ಬೆಂಬಲಿಗರು

ಭಾನುವಾರ, ಜುಲೈ 4, 2021

ನಮ್ಮ ಗ್ರಾಮದ ಕೊನೇ ಪಟೇಲರು

                ನಮ್ಮ ಗ್ರಾಮದ ಕೊನೇ ಪಟೇಲರು 

ನಾನು ಹುಟ್ಟಿ ಬೆಳೆದುದು ಕನ್ಯಾನ ಗ್ರಾಮದ ಅಂಗ್ರಿ ಎಂಬಲ್ಲಿ . ಇಂದು ಕನ್ಯಾನ ಗ್ರಾಮದ ಪೂರ್ವ ಗಡಿಯಲ್ಲಿ ಇದೆ .ನಂತರ ಅಳಿಕೆ ಗ್ರಾಮ . ನಮ್ಮ ಗ್ರಾಮಕ್ಕೆ ಮುಖ್ಯಸ್ಥರು ಪಟೇಲರು .ತುಳುವಿನಲ್ಲಿ ಪಟ್ಲೇರ್ ಎಂದು ಕರೆಯುತ್ತಿದ್ದರು .ಇವರು ರೆವೆನ್ಯೂ ಮತ್ತು ಪೊಲೀಸ್ ವಿಭಾಗಕ್ಕೆ ಸರಕಾರವನ್ನು ಊರಲ್ಲಿ ಪ್ರತಿನಿಧಿಸುತ್ತಿದ್ದವರು . 

ನಮ್ಮ ಪಟೇಲರು ಕಣಿಯೂರು ಮನೆತನದವರು ಕಣಿಯೂರು ನಮ್ಮ ಗ್ರಾಮದ ಪಶ್ಚಿಮ ತುದಿಯಲ್ಲಿ ಇದೆ .   .ನನ್ನ ಬಾಲ್ಯದಲ್ಲಿ ರಾಮ ಭಟ್ ಎಂಬುವರು ಪಟೇಲರು . ಅವರ ಸಹಾಯಕ್ಕೆ ಇಬ್ಬರು ಉಗ್ರಾಣಿಗಳು ಇದ್ದರು . ಒಬ್ಬರು ಅಪ್ಪು ಉಗ್ರಾಣಿ ,ಇನ್ನೊಬ್ಬರು ಕುಞಪ್ಪ ಉಗ್ರಾಣಿ . ವರ್ಷ ವರ್ಷ ತೀರ್ವೆ ನೋಟೀಸ್ ತಂದು ಕೊಟ್ಟು ಹೋಗುವರು ಮತ್ತು ಅದರ ಸಂಗ್ರಹ ಮಾಡಿ ರಶೀದಿ ತಲುಪಿಸುವರು . ಅದಕ್ಕೆಂದು ಜನ ಕಚೇರಿ ಅಲೆಯ ಬೇಕಿರಲಿಲ್ಲ .ಈ ಉಗ್ರಾಣಿಗಳೇ ಅಧಿಕೃತ ಸರ್ವೇಯರುಗಳೂ ಆಗಿದ್ದು ಅಳತೆ  ಸಂಕೋಲೆ ಹಿಡಿದು ಕೊಂಡು ಆಸ್ತಿ ಪಾಲು ಮಾಡುವಾಗ ,ದರ್ಖಾಸ್ತು ಅಳೆಯಲು ಕರೆದಾಗ ಬರುವರು .ಊರವರು ಪ್ರೀತಿಯಲ್ಲಿ ಅವರಿಗೆ ವಸ್ತು ರೂಪದಲ್ಲಿ ಅಥವಾ ನಗದು ಕಾಣಿಕೆ ಕೊಡುವರು . ಗಟ್ಟಿಯಾಗಿ ಮಾತನಾಡಿ ಕೊಂಡು ಬರುತ್ತಿದ್ದ ಉಗ್ರಾಣಿ ರವರ ನೆನಪು ಇನ್ನೂ ಮಸುಕು ಮಸುಕಾಗಿ  ಇದೆ . ಮುಂದೆ ಇವರು ಗ್ರಾಮ ಪಂಚಾಯತಿಗೆ ಹೋದರು . ಮನೆ ಮನೆಗಳಲ್ಲಿ ಜನನ ಮರಣ ಸಂಭವಿಸಿದರೆ ಪಟೇಲರ ಮನೆಗೆ ಹೋಗಿ ಅದನ್ನು ದಾಖಲಿಸ ಬೇಕಿತ್ತು .ಕ್ರಮೇಣ ಪಟೇಲರ ಈ ಗೌರವ ಹುದ್ದೆ ರದ್ದಾಗಿ  ಪಂಚಾಯತ್ ವ್ಯವಸ್ಥೆ ಬಂದಿತು . 

ದೇಲಂತ ಬೆಟ್ಟು ವಿಷ್ಣು ಮೂರ್ತಿ ದೇವಸ್ಥಾನ ಊರ ದೈವ . ಅದರ ಜಾತ್ರೆಗೆ ಪಟೇಲರದ್ದೇ ಮುಂದಾಳತ್ವ . ಗ್ರಾಮದಲ್ಲಿ ನಡೆಯುವ ಮಾಡುವೆ ಮುಂಜಿಗಳಿಗೆ ಇವರಿಗೆ ಮೊದಲ ಅಹ್ವಾನ ಇರುತ್ತಿದ್ದು ಪ್ರೀತಿಯಿಂದ ಬಂದು ಸಲಹೆ ಸೂಚನೆ ಕೊಡುವರು . ನನಗೆ ಅನಿಸುತ್ತಿದೆ , ವರ್ಷದಲ್ಲಿ ಎರಡು ತಿಂಗಳು ಸಾರ್ವಜನಿಕ ಕೆಲಸದಲ್ಲಿಯೇ ಕಳೆಯುತ್ತಿದ್ದಿರ ಬೇಕು . ರಾಮ ಭಟ್ ಅವರದು ದೊಡ್ಡ ಶರೀರ ,ಕೊಂಚ ಶ್ಯಾಮಲ ವರ್ಣ ,ಗಂಭೀರ ಮುಖ ಆದರೆ ಮೃದು ಮಾತು . ನಮ್ಮ ಪಕ್ಕದ ಗ್ರಾಮ ಅಳಿಕೆಯ ಪಟೇಲರು ಮಡೆಯಾಲ ಲಿಂಗಪ್ಪಯ್ಯ ನವರ ಪತ್ನಿ ಅವರ ಸೋದರಿ . ಅವರ ಮನೆ ನಮ್ಮ ಮನೆಗೆ ತುಂಬಾ ಸಮೀಪದಲ್ಲಿ ಇತ್ತು . 

ರಾಮ ಭಟ್ ಅವರಿಗೆ ಒಂಬತ್ತು ಮಕ್ಕಳು ,ಎಂಟು ಹೆಣ್ಣು ಮತ್ತು ಒಂದು ಗಂಡು .ನಮ್ಮ ತಂದೆಗೆ ಹತ್ತು ಮಕ್ಕಳು .ಆದುದರಿಂದ ಶಾಲೆಯಲ್ಲಿ ನಮ್ಮೆಲ್ಲರಿಗೆ ಸರೀಕರಾಗಿ ಅವರ ಮನೆಯ ಮಕ್ಕಳೂ ಇರುತ್ತಿದ್ದು ,ಪೂರ್ಣಿಮಾ ನನ್ನ ಕ್ಲಾಸ್ ಮೇಟ್ . ಅವರ ಸೊಸೆ ಕೊಂದಲಕಾಡು ಸರಸ್ವತಿ ಅಜ್ಜನ ಮನೆಯಿಂದ ಶಾಲೆಗೆ ಬರುತ್ತಿದ್ದು ನನ್ನ ಅಕ್ಕ ಭಾಗ್ಯ ಲಕ್ಷ್ಮಿಯ ಕ್ಲಾಸಿನಲ್ಲಿ ಇದ್ದು ಈಗಲೂ ಭಾರಿ ಸ್ನೇಹಿತೆ  . ಅಳಿಯ ಮಡಿಯಾಲ ಜಯಸೂರ್ಯ ಕೂಡಾ ಕನ್ಯಾನ ಶಾಲೆಗೆ ಬರುತ್ತಿದ್ದರು . (ಇವರು ಮೆಸ್ಕಾಂ ಮುಖ್ಯ ಇಂಜಿನೀರ್ ಆಗಿದ್ದವರು ,ಮಾಜಿ ಪೊಲೀಸ್ ಡಿ ಜಿ ಪಿ ಟಿ ಮಡಿಯಾಲ್ ಸಹೋದರರು ). ಆಗೆಲ್ಲಾ ಅಜ್ಜನ ಮನೆಯಿಂದ ಶಾಲೆಗೆ ಹೋಗುವದು ಸಾಮಾನ್ಯ . ದೊಡ್ಡ ಕುಟುಂಬಗಳು ಇರುತ್ತಿದ್ದು ಒಬ್ಬರು ಇಬ್ಬರು ಹೆಚ್ಚು ಎನಿಸದೆ ಮನೆಯ ಮಕ್ಕಳೇ ಆಗಿ ಹೋಗುತ್ತಿದ್ದ ಕಾಲ . 

  ಸರ್ಕಾರೀ ಪಠೇಲಿಕೆ ಕೊನೆ ಗೊಂಡರೂ ಊರಿನ ಜನಕ್ಕೆ ಇವರು ಪಟೇಲರೇ .ಕಾಲ ಒಂದೇ ತರಹ ಇರುವುದಿಲ್ಲ . ಈ ಮಕ್ಕಳೆಲ್ಲ ಬೆಳೆದು ಒಂದು ನೆಲೆಗೆ ಬರುವ ಮೊದಲೇ ರಾಮ ಭಟ್ಟರು ಹಠಾತ್ ತೀರಿ ಕೊಂಡು ,ಅವರ ಕುಟುಂಬ ಭಾರಿ ಸಂಕಷ್ಟಕ್ಕೆ ಒಳಗಾಯಿತು . ಅಡಿಕೆಗೆ ಬೆಲೆ ಕುಸಿತ ಬೇರೆ ಇದ್ದು ಕೃಷಿಕರು ಸಂಕಷ್ಟ ದಲ್ಲಿ ಇದ್ದ ದಿನಗಳು . ಮಕ್ಕಳು ಮತ್ತು ಅಮ್ಮ ಅದನ್ನೆಲ್ಲಾ ಎದುರಿಸಿ ,ಸಾಧ್ಯವಾದಷ್ಟು ವಿದ್ಯಾಭ್ಯಾಸ ಕೊಡಿಸಿ ,ಒಂದು ಹಂತಕ್ಕೆ ತರಲು ಅವರು ಪಟ್ಟಿರ ಬಹುದಾದ ಪರಿಪಾಡು ನಾನು ಊಹಿಸ ಬಲ್ಲೆ .ಆದರೂ ಈ ಸಹೋದರಿಯರು ಯಾವಾಗಲೂ ನಗುಮುಖದಿಂದ ಇದ್ದು ಅವರ ಮನೆತನದ ಹಿರಿಮೆಗೆ ಒಂದಿಷ್ಟೂ ಕುಂದು ಬರದಂತೆ ನಡೆದು ಕೊಂಡರು . ಇವರ ಪೈಕಿ ಶಶಿಕಲಾ  ಎ   ಬಿ ಶೆಟ್ಟಿ ಡೆಂಟಲ್ ಕಾಲೇಜಿನಲ್ಲಿ ನನ್ನ ಸಹೋದ್ಯೋಗಿ ಆಗಿದ್ದರು . ಶಂಕರಿ ಅಕ್ಕ  ಮತ್ತು ಪೂರ್ಣಿಮಾ ಪುತ್ತೂರಿನಲ್ಲಿ  ಇದ್ದು ನನಗೆ ಕಾಣ ಸಿಗುವರು . 

೬೦ ವರ್ಷಗಳ ಹಿಂದಿನ ಘಟನೆ ನೆನಪಿಗೆ ಬರುತ್ತದೆ  . ನನ್ನ ಹಿರೀ ಅಕ್ಕನ ಮದುವೆ .ಆಗೆಲ್ಲಾ ಸಾಮಾನ್ಯವಾಗಿದಂತೆ ರಾತ್ರಿ ಮದುವೆ . ಆಗೆಲ್ಲಾ ಗುರಿಕಾರರು ಮತ್ತು ಪಟೇಲರ ಸಲಹೆ ಮೇರೆಗೆ ಇಂತಹ ಕಾರ್ಯಕ್ರಮಗಳು ನಡೆಯುವವು ,ದಿಬ್ಬಣ ಎದುರು ಗೊಳ್ಳ ಬಹುದೋ?, ಧಾರೆ ಎರೆದು ಕೊಡ ಬಹುದೋ ,ದಕ್ಷಿಣೆ ಕೊಡ ಬಹುದೋ ,ಊಟಕ್ಕೆ ಎಲೆ ಹಾಕ ಬಹುದೋ ಎಂದು ಕೇಳಿಯೇ ಮುಂದುವರಿಯ ಬೇಕು . ಆ ದಿನ ಮನೆ ದಿನವಿಡೀ ವಿರಾಮವಿಲ್ಲದೆ ದುಡಿದ   ಮನೆ ಕೆಲಸದವರಿಗೆ ತಮ್ಮ ಅನುಮತಿಯಿಲ್ಲದೆ ಊಟ ಹಾಕಿದರೆಂದು ಬೇಸರ ಪಟ್ಟು ನಮ್ಮ ಗುರಿಕಾರರು ಊಟ ಮಾಡದೇ ಹೋದ ಘಟನೆ ಸಂಭವಿಸಿತು . ಇದನ್ನು ಬರೆಯುವಾಗ ನಾವು ಆ ಕಾಲ ಘಟ್ಟದ ಮನೋಸ್ಥಿತಿ ಊಹಿಸ ಬೇಕು . ಮುಂದೆ ಕೂಡಾ ಅವರು ನಮ್ಮ ಮನೆಯ ಸಮಾರಂಭಗಳಿಗೆ ಬರುತ್ತಿರಲಿಲ್ಲ . ಆದರೆ ಈ ಸಂದರ್ಭದಲ್ಲಿ ನಮಗೆ ನೈತಿಕ ಬಲ ಕೊಟ್ಟವರು ನಮ್ಮ ಪಟೇಲರ ಮನೆಯವರು ಮತ್ತು ಜ್ಞಾನಿಗಳು ಹಿರಿಯರೂ ಆದ ಶಿರಂಕಲ್ಲು ಜೋಯಿಶ ಬಂಧುಗಳು . 


 

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ