ಆಳಾಗಿ ದುಡಿದವನು ಅರಸಾಗಿ (ಪ್ರಭುಗಳಾಗಿ) ಉಣ್ಣುವನು
ವಿಟ್ಲ ಕನ್ಯಾನ ಮಧ್ಯೆ ಕಿರಿಂಚಿ ಮೂಲೆ . ಉತ್ತರಕ್ಕೆ ಕಳಂಜಿಮಲೆ ಇದೆ . ದಕ್ಷಿಣಕ್ಕೆ ದೇಲಂತ ಬೆಟ್ಟು ಬಯಲು . ನೀವು ರಾಜ ರಸ್ತೆಯಿಂದ ದಕ್ಷಿಣಕ್ಕೆ ಇಳಿಯಲು ಆರಂಭಿಸಿದರೆ ಸಿಗುವುದೇ ಮುದ್ಕುಂಜ . ಇಲ್ಲಿಯ ಪ್ರಭುಗಳು ಪ್ರಭು ಕುಟುಂಬ . ನಾರಾಯಣ ಪ್ರಭು ಮತ್ತು ಗಣಪತಿ ಪ್ರಭು ಸಹೋದರರು . ಕೊಂಕಣಿ ಇವರ ಮಾತೃಭಾಷೆ .
ಗಣಪತಿ ಪ್ರಭುಗಳ ಮನೆ ಮೊದಲು ಸಿಗುವುದು .ಇವರ ಮಗ ಮೋಹನ ಪ್ರಭು ನನ್ನ ಅಣ್ಣನ ಸಹಪಾಠಿ ಮತ್ತು ಗೆಳೆಯ .ಅರಣ್ಯ ಇಲಾಖೆಯಲ್ಲಿ ಇದ್ದರು .ಅವರ ತಮ್ಮ ನಾಗೇಶ ಪ್ರಭು ನಮ್ಮ ಸರೀಕರು . ಮಗಳು ರೇವತಿ ನನ್ನ ಅಣ್ಣನ ಕ್ಲಾಸ್ ಇರಬೇಕು .ಇನ್ನೂ ಸಣ್ಣವರ ಹೆಸರು ನೆನಪಿಲ್ಲ . ಗಣಪತಿ ಪ್ರಭುಗಳು ಬೈರಿಕಟ್ಟೆಯಲ್ಲಿ ಜವುಳಿ ಅಂಗಡಿ ಆರಂಭಿಸಿದ್ದರು ;ಅದರ ಪಕ್ಕದಲ್ಲಿ ಕಿರಿಂಚಿಮೂಲೆ ರಾಮಕೃಷ್ಣ ರಾಯರ ಭಂಡಸಾಲೆ .
ಇವರ ಕಿರಿಯ ಮಗಳು ಪುಣಚ ಸಮೀಪ ಅಧ್ಯಾಪಕ ಮತ್ತು ಕಲಾವಿದ ಅಜೇರು ಶ್ರೀಪತಿ ನಾಯಕ್ ಅವರ ಪತ್ನಿ .ಅವರ ಪುತ್ರಿ ಈಗ ಭಾಗವತರಾಗಿ ಮಿಂಚುತ್ತಿರುವ ಪ್ರತಿಭೆ ಕಾವ್ಯಶ್ರೀ .ನಮ್ಮ ಊರಿನ ಮೊಮ್ಮಗಳು ಎಂಬ ಹೆಮ್ಮೆ .
ಸ್ವಲ್ಪ ಕೆಳಗೆ ವಿಶಾಲವಾದ ಭತ್ತದ ಗದ್ದೆ . ದಾಟಿದರೆ ಒಂದು ಹಳೇ ಕಾಲದ ದೊಡ್ಡ ಮನೆ . ಪ್ರಭುಗಳ ಮೂಲ ಮನೆ .ಇಲ್ಲಿ ನಾರಾಯಣ ಪ್ರಭುಗಳ ಮಕ್ಕಳಾದ ಪುರುಷ ಪ್ರಭು ,ದೇವಪ್ಪ ಪ್ರಭು ಮತ್ತು ತಿಮ್ಮಣ್ಣ ಪ್ರಭು (ಈಗ ಇಲ್ಲ )ಮತ್ತು ಅವರ ಮಕ್ಕಳು ,ಮೊಮ್ಮಕ್ಕಳು .ಇವರದು ಕೂಡು ಕುಟುಂಬ. ತಿಮ್ಮಣ್ಣ ಪ್ರಭುಗಳು ಕನ್ಯಾನ ಗ್ರಾಮ ಪಂಚಾಯತ್ ಕಾರ್ಯದರ್ಶಿ ಆಗಿದ್ದರು ,ಮುಂದೆ ರೆವೆನ್ಯೂ ಇನ್ಸ್ಪೆಕ್ಟರ್ (ಮಣೆಗಾರ )ಆಗಿ ನಿವೃತ್ತರಾದರು . ನನ್ನ ಸ್ನೇಹಿತ ದಿವಾಕರ ಪ್ರಭು ಪುರುಷ ಪ್ರಭುಗಳ ಮಗ . ಅವನ ಒಬ್ಬ ಮಗ ಮಂಗಳೂರು ವಿಶ್ವ ವಿದ್ಯಾಲಯ ಕಾಲೇಜು ನಲ್ಲಿ ಸಂಸ್ಕೃತ ಅಧ್ಯಾಪಕ ,ಇನ್ನೋರ್ವ ಇಂಜೀನಿಯರ್ ಆಗಿ ಉದ್ಯೋಗದಲ್ಲಿ .
ಇವರ ಮನೆಯ ವಿಶೇಷ ಎಂದರೆ ಎಲ್ಲರೂ ಸಕ್ರಿಯ ಕೃಷಿಕರು . ಗದ್ದೆ ಉಳುವುದರಿಂದ ಹಿಡಿದು ,ಗೊಬ್ಬರ ಹೊರುವುದು ,ಭತ್ತ ಕೊಯ್ಯುವುದು ,ತೋಟಕ್ಕೆ ನೀರು ಹಾಕುವುದು ಇತ್ಯಾದಿ ಮನೆಯ ಎಲ್ಲಾ ಮಂದಿ ಸೇರಿ ಮಾಡುವರು .ಶಾಲೆ ಇಲ್ಲದಿದ್ದ ದಿನ ಮಕ್ಕಳೂ .ಅವಶ್ಯ ವಿದ್ದಾಗ ಅಕ್ಕ ಪಕ್ಕದವರು ಸಹಾಯಕ್ಕೆ ಬರುವರು . ನಾರಾಯಣ ಪ್ರಭುಗಳ ಮಕ್ಕಳು ಮೊಮ್ಮಕ್ಕಳು ಸೇರಿ ದೊಡ್ಡ ಕುಟುಂಬ ಒಂದೇ ಸೂರಿನಡಿ ಅನ್ಯೋನ್ಯತೆಯಿಂದ ಬಾಳುವುದನ್ನು ನೋಡುವದೇ ಆನಂದ .
ಭತ್ತದ ಬೆಳೆ ಆದ ಮೇಲೆ ವಿವಿಧ ತರಕಾರಿ ಕೃಷಿ ಮಾಡುವರು .ನಮ್ಮ ಮನೆಗೆ ಸೌತೆ ಕಾಯಿ ಇತ್ಯಾದಿ ಇಲ್ಲಿಂದ ತರುವುದು ಇತ್ತು . ನನ್ನ ತಂದೆಯವರಿಗೆ ಎರಡೂ ಪ್ರಭು ಕುಟುಂಬದವರು ಆಪ್ತರಾಗಿ ಇದ್ದರು . ನಮ್ಮ ಕಷ್ಟ ಕಾಲದಲ್ಲಿ ನೈತಿಕ ಬೆಂಬಲ ನೀಡಿದವರು ಈ ಪ್ರಭು ಕುಟುಂಬದವರು .
ಇವರು ಮುಂದೆಯೂ ಒಗ್ಗಟ್ಟು ಮತ್ತು ಶ್ರಮ ಜೀವಿಗಳಾಗಿ ಮತ್ತು ಆರೋಗ್ಯವಂತರಾಗಿ ಇರಲಿ ಎಂದು ಹಾರೈಸುತ್ತೇನೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ