ಬೆಂಬಲಿಗರು

ಭಾನುವಾರ, ಜುಲೈ 11, 2021

ಮೆಚ್ಚಿನ ಶಿಕ್ಷಕ ಕಮ್ಮಜೆ ಸುಬ್ಬಣ್ಣ ಭಟ್

                                     ಮೆಚ್ಚಿನ ಶಿಕ್ಷಕ ಕಮ್ಮಜೆ ಸುಬ್ಬಣ್ಣ ಭಟ್

 

ನಾನು ಪ್ರಾಥಮಿಕ ವಿದ್ಯಾಭ್ಯಾಸ ಕನ್ಯಾನ ಎಲಿಮೆಂಟರಿ ಶಾಲೆಯಲ್ಲಿ ಮುಗಿಸಿ ಅದೇ ಊರಿನ  ಬೋರ್ಡ್ ಹೈ ಸ್ಕೂಲ್ ಎಂಟನೇ ತರಗತಿಗೆ ಸೇರಿದೆ .ಆಗ ಶ್ರೀ ಶ್ರೀನಿವಾಸ  ಉಪಾಧ್ಯ ಹೆಡ್ ಮಾಸ್ಟೆರ್ .ಅದೇ ವರ್ಷ ಅದು ಜೂನಿಯರ್ ಕಾಲೇಜ್ ಆಗಿ ಮೇಲ್ದರ್ಜೆಗೆ ಏರಿಸಲ್ಪಟ್ಟಿತು . ಆಗಿನ್ನೂ ಒಂದೇ ವರ್ಷದ ಪಿ ಯು ಸಿ . ಜೂನಿಯರ್ ಕಾಲೇಜ್ ಗೆ ಅರ್ಥಶಾಸ್ತ್ರ ಲೆಕ್ಚರರ್ ಆಗಿ ನೇಮಕ ಗೊಂಡ ಮೊದಲಿಗರು ಕಮ್ಮಜೆ ಸುಬ್ಬಣ್ಣ ಭಟ್ .ಉಳಿದ ಹಲವು ಸಬ್ಜೆಕ್ಟ್ ಹೈ ಸ್ಕೂಲ್ ಅಧ್ಯಾಪಕರೇ ಮೊದ ಮೊದಲು ತೆಗೆದುಕೊಳ್ಳುತ್ತಿದ್ದರು .

ಹೈ ಸ್ಕೂಲ್ ನಲ್ಲಿಯೂ ಅಧ್ಯಾಪಕರ ತೀವ್ರ ಕೊರತೆ ಇದ್ದು , ಹಿಂದಿ ಅಧ್ಯಾಪಕರು ಕನ್ನಡ ,ಕ್ರಾಫ್ಟ್ ಗುರುಗಳು ಸಮಾಜ , ಡ್ರಾಯಿಂಗ್ ಮಾಸ್ತರು ವಿಜ್ನಾನ ಹೀಗೆಲ್ಲಾ ತೆಗೆದುಕೊಳ್ಳುತ್ತಿದ್ದ ದಿನಗಳು . ಹಾಗಿರಲು ಒಂಬತ್ತನೇ ತರಗತಿ ಇಂಗ್ಲಿಷ್ ಕ್ಲಾಸ್ ಗೆ ಸುಬ್ಬಣ್ಣ ಭಟ್ಟರನ್ನು ಹಾಕಿದರು . ಭಾಷೆಯ ಮತ್ತು ಅಧ್ಯಯನವನ್ನು ಹೇಗೆ ಮಾಡ ಬೇಕು ಎಂಬುದನ್ನು ಮೊದಲಿಗೆ ತೋರಿಸಿಕೊಟ್ಟವರು . ಯಾವುದೇ  ತರಗತಿಗೆ ಮೊದಲು ಅಧ್ಯಯನ ಮಾಡಿಕೊಂಡೇ ಬರುವರು ,ಮತ್ತು ಲೇಖಕರ ಇತರ ಕೃತಿಗಳ ಬಗ್ಗೆಯೂ ಹೇಳಿ ಓದಲು ಪ್ರಚೋದಿಸುವರು . ಅಲೆಕ್ಸಾಂಡರ್ ಪೋಪ್ ಪತ್ರಿಕೆಗಳಲ್ಲಿ ತನ್ನ ಕೃತಿಯನ್ನು ತಾನೇ ಬೇರೆ ಹೆಸರಿನಲ್ಲಿ ವಿಮರ್ಶಿಸಿಸುತ್ತಿದ್ದನು ಎಂದು ಹೇಳುತ್ತಿದ್ದ ನೆನಪು .ಹಳ್ಳಿ ಮಕ್ಕಳಾದ ನಮಗೆ ಸ್ಯಾಂಡ್ ವಿಚ್ ಎಂಬ ಶಬ್ದ ಬಂದಾಗ ಬೋರ್ಡ್ ನಲ್ಲಿ ಚಿತ್ರ ಬಿಡಿಸಿ ತೋರಿಸುವರು ,

ಒಂದು ಶಾಲಾ ವಾರ್ಷಿಕೋತ್ಸವಕ್ಕೆ ಕನ್ನಡ ನಾಟಕ ನಿರ್ದೇಶಿಸಿದ್ದು ನಾನೂ ಅದರಲ್ಲಿ ಪಾತ್ರ  ವಹಿಸಿದ್ದೆನು ,ನನ್ನ ಪಾತ್ರಕ್ಕೆ ಪ್ಯಾಂಟ್ ಬೇಕಿದ್ದು ನಮ್ಮ ಮನೆಯಲ್ಲಿ ಇಲ್ಲದ ಕಾರಣ  ಅವರ ಪ್ಯಾಂಟ್ ಕೊಟ್ಟಿದ್ದರು . ಇನ್ನೊಂದು ತರಗತಿಯ ಇಂಗ್ಲಿಷ್ ಉಪ ಪಠ್ಯ ಕೂಡಾ (ನಾವು ನೊಂಡಿಟೇ -non detail )ತೆಗದುಕೊಳ್ಳುತ್ತಿದ್ದು ಅವರ ತರಗತಿಗಳು ನಿಜಕ್ಕೂ ಕಲಿಕೆಯ ಹಬ್ಬ ಆಗಿದ್ದವು .ಪಠ್ಯ ಪುಸ್ತಕ ವನ್ನು ನಮ್ಮ ಎದುರಿಗೇ  ಮೊದಲ ಬಾರಿಗೆ ಓದಿ  ಯು ಅಂಡರ್ಸ್ಟ್ಯಾಂಡ್ ಯು ಅಂಡರ್ಸ್ಟ್ಯಾಂಡ್ ಎನ್ನುವ ವರ್ಗಕ್ಕೆ ಸೇರಿದವರಲ್ಲ . 

ಸುಬ್ಬಣ್ಣ ಭಟ್ ಸ್ಪುರದ್ರೂಪಿಗಳು ,ಲಕ್ಷಣವಾದ ಮುಖ ,ಸಹಜ ಚೆಂದುಟಿ.ಒಮ್ಮೆ ನೋಡಿದರೆ ಮತ್ತೊಮ್ಮೆ ನೋಡ ಬೇಕು ಎನ್ನುವ ಆಕರ್ಷಣೆ ಇತ್ತು   . ಆಗ ತರುಣರಾಗಿದ್ದು ಉತ್ಸಾಹಿಗಳು ಆಗಿದ್ದರು. 

ಪಿ ಯು ಸಿ ವಿದ್ಯಾರ್ಥಿಗಳಿಗೂ ಅವರು ಅಚ್ಚು ಮೆಚ್ಚು . ಅವರ ನೋಟ್ಸ್  ನನ್ನ ಅಕ್ಕ ಓದುವಾಗ ನನಗೂ ಅರ್ಥ ಆಗುತ್ತಿತ್ತು .ಅದರ ಬಗ್ಗೆ ಹಿಂದೆಯೇ ಬರೆದಿರುವೆನು . 

   ಅವರ ಸೋದರಳಿಯ ಪರಮೇಶ್ವರ ಎಡೆಕ್ಕಾನ ಅಜ್ಜನ ಮನೆಯಿಂದ ಶಾಲೆಗೆ ಬರುತ್ತಿದ್ದು ನನ್ನ ಆಪ್ತ ಮಿತ್ರ ಆಗಿದ್ದನು .ಪುತ್ತೂರಿನಲ್ಲಿ ಎಡೆಕ್ಕಾನ ಎಂಟರ್ಪ್ರೈಸಸ್ ಎಂಬ ಯಶಸ್ವಿ ಉದ್ದಿಮೆ  ನಡೆಸುತ್ತಿದ್ದವನು ಕೆಲ ವರ್ಷಗಳ ಹಿಂದೆ ತೀರಿಕೊಂಡನು . 

   ಈಗಲೂ ಸುಬ್ಬಣ್ಣ ಭಟ್ ಅರೋಗ್ಯ ಸಮಸ್ಯೆಗಳಿಗೆ ನನ್ನಲ್ಲಿ ಬರುವರು ,ಗುರುಗಳ ಋಣ ಪೂರ್ಣವಾಗಿ ಅಲ್ಲದಿದ್ದರೂ ಕಿಂಚಿತ್ ಸಂದಾಯ ಮಾಡುವ ಭಾಗ್ಯ ಎಂದು ತಿಳಿದು ಕೊಂಡಿದ್ದೇನೆ


                      

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ