ಮರೆಯಲಾಗದ ಪುಟ್ಟಕ್ಕು
ಬೈರಿಕಟ್ಟೆ ಮತ್ತು ಕನ್ಯಾನ ನಡುವೆ ಕಿರಿಂಚಿಮೂಲೆ .ಅದರ ಉತ್ತರಕ್ಕೆ ಕಳಂಜಿಮಲೆ ,ದಕ್ಷಿಣಕ್ಕೆ ಬಯಲು ಗದ್ದೆಗಳು . ಬೈರಿಕಟ್ಟೆಯಿಂದ ಹೆಚ್ಚುಕಮ್ಮಿ ಕನ್ಯಾನದ ವರೆಗಿನ ದೇಲಂತ ಬೆಟ್ಟು ಬೈಲಿನ ಒಡೆಯರು ಮಂಜೇಶ್ವರ ಅನಂತ ರಾವ್ ಎಂಬವರು. . ಇಲ್ಲಿನ ಕೃಷಿಕರು ಅವರ ಗೇಣಿದಾರರು.ಇವರಲ್ಲಿ ನಾಯ್ಕರು ,ರಾಯರು ,ಪ್ರಭುಗಳು ,ಸೋಜರು ,ಪೂಜಾರಿಗಳು ,ಪಾಟಾಳಿ ಗಳು ಮತ್ತು ಬಹು ಸಂಖ್ಯೆಯಲ್ಲಿ ಮೂಲ್ಯರು ಇದ್ದರು . ಸ್ಥಳೀಯವಾಗಿ ಕಿರಿಂಚಿಮೂಲೆ ಶ್ರೀನಿವಾಸ ರಾಯರು(ಚೀನಣ್ಣ ) ಇವರಿಗೆಲ್ಲಾ ಮುಖಂಡರು . ಊರಿಗೆ ಹಿರಿಯರು ,ಯ ನ್ಯಾಯ ಪಕ್ಷಪಾತಿಗಳು . ದಕ್ಷಿಣಕ್ಕೆ ಅಂಗ್ರಿಯಲ್ಲಿ ಸ್ವಲ್ಪ ಭಾಗ ಬಿಟ್ಟರೆ ಉಳಿದ ವಿಶಾಲ ಅಸ್ತಿ ಅಡಿ ಬಾಯಿ ಭಟ್ಟರ ಕುಟುಂಬದ್ದು ,ಇದರಲ್ಲಿ ಬಹುಪಾಲು ಬ್ಯಾರಿ ಬಂಧುಗಳು ಗೇಣಿದಾರರು ,ಅದರ ಮೇಲುಸ್ತುವಾರಿ ವಕೀಲ ಮೊಯ್ದು ಕು೦ಞ ಎಂಬುವರು ನೋಡಿಕೊಳ್ಳುತ್ತಿದ್ದರು . ವಕೀಲ ಪದವಿ ಜನರೇ ಕೊಟ್ಟದ್ದು ;ಇವರು ನ್ಯಾಯ ಪಕ್ಷಪಾತಿಯೂ ಸಮಾಜದಲ್ಲಿ ಶಾಂತಿ ಸಾಮರಸ್ಯ ಬಯಸುವವರೂ ಆಗಿದ್ದರು .ಇನ್ನುಅಡಿಬಾಯಿ ಮನೆ ಶ್ರೀಮಂತಿಗೆ ಹೆಸರಾಗಿದ್ದು ನಮ್ಮಲ್ಲಿ ಕೆಲಸದಲ್ಲಿ ಅಸಡ್ಡೆ ತೋರಿದರೆ ಮೂರು ಹೊತ್ತು ಕುಳಿತು ಉಣ್ಣಲು ನಾವೇನು ಅಡಿಬಾಯಿ ,ನೂಜಿ ಬೈಲಿನವರೋ ಎಂದು ಕೇಳುವ ಪದ್ಧತಿ ಇತ್ತು .ಅವರಿಗೆ ಸಾಕಷ್ಟು ಗೇಣಿ ಬರುತ್ತಿದ್ದರಿಂದ ಹಾಗೆ ಹೇಳುತ್ತಿರ ಬಹುದು ,ಹೊರತು ಕೆಲಸ ಮಾಡುವುದರಲ್ಲಿ ಹಿಂದೆ ಎಂಬ ಅರ್ಥದಲ್ಲಿ ಅಲ್ಲ
ಇಲ್ಲಿ ಕುಂಬಾರ ಕುಟುಂಬದ ಹಲವರಿಗೆ ಅಲ್ಪ ಸ್ವಲ್ಪ ಬೇಸಾಯ ಇದ್ದುದರಿಂದ ಹಲವರು ನಮ್ಮ ಮನೆಗೆ ಕೆಲಸಕ್ಕೆ ಬರುವರು . ಪೂವ ಮೂಲ್ಯ ಮತ್ತು ಅವರ ಕುಟುಂಬದರು ಇದ್ದರು . ಅವರೂ ಅವರ ಮಕ್ಕಳಾದ ಸೇಸಪ್ಪ ,ತಿಮ್ಮಪ್ಪ ,ಮಗಳು ಪುಟ್ಟಕ್ಕು ,ಗಿರಿಜಾ ,ಸೊಸೆ ಭಾಗಿ ಬಹಳ ವರ್ಷ ನಮ್ಮಲ್ಲಿ ಕೃಷಿ ಕೆಲಸಕ್ಕೆ ಬರುತ್ತಿದ್ದರು .ಇನ್ನು ಗದ್ದೆ ನೆಡುವಾಗ ಆನ್ ಸ್ಪೆಷಲ್ ಡ್ಯೂಟಿ ಇನ್ನೂ ಹಲವರು ,ಬರುವರು
ಇವರಲ್ಲಿ ಪುಟ್ಟಕ್ಕು ಅಥವಾ ಪುಟ್ಟು ಮೂಲ್ಯೆದಿ ನಮ್ಮ ಮನೆಯವರು ಮರೆಯುವಂತೆ ಇಲ್ಲ . ಇವರು ನಮಗೆ ಎರಡನೇ ತಾಯಿಯಂತೆ ಇದ್ದವರು . ನಮ್ಮ ದೊಡ್ಡ ಮನೆಯನ್ನು ಗುಡಿಸಿ ಒರೆಸಿ , ಪಾತ್ರೆ ಬೆಳಗಿ (ತೊಳೆದು ),ಆಮೇಲೆ ನಮ್ಮ ರಾಶಿ ಬಟ್ಟೆಯನ್ನು ಒಗೆದು ಮುಗಿಸುವಾಗ ಮಧ್ಯಾಹ್ನ ಕಳೆಯುವದು . ಆಮೇಲೆ ತೋಟದಿಂದ ಹುಲ್ಲು ಮಾಡುವುದೋ ,ಗುಡ್ಡದಿಂದ ಸೊಪ್ಪು ತರುವುದೋ ಮಾಡುವರು .
ಗುಡಿಸಿ ಒರಸುವಾಗ ನಾವು ಮಕ್ಕಳು ಮಣ್ಣಿನ ಕಾಲಿನಲ್ಲಿ ಬಂದರೆ ಹುಸಿಗೋಪದಿಂದ ಗದರುವರು . ಈಗಲೂ ಆಸ್ಪತ್ರೆಯಲ್ಲಿ ಈಗ ತಾನೇ ಒರಸಿ ಒದ್ದೆಯಾರುವ ಮುನ್ನ ನಡೆಯುವಾಗ ಅವರ ಎಚ್ಚರಿಕೆ ಜ್ಞಾಪಕಕ್ಕೆ ಬಂದು ದಾರಿ ಬದಲಿಸುವೆನು . ದೊಡ್ಡ ಪಾತ್ರೆಯಲ್ಲಿ ಗಂಜಿ ಯಲ್ಲಿ ಅದ್ದಿ ಇಟ್ಟ ನಮ್ಮ ಬಟ್ಟೆಗಳನ್ನು ಆರು ತಿಂಗಳು ತೋಟದ ಕೆರೆಗೂ ,ಉಳಿದಂತೆ ಮಳೆಗಾಲದ ನೀರು ಹರಿಯುವ ಕಣಿಗೂ ಒಯ್ದು ಕಲ್ಲಿನ ಮೇಲೆ ಟಪ್ ಟಪ್ ಎಂದು ಬಡಿದು ತೊಳೆಯುವರು ,ಕೆಲವೊಮ್ಮೆ ಉಸ್ ಉಸ್ ಎಂಬ ಶಬ್ದ ಮಾಡುವರು .
ಇನ್ನು ಮನೆಯಲ್ಲಿ ಯಾರಾದರೂ ಹೆತ್ತರೆ ಬಾಳಂತಿ ಮಗುವಿನ ಆರೈಕೆ ಅವರೇ ಮಾಡುವರು .ಈ ಅವಧಿಗೆ ಅವರ ಮನೆಯಿಂದಲೇ ಅವರ ಯಾವತ್ತೂ ಕೆಲಸಕ್ಕೆ ಬೇರೆ ಯಾರಾದರೂ ಬರುವರು .
ನಮ್ಮ ಮನೆಯಲ್ಲಿ ಪಾಲು ಆಗಿ ಕುಟುಂಬ ಒಡೆದಾದ ಮೇಲೂ ನಮ್ಮ ಮನೆಗೆ ಕೆಲಸಕ್ಕೆ ಬರುತ್ತಿದ್ದರು . ಕೆಲವು ವರ್ಷ ನಾವು ಭಾರೀ ಆರ್ಥಿಕ ಮತ್ತು ಇತರ ಸಂಕಷ್ಟ ದಲ್ಲಿ ಇದ್ದಾಗ ಕೆಲವರು ನಮ್ಮ ಮನೆಗೆ ಕೆಲಸಕ್ಕೆ ಹೋಗದಂತೆ ಅವರಿಗೆ ಒತ್ತಡ ಮತ್ತು ಬೆದರಿಕೆ ಹಾಕಿದರೂ ಹೆದರದೆ ತನ್ನ ಅರೋಗ್ಯ ಸರಿ ಇರುವ ವರೆಗೆ ,ಮತ್ತು ಜಾಗ ಕೊಡುವ ವರೆಗೆ ನಮ್ಮ ಮನೆಗೆ ಬರುವುದನ್ನು ನಿಲ್ಲಿಸಲಿಲ್ಲ .
ನಾವು ಮಕ್ಕಳೆಲ್ಲಾ ಓದಿ ಉದ್ಯೋಗಸ್ಥರಾದಾಗ ಸಂತೋಷ ಪಡುವರು ,ನಮ್ಮ ಮದುವೆ ಸಮಾರಂಭಗಳಿಗೆ ಬಂದು ಸಂಭ್ರಮಿಸುವರು .
ನಾವು ಅಂಗ್ರಿ ಬಿಟ್ಟು ಹಲ ವರ್ಷಗಳ ನಂತರ ,ಕೆ ಎಸ ಹೆಗ್ಡೆ ಆಸ್ಪತ್ರೆಯಲ್ಲಿ ಉದ್ಯೋಗದಲ್ಲಿ ಇದ್ದ ಸಮಯ ಅವರಿಗೆ ಸ್ಟ್ರೋಕ್ ಆಗಿದೆ ಎಂದು ತಿಳಿದು ,ಮನೆಗೆ ಹೋಗಿ ದರ್ಶನ ಮಾಡಿ ನಮಸ್ಕರಿಸಿ ಬಂದಿರುವೆನು ,ಕೆಲ ತಿಂಗಳ ನಂತರ ತೀರಿ ಕೊಂಡ ಸುದ್ದಿ ಬಂತು .
ತನ್ನ ಸ್ವಂತ ಜೀವನದಲ್ಲಿ ಬಹಳ ಕಷ್ಟ ಅನುಭಸಿದ ಈ ಚೇತನ ಸುಮಾರು ಮೂರು ದಶಕ ನಮ್ಮ ಕುಟುಂಬದ ಒಂದು ಅಂಗವಾಗಿ ಸೇವೆ ಸಲ್ಲಿಸಿದುದನ್ನು ಹೇಗೆ ಮರೆಯಲಿ ?ಅವರ ಚಿತ್ರ ನನ್ನ ಮನಸಿನಲ್ಲಿ ಸ್ಥಿರವಾಗಿದೆ ,ಆದರೆ ಭಾವ ಚಿತ್ರ ಸಿಗದ ಕಾರಣ ಇಲ್ಲಿ ಹಾಕುವುದಕ್ಕೆ ಆಗಲಿಲ್ಲ .ಸಮಾಜದಲ್ಲಿ ದೊಡ್ಡವರೆಂಬವರಿಗೆ ನಾವು ಕೊಡುವ ತೋರಿಕೆ ಗೌರವಕ್ಕಿಂತ ವ್ಯತಿರಿಕ್ತ ,ಸಹಜವಾಗಿ ಹೃದಯದ ಅಂತರಾಳದಿಂದ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ