹೊರಟ ಮಕ್ಕಳ ಮಂದೆ
ನಶ್ಯ ಸೇವಿಸುವ ನಾವುಡ ಮೇಷ್ಟ್ರು ನಮ್ಮ ಮುಂದೆ
ಕೇಪುಳುಗುಡ್ಡೆಯ ಹುಣಿಸೆ ಹಣ್ಣಿನ ಮರವು
ಪೀರ್ ಸಾಯಿಬ್ಬರ ಬಿಳಿ ಬಸ್ಸಿನಾ ಬರವು .

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ