ಬೆಂಬಲಿಗರು

ಶುಕ್ರವಾರ, ಜುಲೈ 2, 2021

ವೈದ್ಯಕೀಯ ಅರ್ಥ ಶಾಸ್ತ್ರ

   ವೈದ್ಯಕೀಯ ಅರ್ಥ ಶಾಸ್ತ್ರ 


ಇಕೊನೋಮಿಕ್ಸ್ ಆಫ್ ಮೆಡಿಸಿನ್ ಅಂತ ಇದೆ . ನಮ್ಮ ವೈದ್ಯಕೀಯ ಕ್ಷೇತ್ರದಲ್ಲಿ ಇದು  ಬಹಳ ಮುಖ್ಯ ಎಂದು ತಿಳಿದವರು ಹೇಳುತ್ತಾರೆ .

 ನಮ್ಮ ದೇಶದಲ್ಲಿ ಆರೋಗ್ಯ ಮತ್ತು ಅನಾರೋಗ್ಯ ಕ್ಕೆಂದು  ಪ್ರತ್ಯೇಕ ಹಣ ತೆಗೆದು ಇಡುವುದು ಕಡಿಮೆ .ಬದಲು ಮದುವೆ ,ಮುಂಜಿ ಮತ್ತು ಸತ್ಯನಾರಾಯಣ ಪೂಜೆಗೆ ಎಂದು ನಿಧಿ ಕೂಡಿ ಇಡುತ್ತೇವೆ . ಆದ ಕಾರಣ  ಅನಾರೋಗ್ಯ ಬಂದಾಗ ಕೈಕಾಲು ಬಿಡುತ್ತೇವೆ . ಆರೋಗ್ಯ ಇನ್ಸೂರೆನ್ಸ್ ಇನ್ನೂ ಜನಪ್ರಿಯ ಆಗಿಲ್ಲ ಮಾತ್ರವಲ್ಲ ಇರುವ ಅನೇಕ ಯೋಜನೆಗಳು ಜನ ಸ್ನೇಹಿ ಆಗಿಲ್ಲ ಎಂದೇ ಹೇಳಬೇಕು .

ಖಾಸಗಿ  ಆಸ್ಪತ್ರೆಗಳಲ್ಲಿ ಜನರು ಅನೇಕ ಸೌಲಭ್ಯ ,ನೈರ್ಮಲ್ಯ ಬಯಸುತ್ತಾರೆ . ರೋಗಿಯ ಉಪಚಾರ ಆಗುತ್ತಿದ್ದು ಗುಣ ಮುಖ ನಾಗುತ್ತಿದ್ದಂತೆ ನಗು ನಗುತ್ತಿರುವ ಸಂಬಂಧಿಕರು ಬಿಲ್ ಸಿಗುತ್ತಿದ್ದಂತೆ  ಶಕುಂತಲೆಯನ್ನು ಮರೆತ ದುಶ್ಯಂತ ನಂತೆ ಆಗುತ್ತಾರೆ  . 

ಒಂದು ಆಸ್ಪತ್ರೆ  ವಿಶಾಲವಾಗಿ ,ಗಾಳಿ ಬೆಳಕು ,ಪಾರ್ಕಿಂಗ್ ಜಾಗ ಮತ್ತು ಬಸ್ ಸ್ಟಾಂಡ್ ಗೆ ಸಮೀಪ ಇರಬೇಕೆಂದರೆ  ಅದರ ನಿರ್ಮಾಣ ವೆಚ್ಚ ಅಷ್ಟೇ ಅಧಿಕ ಆಗುವುದು . ನುರಿತ ಸಿಬ್ಬಂದಿ ,ಅವರಿಗೆ ಸರಕಾರ ಸೂಚಿಸುವ ವೇತನ ,ವಿದ್ಯುತ್ ಶಕ್ತಿ ,ಮಾಲಿನ್ಯ ನಿಯಂತ್ರಣ ,ತ್ಯಾಜ್ಯ ನಿರ್ವಹಣೆ , ಉಪಕರಣಗಳ ದುರಸ್ತಿ ಮತ್ತು ನಿರ್ವಹಣೆ ಇತ್ಯಾದಿ ಪುನರಾವರ್ತಿಸುವ ವೆಚ್ಚಗಳು ದಿನೇ ದಿನೇ ಹೆಚ್ಚುವುವು . ಕೆಲವರು ಒಂದು ಪರೀಕ್ಷೆಗೆ ಅಲ್ಲಿ ೫೦ ತೆಗೆದುಕೊಂಡರೆ ಇವರು ಯಾಕೆ ನೂರು ಕೇಳುತ್ತಾರೆ ?ಎಂದು ಸೋಜಿಗ ಪಡುವರು . ಕಾರಣ ಅದನ್ನು ಮಾಡುವ ಸಿಬ್ಬಂದಿ ಯ  ವಿದ್ಯಾರ್ಹತೆ ,ಯಂತ್ರದ ಗುಣಮಟ್ಟ ಮತ್ತು ನೈರ್ಮಲ್ಯ ನಿರ್ವಹಣೆ ವ್ಯತ್ಯಾಸ ಇರುವದು . 

ಇನ್ನು ಆಸ್ಪತ್ರೆಗಳಲ್ಲಿ ರೋಗಿಗಳ ಅನುಕುಲಕ್ಕಾಗಿ  ಸಾಮಾನ್ಯ ,ಮತ್ತು ತರಾವಳಿಯ ವಿಶೇಷ ವಾರ್ಡ್ ಮತ್ತು ರೂಮ್ ಗಳು ಇರುತ್ತವೆ . ತಮ್ಮ ಅನುಕೂಲತೆ ನೋಡಿಕೊಂಡು ಅದನ್ನು ಆಯ್ಕೆ ಮಾಡಿಕೊಳ್ಳಬೇಕು . ಸಾಮಾನ್ಯ(ಜನರಲ್ ) ವಾರ್ಡ್ ನಲ್ಲಿ ನರ್ಸಿಂಗ್  ಕೇರ್ ಇತ್ಯಾದಿ ಸ್ಪೆಷಲ್ ವಾರ್ಡ್ ನಷ್ಟೇ  ಒಳ್ಳೆಯದು ಇರುತ್ತದೆ .ಅಲ್ಲಿ ದಾದಿಯರ ನೇರ   ಗಮನ ರೋಗಿಗಳ ಮೇಲೆ ಇರುತ್ತದೆ ಮತ್ತು ಅವರನ್ನು ಸಂಪರ್ಕಿಸುವದು ಸುಲಭ . 

ಒಬ್ಬ ರೋಗಿ ಜ್ವರ ಎಂದು ಬಂದಾಗ ಅವನ  ಪರೀಕ್ಷೆ ಮಾಡಿ ಲ್ಯಾಬ್ ಪರೀಕ್ಷೆಗೆ ಕಳುಹಿಸುವಾಗ  ಅವನ ಪರಿಸರದಲ್ಲಿ  ಇರುವ ಜ್ವರ (ಉದಾ ಡೆಂಗ್ಯೂ )ಮತ್ತು ನಮಗೇನಾದರೂ ಸಂದೇಹ ಇದ್ದರೆ ಅದರ ಪರೀಕ್ಷೆ ಮಾಡುವುದು ನನ್ನ ಕ್ರಮ .ಕೆಲವು ಕಡೆ  ಲ್ಯಾಬ್ ನಲ್ಲಿ ಲಭ್ಯವಿರುವ ಎಲ್ಲಾ ಜ್ವರ ಪರೀಕ್ಷಣ ಮಾಡಿಸುವರು .ನನ್ನ ರೋಗಿಗಳು ಹಲವರು ಹೀಗೆ ಒಂದರ ನಂತರ ಒಂದು ಟೆಸ್ಟ್ ಮಾಡಿಸುವಾಗ ತಾಳ್ಮೆ ತಪ್ಪಿ ಮೊದಲೇ ಒಟ್ಟಿಗೆ ಮಾಡಿಸ ಬಹುದಿತ್ತಲ್ಲ ಎನ್ನುವರು . ಲ್ಯಾಬ್ ನ ಸಿಬ್ಬಂದಿ ಕೂಡಾ ನಾನು ಮೊದಲು ಡೆಂಗ್ಯೂ ಮಾಡಿ ,ನೆಗೆಟಿವ್ ಇದ್ದರೆ ಇಲಿ ಜ್ವರ ,ಅದೂ ಇಲ್ಲದಿದ್ದರೆ ಮಲೇರಿಯಾ ಮಾಡಿ ಎನ್ನುವಾಗ ಇವರದ್ದು ಒಂದು ಕಿರಿ ಕಿರಿ ಎಂದು ಮನಸಿನಲ್ಲೇ ಗೊಣಗುತ್ತಿರ ಬಹುದು . ಆದರೆ ರೋಗಿಯ ವೆಚ್ಚ ಆದಷ್ಟು ಕಡಿಮೆ ಮಾಡಲು ನಾನು ಇದನೆಲ್ಲಾ ಸಹಿಸುವೆನು . ಇನ್ನು ಕೆಲವರು ತಾವೇ ಕೆಲವು ಟೆಸ್ಟ್ ಗಳನ್ನು ಮಾಡಲು ಒತ್ತಾಯಿಸುವರು .ಉದಾಹರಣೆಗೆ ಸ್ಕ್ಯಾನ್ ,ಈ ಸಿ ಜಿ .ಎಕ್ಸ್ ರೇ ಇತ್ಯಾದಿ .ನಮಗೆ ಅದು ಆಗ ಅವಶ್ಯ ಎಂದು ಕಾಣದಿದ್ದರೂ ಎಲ್ಲಿಯಾದರೂ ಅದರಲ್ಲಿ ಏನಾದರೂ ಕಂಡು ಬಂದರೆ ಮೊದಲೇ ಮಾಡಿಸ ಬಹುದಿತ್ತು ಎಂದು ಪಶ್ಚಾತ್ತಾಪ ಪಡುವುದು ಬೇಡ ಎಂದು ಅದನ್ನು ಮಾಡಿಸುತ್ತೇವೆ . ಈಗ ಡೆಂಗ್ಯೂ ಹಾವಳಿ ಇದೆ .ರೋಗಿಗಳು ದಿನವೂ ಪ್ಲಾಟಿಲೆಟ್ ಕೌಂಟ್ ಎಷ್ಟು ಎಂದು ದುಂಬಾಲು ಬೀಳುವರು . ಇದೆಲ್ಲಾ ಖರ್ಚು ಹೆಚ್ಚಿಸುವುದು .

ಇನ್ನು ವೈದ್ಯರ ಚಾರ್ಜ್ . ಇದು  ಅವರವರ ಮೇಲೆ ಅವಲಂಬಿತ . ನಾನು ಹಳ್ಳಿಯಿಂದ ಬಂದವನು ,ಸರಕಾರಿ ಶಾಲೆಗಳಲ್ಲಿ ಓದಿದವನು ,ಆದುದರಿಂದ ನನ್ನ ಮನೋಭಾವ ಬೇರೆ ಇರುತ್ತದೆ . ವಿದ್ಯಾಭ್ಯಾಸ ಕ್ಕಾಗಿ  ತುಂಬಾ ಧನ ವಿನಿಯೋಗಿಸಿದವರು (ಕೆಲವರು ಸಾಲ ಮಾಡಿ )ಅದಕ್ಕನು ಗುಣವಾಗಿ   ಫೀಸು ನಿರ್ಧರಿಸಿದರೆ ತಪ್ಪಲ್ಲ . ಆದರೆ ರೋಗಿಯ ಹಿನ್ನಲೆ ,ರೋಗದ ಗಂಭೀರತೆ ಮತ್ತು ನಾವು ಹಾಕಿದ ಬೌಧ್ಧಿಕ ಮತ್ತು ಶಾರೀರಿಕ ಶ್ರಮ ಇವು ಗಳಲ್ಲ  ಪರಿಗಣೆಗೆ ಒಳ ಪಡ ಬೇಕು .  ನಾನು ಕೆಲವೊಮ್ಮೆ ಕಡಿಮೆ ಫೀಜ್ ತೆಗೆದು ಕೊಂಡಾಗ ನನ್ನ ಪರಿಣತಿ ಬಗ್ಗೆ ಸಂದೇಹ ಪಟ್ಟ ಸಂದರ್ಭಗಳೂ ಇವೆ . ಬಹಳ ಆಸ್ಪತ್ರೆ ಕಚೇರಿ ಸಿಬ್ಬಂದಿ ,ರೋಗಿಗಳು ಮತ್ತು ಸಂಬಂಧಿಕರು  ವೈದ್ಯರ ಕಾರಿನ ಮೌಲ್ಯ (ದೊಡ್ಡ ಕಾರ್ ಇದ್ದರೆ ದೊಡ್ಡ ಡಾಕ್ಟರ್ ),ಅವರ ಫೀಜ್ ಮತ್ತು ಉಡುಗೆ ತೊಡುಗೆ ,ಡಿಗ್ರಿಯ ಉದ್ದ ದ ಮೇಲೆ ಅವರ ಮೌಲ್ಯ ಕಟ್ಟುವರು .ಇದು ಸರಿ ಎಂದು ತೋರುವುದಿಲ್ಲ .ನನ್ನ ಅನುಭವದಲ್ಲಿ ಉಳ್ಳವರೇ ಡಾಕ್ಟರ್ ಸಂಭಾವನೆ ಕೊಡಲು ಹಿಂಜರಿವರು .ಬಹಳ ಸಾರಿ ಹಳ್ಳಿಗಾಡಿನ  ಬಡ ಮಂದಿ ಡಾಕ್ತ್ರೆಕಳೆದ ಸಲ ಗಡಿಬಿಡಿಯಲ್ಲಿ ನಿಮ್ಮ ಚಾರ್ಜ್ ಕೊಡಲಿಲ್ಲ ಎಂದು ವಿನೀತ ಭಾವದಿಂದ ಬಾಕಿ ಕೊಟ್ಟ ದ್ದು ಇದೆ . 

ಆಸ್ಪತ್ರೆ ವೆಚ್ಚ ಕಡಿಮೆ ಮಾಡುವ ಇನ್ನೊಂದು ಉಪಾಯ ಹಳೆಯ ವೈದ್ಯಕೀಯ ದಾಖಲೆಗಳನ್ನು ಯಾವಾಗಲೂ ಇಟ್ಟು ಕೊಂಡು ಇರುವುದು .ಇದರಿಂದಾಗಿ  ಆದಿಯಿಂದ ಪುನಃ ಅನೇಕ ಪರೀಕ್ಷೆ ಮಾಡುವುದು ತಪ್ಪುವುದು .

ಇನ್ನು ಔಷಧಿಗಳ ಬೆಲೆ ಬಗ್ಗೆ ಹಿಂದೊಮ್ಮೆ ಬರೆದಿದ್ದೆನು .ಔಷಧಿ ಕಂಪನಿಗಳು ಲಕ್ಷಾಂತರ ಮಂದಿ ಗೆ  ಉದ್ಯೋಗ ನೀಡುತ್ತಿವೆ. ಹೊಸ ಹೊಸ ಔಷಧಿಗಳ ಅನ್ವೇಷಣೆಗೆ ಬಂಡವಾಳ ಹೂಡುತ್ತವೆ .ಹಿಂದೆ ಔಷಧಿ ಇಲ್ಲದ ವಾತ ರೋಗಗಳು ,ಹಲವು ಕ್ಯಾನ್ಸರ್ ಗಳು ಈಗ ಗುಣ ಪಡಿಸಲ್ಪಡ ಬಹುದಾಗಲಿದೆ . ಆದ ಕಾರಣ ಅವುಗಳನ್ನು ಖಳ ನಾಯಕರಂತೆ ಬಿಂಬಿಸುವುದು ಸರಿಯಲ್ಲ . ಕಂಪನಿ ಔಷಧಿಗಳಲ್ಲಿಯೇ ಒಳ್ಳೆಯ ಗುಣಮಟ್ಟ ಇಟ್ಟುಕೊಳ್ಳುವ ಆದರೆ ಬಹಳ ತುಟ್ಟಿಯಲ್ಲದ ಔಷಧಿಗಳನ್ನು ಗುರುತಿಸಿ ಬರೆಯುವ ಅಭ್ಯಾಸ ಮಾಡಿದ್ದೇನೆ . ನಮ್ಮ ಗುರುಗಳು ಯಾವುದೇ ಟೆಸ್ಟ್ ಬರೆಯುವಾಗ  ಮತ್ತು ಔಷಧಿ ಬರೆಯುವಾಗ  ಇದು ರೋಗಿಯ ಉಪಚಾರಕ್ಕೆ ಅತ್ಯಾವಶ್ಯವೇ  ಎಂದು ಎರಡು ಬಾರಿ ಯೋಚಿಸಿರಿ ಎಂದು ಹೇಳುತ್ತಿದ್ದರು . ಇನ್ಸುಲಿನ್ ನಂತಹ ಧೀರ್ಘ ಕಾಲಿಕ ಔಷಧಿಗಳನ್ನು ಸರಕಾರ ಸಹಾಯ ಧನದೊಂದಿಗೆ ಕೊಟ್ಟರೆ ಒಳ್ಳೆಯದು . 




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ